ಬೆಂಗಳೂರು: ಕನ್ನಡ ಚಿತ್ರರಂಗವೀಗ ಹೊಸ ದಿಕ್ಕಿಗೆ ಹೊರಳಿದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಅದರ ಭಾಗವಾಗಿ ತಯಾರಾಗಿರುವ ʼಮರ್ಫಿʼ ಸಿನಿಮಾ (Murphy Movie) ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 18ಕ್ಕೆ ತೆರೆಗೆ ಬರ್ತಿರುವ ಈ ಚಿತ್ರದ ಡ್ಯಾನ್ಸಿಂಗ್ ನಂಬರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ.
ʼಮೊಗಾಚಿʼ ಎಂಬ ಈ ಹಾಡನ್ನು ಧನಂಜಯ್ ರಂಜನ್ ರಚಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಗೋವಾದ ಪೋರ್ಚುಗೀಸ್ ಮತ್ತು ಕೊಂಕಣಿ ಸಂಸ್ಕೃತಿಯನ್ನು ಬಿಂಬಿಸಿರುವ ಹಾಡಿಗೆ ರಜತ್ ಹೆಗ್ಡೆ ಮತ್ತು ನಾಡಿಯಾ ರೆಬೆಲೊ ಧ್ವನಿಯಾಗಿದ್ದಾರೆ. ಮಾಧುರಿ ಪರಶುರಾಮ್ ನೃತ್ಯ ಸಂಯೋಜನೆ ಹಾಡಿನ ತೂಕ ಹೆಚ್ಚಿಸಿದೆ.
ಬಿಎಸ್ಪಿ ವರ್ಮಾ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಭು ಮುಂಡ್ಕೂರ್ ಅವರು ವರ್ಮಾ ಜತೆಗೂಡಿ ಚಿತ್ರಕಥೆ ಬರೆದಿದ್ದಾರೆ. ರೋಮ್ಯಾಂಟಿಕ್ ಡ್ರಾಮಾ ಎಳೆಯ ʼಮರ್ಫಿʼ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಪ್ರಭು ಮುಂಡ್ಕೂರ್, ರೋಶಿನಿ ಪ್ರಕಾಶ್ , ಇಳಾ ವೀರಮಲ್ಲ ಜತೆಯಲ್ಲಿ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ, ಆದರ್ಶ ಆರ್. ಕ್ಯಾಮೆರಾ ಹಿಡಿದ್ದಾರೆ.
ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ನಡಿ ರಾಮ್ ಕೋ ಸೋಮಣ್ಣ ಹಾಗೂ ಬಿಎಸ್ಪಿ ವರ್ಮಾ ʼಮರ್ಫಿʼ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ್ 18ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.
‘ಮಾರ್ನಮಿ’ ಟೈಟಲ್ ಟೀಸರ್ ಔಟ್
ʼಪಿಂಗಾರʼ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್. ಶೆಟ್ಟಿ ಗರಡಿಯಲ್ಲಿ ನಿರ್ದೇಶನ ಕಲಿತಿರುವ ರಿಶಿತ್ ಶೆಟ್ಟಿ ಚೊಚ್ಚಲ ಪ್ರಯತ್ನವೇ ʼಮಾರ್ನಮಿʼ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ʼʼತುಂಬಾ ಖುಷಿಯಾಗುತ್ತಿದೆ. ಹೊಸ ತಂಡ, ಹೊಸ ನಿರ್ದೇಶಕರು. ಈ ತಂಡದಲ್ಲಿ ನನ್ನ ಅಚ್ಚುಮೆಚ್ಚಿನ ನಟರೆಲ್ಲ ಇದ್ದಾರೆ. ತುಂಬಾ ಒಳ್ಳೆ ಕಥೆ. ನನಗೂ ಒಳ್ಳೆ ಅವಕಾಶ ಇದೆ ಎನಿಸಿತು. ಸಂಗೀತದ ಕೆಲಸ ಆರಂಭಿಸಿದ್ದೇನೆ. ಟೈಟಲ್ ಟೀಸರ್ ರೆಡಿ ಮಾಡಿದ್ದೇವೆ. ಇಷ್ಟೇ ಹಾಡುಗಳು ಅಂತ ತೀರ್ಮಾನ ಮಾಡಿಲ್ಲ. ಆದರೆ 5 ಹಾಡುಗಳಂತೂ ಇರುತ್ತವೆʼʼ ಎಂದು ತಿಳಿಸಿದ್ದಾರೆ.
ನಿರ್ದೇಶಕ ರಿಶಿತ್ ಶೆಟ್ಟಿ ಮಾತನಾಡಿ, ʼʼಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್, ಅಸೋಸಿಯೆಟ್ ಆಗಿ, ರೈಟರ್ ಆಗಿ ಕೆಲಸ ಮಾಡಿದ್ದೇನೆ. ಪ್ರೀತಂ ಶೆಟ್ಟಿ ಅವರ ಜತೆ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಮಂಗಳೂರಲ್ಲಿ ಸ್ಕ್ರಿಪ್ಟ್ ಕೆಲಸಕ್ಕೆ ಹೋಗಿದ್ದಾಗ ಸುಧಿ ಪರಿಚಯವಾಗಿದ್ದು. ಅವರು ಒಂದು ಕಥೆ ಮಾಡಿಕೊಂಡಿದ್ದರು. ಅವರು ನಿರ್ದೇಶನ ಮಾಡಲು ಇಷ್ಟಇಲ್ಲ ಅಂದಾಗ ನಾನು ಕಥೆ ಕೇಳಿದೆ. ಅವರು ಪ್ರೀತಿಯಿಂದ ಕೊಟ್ಟರು. ರಿತ್ವಿಕ್ ಅವರಿಗೆ ಹೇಳಿದೆ. ಅವರು ಇದಕ್ಕೆ ಏನೋ ಬೇಕೋ ಅನಿಸುತ್ತಿದೆ ಎಂದರು. ಬಳಿಕ 6 ತಿಂಗಳ ವರ್ಕ್ ಮಾಡಿಕೊಂಡು ಅವರ ಬಳಿ ಹೋದೆ. ಅವರು ಕಥೆ ಕೇಳಿ ಖುಷಿಪಟ್ಟರು. ಬಳಿಕ ಪ್ರೊಡ್ಯೂಸರ್ ಹುಡುಕಾಟದಲ್ಲಿದ್ದಾಗ ನಿಶಾಂತ್ ಭೇಟಿಯಾದರು. ಆ ಬಳಿಕ ಟೈಟಲ್ ಟೀಸರ್ ಮಾಡಿಕೊಂಡು ಬಂದೆವು. ಆ ಬಳಿಕ ನಿರ್ಮಾಪಕರು ಇಷ್ಟಪಟ್ಟರು. ಚಿತ್ರದ ಪ್ರತಿ ಹಂತದಲ್ಲಿ ನಿಶಾಂತ್ ಸಹಕಾರ ಕೊಟ್ಟಿದ್ದಾರೆʼʼ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Sandalwood News: ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಪೃಥ್ವಿ ಅಂಬಾರ್ ನಟನೆಯ ‘ಚೌಕಿದಾರ್’ ಚಿತ್ರತಂಡ