ಕಾರವಾರ: ಎರಡು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು (Shirur Landslide) ನಾಪತ್ತೆಯಾಗಿದ್ದ ಲಾರಿ ಶನಿವಾರ (ಸೆಪ್ಟೆಂಬರ್ 21) ಪತ್ತೆಯಾಗಿದೆ. ಆದರೆ ನಾಪತ್ತೆಯಾದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಬಗ್ಗೆ ಮಾತ್ರ ಯಾವುದೇ ಮಾಹಿತಿ ಸಿಕ್ಕಿಲ್ಲ. ಜುಲೈ 16ರಂದು ಭಾರಿ ಮಳೆಯ ಕಾರಣ ಗುಡ್ಡ ಕುಸಿದು, ಲಾರಿಯ ಸಮೇತ ಚಾಲಕ ಅರ್ಜುನ್ ಗಂಗಾವಳಿ ನದಿಗೆ ಬಿದ್ದಿದ್ದರು. ಭಾರಿ ಮಳೆಯ ಕಾರಣ ನದಿಯಲ್ಲಿ ನೀರಿನ ಸೆಳೆತ ಅಧಿಕವಾಗಿದ್ದರಿಂದ ಪತ್ತೆ ಕಾರ್ಯಕ್ಕೆ ಅಡಚಣೆಯಾಗಿತ್ತು. ಈಗ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಕಾರ್ಯಾಚರಣೆ ಪುನರಾರಂಭಿಸಲಾಗಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ಅವರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಶನಿವಾರ ಈಶ್ವರ ಮಲ್ಪೆ ನೇತೃತ್ವದ ಮುಳುಗು ತಜ್ಞರ ತಂಡಕ್ಕೆ ಲಾರಿಯ ಅವಶೇಷಗಳು ಪತ್ತೆಯಾಗಿವೆ. ಆದರೆ ಇದು ಅರ್ಜುನ್ ಅವರ ಲಾರಿಯೇ ಎನ್ನುವುದು ಸ್ಪಷ್ಟವಾಗಿಲ್ಲ. ʼʼಶಿರೂರಿನಲ್ಲಿ ಗುಡ್ಡ ಕುಸಿತದಿಂದ ನದಿಯಲ್ಲಿ ಕಾಣೆಯಾದ ಲಾರಿಯ ಕುರುಹು ದೊರೆತಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆʼʼ ಎಂದು ಮೂಲಗಳು ತಿಳಿಸಿವೆ.
ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಷಿನ್ ಮೂಲಕ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ 8ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕ ಸರ್ಕಾರ ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿದೆ. ಅರ್ಜುನ್‌ಗಾಗಿ ಹುಡುಕಾಟ ನಡೆಸಬೇಕು ಎಂದು ಕೇರಳ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿತ್ತು. ಶೀಘ್ರದಲ್ಲೇ ಲಾರಿ ಮೇಲಕ್ಕೆತ್ತುವ ನಿರೀಕ್ಷೆ ಇದೆ.
ಅರ್ಜುನ್ ಮರ ತುಂಬಿದ ಲಾರಿಯಲ್ಲಿ ಕೋಝಿಕ್ಕೋಡ್ ಕಡೆಗೆ ಹೋಗುತ್ತಿದ್ದ ವೇಳೆ ಜು. 16ರಂದು ಶಿರೂರಿನಲ್ಲಿ ಭೂಕುಸಿತವಾಗಿತ್ತು. ಈ ವೇಳೆ ಅವರು ಲಾರಿ ಸಮೇತ ಗಂಗಾವಳಿ ನದಿಗೆ ಬಿದ್ದಿದ್ದರು. ಅಂದಿನಿಂದ ಅವರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಜತೆಗೆ ಕೇರಳದ ಜನಪ್ರತಿನಿಧಿಗಳು ಆಗಮಿಸಿದ್ದರು. ಇಂದು ಕೂಡ ಶೋದ ಕಾರ್ಯಾಚರಣೆ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: Theft Case: ಹಣವಿಲ್ಲ ಎಂದ ಯುವಕನ ಬೈಕ್ ಎಗರಿಸಿದ್ದ ಆಸಾಮಿ ಬಂಧನ