Monday, 28th October 2024

MLA Pradeep Eshwar: ಕೈಯಲ್ಲಿ ಪೋಟೋ ಬಾಯಲ್ಲಿ ಅಂಬೇಡ್ಕರ್ ಹೆಸರೇಳಿದರೆ ಸಾಲದು-ದಲಿತ ಮುಖಂಡರ ಆಕ್ರೋಶ

ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್ ಕೈಯಲ್ಲಿ ಅಂಬೇಡ್ಕರ್ ಪೋಟೋ ಹಿಡಿದು; ಬಾಯಲಿ ಅಂಬೇಡ್ಕರ್‌ಗೆ ಜೈಕಾರ ಹಾಕಿದಾಕ್ಷಣ ಅವರು ದಲಿತಪರ ಎಂದು ಭಾವಿಸುವುದು ತಪ್ಪಾಗುತ್ತದೆ. ನಿಜ ಹೇಳಬೇಕೆಂದರೆ ಹೆಜ್ಜೆ ಹೆಜ್ಜೆಗೂ ದಲಿತ ವಿರೋಧಿ ನಡುವಳಿಕೆ ತೋರುತ್ತಿರುವುದು ಗುಟ್ಟಾದ ವಿಚಾರವಲ್ಲ. ಅವರು ಇದನ್ನು ಮಾರ್ಪಡಿಸಿ ಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಾನಾಯಕ ಅಂಬೇಡ್ಕರ್ ಸೇನೆಯ ರಾಜ್ಯ ಸಂಚಾಲಕ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜೈಭೀಮ್ ವಿದ್ಯಾರ್ಥಿನಿಲಯದ ಆವರಣದಲ್ಲಿ ಗುರುವಾರ ಶಾಸಕರ ದಲಿತ ವಿರೋಧಿ ಧೋರಣೆ ವಿರುದ್ಧ ಏರ್ಪಡಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಾಸಕರು ಅಂಬೇಡ್ಕರ್ ವಾರಸುದಾರರ ಮೇಲೆ ಹಗೆ ಸಾಧಿಸುತ್ತಿರುವುದು ತಪ್ಪು. ಅಷ್ಟಕ್ಕೂ ಇವರು ಕ್ಷೇತ್ರದ ಜನರ ಕಷ್ಟಪರಿಹಾರಕ್ಕೆ ಸೃಷ್ಟಿಸಿರುವ ವೆಬ್ಸೈಟ್ ಇದೆಯಾ.? ಬಡವರಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಅಮ್ಮಾ ಆಂಬುಲೆನ್ಸ್‌ʼಗೆ ಬಿಟ್ಟಿದ್ದೇನೆ ಎಂದು ಹೇಳುತ್ತಾರೆ. ಯಾರಾದರೂ ಕರೆ ಮಾಡಿದರೆ ದೂರ ಇದ್ದೇವೆ ಎಂದು ಹೇಳುತ್ತಾರೆ. ಆದರೆ ಅವೆಲ್ಲಾ ಶಾಸಕರ ಮನೆಯ ಹತ್ತಿರ ನಿಂತಿರುತ್ತವೆ. ಇದು ಇವರ ಸಮಾಜಸೇವೆ. ಇವರ ನಾಟಕದ ಆಟಗಳಿಗೆ ಜನ ಮರುಳಾಗುವುದಿಲ್ಲ. ಈ ಬಗ್ಗೆ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಶಾಸಕ ಪ್ರದೀಪ್ ಈಶ್ವರ್ ಬಾಯಿ ತೆರೆದರೆ ಸಾಕು ನಾನು ತಂದೆ ತಾಯಿ ಇಲ್ಲದ ಅನಾಥ , ಬಡವರ ಮಕ್ಕಳು ಬೆಳೀ ಬೇಕು ಕಣ್ರಯ್ಯ, ಯಾವ ರಾಜಕೀಯ ಹಿನ್ನೆಲೆ ಇಲ್ಲದೆಯೂ, ಹಣ ಆಸ್ತಿ ಪಾಸ್ತಿ ಇಲ್ಲದೆಯೂ ಚುನಾವಣೆ ಗೆಲ್ಲ ಬಹುದು ಎಂದು ಪ್ರಚಾರ ಪಡೆಯುತ್ತಾರೆ. ನಾನು ಅವರನ್ನು ಕೇಳುತ್ತೇನೆ ಅನಾಥ ಹುಡುಗನ ಹತ್ತಿರ 2 ಕೋಟಿಯ ಬಿಎಂಡಬ್ಲ್ಯು ಕಾರಿನಲ್ಲೇ ಬಂದು ಕಾರುಬಾರು ನಡೆಸುತ್ತಾರೆ ಎಂದು ದೂರಿದರು.

