ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ (Tirupati Laddoo) ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎನ್ನುವ ಆರೋಪ ಆಂಧ್ರಪ್ರದೇಶದಲ್ಲಿ ಭಾರಿ ವಿವಾದ ಉಂಟು ಮಾಡಿದೆ. ಆರೋಪ – ಪ್ರತ್ಯಾರೋಪಗಳ ಮಧ್ಯೆ, ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಗೋಮಾಂಸದ ಕೊಬ್ಬು ಹೊಂದಿರುವ ಕಲಬೆರಕೆ ತೈಲ ಪತ್ತೆಯಾಗಿರುವುದಾಗಿ ಗುಜರಾತ್ ಮೂಲದ ಪ್ರಯೋಗಾಲಯ ವರದಿ ನೀಡಿದೆ. ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಆದರೆ ಇದನ್ನು ವೈಎಸ್‌ಆರ್‌ಸಿಪಿ ತಿರಸ್ಕರಿಸಿದ್ದು, ದುರುದ್ದೇಶದಿಂದ ಈ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದೆ. ಈ ಪ್ರಕರಣದ ಕಾರಣ ತಿರುಪತಿ ಲದ್ದು ಈಗ ಭಾರಿ ಚರ್ಚೆಯ ವಿಷಯವಾಗಿದೆ.
300 ವರ್ಷಗಳ ಹಿಂದಿನ ಇತಿಹಾಸ
ತಿರುಪತಿ ಲಡ್ಡುವಿಗೆ 300 ವರ್ಷಗಳ ಹಿಂದಿನ ಇತಿಹಾಸವಿದೆ. ಈ ಲಡ್ಡುವನ್ನು ವಿಷ್ಣುವಿನ ರೂಪವೆಂದು ಪೂಜಿಸುವ ವೆಂಕಟೇಶ್ವರನಿಗೆ ನೈವೇದ್ಯವಾಗಿ ತಿರುಪತಿಯ ದೇವಾಲಯವು 1715ರಲ್ಲಿ ಅರ್ಪಿಸಲು ಪ್ರಾರಂಭಿಸಿತು. ಬಳಿಕ ಇದನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲು ಶುರು ಮಾಡಿತು. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅದಕ್ಕೆ ಟ್ಯಾಗ್ ಅನ್ನು ನೀಡಿದೆ. ಇದನ್ನು ಸಿಹಿ ತಿಂಡಿಯಾಗಿ ಬೇರೆಯವರಿಗೆ ಮಾರಾಟ ಮಾಡಲು ಅವಕಾಶವಿಲ್ಲ. ಯಾಕೆಂದರೆ ಅದರ ಮೇಲೆ ಟಿಟಿಡಿ ಪೇಟೆಂಟ್ ಹಕ್ಕು ಪಡೆದಿದೆ.
ಲಡ್ಡುವಿನಲ್ಲಿ ಬಳಸುವ ಪದಾರ್ಥಗಳು ಏನೇನು?
ಪ್ರತಿ ಆರು ತಿಂಗಳಿಗೊಮ್ಮೆ ಈ ಲಡ್ಡು ಪ್ರಸಾದವನ್ನು ಹೊರತರಲು ಟಿಟಿಡಿ ಕನಿಷ್ಠ 1,400 ಟನ್ ತುಪ್ಪವನ್ನು ಇ- ಟೆಂಡರ್ ಮೂಲಕ ಸಂಗ್ರಹಿಸುತ್ತದೆ. ಲಡ್ಡುಗಳನ್ನು ತುಪ್ಪ, ಕಡಲೆ ಹಿಟ್ಟು, ಸಕ್ಕರೆ, ಸಣ್ಣ ಸಕ್ಕರೆ ತುಂಡುಗಳು, ಗೋಡಂಬಿ, ಏಲಕ್ಕಿ, ಕರ್ಪೂರ ಮತ್ತು ಒಣದ್ರಾಕ್ಷಿಗಳನ್ನು ಸೇರಿಸಿ ತಯಾರಿಸಲಾಗುತ್ತದೆ.
ಲಡ್ಡು ಮತ್ತು ಇತರ ನೈವೇದ್ಯಗಳನ್ನು ತಯಾರಿಸಲು ಪ್ರತಿದಿನ ದೇವಾಲಯದಲ್ಲಿ ಕನಿಷ್ಠ 400-500 ಕೆ.ಜಿ. ತುಪ್ಪ, 750 ಕೆ.ಜಿ. ಗೋಡಂಬಿ, 500 ಕೆ.ಜಿ. ಒಣದ್ರಾಕ್ಷಿ ಮತ್ತು 200 ಕೆ.ಜಿ. ಏಲಕ್ಕಿಯನ್ನು ಬಳಸಲಾಗುತ್ತದೆ. ಲಡ್ಡು ತಯಾರಿಸಲು ಬಳಸುವ ತುಪ್ಪ, ಬಣ್ಣ ಸೇರಿದಂತೆ ವಿವಿಧ ವಸ್ತುಗಳ ಪರೀಕ್ಷೆಯನ್ನು ಮೊದಲೇ ನಡೆಸಲಾಗುತ್ತದೆ.
