ಬಳಸಿ ಬಿಸಾಡುವಂತಹ ಪ್ಲಾಸ್ಟಿಕ್ ಬಾಟಲಿಗಳಿಂದ (Plastic Bottles) ಯುವತಿಯರಿಬ್ಬರು ಸೇರಿ ಸುಂದರವಾದ ಮನೆಯನ್ನು ನಿರ್ಮಿಸಿದ್ದಾರೆ. 4,000 ಚದರ ಅಡಿ ಜಾಗದಲ್ಲಿ 16,000 ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರ ಸ್ನೇಹಿ ಮನೆಯನ್ನು (Eco Friendly Home) ನಿರ್ಮಿಸಿರುವ ಇವರು ಈಗ ಎಲ್ಲರ ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರದ (maharastra) ಔರಂಗಾಬಾದ್‌ನ ನಮಿತಾ ಕಪಾಲೆ ಮತ್ತು ಕಲ್ಯಾಣಿ ಭರಾಂಬೆ ಅವರು ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರ ಸ್ನೇಹಿ ಮನೆಯನ್ನು ನಿರ್ಮಿಸಿದ್ದು, ಇದಕ್ಕಾಗಿ ಅವರು ಸರಿಸುಮಾರು 12- 13 ಟನ್ ಗಳಷ್ಟು ಮಣ್ಣು ಬಳಕೆ ಮಾಡಿದ್ದಾರೆ. ಅಸ್ಸಾಂನ ಶಾಲೆಯೊಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಆಸನಗಳನ್ನು ನೋಡಿ ಇವರಿಬ್ಬರು ಸ್ಫೂರ್ತಿ ಪಡೆದಿರುವುದಾಗಿ ಹೇಳಿದ್ದಾರೆ.
ಭಾರತದಲ್ಲಿ ವಾರ್ಷಿಕವಾಗಿ ಸರಿಸುಮಾರು 3.5 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯ ಭೂಮಿ, ನೀರಿಗೆ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ತಿಳಿದುಕೊಂಡ ನಮಿತಾ ಕಪಾಲೆ ಮತ್ತು ಕಲ್ಯಾಣಿ ಭರಾಂಬೆ ಅವರು ತ್ಯಾಜ್ಯ ಮಾಲಿನ್ಯ ಕಡಿಮೆ ಮಾಡಲು ತಾವು ಏನಾದರೂ ಮಾಡಬೇಕು ಎಂದು ಯೋಚಿಸಿ ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರ ಸ್ನೇಹಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು.
ದೌಲತಾಬಾದ್ ಬಳಿಯ ಸಂಭಾಜಿ ನಗರದಲ್ಲಿ ಪ್ಲಾಸ್ಟಿಕ್ ಮನೆಯನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ ಹಸುವಿನ ಸಗಣಿ, ಮಣ್ಣು, ಪ್ಲಾಸ್ಟಿಕ್ ಬಾಟಲಿಗಳು ಮತ್ತು 12- 13 ಟನ್ ಗಳಷ್ಟು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ಬಳಸಿದ್ದಾರೆ.
ನಮಿತಾ ಮತ್ತು ಕಲ್ಯಾಣಿ ಔರಂಗಾಬಾದ್‌ನಲ್ಲಿರುವ ಸರ್ಕಾರಿ ಕಲಾ ಮತ್ತು ವಿನ್ಯಾಸ ಕಾಲೇಜಿನಲ್ಲಿ 2020 ರಲ್ಲಿ ಲಲಿತಕಲೆಯಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಪರಿಸರ ಸ್ನೇಹಿ ಮನೆ ನಿರ್ಮಿಸುವ ಕನಸು ಕಂಡರು. ಅಸ್ಸಾಂನ ಗುವಾಹಟಿಯ ಪಮೋಹಿ ಗ್ರಾಮದಲ್ಲಿ ಅಕ್ಷರ ಶಾಲೆಯು ಜಾರಿಗೊಳಿಸಿದ ಚಟುವಟಿಕೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಖಾಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಿಮೆಂಟ್ ತುಂಬಿರುವುದನ್ನು ನೋಡಿ ಪ್ರೇರಿತರಾದರು.