ತಮ್ಮದೇ ಸಮುದಾಯದ ಗುಂಪನ್ನು ಕಟ್ಟಿಕೊಂಡು ತಾಲೂಕು ಆಡಳಿತ ನೋಡಿಕೊಳ್ಳುವ ಇವರು ತನ್ನ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಹಾಕಿದ ದಲಿತ ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಮಾಜಿ ಶಾಸಕ ಎಸ್‌ಎಂ ಮುನಿಯಪ್ಪ ಅವರನ್ನು ಕಡೆಗಣಿಸಿದಂತೆ ಅವರ ಮಗನ ಏಳಿಗೆಯನ್ನೂ ಸಹಿಸದೆ ಕಾಂಗ್ರೆಸ್ ಹೈಕಮಾಂಡ್‌ಗೆ ಸುಳ್ಳು ಸುಳ್ಳಿನ ಕಥೆಕಟ್ಟಿ ಹೇಳಿ ಚುನಾವಣೆಗೆ ಸ್ಪರ್ಧಿಸಿದಂತೆ ಮಾಡುವುದು ಸರ್ವಥಾ ಸರಿಯಲ್ಲ. ದಲಿತ ಸಮುದಾಯದ ಯುವ ನಾಯಕ ಎಸ್.ಎಂ.ಜಗದೀಶ್ ಅವರಿಗೆ ಇನ್ನಿಲ್ಲದ ತೊಂದರೆ ನೀಡುತ್ತಿ ರುವ ಶಾಸಕರು ತಮ್ಮ ಚಾಳಿಯನ್ನು ಇಲ್ಲಿಗೇ ನಿಲ್ಲಿಸಬೇಕು.

ಜಗದೀಶ್ ಕಾಂಗ್ರೆಸ್‌ನಲ್ಲಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯಾ ಧ್ಯಕ್ಷರಿಗೆ ಇನ್ನಿತರ ಮುಖಂಡರಿಗೆ ಬೆದರಿಕೆ ಹಾಕುವುದು, ಒಳಗೊಳಗೇ ದಲಿತರ ಬೆಳವಣಿಗೆಯ ಬೇರುಕೊಯ್ಯುವ ಕೆಲಸ ಮಾಡುತ್ತಿರುವುದು ಶಾಸಕರಿಗೆ ಶೋಭ ತರುವ ಕೆಲಸವಲ್ಲ. ಇದು ಹೀಗೇ ಮುಂದುವರೆದರೆ ಮುಂದಿನ ಚುನಾವಣೆಗಳಲ್ಲಿ ಇವರಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಉಚ್ಚಾಟಿತ ಯುವ ನಾಯಕ ಎಸ್.ಎಂ.ಜಗದೀಶ್ ಮಾತನಾಡಿ, ಶಾಸಕ ಪ್ರದೀಪ್ ಈಶ್ವರಣ್ಣ ನಮ್ಮ ತಂದೆ ಕಾಂಗ್ರೆಸ್ ಪಕ್ಷಕ್ಕಾಗಿ 40 ವರ್ಷ ದುಡಿದಿದ್ದಾರೆ. ಒಮ್ಮೆ ಶಾಸಕರಾಗಿಯೂ ಕ್ಷೇತ್ರದಲ್ಲಿ ಉತ್ತಮ ಹೆಸರು ಇಟ್ಟು ಕೊಂಡಿದ್ದಾರೆ. ನನ್ನನ್ನು ಪಕ್ಷದಿಂದ ಉಚ್ಚಾಟಿಸಿದ ಕಾರಣ ನೊಂದು ಗ್ಯಾರೆಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.ಯಾಕೆ ಹೀಗೆ ಮಾಡಿದಿರಿ ಎಂದು ಯಾವೊಬ್ಬ ಮಂತ್ರಿ ಮುಖಂಡ ಮಾತನಾಡಲಿಲ್ಲ ಎಂದು ಕಣ್ಣೀರು ಹಾಕಿದರು.

