Saturday, 23rd November 2024

IND vs BAN: ಕೊಹ್ಲಿಯ ದಾಖಲೆ ಮುರಿದ ಶುಭಮನ್‌ ಗಿಲ್‌

IND vs BAN

ಚೆನ್ನೈ: ಟೆಸ್ಟ್‌ನಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಕಂಡು ಭಾರೀ ಟೀಕೆಗೆ ಗುರಿಯಾಗಿದ್ದ ಯುವ ಆಟಗಾರ ಶುಭಮನ್‌ ಗಿಲ್‌(Shubman Gill) ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಮತ್ತೆ ಬ್ಯಾಟಿಂಗ್‌ ಫಾರ್ಮ್‌ಗೆ ಮರಳಿದ್ದಾರೆ. ಜತೆಗೆ ತಮ್ಮ ವಿರುದ್ಧ ಟೀಕೆ ಮಾಡುತ್ತಿದ್ದವರಿಗೆ ಈ ಪ್ರದರ್ಶನದ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಗಿಲ್‌ ಶೂನ್ಯ ಸುತ್ತಿದ್ದರು. ಶತಕ ಬಾರಿಸುವ ಮೂಲಕ ವಿರಾಟ್‌ ಕೊಹ್ಲಿಯ(Virat Kohli) ಹೆಸರಿನಲ್ಲಿದ್ದ ದಾಖಲೆಯನ್ನು ಕೂಡ ಮುರಿದಿದ್ದಾರೆ.

ಶುಭಮನ್‌ ಗಿಲ್‌ 176 ಎಸೆತಗಳಿಂದ 10 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ ಅಜೇಯ 119ರನ್‌ ಬಾರಿಸಿದರು. ಇದು ಗಿಲ್‌ ಅವರ 5ನೇ ಟೆಸ್ಟ್‌ ಶತಕವಾಗಿದೆ. ಈ ಶತಕದೊಂದಿಗೆ ಶುಭಮನ್‌ ಗಿಲ್‌ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಕೂಟದಲ್ಲಿ ಅತ್ಯಧಿಕ ಶತಕ ಬಾರಿಸಿದ 2ನೇ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಇದುವರೆಗೆ ಈ ದಾಖಲೆ ಕಿಂಗ್‌ ಖ್ಯಾತಿಯ ವಿರಾಟ್‌ ಕೊಹ್ಲಿ(4 ಶತಕ) ಹೆಸರಿನಲ್ಲಿತ್ತು. ಅಗ್ರಸ್ಥಾನದಲ್ಲಿ ನಾಯಕ ರೋಹಿತ್‌ ಶರ್ಮ ಕಾಣಿಸಿಕೊಂಡಿದ್ದಾರೆ. ರೋಹಿತ್‌ 9 ಶತಕ ಬಾರಿಸಿದ್ದಾರೆ. ಒಟ್ಟಾರೆ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಇಂಗ್ಲೆಂಡ್‌ನ ಜೋ ರೂಟ್‌ಗೆ ಸಲ್ಲುತ್ತದೆ. ರೂಟ್‌ 16 ಶತಕ ಬಾರಿಸಿದ್ದಾರೆ.

ವಿಶ್ವ ಟೆಸ್ಟ್‌ನಲ್ಲಿ ಹೆಚ್ಚು ಶತಕ ಬಾರಿಸಿದ ಭಾರತೀಯ ಬ್ಯಾಟರ್‌ಗಳು

ರೋಹಿತ್‌ ಶರ್ಮ-9 ಶತಕ

ಶುಭಮನ್‌ ಗಿಲ್‌-5 ಶತಕ

ವಿರಾಟ್‌ ಕೊಹ್ಲಿ-4 ಶತಕ

ಮಯಾಂಕ್‌ ಅಗರ್ವಾಲ್‌-4 ಶತಕ

ರಿಷಭ್‌ ಪಂತ್‌-4 ಶತಕ

ಇದನ್ನೂ ಓದಿ IND vs BAN: ಪಂತ್‌-ಗಿಲ್‌ ಶತಕ; 287ಕ್ಕೆ ಭಾರತ ಡಿಕ್ಲೇರ್‌

25ರ ಹರೆಯದ ಗಿಲ್‌ ಬಾಂಗ್ಲಾದೇಶ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಡಕ್‌ಗೆ ಔಟಾದ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಈ ಪ್ರದರ್ಶನದ ಮೂಲಕ ಟೆಸ್ಟ್‌ನಲ್ಲಿ 3ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನಕ್ಕೆ ತಾವೇ ಸೂಕ್ತ ಎಂದು ಸಾಬೀತುಪಡಿಸಿದ್ದಾರೆ. 2024 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತೀಯ ಬ್ಯಾಟರ್‌ಗಳಿಸಿದ ಅತಿ ಹೆಚ್ಚು ರನ್‌ಗಳ ಪಟ್ಟಿಯಲ್ಲಿ ಶುಭಮನ್ ಗಿಲ್ ಅಗ್ರಸ್ಥಾನಕ್ಕೆ ಏರಿದ್ದಾರ. ಈ ಮೂಲಕ ನಾಯಕ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಹಿಂದಿಕ್ಕಿದ್ದಾರೆ.

ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಪಂತ್‌ ಕೂಡ 109 ರನ್‌ ಬಾರಿಸಿ ಶತಕ ಪೂರ್ತಿಗೊಳಿಸಿದರು. ಪಂತ್‌ ಈ ಶತಕ ಬಾರಿಸುವ ಮೂಲಕ ವಿಕೆಟ್‌ ಕೀಪರ್‌ ಆಗಿ ಭಾರತ ಪರ ಟೆಸ್ಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು. ಧೋನಿ ಕೂಡ 6 ಟೆಸ್ಟ್‌ ಶತಕ ಬಾರಿಸಿದ್ದಾರೆ. ಕಡಿಮೆ ಇನಿಂಗ್ಸ್‌ನಿಂದ ಈ ಸಾಧನೆಗೈದ ಲೆಕ್ಕಾಚಾರದಲ್ಲಿ ಪಂತ್‌ಗೆ ಅಗ್ರಸ್ಥಾನ. ಪಂತ್‌ 58 ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದರೆ, ಧೋನಿ 144 ಇನಿಂಗ್ಸ್‌ ಆಡಿದ್ದರು.