Sunday, 24th November 2024

Srivathsa Joshi Column: ಗುಳಿಗೆ ರಸಗಳಿಗೆ ಹರಟೆ ಮತ್ತೊಂದು ಲೆಕ್ಕ ಮಿದುಳಿಗೆ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅವರೀಗ ಬರೀ ಮಾತ್ರೆಗಳ ಫಳ್ಹಾರ ಮಾಡಿಕೊಂಡೇ ಬದುಕಿರೋದು’- ಗಂಭೀರವಾದ ಯಾವುದೋ ಕಾಯಿಲೆ ಹತ್ತಿಸಿ ಕೊಂಡು ಕಟ್ಟುನಿಟ್ಟಿನ ಪಥ್ಯದಲ್ಲಿ ಮೂರುಹೊತ್ತೂ ಮಾತ್ರೆಗಳನ್ನು ತಿನ್ನಬೇಕಾದವರ ಅವಸ್ಥೆಯ ಬಗ್ಗೆ ಹೇಳುವಾ ಗಿನ ಮಾತಿದು. ಮಾತ್ರೆಗಳು ಈಗ ನಮ್ಮ ಜೀವನವನ್ನು ಎಷ್ಟು ವ್ಯಾಪಿಸಿವೆಯೆಂದರೆ, ಕಾಯಿಲೆ ಸಣ್ಣದಿರಲಿ ದೊಡ್ಡ ದಿರಲಿ ಅಥವಾ ಕಾಯಿಲೆಯೇ ಇಲ್ಲದಿರಲಿ ಜೀವನದಲ್ಲಿ ಒಮ್ಮೆಯೂ ಮಾತ್ರೆ ಸೇವಿಸದವರು ಸಿಗುವುದು ಬಹಳ ಕಷ್ಟವೇ.

ಈಗೇನಾದರೂ ಗೌತಮಬುದ್ಧ ಉದ್ಭವಿಸಿ ಉಪದೇಶ ಮಾಡಿರುತ್ತಿದ್ದರೆ ಸಾಸಿವೆ ಕಾಳನ್ನು ಸಾವಿಲ್ಲದ ಮನೆಯಿಂದ ತರಿಸುವುದಕ್ಕಿಂತ ಮಾತ್ರೆಗಳಿಲ್ಲದ ಮನೆಯಿಂದ ತರಿಸುವ ಚಾಲೆಂಜ್ ಹಾಕುತ್ತಿದ್ದನೇನೋ. ವ್ಯಂಗ್ಯವಾದರೂ ಕಟು ಸತ್ಯವೇನೆಂದರೆ ಇಂದು ಪ್ರಪಂಚದಲ್ಲಿ ಅತಿಹೆಚ್ಚು ಸೇವನೆಯಾಗುವ ‘ಟಾಪ್-3’ ಆಹಾರ ಪದಾರ್ಥಗಳಲ್ಲಿ ಮಾತ್ರೆ ಗಳೂ ಸ್ಥಾನ ಗಿಟ್ಟಿಸಿವೆ (ಉಳಿದೆರಡು ಯಾವುವಿರಬಹುದು? ಐಸ್‌ಕ್ರೀಂ ಮತ್ತು ಚಾಕೋಲೇಟ್ ಎಂದು ನೀವು ಊಹಿಸಿದಿರಾದರೆ ನಿಮ್ಮ ಊಹೆ ಸರಿ ಇದೆ)!