ತಿರುಪತಿ ಬಾಲಾಜಿ ಟ್ರಾವೆಲ್ಸ್ ಪ್ರಕಾರ, ಲಡ್ಡುಗಳು ಕ್ರಮವಾಗಿ 40, 175 ಮತ್ತು 750 ಗ್ರಾಂ ತೂಕದ ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರಗಳಲ್ಲಿ ಲಭ್ಯವಿದೆ. ವೆಂಕಟೇಶ್ವರ ದೇವಸ್ಥಾನದಲ್ಲಿ ಸಣ್ಣ ಲಡ್ಡುಗಳನ್ನು ಭಕ್ತರಿಗೆ ಉಚಿತವಾಗಿ ನೀಡಲಾಗುತ್ತದೆ. ಮಧ್ಯಮ ಗಾತ್ರದ ಲಡ್ಡು ಒಂದರ ಬೆಲೆ 50 ರೂ., ದೊಡ್ಡದು 200 ರೂಪಾಯಿ.
ಹೇಗೆ ತಯಾರಿಸುತ್ತಾರೆ?
ಲಡ್ಡುಗಳನ್ನು ದೇವಾಲಯದ ಅಡುಗೆ ಮನೆಯಲ್ಲಿ ತಯಾರಿಸಲಾಗುತ್ತದೆ. ಈ ಪ್ರದೇಶವನ್ನು ಲಡ್ಡು ಪೋಟು ಎಂದು ಕರೆಯಲಾಗುತ್ತದೆ. ಅಡುಗೆಯವರು ತಲೆ ಬೋಳಿಸಿಕೊಳ್ಳಬೇಕು, ಒಂದೇ ರೀತಿಯ ಸ್ವಚ್ಛ ಬಟ್ಟೆ ಧರಿಸಬೇಕು ಎನ್ನುವ ನಿಯಮವಿದೆ. ಲಡ್ಡುಗಳನ್ನು ತಯಾರಿಸಲು 600ಕ್ಕೂ ಹೆಚ್ಚು ಅಡುಗೆಯವರನ್ನು ನೇಮಿಸಲಾಗಿದೆ. ಪ್ರತಿ ಬ್ಯಾಚ್‌ನ ಮೊದಲ ಲಡ್ಡುವನ್ನು ಭಗವಂತನಿಗೆ ಅರ್ಪಿಸಲಾಗುತ್ತದೆ. ಅನಂತರ ಅದನ್ನು ಉಳಿದ ತಯಾರಿಕೆಯೊಂದಿಗೆ ಬೆರೆಸಿ ಭಕ್ತರಿಗೆ ಹಂಚಲಾಗುತ್ತದೆ.
Tirupati Laddoo: ತಿರುಪತಿ ಲಡ್ಡುವಿನಲ್ಲಿ ಬೀಫ್ ಕೊಬ್ಬು ಬಳಕೆ ಆರೋಪ- ಹೈಕೋರ್ಟ್ ಮೆಟ್ಟಿಲೇರಿದ YSRCP
ಎಷ್ಟು ಬಗೆಯ ಲಡ್ಡುಗಳಿವೆ?
ದೇವಾಲಯದಲ್ಲಿ ಪ್ರತಿದಿನ ಸರಾಸರಿ 3.5 ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ 4 ಲಕ್ಷದವರೆಗೆ ಲಡ್ಡುಗಳನ್ನು ತಯಾರಿಸಲಾಗುತ್ತದೆ. ದೇವಾಲಯದಲ್ಲಿ ಮೂರು ವಿಧದ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಇದನ್ನು ಆಸ್ಥಾನಂ, ಕಲ್ಯಾಣೋತ್ಸವಂ ಮತ್ತು ಪ್ರೋಕ್ತಂ ಎಂದು ಕರೆಯಲಾಗುತ್ತದೆ. ಕೇಸರಿ ಎಳೆಗಳು, ಗೋಡಂಬಿ ಮತ್ತು ಬಾದಾಮಿಗಳಿಂದ ಮಾಡಿದ ಅಸ್ಥಾನಂ ಲಡ್ಡುಗಳನ್ನು ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ.
ಕಲ್ಯಾಣೋತ್ಸವಂ ಲಡ್ಡುಗಳು ದೊಡ್ಡದಾಗಿರುತ್ತವೆ ಮತ್ತು ಕಲ್ಯಾಣೋತ್ಸವಂ ಸೇವೆಯಲ್ಲಿ ಭಾಗವಹಿಸುವವರಿಗೆ ನೀಡಲಾಗುತ್ತದೆ. ಆದರೆ ಪ್ರೋಕ್ತಂ ಲಡ್ಡುಗಳು ಯಾತ್ರಿಕರಿಗೆ ವಿತರಿಸುವ ನೈವೇದ್ಯಗಳಾಗಿವೆ.