Saturday, 23rd November 2024

Minister Krishna Byre Gowda: ಪಹಣಿ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಜೋಡಿ ಗ್ರಾಮಗಳ ರೈತರು; ದಶಕಗಳ ಕನಸು ನನಸಾದ ತೃಪ್ತಿಯಿದೆ -ಕೃಷ್ಣಬೈರೇಗೌಡ

ಜಿಲ್ಲೆಯ 28 ಗ್ರಾಮಗಳ 12503 ಎಕರೆ ಜಮೀನಿಗೆ ೫,೮೧೨ ಪಹಣಿ ಸಿದ್ಧ;೧,೮೩೦ ರೈತರಿಗೆ ಪಹಣಿ ಹಸ್ತಾಂತರ

ಚಿಕ್ಕಬಳ್ಳಾಪುರ: ದಶಕಗಳ ರೈತರ ಕಷ್ಟಗಳಿಗೆ ಸ್ಪಂಧಿಸಿದ, ಅವರ ಕಷ್ಟಪರಿಹಾರ ಮಾಡಿದ ತೃಪ್ತಿಯಿದ್ದು, ರಾಜಮಹಾರಾಜರ ಕಾಲದಲ್ಲಿ ದಾನದ ರೂಪದಲ್ಲಿ ಬಂದಿದ್ದ ಜಿಲ್ಲೆಯ ೨೮  ಜೋಡಿಗ್ರಾಮಗಳ ೧೨೫೦೨ ಎಕರೆ ವಿಸ್ತೀರ್ಣದಲ್ಲಿ ಉಳುಮೆ ಮಾಡಿಕೊಂಡಿದ್ದ ೫೮೧೨ ರೈತರಿಗೆ ಪಹಣಿ ನೀಡಿ ಅವರ ಕಣ್ಣೀರು ಒರೆಸಿದ ತೃಪ್ತಿಯಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ “ಜಿಲ್ಲೆಯ ೨೮ ಜೋಡಿ ಗ್ರಾಮಗಳ ರೈತರಿಗೆ ಆರ್.ಟಿ.ಸಿ ಪಹಣಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾರದ್ದೋ ಆಸ್ತಿ ಇನ್ನಾರಿಗೋ ನೋಂದಣಿಯಾಗುವುದನ್ನು ತಪ್ಪಿಸಲು ಕಂದಾಯ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಕಾರ್ಯವನ್ನು ಮಾಡಲಾಗುತ್ತಿದ್ದು, ಪ್ರಸ್ತುತ ಶೇ.80ರಷ್ಟು ಆಧಾರ್ ಜೋಡಣಾ ಕಾರ್ಯ ಮುಗಿದಿದೆ.

ರೈತರ ಜಮೀನುಗಳ ಕಬಳಿಕೆಯನ್ನು ತಪ್ಪಿಸಲು ಆರ್.ಟಿ.ಸಿ ಪಹಣಿಗಳೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತಿದ್ದು, ರಾಜ್ಯದಲ್ಲಿ ಶೇ.೮೦ ರಷ್ಟು ಗುರಿ ಸಾಧನೆ ಆಗಿದೆ. ಶೀಘ್ರದಲ್ಲಿಯೇ ಶೇ.೧೦೦ ಗುರಿ ಸಾಧನೆ ಆಗುವ ಭರವಸೆ ಇದೆ ಎಂದರು.

