Monday, 25th November 2024

Tirupati Laddu: ತಿರುಪತಿ ಲಡ್ಡುವಿನಲ್ಲಿ ಬೀಫ್‌ ಕೊಬ್ಬು ಬಳಕೆ; ಕೆಎಂಎಫ್‌ ಸ್ಪಷ್ಟನೆಯೂ ಶಾಕಿಂಗ್

tirupati laddu

ತಿರುಪತಿ: ತಿರುಪತಿ ದೇವಸ್ಥಾನದ ಲಡ್ಡು (Tirupati Laddu) ಬಳಕೆಗೆ ನಮ್ಮಿಂದ ತುಪ್ಪ ಖರೀದಿಸಲಾಗುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮಿಂದ ಅವರು ತುಪ್ಪ ಖರೀದಿಸಿಲ್ಲ ಎಂದು ಕೆಎಂಎಫ್‌ (KMF) ಹೇಳಿಕೆ ನೀಡಿದೆ. ಆ ಮೂಲಕ, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು (beef fat), ಮೀನಿನ ಎಣ್ಣೆ (fish fat) ಬೆರೆಸಲಾಗಿದೆ ಎಂಬ ಆರೋಪ ಇನ್ನಷ್ಟು ಗಟ್ಟಿಯಾಗುವುದಕ್ಕೆ ಪೂರಕ ಸಾಕ್ಷ್ಯ ದೊರೆತಿದೆ.

ಕೋಟ್ಯಂತರ ಭಕ್ತರು ಭೇಟಿ ನೀಡುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ (Tirupati Tirumala Devasthanam) ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು (Beef Fat) ಮತ್ತು ಮೀನಿನ ಎಣ್ಣೆ (Fish Fat) ಬೆರೆಸಲಾಗಿದೆ ಎಂಬ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.

ಕರ್ನಾಟಕ ಹಾಲು ಒಕ್ಕೂಟ (KMF) ಈ ವಿವಾದಕ್ಕೆ ಸಂಬಂಧಪಟ್ಟಂತೆ ಗುರುವಾರ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಹೇಳಿಕೆ ಪ್ರಕಟಿಸಿರುವ ಕೆಎಂಎಫ್, ‘ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಮಂಡಳಿಯು ಕಳೆದ ನಾಲ್ಕು ವರ್ಷಗಳಿಂದ ತಮ್ಮಿಂದ (ಕೆಎಂಎಫ್‌) ತುಪ್ಪವನ್ನು ಖರೀದಿಸಿಲ್ಲ’ ಎಂದು ಸ್ಪಷ್ಟನೆ ನೀಡಿದೆ.

ಚಂದ್ರಬಾಬು ನಾಯ್ಡು ಆರೋಪಕ್ಕೆ ಸಂಬಂಧಿಸಿದಂತೆ ವರದಿಯನ್ನು ಟಿಡಿಪಿ (TDP) ಬಹಿರಂಗಪಡಿಸಿದೆ. ಈ ಬಗ್ಗೆ ಟಿಡಿಪಿ ನಾಯಕ ಆನಂ ವೆಂಕಟ ರಮಣ ರೆಡ್ಡಿ ಅವರು ತುಪ್ಪವನ್ನು ಪರೀಕ್ಷಿಸಿದ ವಿವಿಧ ಪ್ರಯೋಗಾಲಯಗಳ ವರದಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಪೂರೈಕೆಯಾಗುವ ತುಪ್ಪವನ್ನು ದೇಶದಲ್ಲೇ ಪ್ರಸಿದ್ಧವಾಗಿರುವ ಎನ್‌ಡಿಡಿಬಿ ಕ್ಯಾಲ್ಫ್ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗಿದೆ. ಸೋಯಾಬೀನ್, ಕುಸುಬೆ, ಆಲಿವ್, ಗೋಧಿ ಹುರುಳಿ,, ಹತ್ತಿ ಬೀಜಗಳು, ಮೀನಿನ ಎಣ್ಣೆ, ಬೀಫ್ ಕೊಬ್ಬು, ತಾಳೆ ಎಣ್ಣೆ ಮತ್ತು ಹಂದಿ ಕೊಬ್ಬನ್ನು ಸಹ ಈ ತುಪ್ಪದಲ್ಲಿ ಬಳಸಲಾಗಿದೆ ಎನ್ನಲಾಗಿದೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಗುತ್ತಿಗೆದಾರರು ಪೂರೈಸಿದ ತುಪ್ಪದಲ್ಲಿ ಶೇ.19ರಷ್ಟು ಮಾತ್ರ ತುಪ್ಪ ಇರುವುದು ಪತ್ತೆಯಾಗಿದೆ ಎಂದು ಟಿಡಿಪಿ ನಾಯಕ ಆನಂ ವೆಂಕಟ ರಮಣ ರೆಡ್ಡಿ ಹೇಳಿದ್ದಾರೆ.

ದನದ ಕೊಬ್ಬನ್ನು ಹೊಂದಿರುವ ಕಲಬೆರಕೆ ಎಣ್ಣೆಯನ್ನು ತುಪ್ಪದಲ್ಲಿ ಬಳಸಲಾಗಿದೆ ಎಂದು ಪರೀಕ್ಷಾ ವರದಿಗಳು ಸ್ಪಷ್ಟವಾಗಿ ತಿಳಿಸಿವೆ ಎಂದು ಟಿಡಿಪಿ ರಾಷ್ಟ್ರೀಯ ವಕ್ತಾರ ಆನಂ ವೆಂಕಟ ರಮಣ ರೆಡ್ಡಿ ಹೇಳಿದ್ದಾರೆ. ತುಪ್ಪದಲ್ಲಿ ಮೀನಿನ ಎಣ್ಣೆ, ನಾಯಿ ಸೇರಿದಂತೆ ಸತ್ತ ಪ್ರಾಣಿಗಳ ಕೊಬ್ಬು ಮುಂತಾದ ಇತರ ವಸ್ತುಗಳು ಇವೆ ಎಂದು ಅವರು ಆರೋಪಿಸಿದ್ದಾರೆ. ಗೋಮಾಂಸ ಟ್ಯಾಲೋದೊಂದಿಗೆ ಕಲಬೆರಕೆ ಮಾಡಿದ ಲಾಡುಗಳನ್ನು ದೇವರಿಗೆ ಬಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ತಿರುಪತಿ ತಿಮ್ಮಪ್ಪ ದೇವಾಲಯದಲ್ಲಿ ಬಡಿಸುವ ಆಹಾರದಲ್ಲೂ ಈ ಕಲಬೆರಕೆ ಕೊಬ್ಬನ್ನು ಬಳಸಲಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ.

ಇದನ್ನೂ ಓದಿ: Tirupati Laddu : ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು ಹಾಕಿದ ಆರೋಪ; ಕೋರ್ಟ್‌ಗೆ ಹೋಗುವೆ ಎಂದ ಜಗನ್ ರೆಡ್ಡಿ