Saturday, 21st September 2024

DK Shivakumar: ಕುಮಾರಣ್ಣನ ಆಡಳಿತ ಸ್ವಂತಕ್ಕಾಗಿ, ನನ್ನ ಆಡಳಿತ ಜನರಿಗಾಗಿ: ಡಿ.ಕೆ. ಶಿವಕುಮಾರ್

DK shivakumar

ರಾಮನಗರ: ಕುಮಾರಣ್ಣನ ಆಡಳಿತ ಸ್ವಂತಕ್ಕೆ, ನನ್ನ ಆಡಳಿತ ತಾಲೂಕು ಹಾಗೂ ಜನರಿಗಾಗಿ. ನನ್ನ ಆಡಳಿತವೇ ಬೇರೆ, ಕುಮಾರಣ್ಣನ ಆಡಳಿತವೇ ಬೇರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದರು. ಚನ್ನಪಟ್ಟಣದ ಆದಿಲ್ ಷಾ (ಟಿಪ್ಪು) ಮೈದಾನದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ದಾಖಲೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಮೂರು ತಿಂಗಳಲ್ಲಿ ಚನ್ನಪಟ್ಟಣ ತಾಲೂಕಿನಲ್ಲಿ ₹500 ಕೋಟಿ ಮೊತ್ತದ ಯೋಜನೆಗಳ ಗುದ್ದಲಿ ಪೂಜೆ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ ಸಚಿವರು, ಅಧಿಕಾರಿಗಳು ನಿಮ್ಮ ಬಳಿ ಬಂದು ನಿಮಗೆ ಏನು ಬೇಕು ಎಂದು ಕೇಳುತ್ತಿದ್ದಾರೆ. ಹಳೆ ಶಾಸಕರು ನಿಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರಿಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ. ನನ್ನ ಮತ್ತು ಚನ್ನಪಟ್ಟಣ ನಡುವಣ ಸಂಬಂಧ ಭಕ್ತ ಹಾಗೂ ಭಗವಂತ ನಡುವಿನ ಸಂಬಂಧ. ಈ ಭಾಗದವರು ನಾಲ್ಕು ಬಾರಿ ನನ್ನನ್ನು ವಿಧಾನಸಭೆಗೆ ಆರಿಸಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | DK Shivakumar: ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲನೆಗೆ ರಾತ್ರಿ ನಗರ ಸಂಚಾರ: ಡಿ.ಕೆ. ಶಿವಕುಮಾರ್

ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ

ಈ ಕಾರ್ಯಕ್ರಮದಲ್ಲಿ ನಾವು ಹಚ್ಚಿರುವ ದೀಪ ನಿಮ್ಮ ದಾರಿ, ಮನೆ, ಬದುಕು ಬೆಳಗಲಿದೆ. ಚನ್ನಪಟ್ಟಣದ ಅಭಿವೃದ್ಧಿ ದೀಪ ಹಚ್ಚಿದ್ದೇವೆ. ಕೊಟ್ಟ ಮಾತಿನಂತೆ ಚನ್ನಪಟ್ಟಣವನ್ನು ಅಭಿವೃದ್ಧಿ ಪುಟಕ್ಕೆ ಸೇರಿಸಿ ಮುನ್ನುಡಿ ಬರೆಯುತ್ತಿದ್ದೇವೆ. ಕರ್ನಾಟಕ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ.

ಚನ್ನಪಟ್ಟಣವನ್ನು ಚಿನ್ನದಂತ ನಾಡು ಮಾಡಲು ತೀರ್ಮಾನಿಸಿದ್ದೇವೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳಲು ಬಂದಿದ್ದೇವೆ. ನಾವು ನಿಮ್ಮ ಮನೆ ಬಾಗಿಲಿಗೆ ಬಂದಾಗ ಈ ಜನ 27 ಸಾವಿರ ಅರ್ಜಿ ನೀಡಿದ್ದಾರೆ. ಅದರಲ್ಲಿ 18 ಸಾವಿರ ಅರ್ಜಿಗಳು, ಮನೆ ಹಾಗೂ ನಿವೇಶನ ಬೇಕು ಎಂದು ಹೇಳಿದ್ದಾರೆ ಎಂದರು.

ಇನ್ನೂ 150 ಎಕರೆ ಖರೀದಿಗೆ ಸಿದ್ಧ

ಈ ತಾಲೂಕಿನಲ್ಲಿ ನಿವೇಶನ ಹಂಚಿಕೆ ಮಾಡಲು 170 ಎಕರೆ ಜಾಗ ಗುರುತಿಸಲಾಗಿದೆ. ಇನ್ನು 150 ಎಕರೆ ಖರೀದಿ ಮಾಡಲು ನಾವು ಸಿದ್ಧವಾಗಿದ್ದೇವೆ. ಮಾರುಕಟ್ಟೆ ದರ ನೀಡಿ ಜಿಲ್ಲಾಧಿಕಾರಿಗಳು ಖರೀದಿ ಮಾಡಲಿದ್ದಾರೆ. ಈ ಮಾತನ್ನು ಕುಮಾರಣ್ಣನಿಗೆ ಹೇಳಲು ಬಯಸುತ್ತೇನೆ.

