ಬಿಹಾರದ ಪಾಟ್ನಾದಿಂದ (patna) ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಇಡೀ ಗೋವಿಂದಪುರ ಗ್ರಾಮವನ್ನು (Govindpur village) ಖಾಲಿ ಮಾಡುವವಂತೆ ಗ್ರಾಮಸ್ಥರಿಗೆ ಬಿಹಾರ ರಾಜ್ಯ ಸುನ್ನಿ ವಕ್ಫ್ ಬೋರ್ಡ್ (Waqf Board) ನೊಟೀಸ್ ನೀಡಿರುವ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ. 30 ದಿನಗಳೊಳಗೆ ಭೂಮಿಯನ್ನು ಖಾಲಿ ಮಾಡುವಂತೆ ಗ್ರಾಮಸ್ಥರನ್ನು ವಕ್ಫ್ ಬೋರ್ಡ್ ಒತ್ತಾಯಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸಂಪೂರ್ಣ ಗೋವಿಂದಪುರ ಗ್ರಾಮ ತನ್ನದು ಎಂದು ಹೇಳಿಕೊಂಡಿರುವ ಬಿಹಾರ ರಾಜ್ಯ ಸುನ್ನಿ ವಕ್ಫ್ ಬೋರ್ಡ್ ಈ ಹಳ್ಳಿಯನ್ನು ಖಾಲಿ ಮಾಡುವಂತೆ ಗ್ರಾಮದ ಎಲ್ಲ ಕುಟುಂಬಗಳಿಗೆ ನೊಟೀಸ್ ಕಳುಹಿಸಿದೆ. ಗ್ರಾಮದ ಬಹುತೇಕ ಮಂದಿ ಹಿಂದುಗಳಾಗಿದ್ದಾರೆ. ಗ್ರಾಮಸ್ಥರಿಗೆ ನೊಟೀಸ್ ಬಂದಿದ್ದು, ಅವರು ಒತ್ತುವರಿ ಮಾಡಿಕೊಂಡಿರುವ ಜಮೀನು ವಕ್ಫ್ ಮಂಡಳಿಗೆ ಸೇರಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಹೇಳಿದೆ ಎನ್ನಲಾಗಿದೆ.
ಬಿಹಾರ ರಾಜ್ಯ ಸುನ್ನಿ ವಕ್ಫ್ ಮಂಡಳಿಯಿಂದ ನೊಟೀಸ್ ಪಡೆದವರಲ್ಲಿ ಬ್ರಿಜೇಶ್ ಬಲ್ಲಭ್ ಪ್ರಸಾದ್, ಮಾಲ್ತಿ ದೇವಿ, ರಾಜಕಿಶೋರ್ ಮೆಹ್ತಾ, ರಾಮಲಾಲ್ ಸಾವೊ, ಸಂಜಯ್ ಪ್ರಸಾದ್, ಸುದೀಪ್ ಕುಮಾರ್ ಮತ್ತು ಸುರೇಂದ್ರ ವಿಶ್ವಕರ್ಮ ಸೇರಿದ್ದಾರೆ. ಗ್ರಾಮಸ್ಥರು ತಮ್ಮ ಪೂರ್ವಜರಿಂದ ಈ ಭೂಮಿಯನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದು, ವಕ್ಫ್ ಬೋರ್ಡ್ ನ ಅಧಿಕಾರದ ಹಕ್ಕನ್ನು ತಳ್ಳಿಹಾಕಿದ್ದಾರೆ.
ವಕ್ಫ್ ಬೋರ್ಡ್‌ನಿಂದ ನೊಟೀಸ್ ಪಡೆದ ಏಳು ಗ್ರಾಮಸ್ಥರು ಪಾಟ್ನಾ ಹೈಕೋರ್ಟ್‌ಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ರಾಜ್ಯ ವಕ್ಫ್ ಮಂಡಳಿಗಳ ಅಧಿಕಾರವನ್ನು ಮರುವ್ಯಾಖ್ಯಾನಿಸುವ ಗುರಿಯನ್ನು ಹೊಂದಿರುವ ಕಾಯಿದೆ ರೂಪಿಸುವ ಬಗ್ಗೆ ಇತ್ತೀಚೆಗಷ್ಟೆ ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದರು. ಜೊತೆಗೆ ಅದರ ಆಸ್ತಿಗಳ ನೋಂದಣಿ, ಸಮೀಕ್ಷೆಯನ್ನು ಪರಿಹರಿಸುವುದು ಮತ್ತು ಅತಿಕ್ರಮಣಗಳನ್ನು ತೆಗೆದುಹಾಕಲು ಮತ್ತಷ್ಟು ಕ್ರಮಗಳನ್ನು ಒದಗಿಸುವುದು ಈ ಕಾಯಿದೆಯ ಉದ್ದೇಶವಾಗಿದೆ ಎಂದು ಹೇಳಿದ್ದರು.
ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ 1,500 ವರ್ಷಗಳಷ್ಟು ಹಳೆಯದಾದ ದೇವಾಲಯವಿತ್ತು. ಒಬ್ಬ ವ್ಯಕ್ತಿ ತನ್ನ 1.2 ಎಕರೆ ಭೂಮಿಯನ್ನು ಮಾರಾಟ ಮಾಡಲು ಹೋದಾಗ ತನ್ನ ಗ್ರಾಮದ ಭೂಮಿ ವಕ್ಫ್ ಆಸ್ತಿ ಎಂದು ವರ್ಗೀಕರಿಸಲಾಗಿದೆ ಎಂದು ತಿಳಿಯಿತು. ಗ್ರಾಮದ ಇತಿಹಾಸವು 1,500 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಆ ಹಳ್ಳಿಯಲ್ಲಿರುವ ಎಲ್ಲಾ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಇಂತಹ ಘಟನೆಗಳು ಸಂಭವಿಸಿದಾಗ ಅವುಗಳನ್ನು ಧಾರ್ಮಿಕ ದೃಷ್ಟಿಯಲ್ಲಿ ನೋಡಬೇಡಿ ಎಂದು ರಿಜಿಜು ಹೇಳಿದ್ದರು.