Saturday, 21st September 2024

PM Modi Visit US : ಪ್ರಧಾನಿ ಮೋದಿಯನ್ನು ಅಪ್ಪಿ ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌

PM Modi Visit US

ಬೆಂಗಳೂರು: ಮೂರು ದಿನದ ಭೇಟಿಗಾಗಿ ಅಮೆರಿಕಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (PM Modi Visit US) ಅವರಿಗೆ ಅಲ್ಲಿ ಭರ್ಜರಿ ಸ್ವಾಗತ ದೊರಕಿದೆ. ಫಿಲಡೆಲ್ಫಿಯಾದ ವಿಮಾನ ನಿಲ್ದಾಣದಲ್ಲಿ ಇಳಿದ ಮೋದಿಗೆ ಅಲ್ಲಿನ ಅಧಿಕಾರಿಗಳು ಮೊದಲು ಸ್ವಾಗತ ಕೊಟ್ಟರೆ ಬಳಿಕ ಅವರನ್ನು ಭಾರತೀಯ ಮೂಲದ ನಿವಾಸಿಗಳು ಆತ್ಮೀಯವಾಗಿ ಬರ ಮಾಡಿಕೊಂಡರು. ಇದೀಗ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ನಿವಾಸಕ್ಕೆ ತೆರಳಿದ್ದು ಅಲ್ಲಿ ಅವರನ್ನು ಬೈಡೆನ್ ತಬ್ಬಿಕೊಂಡು ಸ್ವಾಗತಿಸಿದ್ದಾರೆ.

ಕ್ವಾಡ್ ನಾಯಕರ ಶೃಂಗಸಭೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ಪ್ರಾರಂಭಿಸಿದ್ದಾರೆ. ಕ್ವಾಡ್ ನಾಯಕರಿಗೆ ಬೀಳ್ಕೊಡುಗೆ ಶೃಂಗಸಭೆ ಆಯೋಜಿಸಲು ಯುಎಸ್ ಅಧ್ಯಕ್ಷ ಬೈಡನ್ ವಾಷಿಂಗ್ಟನ್‌ನಿಂದ ಸುಮಾರು 170 ಕಿಲೋಮೀಟರ್ ದೂರದಲ್ಲಿರುವ ತಮ್ಮ ತವರು ವಿಲ್ಮಿಂಗ್ಟನ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ಪ್ರಧಾನಿ ಮೋದಿ ತೆರಳಿದ್ದಾರೆ.

ಇದನ್ನೂ ಓದಿ: Modi visit to US : ಮೂರು ದಿನಗಳ ಭೇಟಿಗಾಗಿ ಅಮೆರಿಕದಲ್ಲಿ ಇಳಿದ ಪ್ರಧಾನಿ ಮೋದಿ

ದ್ವಿಪಕ್ಷೀಯ ಚರ್ಚೆಗಳಿಗಾಗಿ ಡೆಲಾವೇರ್‌ನ ಗ್ರೀನ್‌ವಿಲ್ಲೆಯಲ್ಲಿರುವ ಬೈಡನ್ ಅವರ ನಿವಾಸಕ್ಕೆ ಮೋದಿ ಹೋದಾಗ ಜೋ ಬೈಡನ್ ಪ್ರಧಾನಿ ಅಪ್ಪುಗೆಯೊಂದಿಗೆ ಸ್ವಾಗತಿಸಿದರು. ಬಳಿಕ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಯುಎಸ್‌ನಿಂದ 31 ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸಲು ಭಾರತ ಯೋಜಿಸಿರುವ ಬಹು ಶತಕೋಟಿ ಡಾಲರ್ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಯಲಿದೆ.

ಭಾರತೀಯರ ಸಂಭ್ರಮ

ಅಮೆರಿಕದ ಫಿಲಡೆಲ್ಫಿಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಮುದಾಯದ ಸದಸ್ಯರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಅವರು ತಮ್ಮನಾಯಕನನ್ನು ನೋಡಿ ಸಂಭ್ರಮಿಸಿದರು. ಹಲವಾರು ಮಂದಿ ಮೋದಿಗೆ ಕೈ ಕುಲುಕು ಸಂಭ್ರಮಿಸಿದರೆ ಹೆಂಗಳೆಯರು ಮತ್ತು ಮಕ್ಕಳು ಬಗೆಬಗೆಯ ಉಡುಗೊರೆಗಳನ್ನು ನೀಡಿ ಖುಷಿ ಪಟ್ಟರು.

ಫಿಲಡೆಲ್ಫಿಯಾದಲ್ಲಿ ಉತ್ಸಾಹಭರಿತ ಸ್ವಾಗತ ದೊರಕಿದೆ. ನಮ್ಮ ನಾಡಿನ ಜನರ ಆಶೀರ್ವಾದ ದೊಡ್ಡ ಗೌರವ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ, ತಮ್ಮ ದೇಶದ ನಾಗರಿಕರು ನೀಡಿದ ಸ್ವಾಗತಕ್ಕೆಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಮುದಾಯವು ಯುಎಸ್ಎಯಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರಿದೆ. ಅವರೊಂದಿಗೆ ಸಂವಹನ ನಡೆಸುವುದು ಯಾವಾಗಲೂ ಸಂತೋಷದ ಸಂಗತಿ. ಸೆಪ್ಟೆಂಬರ್ 22ರ ಭಾನುವಾರ ಭಾರತೀಯ ಕಾಲಮಾನ ರಾತ್ರಿ 9:30ಕ್ಕೆ ನಾನು ಭಾಷಣ ಮಾಡಲಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.