ಇನಾಮ್ ಜಮೀನು ವಹಿವಾಟು ಪುನರಾರಂಭ

ಹಿAದೆ ಮಹಾರಾಜರು ಉನ್ನತ ಸೇವೆ ಸಲ್ಲಿಸಿದವರಿಗೆ ಉಚಿತವಾಗಿ ಇಡೀ ಗ್ರಾಮಗಳನ್ನೆ ಉಂಬಳಿಯಾಗಿ ನೀಡುತ್ತಿದ್ದರು. ಇಂತಹ ಇನಾಮ್ ಮೂಲಕ ಪಡೆದಿದ್ದ ಜಮೀನುಗಳಿಗೆ ಸರ್ವೆ ಕಾರ್ಯ ಆಗಿರಲ್ಲಿಲ್ಲ. ಹಿಂದಿನ ಚಾಲ್ತಾ ನಂಬರ್‌ಗಳ ಆಧಾರದ ಮೇಲೆ ದಾಖಲೆಗಳು ಚಾಲ್ತಿಯಲ್ಲಿದ್ದವು. ೧೯೫೪ ಇನಾಮ್ ರದ್ದತಿ ಕಾಯ್ದೆ ಜಾರಿ ನಂತರ ಇನಾಮ್ತಿ ಜಮೀನಿನ ಹಿಂದಿನ ಕಂದಾಯ ದಾಖಲೆಗಳು ಮತ್ತು ಸರ್ವೆ ದಾಖಲೆಗಳು ತಾಳೆಯಾಗದೆ ಜಮೀನಿನ ಮಾಲೀಕರು ಬಹಳ ತೊಂದರೆ ಅನುಭವಿಸುವಂತಾಯ್ತು. ಜಮೀನು ವಿಭಾಗ ಮಾಡಿಕೊಳ್ಳಲು, ಮಾರಾಟ ಮಾಡಲು, ಸಾಲ ಸೌಲಭ್ಯ ಪಡೆಯಲು ಅಭಿವೃದ್ಧಿ ಪಡಿಸಲು ತೊಂದರೆಯಾಗಿತ್ತು. ಇಂತಹ ಜಟಿಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ದಶಕಗಳಿಂದ ಪ್ರಯತ್ನಗಳು ನಡೆದರೂ ಯಶಸ್ಸು ಕಾಣಲು ಸಾಧ್ಯ ವಾಗಿರಲಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಭೂ ಮಾಪಕರುಗಳ ಶ್ರಮದಿಂದ ಹಾಗೂ ರೈತರ ಸಹಕಾರದಿಂದ ಇಂದು ಜೋಡಿ ಗ್ರಾಮಗಳ ರೈತರಿಗೆ ಪಹಣಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡಲಾಗಿದೆ. ೧೯೫೪ ರಲ್ಲಿ ನಿಂತಿದ್ದ ಇನಾಂ ಜಮೀನು ವಹಿವಾಟುಗಳ ಚಕ್ರ ಇಂದಿನಿAದ ಪುನರಾರಂಭವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜೋಡಿಗ್ರಾಮಗಳಿಗೆ ಗೋಲ್ ನಕ್ಷೆ, ಟಿಪ್ಪಣಿ ಪುಸ್ತಕ, ಪ್ರಸ್ತುತ ಚಾಲ್ತಿಯಲ್ಲಿನ ಗ್ರಾಮ ನಕಾಶೆ ಸಿದ್ದಪಡಿಸಲು ಗ್ರಾಮಲೆಕ್ಕಾಧಿಕಾರಿಗಳು, ಭೂ ಮಾಪಕರು, ತಹಶೀಲ್ದಾರರು ಬಹಳ ಶ್ರಮವಹಿಸಿದ್ದಾರೆ. ಅವರ ಶ್ರಮದ ಫಲವಾಗಿ ಇಂದು ರೈತರಿಗೆ ಪಹಣಿ ಹಾಗೂ ಇತರ ಕಂದಾಯ ದಾಖಲೆಗಳು ಸಿಕ್ಕಿವೆ. ಜಿಲ್ಲೆಯ ವಿವಿಧ ತಾಲ್ಲೂಕುಗಳ 28 ಗ್ರಾಮಗಳ ೧೨,೫೦೩ ಎಕರೆ ಜಮೀನಿಗೆ ೫,೮೧೨ ಪಹಣಿಗಳನ್ನು ಸೃಜಿಸಲು ದಾಖಲೆಗಳನ್ನು ಸಿದ್ದಪಡಿಸಲಾಗಿದೆ. ಈ ಪೈಕಿ ಈಗಾಗಲೇ ಸಹಕಾರ ನೀಡಿರುವ ೧,೮೩೦ ರೈತರಿಗೆ ಇಂದು ಪಹಣಿಗಳನ್ನು ಇಂಡೀಕರಿಸಿ ವಿತರಿಸಲಾಗಿದೆ. ಇನ್ನೂಳಿದ ೩೯೮೨ ಪಹಣಿಗಳ ಜಮೀನುಗಳ ಮಾಲೀಕರು ಸಹಕಾರ ನೀಡಿದಲ್ಲಿ ಕೆಲವೇ ತಿಂಗಳುಗಳಲ್ಲಿ ಆ ರೈತರಿಗೂ ಪಹಣಿ ವಿತರಿಸುವ ಕಾರ್ಯ ಆಗಲಿದೆ. ಸಣ್ಣ ಪುಟ್ಟ ವ್ಯತ್ಯಾಸಗಳಿಗೆ ರೈತರು ಆತಂಕ ಪಟ್ಟು ತಕರಾರು ಹಾಕಿಕೊಂಡರೆ ನಿಮಗೂ ಹಾಗೂ ನಿಮ್ಮ ನೆರೆಹೊರೆಯ ಜಮೀನು ಮಾಲೀಕರಿಗೂ ತೊಂದರೆಯಾಗಲಿದೆ. ದಯಮಾಡಿ ಯಾವುದೇ ರೈತರು ತಕರಾರು ಉದ್ಬವ ಆಗಲು ಅವಕಾಶ ನೀಡದೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ತಮ್ಮ ದಾಖಲೆಗಳನ್ನುಮಾಡಿಸಿಕೊಳ್ಳಲು ಪ್ರಯತ್ನಿಸಬೇಕು. ಸರ್ಕಾರವೇ ತಮ್ಮ ಮನೆ ಬಾಗಿಲಿಗೆ ಬಂದು ಸೇವೆ ನೀಡಲು ಯತ್ನಿಸುತ್ತಿರುವಾಗ ಆ ಅವಕಾಶವನ್ನು ಉಳಿದ ರೈತರು ಬಳಸಿಕೊಳ್ಳಬೇಕು ಎಂದು ಕಂದಾಯ ಸಚಿವರು ಜೋಡಿಗ್ರಾಮಗಳ ರೈತರಲ್ಲಿ ಮನವಿ ಮಾಡಿದರು.