ಈಗಿನ ಕಾಲದಲ್ಲಿ ಪ್ರತಿಯೊಂದಕ್ಕೂ ಮಾತ್ರೆಗಳ ಸಿದ್ಧೌಷಧವಿದೆ. ‘ಮಗು ಹುಟ್ಟದಂತೆ ಮಾತ್ರೆ’ಯಿಂದ ಆರಂಭಿಸಿ, ಹುಟ್ಟಿದ ಮಗು ಆರೋಗ್ಯವಾಗಿ ಬೆಳೆದು ದೊಡ್ಡದಾಗಿ ಮುಂದೆ ವೃದ್ಧಾಪ್ಯವನ್ನು ಮುಂದೂಡುವುದಕ್ಕೂ ಮಾತ್ರೆ ಗಳಿವೆ. ಬಕ್ಕತಲೆ ನಿವಾರಣೆಗೆ ಮಾತ್ರೆ, ತಲೆಯೊಳಗೆ ಗೆದ್ದಲು ತುಂಬಿಕೊಳ್ಳದಂತೆ ಮಾತ್ರೆ; ಟೆನ್ಷನ್ ಹೆಚ್ಚಾಗ ದಂತೆ ಮಾತ್ರೆ, ಎಲ್ಲರ ಅಟೆನ್ಷನ್ ಗಳಿಸುವಂತೆ ಆಗಲಿಕ್ಕೂ ಮಾತ್ರೆ! ಸಂಕೀರ್ಣ ಕಾಯಿಲೆಗಳಿದ್ದಾಗ ನಾಲ್ಕೈದು ನಮೂನೆಯ ಮಾತ್ರೆಗಳನ್ನು ಬೇರೆಬೇರೆ ಪ್ರಮಾಣದಲ್ಲಿ ತೆಗೆದು ಕೊಳ್ಳಬೇಕಾಗಿ ಬಂದರೆ ಯಾವಾಗ ಯಾವ ಮಾತ್ರೆ ಎಂದು ನೆನಪಿಟ್ಟುಕೊಳ್ಳುವುದೇ ತಲೆಬಿಸಿಯ ವಿಚಾರ; ಅದರ ಶಮನಕ್ಕೆ ಆರನೇ ವಿಧದ ಮಾತ್ರೆ ತೆಗೆದುಕೊಳ್ಳ ಬೇಕಾಗ ಬಹುದು!

ಮತ್ತೆ ಕೆಲವೊಮ್ಮೆ ಕಾಯಿಲೆ ಹದ್ದುಬಸ್ತಿನಲ್ಲಿಡಲಿಕ್ಕೆ ಇಂಜೆಕ್ಷನ್ ಚುಚ್ಚಿಸಿಕೊಳ್ಳಬೇಕು, ಆ ಇಂಜೆಕ್ಷನ್‌ನ ನೋವು ಕಡಿಮೆಯಾಗಲಿಕ್ಕೆ ಮಾತ್ರೆ ತಿನ್ನಬೇಕು. ಒಟ್ಟಿನಲ್ಲಿ ಮಾತ್ರೆ ಮಾತ್ರ ಮಸ್ಟ್.

ಫಾರ್ಮಸ್ಯೂಟಿಕಲ್ ಕಂಪನಿಗಳು ಒಡ್ಡುವ ಪ್ರಲೋಭನೆಯಿಂದ, ಮೆಡಿಕಲ್ ರೆಪ್‌ಗಳು ಪುಕ್ಕಟೆಯಾಗಿ ಕೊಡುವು ದರಿಂದ, ವೈದ್ಯರ ಹತ್ತಿರ ಮಾತ್ರೆಗಳ ದೊಡ್ಡ ರಾಶಿಯೇ ಇರುತ್ತದೆ. ವೈದ್ಯರು ಮಾತ್ರೆ ಬರೆದುಕೊಟ್ಟರೇನೇ ಕಾಯಿಲೆ ವಾಸಿಯಾಗುವುದು ಎಂಬ ದೃಢವಿಶ್ವಾಸ ರೋಗಿಗೂ ಇರುತ್ತದೆ. ಅಂತೂ ಸಣ್ಣಪುಟ್ಟ ಕಾಯಿಲೆಗೂ ಮಾತ್ರೆಗಳನ್ನು ಶಿಫಾರಸು ಮಾಡುವ ಚಟ ವೈದ್ಯನಾದವನಿಗೆ ಬಹುಬೇಗ ಅಂಟಿಕೊಳ್ಳುತ್ತದೆ.

ಎಂದು ಬರೆದು ಕೆಳಗೆ ವೈದ್ಯಲಿಪಿಯಲ್ಲಿ ಏನನ್ನೋ ಗೀಚಿದ ಚೀಟಿಯಲ್ಲಿ 1-0-1 (ಬೆಳಗ್ಗೆ ಒಂದು, ರಾತ್ರಿ ಒಂದು) ಅಥವಾ ೦-೦-೧ (ರಾತ್ರಿ ಮಾತ್ರ ಒಂದು) ಅಂತ ಮಾತ್ರೆಗಳ ಪ್ರಿಸ್ಕ್ರಿಪ್ಷನ್ ಇದ್ದರೇನೇ ರೋಗಿಗೆ ಸಮಾಧಾನ. ಇದೀಗ ವೈದ್ಯಲಿಪಿ ಕನ್ನಡದಲ್ಲಿ ಇರಬೇಕು ಎಂಬ ಆದೇಶ ಬಂದಿದೆಯಂತೆ. ವೈದ್ಯರ ಕನ್ನಡ ಅಕ್ಷರಗಳು ಮಾತ್ರೆಗಳಂತೆ ದುಂಡಗಿರಬೇಕು ಎಂದು ಆದೇಶದಲ್ಲಿ ತಿಳಿಸಿಲ್ಲ ಸದ್ಯ, ವೈದ್ಯರ ಪುಣ್ಯ.

ಇನ್ನು, ವೈದ್ಯರ ಶಿಫಾರಸಿಲ್ಲದೆ ಸ್ವಂತಚಿಕಿತ್ಸೆಗೆ ತೊಡಗಿ ಯಾವ್ಯಾವುದೋ ಮಾತ್ರೆಗಳನ್ನು ತಿಂದು ಅವಘಡ ಮಾಡಿಕೊಂಡವರೆಷ್ಟಿಲ್ಲ? ಉದ್ದೀಪನ ಮಾತ್ರೆಗಳನ್ನು ಸೇವಿಸಿ ಸಿಕ್ಕಿಬೀಳುವ ಕ್ರೀಡಾಪಟುಗಳು, ನಿದ್ರೆ ಮಾತ್ರೆಗಳನ್ನು
ವಿಪರೀತ ಸೇವಿಸಿ ಚಿರನಿದ್ರೆಗೆ ಜಾರುವ ನತದೃಷ್ಟರು ಅದೆಷ್ಟಿಲ್ಲ? ಮಾತ್ರೆಗಳ ಸೀರಿಯಸ್‌ನೆಸ್ಸನ್ನು ನೆನೆಸಿಕೊಂಡರೆ ನಿಜಕ್ಕೂ ಮೈ ಝುಮ್ಮೆನ್ನುತ್ತದೆ! ಆದರೆ ಗಾಬರಿಯಾಗಬೇಡಿ, ಈ ಲೇಖನದಲ್ಲಿರುವುದು ಸೀರಿಯಸ್ ವಿಚಾರವಲ್ಲ. ಇದು ಗುಳಿಗೆ-ರಸಘಳಿಗೆ, ಹರಟೆ ಮತ್ತೊಂದು ಲೆಕ್ಕ. ಮಾತ್ರೆ ನುಂಗಿ ನೀರು ಕುಡಿದಂತೆ ಗಟಗಟನೆ ಓದಿ ಮುಗಿಸ ಬಹುದು.

ಚಿಕ್ಕ ಮಕ್ಕಳಿಗೆ ಅಪಸ್ಮಾರ, ಬಾಲಗ್ರಹ ಮುಂತಾದ ರೋಗಗಳು ಬಾರದಂತೆ ‘ಚಿಹ್ನೆ ಮಾತ್ರೆ’ ಅಂತೊಂದು ಮಾತ್ರೆ ಯನ್ನು ಅರೆದು ಕುಡಿಸುವ ಕ್ರಮ ನಮ್ಮ ಕರಾವಳಿಯ ಗ್ರಾಮೀಣ ಪ್ರದೇಶಗಳಲ್ಲಿತ್ತು. ಕನಿಷ್ಠಪಕ್ಷ ನಮ್ಮ ಬಾಲ್ಯ ದಲ್ಲಿತ್ತು, ಈಗಲೂ ಇದೆಯೋ ಗೊತ್ತಿಲ್ಲ. ಅಮಾವಾಸ್ಯೆ, ಹುಣ್ಣಿಮೆ ಅಥವಾ ಪ್ರತಿ ಭಾನುವಾರ- ಹೀಗೆ ನೆನಪಿಟ್ಟು ಕೊಳ್ಳಲು ಸುಲಭವಾಗುವಂತೆ ಆವತ್ತು ಮಗುವಿಗೆ ಚಿಹ್ನೆ ಮಾತ್ರೆಯನ್ನು ಅರೆದು ಕುಡಿಸುವುದು. ನಮ್ಮೂರಿನಲ್ಲಿ ಆಣ್ಣಿನಾಯ್ಕ ಎಂಬುವವರ ಹೋಟೆಲ್-ಕಮ್-ಗೂಡಂಗಡಿಯಲ್ಲಿ ಚಿಹ್ನೆ ಮಾತ್ರೆಗಳು ಸಿಗುತ್ತಿದ್ದವು.