ಇದಕ್ಕಾಗಿ ಅವರು ಹೊಟೇಲ್, ಅಂಗಡಿಗಳ ಕಸದಲ್ಲಿ, ಬೀದಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು.
ಮನೆ ನಿರ್ಮಾಣ ಹೇಗೆ?
ಒಟ್ಟು 16,000 ಪ್ಲಾಸ್ಟಿಕ್ ತ್ಯಾಜ್ಯ ಬಾಟಲಿಗಳನ್ನು ಸಂಗ್ರಹಿಸಿದ ಇವರು ಬಳಿಕ ಸಿಮೆಂಟ್ ಬದಲು ಮಣ್ಣನ್ನು ಬಳಸಲು ನಿರ್ಧರಿಸಿದರು. ಸಂಗ್ರಹಿಸಿದ ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅವರು 10,000 ಬಾಟಲಿಗಳನ್ನು ಪ್ಲಾಸ್ಟಿಕ್ ಮತ್ತು ಉಳಿದ 6,000 ಬಾಟಲಿಗಳನ್ನು ಮಣ್ಣಿನಿಂದ ತುಂಬಿದರು.
ಈ ಪ್ಲಾಸ್ಟಿಕ್ ಬಾಟಲಿಗಳ ಗುಣಮಟ್ಟವನ್ನು ಔರಂಗಾಬಾದ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಲ್ಯಾಬ್ ಎಂಜಿನಿಯರ್‌ಗಳು ಪರಿಶೀಲಿಸಿದ್ದಾರೆ ಎನ್ನುತ್ತಾರೆ ನಮಿತಾ.
ಆರಂಭದಲ್ಲಿ, ನಮ್ಮ ಪ್ರಯತ್ನಗಳು ವಿಫಲವಾದವು. ನಮ್ಮ ಗೋಡೆಯು 2- 3 ಬಾರಿ ಕುಸಿದಿತ್ತು. ಪ್ಲಾಸ್ಟಿಕ್ ಮತ್ತು ಮಣ್ಣನ್ನು ಬಳಸಿ ಮಾಡಿದ ಪರಿಸರ ಸ್ನೇಹಿ ಇಟ್ಟಿಗೆಗಳು ಸಾಮಾನ್ಯ ಇಟ್ಟಿಗೆಗಳಂತೆ ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಈ ಸಮಸ್ಯೆಗಳನ್ನು ನಿಭಾಯಿಸಲು ಸ್ಥಳೀಯವಾಗಿ ಲಭ್ಯವಿರುವ ಪೊಯ್ಟಾ ಮಣ್ಣನ್ನು ಬಳಸಿರುವುದಾಗಿ ಹೇಳಿದ್ದಾರೆ.
ಇದು ಕಪ್ಪು ಮಣ್ಣಿಗೆ ಹೋಲಿಸಿದರೆ ಹೆಚ್ಚು ಅಂಟಿಕೊಂಡಿರುತ್ತದೆ. ಸಾಕಷ್ಟು ಪ್ರಯೋಗದ ಬಳಿಕ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿರುವುದಾಗಿ ಅವರು ತಿಳಿಸಿದರು.
ಗೋಡೆಗೆ ಮಣ್ಣು ಮತ್ತು ಸಗಣಿ ಮಿಶ್ರಣದಿಂದ ಪ್ಲಾಸ್ಟರ್ ಮಾಡಲಾಗಿದೆ. ಬಿದಿರು ಮತ್ತು ಮರದಿಂದ ಛಾವಣಿ, ಬಾಗಿಲು ಮತ್ತು ಕಿಟಕಿಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕಾಗಿ 15 ಮಹಿಳಾ ಕೂಲಿ ಕಾರ್ಮಿಕರು ತಮ್ಮೊಂದಿಗೆ ದುಡಿದಿದ್ದು, ಮನೆ ನಿರ್ಮಾಣಕ್ಕೆ ಸುಮಾರು 10 ತಿಂಗಳು ಬೇಕಾಯಿತು ಎಂದು ಅವರು ಹೇಳಿದ್ದಾರೆ.
