Saturday, 21st September 2024

Congress Membership Drive: ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ಬೆಳ್ಳಿ ಗಣೇಶನ ಆಮಿಷ: ಬಿಜೆಪಿ ಗಂಭೀರ ಆರೋಪ

BJP Allegation

ಬೆಂಗಳೂರು: ಯುವ ಕಾಂಗ್ರೆಸ್ (Youth Congress) ಮತ್ತು ಜೆಡಿಎಸ್ (JDS) ಪಕ್ಷವೂ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ (Congress Membership Drive) ಸಂದರ್ಭದಲ್ಲಿ ಆಮಿಷ ಒಡ್ಡಲಾಗುತ್ತಿದೆ. ಬೆಳ್ಳಿ ಗಣೇಶನನ್ನು ನೀಡಿ ಸದಸ್ಯತ್ವ ಮಾಡಿಸಲಾಗುತ್ತಿದೆ ಎಂದು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಆರೋಪಿಸಿದರು. ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನೂರಾರು ವರ್ಷಗಳ ಇತಿಹಾಸ ಹೊಂದಿದ ಕಾಂಗ್ರೆಸ್ ಪಕ್ಷವು ಸಂಪೂರ್ಣ ದಿವಾಳಿಯಾಗಿದೆ. ಮುಂದಿನ ಪ್ರಜೆಗಳಿಗೆ ಆಮಿಷವೊಡ್ಡಿ ಅವರನ್ನು ಹಾಳು ಮಾಡಿ ಸದಸ್ಯತ್ವ ನೀಡುತ್ತಿದ್ದಾರೆ ಎಂದು ಅವರು ದೂರಿದರು.

ಈ ಸುದ್ದಿಯನ್ನೂ ಓದಿ | PM Vishwakarma Scheme: ಪಿಎಂ ವಿಶ್ವಕರ್ಮ ಯೋಜನೆಗೆ ಯಾರು ಅರ್ಹರು, ಇದರಿಂದೇನು ಪ್ರಯೋಜನ? ಅರ್ಜಿ ಸಲ್ಲಿಕೆ ಹೇಗೆ?

ಈಚೆಗೆ ಡಿ.ಕೆ. ಶಿವಕುಮಾರ್ ಅವರು ಅಮೆರಿಕದಲ್ಲಿ ಕಮಲಾ ಹ್ಯಾರಿಸ್ ಅವರ ಜತೆ ಇದ್ದುದನ್ನು ನೋಡಿದ್ದೇನೆ. ಡಿ.ಕೆ. ಶಿವಕುಮಾರ್ ಅವರು ಆಮಿಷವೊಡ್ಡಿ ಸದಸ್ಯತ್ವ ಮಾಡಿದ್ದನ್ನು ತಿಳಿಸಿ ಮತಗಳಿಕೆ ಕುರಿತು ತಮ್ಮ ಸಲಹೆ ನೀಡಲು ಅಮೆರಿಕಕ್ಕೆ ಹೋಗಿರಬಹುದೆಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.

ಗಣಪತಿ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ಇವರ ‘ಬ್ರದರ್ಸ್ʼ ಬಿಟ್ಟು ಚಪ್ಪಲಿಯಲ್ಲಿ ಹೊಡೆಸುತ್ತಿದ್ದಾರೆ. ಕಲ್ಲು ಎಸೆಯುತ್ತಿದ್ದು, ಪೆಟ್ರೋಲ್ ಬಾಂಬ್ ಹಾಕುತ್ತಿದ್ದಾರೆ. ಇನ್ನೊಂದೆಡೆ ಬೆಳ್ಳಿ ಗಣೇಶನನ್ನು ನೀಡಿ ಸದಸ್ಯತ್ವ ಮಾಡಿಸಲಾಗುತ್ತಿದೆ. ಕಾಂಗ್ರೆಸ್‍ಗೆ ಎಂಥ ಸ್ಥಿತಿ ಬಂದಿದೆ ಎಂದು ದೂರಿದರು. ಇದಕ್ಕೆ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೇರವಾಗಿ ಹೊಣೆಗಾರರು ಎಂದು ಆರೋಪಿಸಿದರು.

