Saturday, 21st September 2024

Ayodhya Mosque Trust: ಹಣಕಾಸಿನ ಬಿಕ್ಕಟ್ಟು; ಅಯೋಧ್ಯೆ ಮಸೀದಿ ನಿರ್ಮಾಣ ಸಮಿತಿಗಳ ವಿಸರ್ಜನೆ

Ayodhya Mosque Trust

ಲಕ್ನೋ: ಹಣಕಾಸಿನ ತೀವ್ರ ಬಿಕ್ಕಟ್ಟು ಎದುರಾದ ಹಿನ್ನೆಲೆಯಲ್ಲಿ ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಯ ಕಾಮಗಾರಿ ಮೇಲ್ವಿಚಾರಣೆಗೆ ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ (Indo-Islamic Cultural Foundation (IICF) ಅನ್ನು ಸ್ಥಾಪಿಸಿದ್ದ ಸುನ್ನಿ ಸೆಂಟ್ರಲ್‌ ವಕ್ಫ್‌ ಬೋರ್ಡ್‌ 4 ಸಮಿತಿಗಳನ್ನು ವಿಸರ್ಜಿಸಿದೆ. ಇದೀಗ ಮಸೀದಿ ಸಮಿತಿಯು ವಿದೇಶಿ ದೇಣಿಗೆ ಸಂಗ್ರಹಿಸಲು ಮುಂದಾಗಿದೆ. ಇದಕ್ಕೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (Foreign Contribution (Regulation) Act (FCRA)ಯಡಿ ಅನುಮತಿ ಅಗತ್ಯವಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಅನುಮತಿ ಸಿಕ್ಕರೆ ವಿದೇಶಗಳಿಂದ ದೇಣಿಗೆ ಪಡೆಯಲು ಸಾಧ್ಯವಾಗುತ್ತದೆ.

ʼʼಸುನ್ನಿ ಸೆಂಟ್ರಲ್‌ ವಕ್ಫ್‌ ಬೋರ್ಡ್‌ನ ಮುಖ್ಯಸ್ಥ ಝುಫರ್‌ ಫಾರುಕಿ ನೇತೃತ್ವದಲ್ಲಿ ಗುರುವಾರ ಲಕ್ನೋದಲ್ಲಿ ನಡೆದ ಸಭೆಯಲ್ಲಿ 4 ಸಮಿತಿಗಳನ್ನು ವಿಸರ್ಜಿಸಲು ತೀರ್ಮಾನಿಸಲಾಗಿದೆ. ಇದೀಗ ಎಫ್‌ಸಿಆರ್‌ಎ ಅಡಿಯಲ್ಲಿ ಕಡ್ಡಾಯ ಅನುಮತಿಗಳನ್ನು ಪಡೆಯಲು ಅಗತ್ಯವಾದ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದೆʼʼ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಎಂಬುದು ಅಯೋಧ್ಯೆಯ ಧನ್ನಿಪುರ ಯೋಜನೆಯನ್ನು ನೋಡಿಕೊಳ್ಳಲು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ರಚಿಸಿದ ಟ್ರಸ್ಟ್.

1992ರಲ್ಲಿ ಧ್ವಂಸಗೊಂಡ ಬಾಬ್ರಿ ಮಸೀದಿಗೆ ಪರ್ಯಾಯವಾಗಿ ಇನ್ನೊಂದು ಮಸೀದಿ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದ್ದರೂ ಕಾಮಗಾರಿ ಕುಂಟುತ್ತ ಸಾಗಿದೆ. ಮಸೀದಿ ನಿರ್ಮಾಣಕ್ಕೆ ಸಮಿತಿ ರಚನೆ ಆಗಿ 4 ವರ್ಷ ಕಳೆದಿದ್ದರೂ ಸಂಗ್ರಹವಾದ ದೇಣಿಗೆ ಕೇವಲ 1 ಕೋಟಿ ರೂ. ಮಾತ್ರ. ಮಸೀದಿ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ಟ್ರಸ್ಟ್ 2020ರ ಡಿಸೆಂಬರ್‌ನಲ್ಲಿ ವಿನ್ಯಾಸವನ್ನು ಅನಾವರಣಗೊಳಿಸಿತ್ತು. ಆದರೆ ಇದುವರೆಗೆ ಗಮನಾರ್ಹ ಪ್ರಗತಿ ಸಾದಿಸಲು ಸಾಧ್ಯವಾಗಿಲ್ಲ. ಇತ್ತ ರಾಮಂದಿರ ತಲೆಯೆತ್ತಿ, ರಾಮನ ಪ್ರತಿಷ್ಠಾಪನೆಯೂ ಪೂರ್ಣಗೊಂಡಿದೆ.

