Saturday, 21st September 2024

Jammu&Kashmir : ಸೇನಾ ವಾಹನ ಕಮರಿಗೆ ಉರುಳಿ, ಜವಾನ ಸಾವು, 6 ಮಂದಿಗೆ ಗಾಯ

Jammu&Kashmir

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu&Kashmir ) ಕಥುವಾ ಜಿಲ್ಲೆಯಲ್ಲಿ ಸೇನಾ ವಾಹನವೊಂದು ಆಳವಾದ ಕಮರಿಗೆ ಉರುಳಿ ಬಿದ್ದ ಪರಿಣಾಮ ಸೇನಾ ಜವಾನರೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಾಹನದಲ್ಲಿದ್ದ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಮಚೇಡಿ-ಬಿಲ್ಲಾವರ್ ರಸ್ತೆಯ ಸುಕ್ರಲಾ ದೇವಿ ದೇವಸ್ಥಾನದ ಬಳಿ ಶುಕ್ರವಾರ ಸೈನಿಕರು ಗಸ್ತು ತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸ್ಥಳೀಯರು ಸೇರಿದಂತೆ ರಕ್ಷಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಏಳು ಸೈನಿಕರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರಲ್ಲಿ ಒಬ್ಬರಾದ ಜವಾನ ರಾಮ್‌ಕಿಶೋರ್‌ ಎಂಬುವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆಯ ರೈಸಿಂಗ್ ಸ್ಟಾರ್ ಕಾರ್ಪ್ಸ್ ಪುಷ್ಪಗುಚ್ಛ ಇರಿಸುವ ಸಮಾರಂಭವನ್ನು ನಡೆಸಿ ಸೈನಿಕನಿಗೆ ಗೌರವ ಸಲ್ಲಿಸಿದೆ.

ಇದನ್ನೂ ಓದಿ: Rahul Gandhi : ಬಿಜೆಪಿಯ ಸುಳ್ಳು ಮುಂದುವರಿದಿದೆ; ಅಮೆರಿಕದಲ್ಲಿ ಸಿಖ್ ಹೇಳಿಕೆ ಬಗ್ಗೆ ಮೌನ ಮುರಿದ ರಾಹುಲ್ ಗಾಂಧಿ

ಕರ್ತವ್ಯದಲ್ಲಿದ್ದಾಗ ಧೈರ್ಯಶಾಲಿ ಜವಾನ ರಾಮ್ ಕಿಶೋರ್ ಅವರ ದುರದೃಷ್ಟಕರ ಮತ್ತು ಅಕಾಲಿಕ ನಿಧನಕ್ಕೆ ರೈಸಿಂಗ್ ಸ್ಟಾರ್ ಕಾರ್ಪ್ಸ್ ತೀವ್ರ ವಿಷಾದಿಸುತ್ತದೆ. ಭಾರತೀಯ ಸೇನೆಯು ದುಃಖಿತ ಕುಟುಂಬದೊಂದಿಗೆ ನಿಲ್ಲುತ್ತದೆ ಹಾಗೂ ಅವರ ಬೆಂಬಲಕ್ಕೆ ಬದ್ಧವಾಗಿದೆ” ಎಂದು ಅದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಶನಿವಾರವೂ ನಡೆದಿತ್ತು ಅಪಘಾತ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಶುಕ್ರವಾರ ಬಸ್ ರಸ್ತೆಯಿಂದ ಜಾರಿ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ ಮೂವರು ಗಡಿ ಭದ್ರತಾ ಪಡೆ (BSF Personnel) ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಬಸ್‌ನಲ್ಲಿದ್ದ ಕನಿಷ್ಠ 28 ಸಿಬ್ಬಂದಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಗಾಯಗೊಂಡವರಿಗೆ ತಕ್ಷಣದ ಆರೈಕೆ ನೀಡಲು ವೈದ್ಯಕೀಯ ತಂಡಗಳನ್ನು ಕಳುಹಿಸಲಾಗಿದೆ.

ಅಪಘಾತದ ಕಾರಣದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 25 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆ ನಡೆಯಲಿರುವ ಮೊದಲು ಈ ಅಪಘಾತ ಸಂಭವಿಸಿದೆ.

ಗಾಯಗೊಂಡ ಆರು ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 52 ಆಸನಗಳ ಬಸ್‌ ಅಪಘಾತಕ್ಕೆ ಒಳಗಾಗಿದೆ. ವಿಧಾನಸಭಾ ಚುನಾವಣೆಯ ಮುಂದಿನ ಹಂತದ ನಿಯೋಜನೆಗಾಗಿ ಬಿಎಸ್ಎಫ್ ಸಿಬ್ಬಂದಿಯ ಏಳು ಬಸ್ ಬೆಂಗಾವಲು ಪಡೆಯ ಭಾಗವಾಗಿ ಸಾಗುತ್ತಿತ್ತು. ಅಫಘಾತಕ್ಕೆ ಒಳಗಾದ ಬಸ್‌ನಲ್ಲಿ 35 ಬಿಎಸ್ಎಫ್ ಸೈನಿಕರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಗುಡ್ಡಗಾಡು ರಸ್ತೆಯ ಮೂಲಕ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ 40 ಅಡಿ ಕೆಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಎಲ್ಲಾ ಬಿಎಸ್ಎಫ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.