Saturday, 21st September 2024

IND vs BAN : ಗಿಲ್, ಪಂತ್ ಶತಕ, ಗೆಲುವಿನ ಹಾದಿಯಲ್ಲಿ ಭಾರತ

IND vs BAN

ಬೆಂಗಳೂರು: ರಿಷಭ್ ಪಂತ್ ಮತ್ತು ಶುಭ್ಮನ್ ಗಿಲ್ ಅವರ ವಿಶೇಷ ಶತಕಗಳ ಮೂಲಕ ಮಿಂಚಿದ ಭಾರತ ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ (IND vs BAN) ಮೊದಲ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿದೆ. ಮೂರನೇ ದಿನದಲ್ಲಿ ಪಂತ್ ಹಾಗೂ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕಾರಣ ಎರಡನೇ ಇನಿಂಗ್ಸ್‌ನಲ್ಲಿ ಭಾರತ 4 ವಿಕೆಟ್‌ 287 ರನ್‌ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. 515 ರನ್‌ಗಳ ಗುರಿ ಬೆನ್ನಟ್ಟುತ್ತಿರುವ ಬಾಂಗ್ಲಾ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 158 ರನ್ ಬಾರಿಸಿದೆ. ಆದಾಗ್ಯೂ ಭಾರತ ಮುನ್ನಡೆಯಲ್ಲಿದೆ.

ಶುಭ್‌ಮನ್‌ ಗಿಲ್ ಅಜೇಯ 119 ರನ್ ಗಳಿಸಿ ಟೀಕಾಕಾರರಿಗೆ ಉತ್ತರ ಕೊಟ್ಟರೆ ಪಂತ್ 109 ರನ್ ಗಳಿಸಿದರು. ಈ ಮೂಲಕ ಅವರ ಎರಡು ವರ್ಷಗಳ ಬಳಿಕ ಟೆಸ್ಟ್‌ ತಂಡಕ್ಕೆ ಮರಳಿ ಶತಕದ ಮೂಲಕ ಮಿಂಚಿದರು. ಪ್ರತಿಯಾಗಿ ಬಾಂಗ್ಲಾದೇಶ ಪರ ನಾಯಕ ನಜೀಮುಲ್ ಶಾಂಟೊ ಅವರ ಆಕರ್ಷಕ ಅರ್ಧಶತಕದ ಬಾರಿಸಿದ್ದಾರೆ. ಶದ್ಮಾನ್ ಇಸ್ಲಾಂ (35) ಮತ್ತು ಝಾಕಿರ್ ಹಸನ್ (33) ಉತ್ತಮ ಆರಂಭ ಒದಗಿಸಿಕೊಟ್ಟರು.

ದೊಡ್ಡಗುರಿಯ ವಿರುದ್ಧ ವೇಗವಾಗಿ ಆಡುತ್ತಿದ್ದ ಝಾಕಿರ್ ಭಾರತಕ್ಕೆ ಆತಂಕ ತಂದೊಡ್ಡಲು ತೊಡಗಿದರು. ಆದರೆ ಯಶಸ್ವಿ ಜೈಸ್ವಾಲ್ ಹಿಡಿದ ವಿಶೇಷ ಕ್ಯಾಚ್‌ಗೆ ಅವರು ಬದಲಿಯಾದರು. ಬುಮ್ರಾ ಈ ವಿಕೆಟ್ ಪಡದರು. ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ಪಡೆಯದ ಆರ್ ಅಶ್ವಿನ್ ನಂತರ 3 ವಿಕೆಟ್ ಉರುಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಆತಂಕ ಒಡ್ಡಿದ್ದಾರೆ. ಶದ್ಮನ್, ಮೊಮಿನುಲ್ ಹಕ್ ಮತ್ತು ಮುಷ್ಫಿಕರ್ ರಹೀಮ್ ಅವರನ್ನು ಔಟ್ ಮಾಡಿದ್ದಾರೆ. ಬಾಂಗ್ಲಾ ತಂಡಕ್ಕೆ ಗೆಲ್ಲಲು 357 ರನ್‌ಗಳ ಅವಶ್ಯಕತೆ ಇದೆ.

