ಮಥುರಾ: ಚಲಿಸುತ್ತಿದ್ದ ಕಾರಿನಲ್ಲಿ ದಲಿತ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ (Physical Abuse) ನಂತರ ಆಕೆಯನ್ನು ರಸ್ತೆ ಬದಿಗೆ ಎಸೆದ ಘಟನೆ ಮಥುರಾದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. 13 ವರ್ಷದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಮಹಿಳಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ನಂತರ ಆಕೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಬಾಲಕಿಯ ತಂದೆ ನೀಡಿದ ದೂರನ್ನು ಉಲ್ಲೇಖಿಸಿದ ಎಸ್ಪಿ, ಅಪ್ರಾಪ್ತ ಬಾಲಕಿ ಗುರುವಾರ ಮನೆಗೆ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋದಾಗ ಈ ಘಟನೆ ನಡೆದಿದೆ ಎಂದು ಹೇಳಿದರು. ಅಂಗಡಿಯಲ್ಲಿ, ನೀರಜ್ ಎಂಬ ವ್ಯಕ್ತಿ ಅವಳಿಗೆ ನಿದ್ರೆಯ ಔಷಧ ಮಿಶ್ರಣಗೊಂಡಿರುವ ನೀರಿನ ಬಾಟಲಿಯನ್ನು ನೀಡಿದ್ದಾನೆ. ನೀರು ಕುಡಿದ ಕೂಡಲೇ ಆಕೆಗೆ ಮೂರ್ಛೆ ತಪ್ಪಿದೆ.
ನೀರಜ್, ಆತನ ಸ್ನೇಹಿತ ಶೈಲೇಂದ್ರ ಮತ್ತು ಇನ್ನೊಬ್ಬ ಸಹಚರ ಆಕೆಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಚಲಿಸುತ್ತಿದ್ದ ಕಾರಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಸಾನಾ ರಸ್ತೆಯ ಫ್ಲೈಓವರ್ ಕೆಳಗೆ ಎಸೆದು ಪರಾರಿಯಾಗಿದ್ದರು.
ಇದನ್ನೂ ಓದಿ: Munirathna Arrest: ಬಿಜೆಪಿ ಶಾಸಕ ಮುನಿರತ್ನ ಮತ್ತೆ ಬಂಧನ, ಈ ಬಾರಿ ಅತ್ಯಾಚಾರ ಕೇಸ್!
ಪ್ರಜ್ಞೆ ಮರಳಿದ ನಂತರ, ಬಾಲಕಿ ಮನೆಗೆ ತಲುಪಿ ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಲಕಿಯ ಸ್ಥಿತಿ ಹದಗೆಟ್ಟಿದ್ದು ಕುಟುಂಬವು ತಕ್ಷಣ ಅವಳನ್ನು ವೈದ್ಯರ ಬಳಿಗೆ ಕರೆದೊಯ್ದಿದೆ. ಅವಳ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢಪಟ್ಟಿದೆ.
ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತ್ರಿಗುನ್ ಬಿಸೆನ್ ಹೇಳಿದ್ದಾರೆ, ಮೂವರು ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.