Sunday, 24th November 2024

Polar Bear: 8 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪತ್ತೆಯಾದ ಹಿಮಕರಡಿ ಗುಂಡೇಟಿಗೆ ಬಲಿ; ಕಾರಣವೇನು?

Polar Bear

ಐಸ್‌ಲ್ಯಾಂಡ್‌: 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಹಿಮಕರಡಿ(Polar Bear)ಯನ್ನು ಐಸ್‌ಲ್ಯಾಂಡ್‌ (Iceland)ನ ಹಳ್ಳಿಯೊಂದರಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಹ‍ಳ್ಳಿಯೊಂದರಲ್ಲಿ ಕಾಣಿಸಿಕೊಂಡ ಹಿಮ ಕರಡಿ ಅಪಾಯಕಾರಿಯಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸೆಪ್ಟೆಂಬರ್ 19ರಂದು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ಪರಿಸರ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

“ಹಿಮಕರಡಿಯನ್ನು ಕೊಲ್ಲಲು ನಮಗೂ ಇಷ್ಟವಿರಲಿಲ್ಲ. ಆದರೆ ಹಾಗೆ ಮಾಡುವುದು ಅನಿವಾರ್ಯವಾಗಿತ್ತು. ಕರಡಿ ಹಳ್ಳಿಯೊಂದರ ಮನೆ ಬಳಿಗೆ ಬಂದಿದ್ದರಿಂದ ಜನರ ಸುರಕ್ಷತೆ ದೃಷ್ಟಿಯಿಂದ ಹೀಗೆ ಮಾಡಬೇಕಾಯಿತುʼʼ ಪೊಲೀಸ್ ಮುಖ್ಯಸ್ಥ ಹೆಲ್ಗಿ ಜೆನ್ಸನ್ ತಿಳಿಸಿದ್ದಾರೆ. ಹಿಮಕರಡಿ ಕಂಡು ಬಂದಿದ್ದ ಮನೆಯೊಳಗೆ ಒಂಟಿ ಮಹಿಳೆಯೊಬ್ಬರು ವಾಸವಾಗಿದ್ದರು. ಕರಡಿ ಮನೆಯೊಳಗೆ ನುಗ್ಗುತ್ತಿದ್ದಂತೆ ಅವರು ಮಹಡಿಗೆ ತೆರಳಿ ಬಾಗಿಲು ಲಾಕ್‌ ಮಾಡಿದ್ದರು. ಬಳಿಕ ಸ್ಯಾಟ್‌ಲೈಟ್‌ ಫೋನ್‌ ಮೂಲಕ ತಮ್ಮ ಮಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು.

ಸಾಮಾನ್ಯವಾಗಿ ಹಿಮಕರಡಿಗಳು ಐಸ್‌ಲ್ಯಾಂಡ್‌ನಲ್ಲಿ ಕಂಡು ಬರುವುದಿಲ್ಲ. ಗ್ರೀನ್‌ಲ್ಯಾಂಡ್‌ನಲ್ಲಿರುವ ಇವು ಕೆಲವೊಮ್ಮೆ ಹಿಮದ ನದಿಗಳ ಮೂಲಕ ತೇಲಿಕೊಂಡು ಐಸ್‌ಲ್ಯಾಂಡ್‌ಗೆ ಬರುತ್ತವೆ.