ಎಲ್ಲೆಡೆ ಭ್ರಷ್ಟಾಚಾರದ ಅಟ್ಟಹಾಸ

ಎಲ್ಲ ಪ್ರಾಜೆಕ್ಟ್‌ಗಳಲ್ಲಿ ಕಮಿಷನ್ ಪಡೆಯಲಾಗುತ್ತಿದೆ. ಬಿಬಿಎಂಪಿಯಲ್ಲಿ ಯೋಜನೆ ಮಂಜೂರಾತಿಗೆ ಪ್ರತಿ ಚದರಡಿಗೆ 75 ರಿಂದ 100 ರೂ ಪಡೆಯುತ್ತಿದ್ದಾರೆ. ಎಲ್ಲ ಕಡೆ ಇವತ್ತು ಭ್ರಷ್ಟಾಚಾರದ ಅಟ್ಟಹಾಸ ಮೆರೆಯುತ್ತಿದೆ ಎಂದು ಎಸ್. ಹರೀಶ್ ತಿಳಿಸಿದರು.

ಆಮಿಷದ ಸದಸ್ಯತ್ವವನ್ನು ತಕ್ಷಣ ಸ್ಥಗಿತಗೊಳಿಸಿ

ಯುವನಿಧಿಯನ್ನು ಸರಿಯಾಗಿ ಕೊಟ್ಟಿಲ್ಲ ಎಂದು ಟೀಕಿಸಿದ ಅವರು, ಎಲ್ಲ ಗ್ಯಾರಂಟಿ ಯೋಜನೆಗಳಲ್ಲೂ ಮೂರು ತಿಂಗಳು ಹಣ ಕೊಡುತ್ತಿಲ್ಲ ಎಂದರಲ್ಲದೆ, ಆಮಿಷದ ಸದಸ್ಯತ್ವವನ್ನು ತಕ್ಷಣ ಸ್ಥಗಿತಗೊಳಿಸಬೇಕು. ನೈತಿಕ ರೀತಿಯಲ್ಲಿ ಸುಸಂಸ್ಕೃತರನ್ನು ಸದಸ್ಯರನ್ನಾಗಿ ಮಾಡಿ ಎಂದು ಮನವಿ ಮಾಡಿದರು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಸದಸ್ಯರಾದವರಿಗೆ ಮತದ ಹಕ್ಕಿದೆ. ಮತದಾನದ ಹಕ್ಕು ಪಡೆಯಲು ಪೈಪೋಟಿ ನಡೆದಿದೆ. ಇದು ಮತಕ್ಕೆ ಹಣದ ಪರೋಕ್ಷ ಕ್ರಮ ಎಂದು ಅವರು ಟೀಕಿಸಿದರು.

ಇದಕ್ಕೆ ಯಾರು ದುಡ್ಡು ಕೊಡುತ್ತಿದ್ದಾರೆ? ಎಷ್ಟು ಕೋಟಿ ಖರ್ಚಾಗುತ್ತಿದೆ? ಎಂದು ಪ್ರಶ್ನಿಸಿದ ಶಾಸಕ ಮತ್ತು ಬಿಜೆಪಿ ದಕ್ಷಿಣ ಜಿಲ್ಲಾಧ್ಯಕ್ಷ ಕೆ.ಸಿ. ರಾಮಮೂರ್ತಿ ಅವರು, ಈ ಮೂಲಕ ಜನರಿಗೆ ಮೋಸ ಎಸಗಲಾಗುತ್ತಿದೆ ಎಂದು ಆರೋಪಿಸಿದರು. ಹಿಂದೂ ಧರ್ಮದವರಿಗೆ ಬೆಳ್ಳಿ ಗಣೇಶನನ್ನು ನೀಡುತ್ತೀರಿ. ಬೇರೆ ಧರ್ಮದವರಿಗೆ ಬೇರೆ ಆಮಿಷ ಒಡ್ಡುತ್ತಾರೆ. ಪ್ರಾಮಾಣಿಕವಾಗಿ ಸದಸ್ಯತ್ವ ಮಾಡಿ ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ | IND vs BAN: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ಅಶ್ವಿನ್‌

ಸ್ವಯಂಪ್ರೇರಣೆಯಿಂದ ಬಿಜೆಪಿ ಸದಸ್ಯತ್ವ

ದೇಶದಲ್ಲಿ ಎಲ್ಲ ಪಕ್ಷದವರು ಸದಸ್ಯತ್ವ ಅಭಿಯಾನ ನಡೆಸುತ್ತಿದ್ದಾರೆ. ದೊಡ್ಡ ಪಕ್ಷವಾದ ಬಿಜೆಪಿ ಸದಸ್ಯತ್ವ ಪಡೆಯಲು ಜನರು ಸ್ವಯಂಪ್ರೇರಣೆಯಿಂದ ಮುಂದಾಗುತ್ತಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ನಮ್ಮದು ಎಂದು ಎಸ್. ಹರೀಶ್ ತಿಳಿಸಿದರು. ಈ ವೇಳೆ ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಉಪಸ್ಥಿತರಿದ್ದರು.