Friday, 22nd November 2024

BESCOM: ವಿದ್ಯುತ್ ಕಂಬಗಳ ಬಳಿಯ ಗಿಡ-ಗಂಟಿ ತೆರವು; ಬಿಬಿಎಂಪಿ ಜತೆ ಕೈ ಜೋಡಿಸಲಿದೆ ಬೆಸ್ಕಾಂ

BESCOM

ಬೆಂಗಳೂರು: ಮುಂಗಾರು ಮಳೆ ನಂತರ ಬೆಂಗಳೂರು (Bengaluru) ನಗರ ಜಿಲ್ಲೆಯ ಹಲವು ಪ್ರದೇಶಗಳ ಬೀದಿ ದೀಪಗಳು, ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್ಸ್‌ (Transformers) ಸಮೀಪ ಬೆಳೆದಿರುವ ಮರದ ಕೊಂಬೆಗಳು, ಬಳ್ಳಿ, ಗಿಡಗಳನ್ನು ತೆರವುಗೊಳಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯಕ್ಕೆ ಬೆಸ್ಕಾಂ ಕೈ ಜೋಡಿಸಲಿದೆ. ಟ್ರಾನ್ಸ್‌ಫಾರ್ಮರ್‌ಗಳು, ಆರ್‌ಎಂಯುಗಳು ಮತ್ತು ಎಲ್‌ಟಿ ಫೀಡರ್ ಪಿಲ್ಲರ್ ಬಾಕ್ಸ್‌ಗಳಂತಹ ವಿದ್ಯುತ್ ಮೂಲಸೌಕರ್ಯಗಳ ಬಳಿ ಬೆಳೆದಿರುವ ಗಿಡಗಂಟಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿಗೆ (BBMP) ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಬೆಸ್ಕಾಂ (BESCOM) ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳ ಬಳಿಯಿರುವ ಗಿಡ, ಬಳ್ಳಿ, ಕೊಂಬೆಗಳನ್ನು ತೆರವುಗೊಳಿಸುವುದರಿಂದ ವಿದ್ಯುತ್ ಅಡಚಣೆಯನ್ನು ತಡೆಗಟ್ಟುವುದಲ್ಲದೇ, ಬೆಸ್ಕಾಂ ಮತ್ತು ಬಿಬಿಎಂಪಿಯ ಎಂದಿನ ನಿರ್ವಹಣೆ ಕಾರ್ಯಕ್ಕೂ ಅನುಕೂಲವಾಗಲಿದೆ.

ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ

ತೆರವುಗೊಳಿಸಿದ ಗಿಡಗಂಟಿಗಳ ತ್ಯಾಜ್ಯವನ್ನು ಬಿಬಿಎಂಪಿ ಗುರುತಿಸಿದ ಸ್ಥಳದಲ್ಲೇ ವಿಲೇವಾರಿ ಮಾಡಲು ಸೂಚಿಸಲಾಗಿದ್ದು, ತ್ಯಾಜ್ಯ ನಿರ್ವಹಣ ಕಾರ್ಯ ಸರಿಯಾಗಿ ಆಗಿದೆ ಎಂದು ಖಚಿತಪಡಿಸಿಕೊಳ್ಳಲು ಉಪ-ವಿಭಾಗಾಧಿಕಾರಿಗಳನ್ನು ಜವಾಬ್ದಾರರನ್ನಾಗಿಸಲಾಗುವುದು. ಅಲ್ಲದೇ, ಕೆಲಸ ಆದ ಕುರಿತು ಸಮಗ್ರ ದಾಖಲೆಗಳನ್ನು ನಿರ್ವಹಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Priyank Kharge: ಅಮೆರಿಕ-ಕರ್ನಾಟಕ ನಡುವೆ ಸಿಸ್ಟರ್ ಸಿಟಿ ಪ್ರಸ್ತಾಪ; ಯು.ಎಸ್ ರಾಯಭಾರಿ ಜತೆ ಪ್ರಿಯಾಂಕ್ ಖರ್ಗೆ ಚರ್ಚೆ

ಈ ಬಗ್ಗೆ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ಪ್ರತಿಕ್ರಿಯಿಸಿ, “ಗುಣಮಟ್ಟದ ವಿದ್ಯುತ್ ಪೂರೈಕೆ ಮತ್ತು ಜನರ ಸುರಕ್ಷತೆಗೆ ಬೆಸ್ಕಾಂ ಬದ್ಧವಾಗಿದೆ. ವಿದ್ಯುತ್ ಮೂಲಸೌಕರ್ಯಕ್ಕೆ ಅಡ್ಡವಾಗಿ ಬೆಳೆದಿರುವ ಕೊಂಬೆಗಳು, ಬಳ್ಳಿಗಳು, ಗಿಡಗಳನ್ನು ಕತ್ತರಿಸುವ ಬಿಬಿಎಂಪಿ ಕಾರ್ಯದಲ್ಲಿ ಸಹಕರಿಸುವಂತೆ ಬಿಎಂಎಝಡ್‌ (ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯ) ವ್ಯಾಪ್ತಿಯಲ್ಲಿರುವ ಎಲ್ಲಾ ಉಪವಿಭಾಗಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಸ್ಕಾಂನ ಉಪವಿಭಾಗದ ಅಧಿಕಾರಿಗಳು ಬಿಬಿಎಂಪಿಯ ವಾರ್ಡ್‌ ಮಟ್ಟದ ಅಧಿಕಾರಿಗಳ ಸಮನ್ವಯದಲ್ಲಿ ಈ ಕಾರ್ಯ ನಡೆಯಲಿದ್ದು, ಕಾರ್ಯಾಚರಣೆಗೆ ಅನುಕೂಲವಾಗುವಂತೆ ಅಗತ್ಯ ಮಾನವ ಸಂಪನ್ಮೂಲ, ಸಾಮಗ್ರಿಗಳು, ವಾಹನಗಳು ಮತ್ತು ಸಲಕರಣೆಗಳನ್ನೂ ಬೆಸ್ಕಾಂ ಒದಗಿಸಲಿದೆ ಎಂದು ತಿಳಿಸಿದ್ದಾರೆ.