ನಿಮ್ಮ ಏಳಿಗೆಗಾಗಿ ನಮ್ಮನ್ನು ಬಳಸಿಕೊಂಡು,ಗೆದ್ದ ಮೇಲೆ ನಮ್ಮ ಮೇಲೆ ಹಗೆತನ ಸಾಧಿಸುವುದು ತಪ್ಪು. ನಾವು ಮೂಲ ಕಾಂಗ್ರೆಸ್ಸಿಗರು, ಉಚ್ಚಾಟಿಸಿದರೂ ಅಪಪ್ರಚಾರ ಮಾಡಿದರೂ ಕಾಂಗ್ರೆಸ್‌ನಲ್ಲಿಯೇ ಇರುತ್ತೇವೆ. ಸರಕಾರಕ್ಕೆ ಮುಜುಗರ ಆಗದಂತೆ, ಪಕ್ಷಕ್ಕೆ ಹಾನಿಯಾಗದಂತೆ ದಲಿತ ಸಂಘಟನೆಗಳು ನಡೆದುಕೊಂಡರೆ ಮಾತ್ರ ಪ್ರತಿಭಟನೆಗೆ ಬರುವ ಮಾತಾಡಿ ನಾನು ಇಲ್ಲಿ ಭಾಗವಹಿಸಿದ್ದೇನೆ.ನನ್ನ ನೋವನ್ನು ತೋಡಿಕೊಂಡಿದ್ದೇನೆ ಎಂದರು.

ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ನಂತರ ನೊಂದು 5 ನಿಮಿಷಗಳ ವಿಡಿಯೋ ಮಾಡಿರುವುದು ನಿಜ. ಆದರೆ ಶಾಸಕ ಪ್ರದೀಪ್ ಈಶ್ವರ್ ಇದನ್ನು 2 ನಿಮಿಷಕ್ಕೆ ಇಳಿಸಿ ತನಗೆ ಬೇಕಾದಂತೆ ಎಡಿಟ್ ಮಾಡಿಕೊಂಡು ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಳಿಸಿ,ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಆದರೂ ಅವರು ನನ್ನ ಬಗ್ಗೆ ಒಳ್ಳೆ ಮತಾಡಿದಾಗ ಸುಮ್ಮನಾಗಿ ನಂತರ ರಾಜೀನಾಮೆ ನೀಡುವ ಸಂದೇಶ ನೀಡಿ, ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವುದರಿಂದ ನೊಂದು ಪ್ರತಿಭಟನೆ ಮಾಡಿದ್ದೇನೆ. ನಾನು ಬಿಜೆಪಿಗೆ ಸಹಾಯ ಮಾಡಿದ್ದರೆ ಈ ಬಗ್ಗೆ ಒಂದೇ ಒಂದು ಆಧಾರ ನೀಡಿದರೆ ಸಾಕು ಪಕ್ಷದಿಂದ ದೂರವಾಗುತ್ತೇನೆ. ಇನ್ನು ನನ್ನ ಮತ್ತು ಶಾಸಕರ ನಡುವಿನ ವೈಮನಸ್ಸು ದೂರ ಮಾಡಲು ಕ್ಷೇತ್ರದ, ಜಿಲ್ಲೆಯ ಯಾವೊಬ್ಬ ಮುಖಂಡರು ನಾಯಕರು ಮುಂದಾಗಿಲ್ಲ, ನಮ್ಮ ತಂದೆ ರಾಜೀನಾಮೆ ನೀಡಿದಾಗಲೂ ಯಾರೂ ಕೂಡ ಸೌಹಾರ್ಧಕ್ಕಾಗಿ ಬಂದು ಯಾಕೆ ನೀಡಿದಿರಿ ಎಂದು ಕೇಳಲಿಲ್ಲ. ಇದೇ ಪಕ್ಷ ನಿಷ್ಟೆಗೆ ನೀಡಿದ ದೊಡ್ಡ ಬೆಲೆ ಎಂದು ಬೇಸರ ವ್ಯಕ್ತಪಡಿಸಿದರು.

ಇವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವಾಗ ಪಕ್ಷ ನೀಡುವ ಬಿಫಾರಂ ಖಾತರಿ ಹಿಂದೆ ನನ್ನ ಪಾತ್ರವೂ ಇದೆ. ಇವರು ಕೋಟಿಕುಳ ಎಂದು ಸುಳ್ಳು ಪ್ರಚಾರ ಮಾಡಿ ಮುಖಂಡರನ್ನು ನಂಬಿಸಿದ್ದೇನೆ.ಇಲ್ಲ ಇದು ಸುಳ್ಳು ಎಂದು ಶಾಸಕರು ಎದೆಮುಟ್ಟಿಕೊಂಡು ಹೇಳಲಿ.ನಾನು ನನ್ನ ಕುಟುಂಬ ಎಂದೂ ಕೂಡ ಪಕ್ಷಕ್ಕೆ ಎಂದೂ ಮೋಸ ಮಾಡಿಲ್ಲ. ಶಾಸಕರ ಬೆದರಿಕೆಗೆ ಹೆದರಿ ಓಡಿಹೋಗುವ ಪೈಕಿಯೂ ಅಲ್ಲ.ನ್ನ ಏಳಿಗೆ ಸಹಿಸದೆ ನೀವು ಹೀಗೆ ಪದೇ ಪದೇ ಕಿರುಕುಳ ನೀಡಿದರೆ, ನನ್ನ ಜೀವಕ್ಕೆ ನನ್ನ ಮಕ್ಕಳು ಕುಟುಂಬಕ್ಕೆ ತೊಂದರೆ ಆದರೆ ಪ್ರದೀಪ್ ಈಶ್ವರ್ ನೇರ ಕಾರಣ ಎಂದು ದೂರಿದರು.

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ್ ನಡಗೇರಿ, ರಾಜ್ಯ ಕಾರ್ಯದರ್ಶಿ, ಹನುಂತಪ್ಪ ಎಳಂಬಳಿಸೆ, ಮೂಲನಿವಾಸಿ ಅಂಬೇಡ್ಕರ್ ಸಂಘದ ರಾಜ್ಯ ಸಂಚಾಲಕ ಮುನಿರಾಜು, ಬೆಳಗಾವಿ ವಿಭಾಗೀಯ ಅಧ್ಯಕ್ಷ ಮುರಗೋಡು ಸಂಜು, ಆದಿಜಾಂಭವ ಸಂಘದ ಭೀಮರಾಜು, ಜಿಲ್ಲಾಧ್ಯಕ್ಷ ತಿಮ್ಮರಾಜು, ಬಾಲಕೃಷ್ಣ ರೂಪ, ಮುಷ್ಟೂರು ಹರೀಶ್, ಹೂಡಿ ಚಿನ್ನಿ, ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.

ಇದನ್ನೂ ಓದಿ: MLA Pradeep Eshwar: ನಮ್ಮ ನಾಯಕರ ವಿರುದ್ಧ ಹಗುರವಾಗಿ ಮಾತನಾಡಿದರೆ ತಕ್ಕಶಾಸ್ತಿಯ ಎಚ್ಚರಿಕೆ ರವಾನೆ