ಮತ್ತೆ ಫವತಿ ಖಾತೆ ಆಂದೋಲನ

ಫವತಿ ಖಾತೆಗೆ ಬಾಕಿ ಇರುವ ೪೭ ಲಕ್ಷ ಸರ್ವೆ ನಂಬರುಗಳನ್ನು ಶೀಘ್ರ ವಿಲೇವಾರಿ ಮಾಡಲು ರಾಜ್ಯದಲ್ಲಿ ಮತ್ತೆ ಫವತಿ ಖಾತೆ ಆಂದೋಲನವನ್ನು ಆರಂಭಿಸಲಾಗುವುದು. ರಾಜ್ಯದಲ್ಲಿ ಜಮೀನುಗಳ ದುರಸ್ತಿ ಮಾಡಿ ರೈತರಿಗೆ ಹೊಸ ಆರ್‌ಟಿಸಿ ಪಹಣಿಗಳನ್ನು ಸೃಜನೆ ಮಾಡಿಕೊಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಂದಾಯ ಇಲಾಖೆ ಹೊಸ ಆಪ್ ಮತ್ತಿತರ ತಂತ್ರಾAಶಗಳನ್ನು ಬಳಸಿಕೊಂಡು ರೈತರು ಮತ್ತು ಸಾರ್ವಜನಿಕರ ಭೂಮಿ ಸಮಸ್ಯೆಗಳ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಫವತಿ ಖಾತೆಗೆ ಬಾಕಿ ಇರುವ ೪೭ ಲಕ್ಷ ಸರ್ವೆ ನಂಬರುಳನ್ನು ಮತ್ತೆ ಫವತಿ ಖಾತೆ ಆಂದೋಲನ ಆರಂಭ ಮಾಡುವ ಮೂಲಕ ಶೀಘ್ರ ವಿಲೇವಾರಿ ಮಾಡಲಾಗುವುದು.

ಕಂದಾಯ ಪ್ರಕರಣಗಳ ಶೀಘ್ರ ಇತ್ಯರ್ಥ

ರಾಜ್ಯದ ವಿವಿಧ ಜಿಲ್ಲೆಗಳ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ  ೬೯,೨೧೭ ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ ಒಂದು ವರ್ಷದ ಮೀರಿದ ಪ್ರಕರಣಗಳು ೫೯೮೦೦. ಇನ್ನು ಐದು ವರ್ಷಕ್ಕಿಂತ ಹೆಚ್ಚಿನ ಅವಧಿ ದಾಟಿದ್ದ ೩೨,೭೮೭ ಪ್ರಕರಣಗಳಿದ್ದವು. ೫ ವರ್ಷ ಮೀರಿದ ಪ್ರಕರಣಗಳ ಸಂಖ್ಯೆ ಈಗ ೭,೩೩೦ ಕ್ಕೆ ಇಳಿದಿದೆ. ಗರಿಷ್ಠ ಪ್ರಕರಣಗಳು ಅತಿ ಕಡಿಮೆ ಅವಧಿಯಲ್ಲಿ ವಿಲೇವಾರಿಯಾಗಿ ಈಗ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಸಂಖ್ಯೆ ೨೭೦೦೦ ಆಗಿದೆ ಎಂದರು. ಇನ್ನು ತಾಲ್ಲೂಕು ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿ ಗರಿಷ್ಠ ೯೦ ದಿನಗಳಲ್ಲಿ ವಿಲೇವಾರಿಯಾಗಬೇಕಾದ ಪ್ರಕರಣಗಳು ಈ ಹಿಂದೆ ಸರಾಸರಿ ೨೧೨ ದಿನ ತೆಗೆದುಕೊಳ್ಳುತ್ತಿದ್ದವು. ಈಗ ಸರಾಸರಿ ೮೨ ದಿನಗಳಲ್ಲಿ ವಿಲೇವಾರಿಯಾಗುತ್ತಿರುವುದು ಸರ್ಕಾರದ ಕ್ರಿಯಾಶೀಲತೆಗೆ ಸಾಕ್ಷಿ ಎಂದರು.

