Saturday, 23rd November 2024

Rishabh Pant: ಗಂಗೂಲಿ ಸಿಕ್ಸರ್‌ ದಾಖಲೆ ಮುರಿದ ಪಂತ್‌

Rishabh Pant

ಚೆನ್ನೈ: ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಬೃಹತ್‌ ಮೊತ್ತದ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದಲ್ಲಿ ರಿಷಭ್‌ ಪಂತ್‌(Rishabh Pant) 3 ಸಿಕ್ಸರ್‌ ಬಾರಿಸುವ ಮೂಲಕ ಮಾಜಿ ದಿಗ್ಗಜ ಆಟಗಾರ ಸೌರವ್‌ ಗಂಗೂಲಿ(Sourav Ganguly) ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಕಾರು ಅಪಘಾತದಿಂದ ಗಾಯಗೊಂಡು 20 ತಿಂಗಳ ಬಳಿಕ ಟೆಸ್ಟ್‌ ತಂಡಕ್ಕೆ ಮರಳಿರುವ ರಿಷಭ್‌ ಪಂತ್‌(Rishabh Pant) ತಮ್ಮ ಹಳೇಯ ಶೈಲಿಯಲ್ಲೇ ಬ್ಯಾಟಿಂಗ್‌ ನಡೆಸಿ ಗ್ರೇಟ್‌ ಕಮ್‌ಬ್ಯಾಕ್‌ ಮಾಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 39 ರನ್‌ ಬಾರಿಸಿದ್ದ ಪಂತ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಪಂತ್‌ ಬಾಂಗ್ಲಾ ಬೌಲರ್‌ಗಳ ಮೇಲೆರಗಿ ಸಿಕ್ಸರ್‌ ಮತ್ತು ಬೌಂಡರಿಗಳ ಮೂಲಕ ದಂಡಿಸಿದರು. ಪಂತ್‌ ಮೂರು ಸಿಕ್ಸರ್‌ ಬಾರಿಸುತ್ತಿದ್ದಂತೆ ಭಾರತ ಪರ ಟೆಸ್ಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದರು. ಈ ಹಿಂದೆ 7ನೇ ಸ್ಥಾನಿಯಾಗಿದ್ದ ಸೌರವ್‌ ಗಂಗೂಲಿ 8ನೇ ಸ್ಥಾನಕ್ಕೆ ಕುಸಿದರು. ಪಂತ್‌ 7 ಸಿಕ್ಸರ್‌ ಬಾರಿಸಿದರೆ ಕಪಿಲ್‌ ದೇವ್‌ ದಾಖಲೆ ಮುರಿಯಲಿದ್ದಾರೆ.

ಇದನ್ನೂ ಓದಿ IND vs BAN: ಬುಮ್ರಾ ಯಾರ್ಕರ್‌ ದಾಳಿಗೆ ಕಂಪಿಸಿದ ಬಾಂಗ್ಲಾ; ಭಾರತಕ್ಕೆ 308 ರನ್‌ ಲೀಡ್‌

ಪಂತ್‌ ಭಾರತ ಪರ ಕೊನೆಯ ಬಾರಿಗೆ ಟೆಸ್ಟ್‌ ಪಂದ್ಯ ಆಡಿದ್ದು ಕೂಡ ಬಾಂಗ್ಲಾದೇಶ ವಿರುದ್ಧವೇ. ಇದಾದ ಬಳಿಕ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸುಮಾರು 14 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೇ ವರ್ಷ ನಡೆದಿದ್ದ ‌17ನೇ ಆವೃತ್ತಿಯ ಐಪಿಎಲ್ ಆಡುವ ಮೂಲಕ ಮತ್ತೆ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ್ದರು. ಇದಾದ ಬಳಿಕ ಟಿ20 ವಿಶ್ವಕಪ್‌ ಕೂಡ ಆಡಿದ್ದರು.

ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಮಾಜಿ ಆಟಗಾರ ವೀರೇಂದ್ರ ಸೆಹವಾಗ್‌ ಹೆಸರಿನಲ್ಲಿದೆ. ಸೆಹವಾಗ್‌ ಒಟ್ಟು 103 ಟೆಸ್ಟ್‌ ಪಂದ್ಯಗಳನ್ನಾಡಿ 90 ಸಿಕ್ಸರ್‌ ಬಾರಿಸಿದ್ದಾರೆ. ರೋಹಿತ್‌ ಶರ್ಮ 84 ಸಿಕ್ಸರ್‌ ಬಾರಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಮಹೇಂದ್ರ ಸಿಂಗ್‌ ಧೋನಿ(78) ಮತ್ತು ಸಚಿನ್‌ ತೆಂಡೂಲ್ಕರ್‌(69) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ.