Friday, 20th September 2024

Tirupati laddu Row : ತಿರುಪತಿ ಲಡ್ಡಿನಲ್ಲಿ ಬೀಫ್‌ ಕೊಬ್ಬು ಬಳಕೆ ವಿವಾದದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ರಾಹುಲ್ ಗಾಂಧಿ

ಬೆಂಗಳೂರು : ವಿಶ್ವವಿಖ್ಯಾತ ತಿರುಪತಿ ಲಡ್ಡುವಿನಲ್ಲಿ ಬಳಸಲಾದ ವಸ್ತುಗಳಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿದೆ ಎಂಬ ವಿವಾದದ (Tirupati laddu Row) ಮಧ್ಯೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಆರೋಪಗಳನ್ನು “ಗೊಂದಲಕಾರಿಯಾಗಿದೆ” ಎಂದು ಹೇಳಿದ್ದಾರೆ. ಭಾರತದಾದ್ಯಂತದ ಅಧಿಕಾರಿಗಳು ಧಾರ್ಮಿಕ ಸ್ಥಳಗಳ ಪಾವಿತ್ರ್ಯ ರಕ್ಷಿಸಬೇಕು ಎಂದು ಅವರು ಪ್ರತಿಪಾದಿಸಿದರು.

“ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಸಾದವನ್ನು ಅಪವಿತ್ರಗೊಳಿಸಲಾಗಿದೆ ಎಂಬ ವರದಿಗಳು ಆತಂಕಕಾರಿಯಾಗಿವೆ. ಭಗವಾನ್ ಬಾಲಾಜಿ ಭಾರತ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರಿಗೆ ಪೂಜ್ಯ ದೇವರು. ಈ ವಿಷಯವು ಪ್ರತಿಯೊಬ್ಬ ಭಕ್ತರಿಗೂ ನೋವುಂಟು ಮಾಡುತ್ತದೆ ಮತ್ತು ಅದನ್ನು ಕೂಲಂಕಷವಾಗಿ ತನಿಖೆ ಮಾಡಬೇಕಾಗಿದೆ. ಭಾರತದಾದ್ಯಂತದ ಇರುವ ನಮ್ಮ ಧಾರ್ಮಿಕ ಸ್ಥಳಗಳ ಪಾವಿತ್ರ್ಯ ರಕ್ಷಿಸಬೇಕಾಗಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಆಂಧ್ರ ಸಿಎಂ ಹೇಳಿಕೆಯಿಂದ ಉಂಟಾದ ವಿವಾದ

ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಹೇಳಿಕೆ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವೈಎಸ್ಆರ್‌ಪಿ ಈ ಆರೋಪಗಳನ್ನು ತಳ್ಳಿಹಾಕಿದ್ದು ರಾಜಕೀಯ ಲಾಭಕ್ಕಾಗಿ ಚಂದ್ರಬಾಬು ನಾಯ್ಡು ಆರೋಪಗಳಲ್ಲಿ ತೊಡಗಿದ್ದಾರೆ ಎಂದು ಪಕ್ಷ ಆರೋಪಿಸಿದೆ.

ಟಿಡಿಪಿ ತನ್ನ ಹೇಳಿಕೆಗಳನ್ನು ಬೆಂಬಲಿಸಲು ಲ್ಯಾಬ್ ವರದಿ ಪ್ರಸಾರ ಮಾಡುತ್ತಿದೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಲ್ಯಾಬ್ ವರದಿಯು, ಲಡ್ಡು ತಯಾರಿಸಲು ಬಳಸುವ ತುಪ್ಪದ ಮಾದರಿಗಳಲ್ಲಿ “ಬೀಫ್ ಟಾಲೋ”, “ಹಂದಿಮಾಂಸ” ಮತ್ತು “ಮೀನಿನ ಎಣ್ಣೆ” ನಂತಹ ಪರಿಕೀಯ ವಸ್ತುಗಳು ಇರುವಿಕೆಯನ್ನು ಸಾಬೀತು ಮಾಡಿದೆ. ಮಾದರಿ ಸ್ವೀಕಾರ ಮಾಡಿದ್ದು ದಿನಾಂಕ ಜುಲೈ 9, 2024 ಮತ್ತು ಪ್ರಯೋಗಾಲಯ ವರದಿ ಜುಲೈ 16 ರಂದು ಬಂದಿದೆ.

ಇದನ್ನೂ ಓದಿ: Tirupati laddu row : ತಿರುಪತಿ ಲಡ್ಡು ತಯಾರಿಸಲು ನಾವು ತುಪ್ಪ ಕೊಟ್ಟಿಲ್ಲ; ಅಮೂಲ್‌ ಸ್ಪಷ್ಟನೆ

ತಿರುಪತಿ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಲಾಗಿದೆ ಎಂಬ ಹೇಳಿಕೆಗಳು ಸರಿಯಾಗಿದ್ದರೆ, ಪೂರ್ಣ ಪ್ರಮಾಣದ ತನಿಖೆಯು ತಪ್ಪಿತಸ್ಥರನ್ನು ಗುರುತಿಸಬೇಕು, ಆದರೆ ಅವರು ತಪ್ಪಾಗಿದ್ದರೆ ಅಥವಾ ಪ್ರೇರಿತರಾಗಿದ್ದರೆ, ಲಕ್ಷಾಂತರ ತಿರುಪತಿ ಭಕ್ತರು ತಮ್ಮ ನಂಬಿಕೆಯೊಂದಿಗೆ ಆಟವಾಡುವವರನ್ನು ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.