ಆ ಮಾತ್ರೆಗಳು ದುಬಾರಿಯೇನಲ್ಲ, ಆಗಿನ ಕಾಲದಲ್ಲಿ ಒಂದು ರುಪಾಯಿಗೆ ಇಪ್ಪತ್ತು ಮಾತ್ರೆಗಳು. ಚಿಕ್ಕ ಕಾಗದದ ತುಂಡೊಂದನ್ನು ಶಂಕುವಿನಂತೆ ಮಡಚಿ, ಗಾಜಿನ ಜಾಡಿಯಿಂದ ಕಪ್ಪು ಬಣ್ಣದ ಚಿಹ್ನೆ ಮಾತ್ರೆಗಳನ್ನು ಕೈತುಂಬ ತೆಗೆದುಕೊಂಡು ಒಂದೊಂದಾಗಿ ಎಣಿಸುತ್ತ ಕಾಗದದಲ್ಲಿ ಹಾಕಿ ಪೊಟ್ಟಣ ಕಟ್ಟಿಕೊಡುತ್ತಿದ್ದ ಆಣ್ಣಿನಾಯ್ಕರ ಚಿತ್ರಣ ಈಗಲೂ ನನಗೆ ಕಣ್ಮುಂದೆ ಬರುತ್ತದೆ. ನಮ್ಮೂರಿನಿಂದ ಮದುವೆಯಾಗಿ ದೂರದೂರದ ಊರುಗಳಲ್ಲಿದ್ದ ಅಕ್ಕಂದಿರಿಗೆ, ಅಣ್ಣಂದಿರಿಗೆ ಅವರವರ ಮಕ್ಕಳ ಉಪಯೋಗಕ್ಕಾಗಿ ಚಿಹ್ನೆ ಮಾತ್ರೆಗಳನ್ನು ಅಂಚೆ ಲಕೋಟೆಯಲ್ಲಿಟ್ಟು ಕಳುಹಿಸು ತ್ತಿದ್ದ ನೆನಪು ಕೂಡ ಇನ್ನೂ ಹಸುರಾಗಿಯೇ ಇದೆ.

ನಾಗರಿಕತೆ ಕಾಲಿಟ್ಟಿರುವ ಹಳ್ಳಿಗಳಲ್ಲಿ ಚಿಕ್ಕ ಮಕ್ಕಳಿಗೆ ಕ್ಯಾಲ್ಸಿಯಂ ಸ್ಯಾಂಡೋಜ್ ಮಾತ್ರೆಗಳನ್ನೂ ದಿನಕ್ಕೊಂದ
ರಂತೆ ಜಗಿಯಲು ಕೊಡುವ ಕ್ರಮವಿತ್ತು. ಸ್ಯಾಂಡೋಜ್ ಮಾತ್ರೆ ಗಳು ಮಕ್ಕಳಿಗೆ ಇಷ್ಟವಾಗಲೆಂಬ ಕಾರಣಕ್ಕಿರ ಬಹುದು, ಅದರ ಡಬ್ಬಿಯು ಒಂದು ಬಿಳಿ ಗೊಂಬೆ ಅಥವಾ ಆಟಿಕೆಯಂತೆ ಇರುತ್ತಿದ್ದುದು ನನಗೆ ನೆನಪಿದೆ. ಮಾತ್ರೆಗಳ ವಿಷಯದಲ್ಲಿ ಕಾಲಚಕ್ರದ ಕರಾಮತ್ತು ಹೇಗಿರುತ್ತದೆ ನೋಡಿ- ಮಕ್ಕಳ ಆರೋಗ್ಯದ ಕಾಳಜಿಯಿಂದ ಹಿರಿಯರು ನಿಯತವಾಗಿ ಮಾತ್ರೆಗಳನ್ನು ಮಕ್ಕಳಿಗೆ ತಿನ್ನಿಸಿದಂತೆಯೇ, ಮುಂದೆ ಆ ಮಕ್ಕಳು ದೊಡ್ಡವರಾದ ಮೇಲೆ ಅಜ್ಜ-ಅಜ್ಜಿಯಂದಿರಿಗೆ, ಅಷ್ಟೇಕೆ ತಂದೆ-ತಾಯಿಗಳಿಗೂ, ವೇಳೆಗೆ ಸರಿಯಾಗಿ ಮಾತ್ರೆ ಕೊಡಿಸುವಂಥ ವರಾಗುತ್ತಾರೆ.

