ಚೆನ್ನೈ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತ 376 ರನ್ ಗಳಿಸಿ ಆಲೌಟ್ ಆಗಿದೆ. ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 339 ರನ್ ಪೇರಿಸಿದ್ದ ಭಾರತ, ದ್ವಿತಿಯ ದಿನಾಟದವಾದ ಶುಕ್ರವಾರ 37 ರನ್ ಮಾತ್ರ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಶತಕ ಗಳಿಸಿದ್ದ ಅಶ್ವಿನ್ ದ್ವಿತೀಯ ದಿನದಾಟದಲ್ಲಿ 11 ರನ್ ಗಳಿಸಿ ಒಟ್ಟು 113 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. 86 ರನ್ ಗಳಿಸಿದ್ದ ಜಡೇಜಾ ಇದೇ ಮೊತ್ತಕ್ಕೆ ವಿಕೆಟ್ ಕೈಚೆಲ್ಲಿದರು. ಆಕಾಶ್ ದೀಪ್ 17 ರನ್ ಬಾರಿಸಿದರೆ, ಜಸ್‌ಪ್ರೀತ್ ಬುಮ್ರಾ 7 ರನ್ ಗಳಿಸಿದರು. ಘಾತಕ ವೇಗಿ ಹಸನ್ ಮಹಮೂದ್ 5 ವಿಕೆಟ್ ಕಿತ್ತು ಮಿಂಚಿದರು. ಇದೇ ವೇಳೆ ಭಾರತ ವಿರುದ್ಧ ಟೆಸ್ಟ್‌ನಲ್ಲಿ 5 ವಿಕೆಟ್ ಕಿತ್ತ ಬಾಂಗ್ಲಾದ ಮೊದಲ ಬೌಲರ್ ಎನಿಸಿಕೊಂಡರು. ಟಸ್ಕಿನ್ ಅಹ್ಮದ್ 3 ವಿಕೆಟ್ ಕಿತ್ತರು.
ಇದನ್ನೂ ಓದಿ IND vs BAN: ದಂಡದ ಶಿಕ್ಷೆ ಭೀತಿಯಲ್ಲಿ ಬಾಂಗ್ಲಾ ತಂಡ; ಕಾರಣವೇನು?
ಶತಕ ವೀರ ಅಶ್ವಿನ್ ಅಶ್ವಿನ್ ಬೌಲಿಂಗ್‌ನಲ್ಲಿ 2 ವಿಕೆಟ್ ಕಿತ್ತರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೂಟದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ವಿಶ್ವದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇನ್ನು 14 ವಿಕೆಟ್ ಪಡೆದರೆ ನಥನ್ ಲಿಯೋನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ. ಸದ್ಯ ಅಶ್ವಿನ್ 35 ಟೆಸ್ಟ್ ಪಂದ್ಯಗಳಲ್ಲಿ 174 ವಿಕೆಟ್ ಪಡೆದಿದ್ದಾರೆ. ಅಗ್ರಸ್ಥಾನಿ ಲಿಯೋನ್ 43 ಟೆಸ್ಟ್ ಪಂದ್ಯಗಳಿಂದ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ಯಾಟ್ ಕಮಿನ್ಸ್ 42 ಟೆಸ್ಟ್ ಪಂದ್ಯ ಪಂದ್ಯಗಳಿಂದ 175 ವಿಕೆಟ್ ಕಿತ್ತಿದ್ದಾರೆ.
ಬುಮ್ರಾ ಕೇವಲ ಮೂರು ವಿಕೆಟ್ ಕಡೆವಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್ ಪೂರ್ತಿಗೊಳಿಸಲಿದ್ದಾರೆ. ಆಗ ಅವರು ಈ ಸಾಧನೆ ಮಾಡಿದ ಭಾರತದ 10ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ದಿಗ್ಗಜರಾದ ಕಪಿಲ್ ದೇವ್, ಜಾಹಿರ್ ಖಾನ್, ಜಾವಗಲ್ ಶ್ರೀನಾಥ್ ಜತೆ ಎಲೈಟ್ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ. ಬುಮ್ರಾ ಏಕದಿನದಲ್ಲಿ 149, ಟೆಸ್ಟ್‌ನಲ್ಲಿ159 ಮತ್ತು ಟಿ20ಯಲ್ಲಿ 89 ವಿಕೆಟ್ ಕಿತ್ತು ಮೂರು ಮಾದರಿಯಿಂದ 397 ವಿಕೆಟ್ ಕಲೆಹಾಕಿದ್ದಾರೆ.