ರಾಜ್ಯದಲ್ಲಿ ಕಂದಾಯ ಇಲಾಖೆ ಎದುರಿಸುತ್ತಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಲು ಮುಖ್ಯಮಂತ್ರಿಗಳು ಮೊದಲ ಆದ್ಯತೆ ನೀಡಿದ್ದಾರೆ. ಈಗಾಗಲೇ ಒಂದು ಸಾವಿರ ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಪಕ್ರಿಯೆ ಪ್ರಗತಿಯಲ್ಲಿದೆ. ಈ ವರ್ಷದ ಕೊನೆಯ ವೇಳೆಗೆ ಹೊಸ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅಲ್ಲದೇ ೩೫೭ ಭೂ ಮಾಪಕರ ಭರ್ತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಇಲಾಖೆಯ ಕಾರ್ಯ ಚಟುವಟಿಕೆಗಳ ವೇಗ ಹೆಚ್ಚಿಸಲು ೧,೧೯೧ ಪರವಾನಗಿ ಹೊಂದಿದ ಭೂ ಮಾಪಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಹೊಸ ಭೂಮಾಪಕರ ಹುದ್ದೆಗಳ ಸೃಷ್ಟಿಗೂ ಸರ್ಕಾರದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದರು.

ಕಳೆದ ವರ್ಷದಲ್ಲಿ ೩೮ ಲಕ್ಷ ರೈತರಿಗೆ ಯಾವುದೇ ಮಧ್ಯವರ್ತಿಗಳ ಪಾತ್ರವಿಲ್ಲದೆ ೪೨೦೦ ಕೋಟಿ ರೂಪಾಯಿಗಳ ಬರ ಪರಿಹಾರ ಹಣವನ್ನು ನೇರವಾಗಿ ರಾಜ್ಯದ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

ಮುಂದಿನ ವರ್ಷ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸ ತಾಲ್ಲೂಕುಗಳಾದ ಚೇಳೂರು ಮತ್ತು ಮಂಚೇನಹಳ್ಳಿ ತಾಲ್ಲೂಕುಗಳಿಗೆ ಆಡಳಿತ ಕೇಂದ್ರದ ಕಟ್ಟಡ ಪ್ರಜಾಸೌಧವನ್ನು ಮಂಜೂರು ಮಾಡಲಾಗುವುದು ಎಂದರು. ರಾಜ್ಯದಲ್ಲಿ ಒಟ್ಟು ೧೪ ಲಕ್ಷ ಎಕರೆಗೂ ಹೆಚ್ಚು ಸರ್ಕಾರಿ ಜಮೀನುಗಳನ್ನು ಗುರುತಿಸಲಾಗಿದೆ. ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕಾರ್ಯವನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು. ಮುಂದಿನ ನಾಲ್ಕು ವರ್ಷಗಳಲ್ಲಿ ದರಕಾಸ್ತಿಗೆ ಸಂಬAಧಿಸಿದ ೮ ರಿಂದ ೧೧ ಲಕ್ಷ ರೈತರ ಸರ್ವೆ ನಂಬರುಗಳು ಹಾಗೂ ಖಾಸಗಿ ಹಿಡುವಳಿದಾರರ ಸರ್ವೆ ನಂಬರುಗಳೂ ಸೇರಿದಂತೆ ಒಟ್ಟು ೬೦ ಲಕ್ಷ ಪಹಣಿಗಳನ್ನು ಸೃಜನೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೧೯೫೪ ರಿಂದ ಜೋಡಿ ಗ್ರಾಮಗಳ ರೈತರಿಗೆ ಪಹಣಿ ಆಗದೆ ಸಮಸ್ಯೆ ಆಗಿತ್ತು. ದಶಕಗಳ ಕನಸು ಇಂದು ನನಸಾಗಿದೆ. ಜಿಲ್ಲೆಯಲ್ಲಿ ೨೮ ಜೋಡಿ ಗ್ರಾಮಗಳ ೧೨,೫೦೩ ಎಕರೆ ಜಮೀನುಗಳು ಪಹಣಿಗಳ  ಸಮಸ್ಯೆಯಲ್ಲಿ ಸಿಲುಕಿದ್ದವು. ಕಳೆದ ಒಂದು ವರ್ಷದಲ್ಲಿ ಈ ಸಮಸ್ಯೆಯನ್ನು ಕೈಗೆತ್ತಿಕೊಂಡು ೫,೮೧೨ ಸರ್ವೆ ನಂಬರುಗಳನ್ನು ಸೃಜಿಸಲಾಗಿದೆ. ಈವರೆಗೆ ೧,೮೩೦ ಸರ್ವೆ ನಂಬರುಗಳನ್ನು ಇಂಡೀಕರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ೮ ತಾಲ್ಲೂಕುಗಳ ರೈತರಿಗೆ ಸಾಂಕೇತಿಕವಾಗಿ  ಜೋಡಿ ಗ್ರಾಮಗಳ ಪಹಣಿಗಳನ್ನು ಸಚಿವ ಕೃಷ್ಣ ಬೈರೇಗೌಡ  ವಿತರಿಸಿದರು.

ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ ರವರು ಮಾತನಾಡಿ, ನಕಲಿ ಹಿಡುವಳಿ ಚೀಟಿಗಳನ್ನು ಹಾಗೂ ಇನ್ನಿತರ ದಾಖಲೆಗಳನ್ನು ಅಭಿಲೇಖಾಲಯಕ್ಕೆ (ರೆಕಾರ್ಡ್ ರೂಂ) ಸೇರ್ಪಡೆ ಮಾಡಿ ಕಂದಾಯ ದಾಖಲೆಗಳನ್ನು ಸೃಜಿಸಲು ಕೆಲವರು ಪ್ರಯತ್ನಿಸಿರುವುದನ್ನು ತಪ್ಪಿಸಬೇಕು. ಆ ನಿಟ್ಟಿನಲ್ಲಿ ತನಿಖಾಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಲು ಕಂದಾಯ ಸಚಿವರಿಗೆ ಮನವಿ ಮಾಡಿದರು. ಅಲ್ಲದೇ ಪಟ್ಟಣ, ನಗರದ ಸುತ್ತಲ ೫ ಕಿ.ಮೀ ವ್ಯಾಪ್ತಿಯೊಳಗಡೆ ಇರುವ ಸರ್ಕಾರಿ ಜಮೀನುಗಳಿಗೆ ಫೆನ್ಸಿಂಗ್ (ಬೇಲಿ) ಹಾಕಿ ರಕ್ಷಿಸುವ ಕಾರ್ಯವನ್ನು ಮಾಡಲು ಕೋರಿದರು.

ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ನಮ್ಮ ಸರ್ಕಾರ ಜಾರಿಗೆ ಬಂದ ನಂತರ ಕಂದಾಯ ಇಲಾಖೆಯಲ್ಲಿ ಹಲವು ಕ್ರಾಂತಿಕಾರಕ ರೈತಪರ ಕಾರ್ಯಗಳು ನಡೆಯುತ್ತಿವೆ. ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿನ ಕತಡಗಳನ್ನು ಡಿಜಿಟಲಿಕರಣ ಮಾಡುವ ಕಾರ್ಯವು ಪ್ರಗತಿಯಲ್ಲಿದ್ದು ಈಗಾಗಲೇ ೧೭ ಲಕ್ಷ ಪುಟಗಳ ದಾಖಲೆಯನ್ನು ಸ್ಕ್ಯಾನ್ ಮಾಡಲಾಗಿದೆ. ಒಂದೆರಡು ತಿಂಗಳುಗಳಲ್ಲಿ ದಾಖಲೆಗಳು ಡಿಜಿಟಲ್ ರೂಪದಲ್ಲಿ ಸಾರ್ವಜನಿಕರಿಗೆ ದೊರಕಲಿವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಜೋಡಿ ಗ್ರಾಮಗಳ ಪಹಣಿ ಇಂಡೀಕರಣದ ಪ್ರಕ್ರಿಯೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಂದಾಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಶಾಸಕರಾದ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಅರಪ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜೋಡಿಗ್ರಾಮಗಳ ರೈತರು ಮುಂತಾದವರು ಉಪಸ್ಥಿತರಿದ್ದರು.