ಪರಿಸರ ಸ್ನೇಹಿ ಮನೆಯು ಎರಡು ಕೋಣೆಗಳನ್ನು ಹೊಂದಿದೆ. ಇದಕ್ಕೆ ಬೇಸಿಗೆಯಲ್ಲಿ ಏರ್ ಕಂಡಿಷನರ್ ಅಥವಾ ಚಳಿಗಾಲದಲ್ಲಿ ಹೀಟರ್ ಅಗತ್ಯವಿಲ್ಲ. ಇದು ಮಣ್ಣಿನ ಮನೆಗಳ ವಿಶೇಷತೆ ಎನ್ನುತ್ತಾರೆ ನಮಿತಾ. ಸದ್ಯಕ್ಕೆ ಇದರಲ್ಲಿ ತಾವು ರೆಸ್ಟೋರೆಂಟ್ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಈ ಮನೆ ನಿರ್ಮಾಣಕ್ಕೆ ಪ್ರತಿ ಚದರ ಅಡಿಗೆ 700 ರೂ. ಖರ್ಚಾಗಿರುವುದಾಗಿ ತಿಳಿಸಿರುವ ನಮಿತಾ ಮತ್ತು ಕಲ್ಯಾಣಿ ಇದಕ್ಕಾಗಿ ತಮ್ಮ ಉಳಿತಾಯದ ಹಣದಿಂದ ಸುಮಾರು 7 ಲಕ್ಷ ರೂ. ಖರ್ಚು ಮಾಡಿರುವುದಾಗಿ ಹೇಳಿದ್ದಾರೆ. ಈ ಮನೆಗೆ ವಾವರ್ ಎಂದು ಹೆಸರಿಟ್ಟಿದ್ದಾರೆ. ಇದರ ಅರ್ಥ ಜನರು ಹೆಚ್ಚಾಗಿ ಭೇಟಿ ನೀಡುವ ಫಾರ್ಮ್ ಅಥವಾ ತೆರೆದ ಸ್ಥಳ ಎಂಬುದಾಗಿದೆ. ಇದು ಸುಮಾರು ಹತ್ತು ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ಅವರ ನಂಬಿಕೆ.
Amazed to see the ingenuity of Sambhajinagar’s Kalyani & Namita, who have taken proactive steps to combat plastic waste with Project Wawar.
— Aaditya Thackeray (@AUThackeray) July 22, 2022
Developing homes using dung, soil, 16,000 plastic bottles and 12 to 13 tons of non-recyclable plastic, is truly an effort worth replicating pic.twitter.com/JKclQrE4CS
Indian Railways: ಅತೀ ಹೆಚ್ಚು ಆದಾಯ ತಂದುಕೊಡುವ ರೈಲು ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್!
ಮನೆಗೆ ಭೇಟಿ ನೀಡಿರುವ ಮಾಜಿ ಪರಿಸರ ಸಚಿವ ಆದಿತ್ಯ ಠಾಕ್ರೆ ಯುವತಿಯರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಅವರು ತಮ್ಮ ಎಕ್ಸ್ ಪೇಜ್ ನಲ್ಲೂ ಹಂಚಿಕೊಂಡಿದ್ದಾರೆ.
ಯುವತಿಯರು ಇದೇ ರೀತಿ ರಸ್ತೆ ಬದಿಯ ಕಾಂಪೌಂಡ್‌ಗಳು, ಡಿವೈಡರ್‌ಗಳ ನಿರ್ಮಾಣ, ಬಹುಮಹಡಿ ಮನೆಗಳ ನಿರ್ಮಾಣಕ್ಕೆ ಸಂಶೋಧನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.