Saturday, 21st September 2024

Shubman Gill : ಬಾಂಗ್ಲಾ ವಿರುದ್ಧ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ಇರುವ ವಿಶೇಷ ಪಟ್ಟಿ ಸೇರಿದ ಗಿಲ್‌

Shubman Gill

ಬೆಂಗಳೂರು: ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್ ಆದ ನಂತರ, ಶುಬ್ಮನ್ ಗಿಲ್ (Shubman Gill) ತಮ್ಮದೇ ಆದ ಶೈಲಿಯಲ್ಲಿ ಪುಟಿದೆದ್ದಿದ್ದಾರೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಬಲಗೈ ಬ್ಯಾಟರ್‌ ಅಜೇಯ ಶತಕ ಬಾರಿಸಿ ಮಿಂಚಿದ್ದಾರೆ.

ಟೆಸ್ಟ್ ನ ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾ ಬೌಲರ್ ಹಸನ್ ಮಹಮೂದ್‌ಗೆ ವಿಕೆಟ್ ಒಪ್ಪಿಸುವ ಮೂದಲು ಎಂಟು ಎಸೆತ ಎದುರಿಸಿದ್ದರು. ಆದರೆ ಒಂದೇ ಒಂದು ರನ್ ಬಾರಿಸಿರಲಿಲ್ಲ. ಆದಾಗ್ಯೂ ಪಂಜಾಬ್ ಆಟಗಾರ ಎರಡನೇ ಇನಿಂಗ್ಸ್‌ನಲ್ಲಿ 119 ರನ್ ಗಳಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ ಅದ್ಭುತ ರೀತಿಯಲ್ಲಿ ತಮ್ಮ ವೈಫಲ್ಯ ಸರಿಪಡಿಸಿಕೊಂಡರು. ಮೊದಲ ಇನಿಂಗ್ಸ್‌ನಂತೆಯೇ ರೋಹಿತ್ ಶರ್ಮಾ ಕೇವಲ 5 ರನ್‌ಗಳಿಗೆ ಔಟಾಗಿದ್ದರಿಂದ ಗಿಲ್ ಎರಡನೇ ಇನಿಂಗ್ಸ್‌ನಲ್ಲಿ ಬೇಗ ಬ್ಯಾಟ್ ಮಾಡುವ ಅವಕಾಶ ಪಡೆದರು.

ಯಶಸ್ವಿ ಜೈಸ್ವಾಲ್ (10) ಮತ್ತು ವಿರಾಟ್ ಕೊಹ್ಲಿ (17) ಬೇಗ ನಿರ್ಗಮಿಸಿದ ಕಾರಣ ತಂಡವನ್ನು ತೊಂದರೆಯಿಂದ ಪಾರು ಮಾಡುವ ಜವಾಬ್ದಾರಿ ಗಿಲ್ ಅವರ ಮೇಲಿತ್ತು. ಯುವ ಆಟಗಾರ ನಿರಾಶೆಗೊಳಿಸಲಿಲ್ಲ. ರಿಷಭ್ ಪಂತ್ ಜತೆ ಸೇರಿ ಅದ್ಭುತ ಶತಕ ಬಾರಿಸಿದರು. ಪಂತ್‌ ಕೂಡ ಶತಕ ಬಾರಿಸಿದ್ದಾರೆ.

ಈ ಜೋಡಿ ನಾಲ್ಕನೇ ವಿಕೆಟ್ ಗೆ 167 ರನ್ ಗಳ ಜೊತೆಯಾಟ ನೀಡಿತು. ಮೆಹಿದಿ ಹಸನ್ ಮಿರಾಜ್ ಪಂತ್ ಅವರನ್ನು 109 ನ್ಗಳಿಗೆ ಔಟ್ ಮಾಡುವ ಮೂಲಕ ಸ್ಟ್ಯಾಂಡ್ ಮುರಿದರು. ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 287/4 ಕ್ಕೆ ಡಿಕ್ಲೇರ್ ಮಾಡಿತು.

ಎಲೈಟ್ ಪಟ್ಟಿಗೆ ಶುಬ್ಮನ್ ಗಿಲ್ ಸೇರ್ಪಡೆ

ಮೊದಲ ಇನ್ನಿಂಗ್ಸ್‌ನಲ್ಲಿ ಡಕ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕವು ಶುಭ್ಮನ್ ಗಿಲ್‌ಗೆ ಎಲೈಟ್ ಪಟ್ಟಿಗೆ ಸೇರಲು ಸಹಾಯ ಮಾಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿ, ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯ ಗಳಿಸಿದ ಒಂಬತ್ತನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಮಾಧವ್ ಆಪ್ಟೆ.

ಇದನ್ನೂ ಓದಿ: KL Rahul : ಪಂತ್‌ ಔಟಾಗುವ ಮೊದಲೇ ಬ್ಯಾಟ್ ಮಾಡಲು ಹೊರಟ ಕೆ. ಎಲ್ ರಾಹುಲ್‌!

1953ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರು ಅಜೇಯ 163 ರನ್ ಗಳಿಸಿದ್ದರು. ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕಾರ್‌. ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್ ಮತ್ತು ಇತರ ದಿಗ್ಗಜರು ಈ ಮೈಲಿಗಲ್ಲು ಸಾಧಿಸಿದ್ದರು. ಅದಕ್ಕಿಂತ ಮೊದಲು ಗುಂಡಪ್ಪ ವಿಶ್ವನಾಥ್ ಈ ಸಾಧನೆ ಮಾಡಿದ ಎರಡನೇ ಆಟಗಾರ.

ಸಕ್ರಿಯ ಭಾರತೀಯ ಕ್ರಿಕೆಟಿಗರಲ್ಲಿ, ವಿರಾಟ್ ಕೊಹ್ಲಿ ಮತ್ತು ಗಿಲ್ ಮಾತ್ರ ಈಗ ಒಂದೇ ಟೆಸ್ಟ್‌ನಲ್ಲಿ ಡಕ್ ಮತ್ತು ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.

ಶೂನ್ಯ ಮತ್ತು ಒಂದು ಶತಕ ಗಳಿಸಿದ ಭಾರತೀಯ ಆಟಗಾರರ ಪಟ್ಟಿ:

  • ಮಾಧವ್ ಆಪ್ಟೆ
  • ಗುಂಡಪ್ಪ ವಿಶ್ವನಾಥ್
  • ಸುನಿಲ್ ಗವಾಸ್ಕರ್
  • ದಿಲೀಪ್ ವೆಂಗ್ಸರ್ಕರ್
  • ಮೊಹಮ್ಮದ್ ಅಜರುದ್ದೀನ್
  • ಸಚಿನ್ ತೆಂಡೂಲ್ಕರ್
  • ಶಿಖರ್ ಧವನ್
  • ವಿರಾಟ್ ಕೊಹ್ಲಿ
  • ಶುಬ್ಮನ್ ಗಿಲ್

ಬಾಂಗ್ಲಾದೇಶಕ್ಕೆ ಭಾರತ 515 ರನ್‌ಗಳ ಟಾರ್ಗೆಟ್ ನೀಡಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದೆ.