Saturday, 23rd November 2024

Dasara holidays: ರಾಜ್ಯದ ಶಾಲೆಗಳಿಗೆ ದಸರಾ ರಜೆ ಘೋಷಣೆ; ಈ ಬಾರಿ ಎಷ್ಟು ದಿನ?

students

ಬೆಂಗಳೂರು: ಈ ಬಾರಿ ಅದ್ಧೂರಿಯಾಗಿ ನಾಡ ಹಬ್ಬ ದಸರಾ (Mysuru Dasara 2024) ಆಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ನಡುವೆ ರಾಜ್ಯದ ಶಾಲೆಗಳಿಗೆ ಶಿಕ್ಷಣ ಇಲಾಖೆಯು ದಸರಾ ರಜೆಯನ್ನು ಘೋಷಿಸಿದ್ದು, ವಿದ್ಯಾರ್ಥಿಗಳಿಗೆ ಅ. 3 ರಿಂದ 20 ವರೆಗೆ ದಸರಾ ರಜೆ (Dasara holidays) ನೀಡಲಾಗಿದೆ.

ಶಾಲಾ ಮಕ್ಕಳಿಗೆ ಈ ಬಾರಿ 17 ದಿನಗಳ ಕಾಲ ದಸರಾ ರಜೆ ಸಿಗಲಿದ್ದು, ಅ. 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್‌ 10ರ ತನಕ ಶಾಲೆಗಳು ತೆರೆದಿರಲಿವೆ. 2024-2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾರದಂತೆ ರಜೆಗಳು ಘೋಷಣೆಯಾಗಿವೆ.

ಈ ಹಿಂದೆ ಕರಾವಳಿ ಭಾಗದಲ್ಲಿ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಆಗುತ್ತಿತ್ತು. ಆದರೆ, ಈ ಬಾರಿ ಯಾವುದೇ ಬದಲಾವಣೆ ಆಗಿಲ್ಲ. ಇಡೀ ರಾಜ್ಯದ ಎಲ್ಲಾ ಶಾಲೆಗಳಿಗೂ ಒಂದೇ ಮಾರ್ಗದರ್ಶಿ ರೂಪಿಸಲಾಗಿದೆ.

ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಈ ಬಾರಿಯ ದಸರಾ ಉದ್ಘಾಟಕರು

Mysuru Dasara 2024

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ (Mysuru Dasara 2024) ಕೆಲವೇ ದಿನಗಳಷ್ಟೇ ಬಾಕಿ ಇದೆ. ಹೀಗಾಗಿ ಈ ಬಾರಿಯ ದಸರಾ ಉದ್ಘಾಟಕರ ಹೆಸರನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ (Dr. Hampa Nagarajaiah) ಅವರು 2024ರ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ದಸರಾ ಉದ್ಘಾಟನೆಗೆ ಹಲವರ ಹೆಸರುಗಳು ಚರ್ಚೆಗೆ ಬಂದಿದ್ದವು. ಈ ನಡುವೆ ಸಿಎಂ ಸಿದ್ದರಾಮಯ್ಯನವರೇ ಹಿರಿಯ ಸಾಹಿತಿ ಪ್ರೊ.ಹಂ.ಪ. ನಾಗರಾಜಯ್ಯ ಅವರನ್ನು ಉದ್ಘಾಟಕರಾಗಿ ಕರೆಸಿದರೆ ಹೇಗೆ ಎಂಬ ಪ್ರಸ್ತಾಪ ಮಾಡಿದ್ದರು. ಹಂಪನಾ ಜೈನ ಸಮುದಾಯಕ್ಕೆ ಸೇರಿದವರಾಗಿದ್ದು, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಹಿರಿಯ ತಲೆಮಾರಿನ ಸಾಹಿತಿ ಎನ್ನುವ ದೃಷ್ಟಿಕೋನದಿಂದ ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡಲು ಸಿಎಂ ಸಿದ್ದರಾಮಯ್ಯ ಇಚ್ಛೆ ವ್ಯಕ್ತಪಡಿಸಿದ್ದರು. ಈಗ ಅದರಂತೆ ಪ್ರೊ. ಹಂ.ಪ.ನಾಗರಾಜಯ್ಯ ಅವರನ್ನೇ ಆಯ್ಕೆ ಮಾಡಲಾಗಿದೆ.

ಯಾರಿವರು ಹಂ.ಪ. ನಾಗರಾಜಯ್ಯ?

ಕನ್ನಡ ಸಾರಸ್ವತ ಲೋಕದಲ್ಲಿ ಹಂಪನಾ ಎಂದೇ ಚಿರ ಪರಿಚಿತರಾಗಿರುವ ಹಂ.ಪ. ನಾಗರಾಜಯ್ಯನವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಎಂಬ ಗ್ರಾಮದಲ್ಲಿ 1936ರ ಅ.7ರಲ್ಲಿ ಶಾನುಬೋಗ ಪದ್ಮನಾಭಯ್ಯ – ಪದ್ಮಾವತಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿಎ ಆನರ್ಸ್‌ ಪದವಿ, ಮೈಸೂರು ವಿವಿಯಲ್ಲಿ ಎಂಎ ಪದವಿ ಪಡೆದಿರುವ ಇವರು, ವಡ್ಡಾರಾಧನೆ ಸಮಗ್ರ ಅಧ್ಯಯನಕ್ಕಾಗಿ ಬೆಂಗಳೂರು ವಿವಿಯಿಂದ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. 1959ರಿಂದ ಅಧ್ಯಾಪಕ ವೃತ್ತಿ ಜೀವನ ಆರಂಭಿಸಿದ ಹಂಪನಾ ಅವರು ಮೈಸೂರಿನ ಮಹಾರಾಣಿ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮಂಡ್ಯ, ದಾವಣಗೆರೆ, ಬೆಂಗಳೂರಿನ ಸರ್ಕಾರಿ ಕಾಲೇಜು, ಬೆಂಗಳೂರು ವಿವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಇದರ ಜತೆಗೆ ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 14ಕ್ಕೂ ಹೆಚ್ಚು ಕೃತಿಗಳು 10ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಇವರನ್ನು ಈ ಬಾರಿಯ ದಸರಾ ಉದ್ಘಾಟಕರಾಗಿ ನೇಮಕ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | Department of Agriculture: ಕೃಷಿ ಇಲಾಖೆಯ 945 ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ವಿದ್ಯಾರ್ಹತೆ, ಶುಲ್ಕದ ವಿವರ ಇಲ್ಲಿದೆ

ಅ. 3ರಿಂದ ದಸರಾ ಆರಂಭ

ವಿಶ್ವ ವಿಖ್ಯಾತ ಮೈಸೂರು ದಸರಾ-2024 ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಅಕ್ಟೋಬರ್ 3ರಿಂದ 12ರವರೆಗೆ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧರಿಸಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲಾಗುವುದು ಎಂದು ತಿಳಿಸಿದ್ದರು.