8 ವರ್ಷಗಳ ಬಳಿಕ ಪ್ರತ್ಯಕ್ಷ

ಅಚ್ಚರಿ ಎಂದರೆ ಸುಮಾರು 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಐಸ್‌ಲ್ಯಾಂಡ್‌ನಲ್ಲಿ ಹಿಮಕರಡಿಯೊಂದು ಕಂಡುಬಂದಿತ್ತು. ಕೊನೆಯ ಬಾರಿಗೆ 2016ರಲ್ಲಿ ಹಿಮಕರಡಿ ಇಲ್ಲಿಗೆ ಬಂದಿತ್ತು. 9ನೇ ಶತಮಾನದಿಂದ ಇದುವರೆಗೆ ಐಸ್‌ಲ್ಯಾಂಡ್‌ನಲ್ಲಿ ಹಿಮ ಕರಡಿಗಳು 600 ಬಾರಿ ಮಾತ್ರ ಕಂಡು ಬಂದಿವೆ. ಅಂತಹ ಅಪರೂಪದ ಅತಿಥಿ ಈಗ ಗುಂಡೇಟಿಗೆ ಬಲಿಯಾಗಿದೆ. ಸುಮಾರು 150ರಿಂದ 200 ಕಿ.ಗ್ರಾಂ.ಗಳಷ್ಟು ತೂಕವಿರುವ ಈ ಕರಡಿಯನ್ನು ಹೆಚ್ಚಿನ ಅಧ್ಯಯನಕ್ಕಾಗಿ ಐಸ್‌ಲ್ಯಾಂಡ್‌ನ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾಚುರಲ್ ಹಿಸ್ಟರಿಗೆ ಕೊಂಡೊಯ್ಯಲಾಗುವುದು ಎಂದು ವರದಿ ತಿಳಿಸಿದೆ. ಹಿಮಕರಡಿಯ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಲು, ಅದರ ದೇಹದ ಕೊಬ್ಬಿನ ಶೇಕಡಾವಾರು ನಿರ್ಣಯಿಸಲು ವಿಜ್ಞಾನಿಗಳು ಅದರ ತಲೆಬುರುಡೆಯನ್ನು ಸಂರಕ್ಷಿಸಲು ಚಿಂತನೆ ನಡೆಸಿದ್ದಾರೆ.

ಹಿಮಕರಡಿಗಳು ಐಸ್‌ಲ್ಯಾಂಡ್‌ನಲ್ಲಿ ಸಂರಕ್ಷಿತ ಪ್ರಭೇದವಾಗಿದ್ದರೂ ಅವು ಮಾನವರು ಅಥವಾ ಜಾನುವಾರುಗಳಿಗೆ ಅಪಾಯವನ್ನುಂಟು ಮಾಡಿದರೆ ಅದನ್ನು ಕೊಲ್ಲುವ ಅಧಿಕಾರ ಸಂಬಂಧಪಟ್ಟವರಿಗೆ ಇದೆ. ಅದಾಗ್ಯೂ ಹಿಮಕರಡಿಗಳು ಮಾನವರ ಮೇಲೆ ದಾಳಿ ಮಾಡಿದ ಉದಾಹರಣೆ ತೀರಾ ಕಡಿಮೆ.

ಸಂಶೋಧನೆ ಹೇಳುವುದೇನು?

2017ರಲ್ಲಿ ವೈಲ್ಡ್‌ ಲೈಫ್‌ ಸೊಸೈಟಿ ಬುಲೆಟಿನ್‌ನಲ್ಲಿ ಪ್ರಕಟವಾದ ಅಧ್ಯಯನವು ಹವಾಮಾನ ಬದಲಾವಣೆಯಿಂದಾಗಿ ಸಮುದ್ರದ ಮಂಜುಗಡ್ಡೆ ಹೆಚ್ಚಿನ ಪ್ರಮಾಣದಲ್ಲಿ ಕರಗುತ್ತಿರುವುದು ಹಿಮಕರಡಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಇವು ಆಹಾರವನ್ನು ಅರಸಿಕೊಂಡು ಜನನಿಬಿಡ ಪ್ರದೇಶಕ್ಕೆ ನುಗ್ಗುತ್ತವೆ ಎಂದು ತಿಳಿಸಿದೆ. 1870ರಿಂದ 2014ರವರೆಗೆ ಕೆನಡಾ, ಗ್ರೀನ್‌ಲ್ಯಾಂಡ್‌, ನಾರ್ವೆ, ರಷ್ಯಾ ಮತ್ತು ಅಮೆರಿಕ ಮುಂತಾದ 5 ಹಿಮಕರಡಿ ಶ್ರೇಣಿಯ ದೇಶಗಳಲ್ಲಿ ಸುಮಾರು 73 ಬಾರಿಯಷ್ಟೇ ಹಿಮಕರಡಿಗಳ ದಾಳಿ ನಡೆದಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಹಿಮ ಇಲ್ಲದಿದ್ದರೆ ಅವುಗಳ ಸಂತತಿ ಭೂಮಿಯಿಂದಲೇ ನಿರ್ನಾಮವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಈ ಸೂದ್ದಿಯನ್ನೂ ಓದಿ: Narendra Modi in US: 3 ದಿನಗಳ ಪ್ರವಾಸಕ್ಕಾಗಿ ಅಮೆರಿಕಕ್ಕೆ ತೆರಳಿದ ಪ್ರಧಾನಿ ಮೋದಿ; ವಿಶ್ವ ನಾಯಕರೊಂದಿಗೆ ಮಹತ್ವದ ಮಾತುಕತೆ