ಪಂತ್ ಮತ್ತು ಗಿಲ್ 2ನೇ ಇನ್ನಿಂಗ್ಸ್‌ ಶತಕ

ಮೊದಲ ಇನ್ನಿಂಗ್ಸ್ ನಂತರ, ಪಂತ್ ಮತ್ತು ಗಿಲ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮುಂದಾದರು. ಮೊದಲ ಇನಿಂಗ್ಸ್‌ನಲ್ಲಿ 39 ರನ್‌ಗಳಿಗೆ ಪಂತ್ ಔಟಾಗಿದ್ದರೆ ಗಿಲ್ ಡಕ್ ಔಟ್ ಆಗಿದ್ದರು. ಆದರೆ, ಇಬ್ಬರೂ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮವಾಗಿ ಆಡಿದರು. ತಂಡಕ್ಕಾಗಿ ಸಾಧ್ಯವಾದಷ್ಟು ರನ್‌ ಗಳಿಸುವುದು ಅವರ ಉದ್ದೇಶವಾಗಿತ್ತು. ಇವರಿಬ್ಬರು 167 ರನ್‌ಗಳ ಜತೆಯಾಟದ ಮೂಲಕ ಬಾಂಗ್ಲಾದೇಶದ ಬೌಲರ್‌ಗಳನ್ನು ಕಟ್ಟಿ ಹಾಕಿದರು.

ಇದನ್ನೂ ಓದಿ: IND vs BAN: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ಅಶ್ವಿನ್‌

ಗಿಲ್ ಮತ್ತು ಪಂತ್ ಆರಂಭದಲ್ಲಿ ಜಾಗರೂಕರಾಗಿದ್ದರು, ಆದರೆ ಸ್ಟ್ರೈಕ್ ಬದಲಾಗುವಂತೆ ನೋಡಿಕೊಂಡರು. ಗಿಲ್ ಅವರು ಮೆಹಿದಿಗೆ 2 ಸಿಕ್ಸರ್‌ ಬಾರಿಸಿ ಅರ್ಧ ಶತಕ ಬಾರಿಸಿದರೆ. ಪಂತ್ 88 ಎಸೆತಗಳಲ್ಲಿ 50 ರನ್ ಸಿಡಿಸಿದರು. ಬಳಿಕ ಪಂತ್‌ ಹೆಚ್ಚು ಆಕ್ರಮಣಕಾರಿಯಾದರು. ನಜೀಮುಲ್ ಶಾಂಟೊ ಕೈಬಿಟ್ಟ ಕ್ಯಾಚ್ ರೂಪದಲ್ಲಿ ಪಂತ್‌ಗೆ ಅದೃಷ್ಟ ದೊರೆಯಿತು. ಅವರು ಕೊನೆಗೂ ಶತಕ ಬಾರಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಭಾರತೀಯ ವಿಕೆಟ್ ಕೀಪರ್‌ಗಳ ಪೈಕ್‌ ಎಂಎಸ್ ಧೋನಿ ಅವರ ಸರಿಗಟ್ಟಿದರು.

ಆಟದ ಆರಂಭದಲ್ಲಿ ವಿಫಲವಾದ ನಂತರ ಸಾಕಷ್ಟು ಟೀಕೆಗಳ ಹೊರತಾಗಿಯೂ ಗಿಲ್ ಮತ್ತೊಮ್ಮೆ ಭಾರತದ 2ನೇ ಇನ್ನಿಂಗ್ಸ್ ಸ್ಪೆಷಲಿಸ್ಟ್ ಎಂದು ಸಾಬೀತುಪಡಿಸಿದರು.