ನನ್ನದು ಕುಟುಂಬಕ್ಕಾಗಿ ರಾಜಕಾರಣವಲ್ಲ

ನಮ್ಮ ಕೇಂದ್ರ ಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ನನ್ನ ಕಾಲದಲ್ಲಿ ಇಂತಹ ಕೆಲಸ ಮಾಡಲಿಲ್ಲ, ಈಗ ಹೇಗೆ ಮಾಡುತ್ತೀರಿ ಎಂದು ಕೇಳುತ್ತಿದ್ದಾರಂತೆ ಎಂದು ಆರೋಪಿಸಿದ ಅವರು, ನನ್ನದು ಕುಟುಂಬಕ್ಕಾಗಿ ರಾಜಕಾರಣವಲ್ಲ, ತಾಲೂಕು ಹಾಗೂ ಜನರ ಪರವಾದ ರಾಜಕಾರಣ ಎಂದರು.

ನಾವು ಇಲ್ಲಿ ಯಾರೂ ಶಾಶ್ವತವಲ್ಲ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಈ ಎರಡು ಕೈ ಕೊಟ್ಟಿರುವುದು, ಒಂದು ನಮ್ಮನ್ನು ನಾವು ಕಾಪಾಡಿಕೊಳ್ಳಲು ಹಾಗೂ ಮತ್ತೊಂದು ಬೇರೆಯವರನ್ನು ರಕ್ಷಣೆ ಮಾಡಲು. ಬೇರೆಯವರು ಈ ಕೆಲಸ ಮಾಡಬಹುದಾಗಿತ್ತು. ಆದರೆ ಮಾಡಲಿಲ್ಲ ಎಂದು ದೂರಿದರು.

ಸ್ಥಳೀಯ ಕಾರ್ಪೊರೇಟರ್‌ಗಳು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅವರನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಅವರಿಗೆ ಈಗ ಬೆದರಿಕೆ ಹಾಕುತ್ತಿದ್ದಾರೆ ಎಂದು ಡಿಸಿಎಂ ಆರೋಪಿಸಿದರು.

ನಾಳೆ ತುಂಗಾಭದ್ರಾ ಅಣೆಕಟ್ಟಿನಲ್ಲಿ ಬಾಗಿನ ಅರ್ಪಣೆ ಮಾಡಲು ಹೋಗುತ್ತಿದ್ದೇವೆ. ಟಿಬಿ ಡ್ಯಾಂ ಗೇಟ್ ಮುರಿದಾಗ ಎಲ್ಲರೂ ನನ್ನ ವಿರುದ್ಧ ಟೀಕೆ ಮಾಡಲು ಮುಗಿಬಿದ್ದರು. ನಾನು ಆಗ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿದ್ದೆ. ಅದರಂತೆ ಆರು ದಿನಗಳಲ್ಲಿ ಗೇಟ್ ಬದಲಾಯಿಸಿ ಮತ್ತೆ ನೀರು ತುಂಬಿಸಿ ಈಗ ತಾಯಿ ಗಂಗೆಗೆ ಪೂಜೆ ಮಾಡಲಿದ್ದೇವೆ ಎಂದರು.

ಈ ಸುದ್ದಿಯನ್ನೂ ಓದಿ | MB Patil: ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ಅಗತ್ಯ ತರಬೇತಿ ವ್ಯವಸ್ಥೆ: ಎಂ.ಬಿ. ಪಾಟೀಲ್‌

ಉಪಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ

ಮುಂದಿನ ಉಪಚುನಾವಣೆ ಟಿಕೆಟ್ ವಿಚಾರವಾಗಿ ನಾನು ಈ ವೇದಿಕೆ ಮೇಲೆ ಮಾತನಾಡುವುದಿಲ್ಲ. ಇಲ್ಲಿ ನಾನೇ ಅಭ್ಯರ್ಥಿ. ನಾನು ಅಧ್ಯಕ್ಷನಾಗಿ ಯಾರಿಗೆ ಟಿಕೆಟ್ ನೀಡುತ್ತೇನೋ ಅವರಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಮೂರು ತಿಂಗಳಲ್ಲಿ ಇಷ್ಟು ಕೆಲಸ ಮಾಡಿರುವ ನಾವು, ಮೂರುವರೆ ವರ್ಷಗಳಲ್ಲಿ ಎಷ್ಟು ಕೆಲಸ ಮಾಡಬಹುದು ಆಲೋಚಿಸಿ ಎಂದು ತಿಳಿಸಿದರು.