ಬೆಂಗಳೂರು: ತಮ್ಮ ಅತ್ತೆಯ ತಂಗಿಯ ಜೀವವನ್ನು ಉಳಿಸಲು ಹೋಗಿ ಅಂಗದಾನಿ (liver donor), 33 ವರ್ಷದ ಅರ್ಚನಾ ಕಾಮತ್ (Archana kamath death) ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಆದರೆ ಈ ವಿಚಾರ ಇನ್ನೂ ಆ ಅಂಗ ಶಸ್ತ್ರಚಿಕಿತ್ಸೆ (Liver transplant) ಮಾಡಿಸಿಕೊಡವರಿಗೆ ಗೊತ್ತೇ ಇಲ್ಲ! ಈ ವಿಚಾರವನ್ನು ಅವರ ನಾದಿನಿ ಪ್ರತೀಕ್ಷಾ ಕಾಮತ್ ತಿಳಿಸಿದ್ದಾರೆ.
ನಮ್ಮ ಅತ್ತಿಗೆಗೆ ಕೇವಲ 33 ವರ್ಷ ವಯಸ್ಸು. ಅವರು ನಿಜಕ್ಕೂ ಏಂಜೆಲ್. ಒಬ್ಬರನ್ನು ಉಳಿಸುವ ಸಲುವಾಗಿ ತಮ್ಮ ಅಮೂಲ್ಯ ಜೀವವನ್ನೇ ತ್ಯಾಗ ಮಾಡಿದ್ದಾರೆ ಎಂದು ಅಫೀಶಿಯಲ್ ಪೀಪಲ್ ಆಫ್ ಇಂಡಿಯಾ ಇನ್ಸ್‌ಟಾಗ್ರಾಮ್ ಪೇಜ್‌ಗೆ ಪ್ರತೀಕ್ಷಾ ಕಾಮತ್ ತಿಳಿಸಿದ್ದಾರೆ.
ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಅರ್ಚನಾ ಕಾಮತ್, ತಮ್ಮ ಶೇ. 60ರಷ್ಟು ಲಿವರ್ ಅನ್ನು ದಾನ ಮಾಡಿದ್ದರು. ಆದರೆ, ಶಸ್ತ್ರಚಿಕಿತ್ಸೆಯ ಬಳಿಕ ಎದುರಾದ ಕಾಂಪ್ಲಿಕೇಶನ್ ಇಂದ ಅವರು ಸಾವು ಕಂಡಿದ್ದಾರೆ. ಬೆಂಗಳೂರಿನಲ್ಲಿ ದಾಖಲಾಗಿದ್ದ 65 ವರ್ಷದ ಸಂಬಂಧಿಗೆ ಲಿವರ್ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ 15 ದಿನಗಳ ಹಿಂದೆ ಅವರಿಗೆ ಆಪರೇಷನ್ ಮಾಡಲಾಗಿತ್ತು. ಈ ವೇಳೆ ಅವರ ಶೇ. 60ರಷ್ಟು ಲಿವರ್ ಅನ್ನು ಕಟ್ ಮಾಡಲಾಗಿತ್ತು. ಆದರೆ, ಆ ಬಳಿಕ ಲಿವರ್ ಸೋಂಕಿಗೆ ತುತ್ತಾಗಿದ್ದ ಅರ್ಚನಾ ಕಾಮತ್ ದಾರುಣ ಸಾವು ಕಂಡಿದ್ದರು. ಸದಾ ಸಮಾಜಮುಖಿ ಚಿಂತನೆಯೊಂದಿಗೆ ಸಕ್ರಿಯವಾಗಿದ್ದ ಅರ್ಚನಾ ಕಾಮತ್, ತನ್ನ ಪತಿ ಚೇತನ್ ಕಾಮತ್, 4 ವರ್ಷದ ಪುತ್ರ ಕ್ಷಿತಿಜ್, ತಂದೆ-ತಾಯಿಯನ್ನು ಅಗಲಿದ್ದಾರೆ.
ಪ್ರತೀಕ್ಷಾ ಕಾಮತ್ ಹೇಳಿದ್ದೇನು?
