Friday, 20th September 2024

Google Job: ಸರಕಾರಿ ಕಾಲೇಜಿನಲ್ಲಿ ಓದಿ ಗೂಗಲ್‌ನಲ್ಲಿ 2 ಕೋಟಿ ರೂಪಾಯಿ ವೇತನದ ಕೆಲಸ ಪಡೆದ ಯುವಕ

google job

ಪಟನಾ: ಐಐಟಿ, ಐಐಎಂ (IIT, IIM) ಮುಂತಾದ ಯಾವ ಪ್ರತಿಷ್ಠಿತ ಸಂಸ್ಥೆಯಲ್ಲೂ ಓದದೆ, ಸರಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲೇ ಓದಿ, ಅಮೆಜಾನ್‌ನಂಥ (Amazon) ಸಂಸ್ಥೆಯಲ್ಲಿ ಕೆಲಸ ಪಡೆದು, ಇದೀಗ ಗೂಗಲ್‌ನಲ್ಲಿ (Google job) ವರ್ಷಕ್ಕೆ 2 ಕೋಟಿ ರೂ. ಸಂಬಳದ ಪ್ಯಾಕೇಜ್‌ನ ಕೆಲಸ ಪಡೆದ ಯುವಕನ ಕತೆಯಿದು. ಬಿಹಾರದ ಈ ಯುವಕ ಇದೀಗ ಗೂಗಲ್‌ನ ಲಂಡನ್‌ ಕಚೇರಿಯಲ್ಲಿ ಜಾಬ್‌ ಆಫರ್‌ ಪಡೆದಿದ್ದಾನೆ.

ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ಬಹುತೇಕ ಸಾಫ್ಟ್‌ವೇರ್‌ ಇಂಜಿನಿಯರ್‌ಗಳ ಕನಸು. ಇದಕ್ಕಾಗಿ ಐಐಟಿ, ಐಐಎಂ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಾರೆ. ಆದರೆ ಈ ಯಾವುದೇ ಸಂಸ್ಥಗಳಲ್ಲಿ ಅಧ್ಯಯನ ಮಾಡದ 24 ವರ್ಷದ ಬಿಹಾರದ ಸಾಫ್ಟ್‌ವೇರ್ ಎಂಜಿನಿಯರ್ ಇದೀಗ ಗೂಗಲ್ ಉದ್ಯೋಗಿ.

ವಾರ್ಷಿಕ ವೇತನ 2 ಕೋಟಿ ರೂಪಾಯಿ ಪಡೆಯುತ್ತಿರುವ ಜಮುಯಿ ಜಿಲ್ಲೆಯ ಅಭಿಷೇಕ್ ಕುಮಾರ್, ಸರಕಾರಿ ಸ್ವಾಮ್ಯದ ಪಾಟ್ನಾದ ನ್ಯಾಷನಲ್ ಇನ್ಸ್ಟ್‌ಟ್ಯೂಟ್ ಟೆಕ್ನಾಲಜಿಯಲ್ಲಿ ಎಂಜಿನೀಯರಿಂಗ್ ಪದವಿ ಪಡೆದಿದ್ದಾನೆ. ಅಭಿಷೇಕ್ ತಂದೆ ಇಂದ್ರದೇವ್ ಯಾದವ್ ಜಮುಯಿ ಸಿವಿಲ್ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಮಂಜು ದೇವಿ ಗೃಹಿಣಿ. ಅಭಿಷೇಕ್ ಕುಟುಂಬ ಝಾಝಾ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.

2022ರಲ್ಲಿ ಅಭಿಷೇಕ್ ಎಂಜಿನೀಯರಿಂಗ್ ಪದವಿ ಮುಗಿಸಿದ ಬೆನ್ನಲ್ಲೇ ಅಮೇಜಾನ್ ಕಂಪನಿ ವಾರ್ಷಿಕ 1.08 ಕೋಟಿ ಸಂಬಳ ನೀಡಿ ಉದ್ಯೋಗ ನೀಡಿತ್ತು. ಮಾರ್ಚ್ 2023ರ ವರೆಗೆ ಅಭಿಷೇಕ್ ಅಮೇಜಾನ್ ಸಂಸ್ಥೆಯಲ್ಲಿ ಕೆಲಸ ಮಾಡಿ ಬಳಿಕ ಜರ್ಮನ್ ಮೂಲಕ ಫಾರಿನ್ ಎಕ್ಸೇಂಜ್ ಟ್ರೇಡಿಂಗ್ ಯೂನಿಟ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದೀಗ ಗೂಗಲ್ ಸಂಸ್ಥೆಯಲ್ಲಿ ಬರೋಬ್ಬರಿ 2 ಕೋಟಿ ವೇತನದ ಕೆಲಸ ಗಿಟ್ಟಿಸಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದಾರೆ.

ಈ ಯಶಸ್ಸನ್ನು ಅಭಿಷೇಕ್ ಪೋಷಕರು ಹಾಗೂ ಹಿರಿಯ ಸಹೋದರನಿಗೆ ಅರ್ಪಿಸಿದ್ದಾರೆ. ಪ್ರತಿಯೊಬ್ಬ ಸಾಫ್ಟ್‌ವೇರ್ ಇಂಜಿನೀಯರ್‌ಗೆ ಗೂಗಲ್‌ನಲ್ಲಿ ಕೆಲಸ ಮಾಡಬೇಕು ಅನ್ನೋದು ಕನಸಾಗಿರುತ್ತದೆ. ಹಲವರು ಪ್ರಯತ್ನಿಸುತ್ತಾರೆ. ಆದರೆ ನನಗೆ ಅದೃಷ್ಟ ಒಲಿದು ಬಂದಿದೆ. ಇದು ಅತೀವ ಸಂಸತ ತಂದಿದೆ ಎಂದು ಅಭಿಷೇಕ್ ಹೇಳಿದ್ದಾರೆ.

ಇದರ ನಡುವೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಆಫರ್‌ ಬಂದಿವೆ. ಅಭಿಷೇಕ್ 1ನೇ ತರಗತಿಯಿಂದ 10ನೇ ತರಗತಿವರೆಗೆ ಝಾಝಾದ ಸಿಟಿ ಸ್ಕೂಲ್‌ನಲ್ಲಿ ಪೂರೈಸಿದ್ದಾರೆ. ಇದೀಗ ಅಭಿಷೇಕ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಸಾಮಾನ್ಯ ಕುಟುಂಬದಿಂದ ಬಂದಿರುವ ಅಭಿಷೇಕ್ ಇದೀಗ ಅತ್ಯುನ್ನತ ಸಂಸ್ಥೆಯಲ್ಲಿ ದೊಡ್ಡ ಮೊತ್ತದ ವೇತನ ಉದ್ಯೋಗ ಪಡೆದುಕೊಂಡಿರುವುದು ಗ್ರಾಮದ ಹೆಮ್ಮೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ: Job News: 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