ರಾಮ ಮಂದಿರದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಧನ್ನಿಪುರ ಗ್ರಾಮದ ಕೃಷಿಭೂಮಿಯ ನಡುವೆ ಮಸೀದಿಗಾಗಿ 5 ಎಕರೆ ಜಾಗವನ್ನು ಗುರುತಿಸಲಾಗಿದೆ. ಸದ್ಯ ಅಲ್ಲಿ ಪ್ರಸ್ತಾವಿತ ಮಸೀದಿಯ ಚಿತ್ರವಿರುವ ಬೋರ್ಡ್ ಮಾತ್ರವಿದೆ.

“ಕಳೆದ ವರ್ಷ ಗಣರಾಜ್ಯೋತ್ಸವ ದಿನದಂದು ಹಲವು ಧರ್ಮಗುರುಗಳು ಇಲ್ಲಿಗೆ ಬಂದಿದ್ದರು. ಅವರು ಫೋಟೊ ತೆಗೆದು ಹೊರಟು ಹೋದರು. ಅಂದಿನಿಂದ ಯಾರೂ ಇಲ್ಲಿಗೆ ಬಂದಿಲ್ಲ. ಇಲ್ಲಿ ಯಾವಾಗ ಮಸೀದಿ ನಿರ್ಮಾಣವಾಗುತ್ತದೆ ಎನ್ನುವುದರ ಬಗ್ಗೆ ಗೊತ್ತಿಲ್ಲ” ಎಂದು ಸ್ಥಳೀಯರು ತಿಳಿಸುತ್ತಾರೆ.

ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಮತ್ತು ಇತರ ಸೌಲಭ್ಯಗಳನ್ನು ಕಲ್ಪಿಸಲು ರಚಿಸಲಾದ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ತನ್ನ ಮೂಲ ನೀಲನಕ್ಷೆಯನ್ನು 2020ರಲ್ಲಿ ಅನಾವರಣಗೊಳಿಸಿತ್ತು. ಸಾಂಪ್ರದಾಯಿಕ ಮೂರು ಗೋಪುರಗಳ ಬಾಬರಿ ಮಸೀದಿಗಿಂತ ಭಿನ್ನವಾಗಿ ಹೊಸ ವಿನ್ಯಾಸವು ಗಮನ ಸೆಳೆದಿತ್ತು. ಪ್ರಸ್ತಾವಿತ ಮಸೀದಿಯು ಮೊಟ್ಟೆಯ ಆಕಾರದ ರಚನೆಯಾಗಿದ್ದು, ಭಾರತದ ಅನೇಕ ಭಾಗಗಳಲ್ಲಿನ ಮಸೀದಿ ವಾಸ್ತುಶಿಲ್ಪಕ್ಕೆ ವಿಶಿಷ್ಟವಾದ ಯಾವುದೇ ಗುಮ್ಮಟಗಳು ಅಥವಾ ಮಿನಾರ್‌ಗಳನ್ನು ಇದು ಹೊಂದಿರಲಿಲ್ಲ. ಹೊಸ ರಚನೆಯು ಸೌರ ಮತ್ತು ಪವನ ಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳಿಂದ ಕಾರ್ಯನಿರ್ವಹಿಸಲಿದೆ. ಮಸೀದಿ ಜತೆಗೆ ಆಸ್ಪತ್ರೆ, ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರವನ್ನೂ ವಿನ್ಯಾಸ ಒಳಗೊಂಡಿದೆ. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವರ್ಷದಲ್ಲಿ ವಿನ್ಯಾಸಕ್ಕೆ ಕೆಲವೊಂದು ಸಾಂಪ್ರದಾಯಿಕ ರಚನೆಯನ್ನು ಸೇರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Fraud case: ಬ್ಯಾಚುಲರ್ ಎಂದು ಹೇಳಿ ಐವರನ್ನು ಮದುವೆಯಾದ ವಿವಾಹಿತ!