ಹೈದರಾಬಾದ್: ತಿರುಪತಿಯಲ್ಲಿ ಪ್ರಸಾದವಾಗಿ ರೂಪದಲ್ಲಿ ನೀಡಲಾಗುವ ಲಡ್ಡುಗಳನ್ನು (Tirupati Laddoo) ತಯಾರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಹಾಗೂ ತಾಳೆ ಎಣ್ಣೆ ಬಳಸಿರುವುದು ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ವೈಎಸ್ಆರ್ ಕಾಂಗ್ರೆಸ್(YSR Congress) ಹೈಕೋರ್ಟ್(High court) ಮೆಟ್ಟಿಲೇರಿದೆ. ತಮ್ಮ ಪಕ್ಷದ ವಿರುದ್ಧ ಆರೋಪ ಆಡಳಿತ ಪಕ್ಷದ ನಾಯಕರು ಮಾಡಿರುವ ಆರೋಪದ ಬಗ್ಗೆ ಕೂಲಂಕುಷ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದೆ.
ತಿರುಪತಿ ಲಡ್ಡು ಅಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಹಿಂದಿನ ಸರ್ಕಾರವಿದ್ದ ವೈಎಸ್ಆರ್ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಇದೇ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಿರುವ ವೈಎಸ್‌ಆರ್ ಕಾಂಗ್ರೆಸ್, ನ್ಯಾಯಮೂರ್ತಿ ಅಥವಾ ಸಮಿತಿಯೊಂದನ್ನು ರಚಿಸಿ ಈ ಬಗ್ಗೆ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದೆ. ಮುಂದಿನ ಬುಧವಾರ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ ಕೋರ್ಟ್, ಅಂದೇ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಸನಾತನ ಧರ್ಮ ರಕ್ಷಣೆಗಾಗಿ ಮಂಡಳಿ ಸ್ಥಾಪಿಸಿ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್‌ಆರ್ ಕಾಂಗ್ರೆಸ್ ಮತ್ತು ಜಗನ್ ಮೋಹನ್ ರೆಡ್ಡಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ , ಸನಾತನ ಧರ್ಮ ರಕ್ಷಣೆಗಾಗಿ ಮಂಡಳಿಯೊಂದನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ದೇಶಾದ್ಯಂತ ಹಿಂದೂ ದೇವಾಲಯಗಳ ಮೇಲ್ವಿಚಾರಣೆಗಾಗಿ ಸನಾತನ ಧರ್ಮ ರಕ್ಷಣಾ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಏನಿದು ಪ್ರಕರಣ?
ಕೋಟ್ಯಂತರ ಭಕ್ತರು ಭೇಟಿ ನೀಡುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು (Beef Fat) ಮತ್ತು ಮೀನಿನ ಎಣ್ಣೆ (Fish Fat) ಬೆರೆಸಲಾಗಿದೆ ಎಂಬ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.
ವೈಎಸ್‌ಆರ್‌ಪಿ ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದಿದೆ ಎಂದು ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಿಂದ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಮಾಂಸ ಟಾಲೋ ಮತ್ತು ಹಂದಿಮಾಂಸದ ಕುರುಹುಗಳಿವೆ ಎಂದು ವರದಿ ಸೂಚಿಸಿದೆ.
ಕರ್ನಾಟಕ ಹಾಲು ಒಕ್ಕೂಟ (KMF) ಈ ವಿವಾದಕ್ಕೆ ಸಂಬಂಧಪಟ್ಟಂತೆ ಗುರುವಾರ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಹೇಳಿಕೆ ಪ್ರಕಟಿಸಿರುವ ಕೆಎಂಎಫ್, ‘ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಮಂಡಳಿಯು ಕಳೆದ ನಾಲ್ಕು ವರ್ಷಗಳಿಂದ ತಮ್ಮಿಂದ (ಕೆಎಂಎಫ್) ತುಪ್ಪವನ್ನು ಖರೀದಿಸಿಲ್ಲ’ ಎಂದು ಸ್ಪಷ್ಟನೆ ನೀಡಿದೆ. ಚಂದ್ರಬಾಬು ನಾಯ್ಡು ಆರೋಪಕ್ಕೆ ಸಂಬಂಧಿಸಿದಂತೆ ವರದಿಯನ್ನು ಟಿಡಿಪಿ (TDP) ಬಹಿರಂಗಪಡಿಸಿದೆ.
ಈ ಸುದ್ದಿಯನ್ನೂ ಓದಿ: Tirupati Laddu: ತಿರುಪತಿ ಲಡ್ಡುವಿನಲ್ಲಿ ಬೀಫ್ ಕೊಬ್ಬು ಬಳಕೆ; ಕೆಎಂಎಫ್ ಸ್ಪಷ್ಟನೆಯೂ ಶಾಕಿಂಗ್