ನನ್ನ ತಾಯಿಯ ತಂಗಿಗೆ ಲಿವರ್ ದಾನ ಮಾಡುವ ವೇಳೆ ನನ್ನ ಅತ್ತಿಗೆ ಸಾವು ಕಂಡಿದ್ದಾರೆ. 9 ವರ್ಷದ ಹಿಂದೆ ನನ್ನ ಅಣ್ಣ ಚೇತನ್ ಕಾಮತ್ ಹಾಗೂ ಅತ್ತಿಗೆ ಅರ್ಚನಾ ಕಾಮತ್ ವಿವಾಹವಾಗಿದ್ದರು. ಅರ್ಚನಾ ಕಾಮತ್ ನಮ್ಮೆಲ್ಲರ ಬದುಕಿಗೆ ತಂಗಾಳಿಯಂತೆ ಬಂದಿದ್ದರು. ಅವರು ಬಂದ ಬಳಿಕ ನಮ್ಮ ಕುಟುಂಬವೇ ಬದಲಾಗಿ ಹೋಯಿತು. ಮದುವೆಯಾಗಿ ಐದು ವರ್ಷದ ಬಳಿಕ ಅತ್ತಿಗೆ ಗಂಡು ಮಗು ಕ್ಷಿತಿಜ್‌ಗೆ ಜನ್ಮ ನೀಡಿದ್ದರು. ಈ ವರ್ಷ ಪುಟ್ಟ ಕ್ಷಿತಿಜ್‌ಗೆ ನಾಲ್ಕು ವರ್ಷ ತುಂಬುತ್ತದೆ. ಕೆಲವು ತಿಂಗಳ ಹಿಂದೆಯಷ್ಟೇ ನಮ್ಮ ತಾಯಿಯ ತಂಗಿಯ ಆರೋಗ್ಯ ತುಂಬಾ ಹದಗೆಟ್ಟಿತ್ತು. ಅವರಿಗೆ ತುರ್ತಾಗಿ ಲಿವರ್ ಕಸಿಗೆ ಒಳಗಾಗಬೇಕಿತ್ತು. ನಮ್ಮ ತಾಯಿಯ ತಂಗಿ ಕೂಡ ಅರ್ಚನಾ ಅವರೊಂದಿಗೆ ಬಹಳ ಆತ್ಮೀಯರಾಗಿದ್ದರು. 65 ವರ್ಷದ ಅವರನ್ನು ಅತ್ತಿಗೆ ತಮ್ಮ ತಾಯಿಯ ರೀತಿಯೇ ಭಾವಿಸಿದ್ದರು. ಹಾಗಾಗಿ ತಮ್ಮ ಲಿವರ್ ಅನ್ನು ನೀಡುವುದಾಗಿ ಅವರು ಮುಂದೆ ಬಂದಿದ್ದರು. ಆದರೆ, ನಮಗ್ಯಾರಿಗೂ ಅದು ಇಷ್ಟವಿದ್ದಿರಲಿಲ್ಲ. ಆದರೆ, ಅತ್ತಿಗೆ ಮಾತ್ರ ನಿರ್ಧಾರ ಮಾಡಿಬಿಟ್ಟಿದ್ದರು.
15 ದಿನಗಳ ಹಿಂದೆ ಅತ್ತಿಗೆ ತಮ್ಮ ಲಿವರ್‌ನ ಶೇ. 60ರಷ್ಟನ್ನು ದಾನ ಮಾಡಿದ್ದರು. ಆದರೆ, ಅದಾದ ನಂತರ ಆಗಿದ್ದು ನಮ್ಮೆಲ್ಲರಿಗೂ ಆಘಾತ ತಂದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಒಂದು ದಿನದ ಬಳಿಕ ಅತ್ತಿಗೆ ಏನೂ ತಿನ್ನೋಕೆ ಆಗುತ್ತಿರಲಿಲ್ಲ. ಒಂದಕ್ಷರ ಕೂಡ ಮಾತನಾಡುತ್ತಿರಲಿಲ್ಲ. ಅವರಲ್ಲಿದ್ದ ಶೇ. 40ರಷ್ಟು ಲಿವರ್ ಸಂಪೂರ್ಣವಾಗಿ ಡ್ಯಾಮೇಜ್ ಆಗಿತ್ತು. ಮೂರು ದಿನಗಳ ಹಿಂದೆ ನಾವು ಅವರನ್ನು ಬಹು ಅಂಗಾಂಗ ವೈಫಲ್ಯ ಹಾಗೂ ಕಾರ್ಡಿಯಾಕ್ ಅರೆಸ್ಟ್‌ನಿಂದಾಗಿ ಕಳೆದುಕೊಂಡಿದ್ದೇವೆ. ಆದರೆ, ತಾಯಿಯ ತಂಗಿಗೆ ಇನ್ನೂ ಇದು ಗೊತ್ತಿಲ್ಲ. ಅತ್ತಿಗೆಯ ಸಾವಿನ ಬಗ್ಗೆ ಅವರಿಗೆ ನಾವಿನ್ನೂ ತಿಳಿಸಿಲ್ಲ. ಅಣ್ಣ ಹಾಗೂ ಕ್ಷಿತಿಜ್‌ನನ್ನು ಸಮಾಧಾನ ಮಾಡೋಕೆ ನಮಗೆ ಆಗುತ್ತಿಲ್ಲ ಎಂದಿದ್ದಾರೆ.
ಬಾಳಿಗೊಂದು ಅರ್ಥಪೂರ್ಣವಾದ ನಿಯಮ ಇರಬೇಕು ಎನ್ನುತ್ತಾ ಸದಾ ಎಲ್ಲರಲ್ಲೂ ಪ್ರೇರಣಾಸ್ಫೂರ್ತಿಯಾಗಿದ್ದ ಸೋದರಿ ಅರ್ಚನಾ ಕಾಮತ್ ರವರು ಮತ್ತೊಂದು ಜೀವವೊಂದನ್ನು ಉಳಿಸುವ ಸಂದರ್ಭದಲ್ಲಿ ತನ್ನ ಉಸಿರನ್ನೇ ನಿಲ್ಲಿಸಿರುವುದು ಅತ್ಯಂತ ನೋವಿನ ಸಂಗತಿ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ ನನ್ನ ಆತ್ಮೀಯರಾದ ಶ್ರೀ ಸಿ.ಎ ಚೇತನ್ ಕಾಮತ್ ರವರ ಕುಟುಂಬ ವರ್ಗಕ್ಕೆ ಹಾಗೂ ಸೋದರಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯ ಎಲ್ಲಾ ವೃಂದಕ್ಕೂ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಇದನ್ನೂ ಓದಿ: Organ Donor: ಬೇರೊಬ್ಬರ ಜೀವ ಉಳಿಸಲು ಹೋಗಿ ತಾನೇ ಪ್ರಾಣ ತೆತ್ತ ಉಪನ್ಯಾಸಕಿ; ಅಂಗ ದಾನದ ವೇಳೆ ಎಡವಟ್ಟು