ಬೆಂಗಳೂರು: ಜೀವನ ಶೈಲಿ ಬದಲಾಗಿದೆ. ಜತೆಗೆ ಜೀವನ ವೆಚ್ಚವೂ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಲೇ ಇದೆ. ಹೀಗಾಗಿ ಕೆಲವೊಂದು ಸಂದರ್ಭದಲ್ಲಿ ಸಾಲ ಪಡೆಯುವುದು ಅನಿವಾರ್ಯ ಎನಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ದೇಶದಲ್ಲಿ ಕೃಷಿ ಸಾಲ, ಗೃಹ ಸಾಲ, ವಾಹನ ಸಾಲಗಳ ಜತೆಗೆ ವೈಯಕ್ತಿಕ ಸಾಲ (Personal Loan) ಪಡೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಬ್ಯಾಂಕ್‌ಗಳು ಸುಲಭವಾಗಿ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ಆದಾಗ್ಯೂ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ಪಡೆಯುವ ಮೊದಲು ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ಇದರಿಂದ ಹೆಚ್ಚಿನ ಬಡ್ಡಿದರಗಳಿಂದ ಪಾರಾಗಬಹುದು. ಜತೆಗೆ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು (Money Tips).
ಎಷ್ಟು ಮೊತ್ತ ಲಭ್ಯ?
ಸಾಮಾನ್ಯವಾಗಿ ನಿಮ್ಮ ಮಾಸಿಕ ವೇತನದ 20 ಪಟ್ಟು ಅಧಿಕ ಮೊತ್ತ ವೈಯಕ್ತಿಕ ಸಾಲದ ರೂಪದಲ್ಲಿ ದೊರೆಯುತ್ತದೆ. ಉದಾಹರಣೆಗೆ ನಿಮ್ಮ ಮಾಸಿಕ ವೇತನ 50,000 ರೂ. ಆಗಿದ್ದರೆ ಪರ್ಸನಲ್ ಲೋನ್ 10 ಲಕ್ಷ ರೂ.ವರೆಗೆ ಪಡೆಯಬಹುದು.
ಅಗತ್ಯ ದಾಖಲೆಗಳು
ಪರ್ಸನಲ್ ಲೋನ್ ಪಡೆಯಲು ನೀವು ಕೆಲವೊಂದು ದಾಖಲೆಗಳನ್ನು ನೀಡಬೇಕಾಗುತ್ತದೆ. ಸ್ಯಾಲರಿ ಸ್ಲಿಪ್, ಆದಾಯ ತೆರಿಗೆ ಪಾವತಿಯ ಮಾಹಿತಿ, ವಿಳಾಸ ಪುರಾವೆ ಮತ್ತು ಪ್ಯಾನ್ ಕಾರ್ಡ್ ಸಲ್ಲಿಸಬೇಕಾಗುತ್ತದೆ. ಕೆಲವೊಂದು ಬ್ಯಾಂಕ್‌ಗಳು ಐಡಿ ಕಾರ್ಡ್‌ನಂತಹ ಹೆಚ್ಚುವರಿ ದಾಖಲೆ ಕೇಳುತ್ತವೆ.
ಬಡ್ಡಿದರ
ಇನ್ನೊಂದು ಮುಖ್ಯ ವಿಚಾರ ಎಂದರೆ ಇತರ ಸಾಲಗಳಿಗೆ ಹೋಲಿಸಿದರೆ ಪರ್ಸನಲ್ ಲೋನ್‌ಗೆ ವಿಧಿಸಲಾಗುವ ಬಡ್ಡಿ ತುಸು ಅಧಿಕವೇ ಇರುತ್ತದೆ. ಕೆಲವೊಮ್ಮೆ ಶೇ. 12-18 ಬಡ್ಡಿ ಇರುತ್ತದೆ. ಸಿಬಿಲ್ ಸ್ಕೋರ್ ಸೇರಿದಂತೆ ಹಲವು ಅಂಶಗಳು ಬಡ್ಡದರದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಿಬಿಲ್ ಸ್ಕೋರ್ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.
ಈ ಅಂಶಗಳನ್ನು ಗಮನಿಸಿ
ಸ್ಥಿರ ಆದಾಯ: ವೈಯಕ್ತಿಕ ಸಾಲವನ್ನು ಪಡೆಯಲು ಸ್ಥಿರವಾದ ಆದಾಯ ಮುಖ್ಯ ಘಟಕ. ಸಾಮಾನ್ಯವಾಗಿ ವೈಯಕ್ತಿಕ ಸಾಲವನ್ನು ಮಂಜೂರು ಮಾಡುವ ಮೊದಲು ಬ್ಯಾಂಕ್‌ಗಳು ಅರ್ಜಿದಾರರು ಕನಿಷ್ಠ 30,000 ರೂ.ಗಳ ಮಾಸಿಕ ವೇತನ ಹೊಂದಿದ್ದಾರೆಯೇ ಎನ್ನುವುದನ್ನು ಗಮನಿಸುತ್ತದೆ. ಇದೇ ಕಾರಣಕ್ಕೆ ಬ್ಯಾಂಕ್ ನಿಮ್ಮ ಮಾಸಿಕ ವೇತನದ ಸ್ಲಿಪ್ ಕೇಳುತ್ತದೆ.
ಅವಧಿ: ಪರ್ಸನಲ್ ಲೋನ್ ಪಡೆಯುವ ಮುನ್ನ ಮರುಪಾವತಿಯ ಅವಧಿಯನ್ನು ಕೇಳಿ ತಿಳಿದುಕೊಳ್ಳಿ. ಸಾಮಾನ್ಯವಾಗಿ ಈ ಸಾಲದ ಅವಧಿ 12ರಿಂದ 60 ತಿಂಗಳವರೆಗೆ ಇರುತ್ತದೆ. ಕೆಲವೊಮ್ಮೆ 96 ತಿಂಗಳವರೆಗೆ ವಿಸ್ತರಿಸುವ ಆಯ್ಕೆಯೂ ಇರುತ್ತದೆ. ನಿಮ್ಮ ಮರುಪಾವತಿ ಸಾಮರ್ಥ್ಯ ನೋಡಿಕೊಂಡು ಸೂಕ್ತ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ. ದೀರ್ಘಾವಧಿಯಿಂದ ನಿಮ್ಮ ಇಎಂಐ ಹೊರೆ ಕಡಿಮೆಯಾದರೆ, ಅಲ್ಪಾವಧಿಯ ಸಾಲಗಳು ಕಡಿಮೆ ಬಡ್ಡಿದರಗಳನ್ನು ಹೊಂದಿರುತ್ತವೆ. ಹೀಗಾಗಿ ಯಾವುದನ್ನು ಆಯ್ಕೆ ಮಾಡಬೇಕು ಎನ್ನುವುದು ನಿಮ್ಮ ಗಮನದಲ್ಲಿರಲಿ. ನಿಮ್ಮ ಆದಾಯವನ್ನು ಹೊಂದಿಕೊಂಡು ಇದನ್ನು ನಿರ್ಧರಿಸಿ.
ಬಾಕಿ ಇರುವ ಸಾಲವನ್ನು ಸರಿಯಾಗಿ ಮರುಪಾವತಿಸಿ: ನೀವು ಈ ಹಿಂದೆ ಯಾವುದಾದರೂ ಸಾಲ ಪಡೆದುಕೊಂಡಿದ್ದರೆ ಅದನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ. ಮೊದಲೇ ಹೇಳಿದಂತೆ ಬ್ಯಾಂಕ್‌ಗಳು ಸಿಬಿಲ್ ಸ್ಕೋರ್ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್-CIBIL) ಆಧಾರದಲ್ಲಿ ಪರ್ಸನಲ್ ಲೋನ್ ಒದಗಿಸುತ್ತವೆ. 300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಅದರಲ್ಲೂ ಸ್ಕೋರ್ 700ಕ್ಕಿಂತ ಅಧಿಕ ಇರುವುದು ಮುಖ್ಯ. ಕ್ರೆಡಿಟ್ ಕಾರ್ಡ್ ಬಿಲ್ ಮತ್ತು ಬಾಕಿ ಇರುವ ಸಾಲಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರಿಂದ ಸಿಬಿಲ್ ಸ್ಕೋರ್ ಹೆಚ್ಚಿಸಬಹುದು. ಒಂದು ವೇಳೆ ನೀವು ಹಿಂದಿನ ಸಾಲವನ್ನು ಸಮರ್ಪಕವಾಗಿ ಪಾವತಿಸದಿದ್ದರೆ ಸಿಬಿಲ್ ಸ್ಕೋರ್ ಕಡಿಮೆಯಾಗಿ ಪರ್ಸನಲ್ ಲೋನ್ ಮಂಜೂರಾಗುವುದು ಕಷ್ಟವಾಗಬಹುದು. ಒಂದುವೇಳೆ ಮಂಜೂರಾದರೂ ಅಧಿಕ ಬಡ್ಡಿದರ ಪಾವತಿಸಬೇಕಾಗುತ್ತದೆ.
ಈ ಸುದ್ದಿಯನ್ನೂ ಓದಿ: Money Tips: ನಿಮ್ಮ CIBIL Score ಕಡಿಮೆ ಇದ್ಯಾ? ಚಿಂತೆ ಬಿಡಿ; ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