ಅಜ್ಜನಿಗೆ ಊಟದ ಬಳಿಕ ಮಾತ್ರೆ, ಜತೆಗೆ ಬಿಸಿನೀರಿನ ಲೋಟ ತಂದುಕೊಡುವ ಜಾಣ ಮೊಮ್ಮಕ್ಕಳ ಚಿತ್ರಣ ಸಿಗ ಬೇಕಾದರೆ ನೀವು ಯಾವುದಾದರೂ ಅವಿಭಕ್ತ ಕುಟುಂಬಕ್ಕೆ ಭೇಟಿ ಕೊಡಬೇಕು. ಅಲ್ಲಿ ಯಃಕಶ್ಚಿತ್ ಮಾತ್ರೆಯಲ್ಲೂ, ಮಾತ್ರೆ ಸೇವಿಸುವ ಪ್ರಕ್ರಿಯೆಯಲ್ಲೂ, ಪ್ರೀತಿಮಮತೆಗಳು ತುಂಬಿತುಳುಕುವುದು ನಿಮಗೆ ಗೋಚರಿಸುತ್ತದೆ.

ಪುರಾತನ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಮಾತ್ರೆಗಳ ಹೆಸರುಗಳೇ ಬಹಳ ಚಂದವಾಗಿರುತ್ತವೆ. ಧನ್ವಂತರಿ, ಕಸ್ತೂರಿ, ಆಮೋದಿನಿ, ಚಂದ್ರಪ್ರಭ, ಸೂರ್ಯಪ್ರಭ, ಮಾನಸಾಮೃತ, ನವಾಯಾಸ, ಸ್ವರ್ಣಾನಂದ… ಹೀಗೆ ವಿಶೇಷ ಆಕರ್ಷಕ ಹೆಸರುಗಳು ನಿಮಗೂ ಕೇಳಿಗೊತ್ತಿರಬಹುದು. ಅವುಗಳ ಪೈಕಿ ಕಸ್ತೂರಿಮಾತ್ರೆ ಎಂದರೆ ಬಡವರ ಸಂಜೀ ವಿನಿ. ಹೊಟ್ಟೆನೋವು, ಹಲ್ಲುನೋವು, ಕಿವಿನೋವು, ಕೀಲುನೋವು ಆ ನೋವು ಈ ನೋವು ಎಲ್ಲದಕ್ಕೂ ರಾಮಬಾಣ. ಅದನ್ನು ವೈದ್ಯರಿಂದ ಅಥವಾ ಔಷಧದಂಗಡಿಯಿಂದಲೇ ಕೊಳ್ಳಬೇಕೆಂದೇನಿಲ್ಲ. ಅಳಲೆಪಂಡಿ
ತರು ಬಸ್‌ಸ್ಟ್ಯಾಂಡ್‌ಗಳಲ್ಲಿ ಪ್ರಯಾಣಿಕರಿಗೆ ಕಸ್ತೂರಿಮಾತ್ರೆ ಮತ್ತು ಬಣ್ಣಬಣ್ಣದ ಔಷಽಗಳ ಶೀಶೆಗಳನ್ನು ಮಾರುವ
ದೃಶ್ಯವನ್ನು ನಾವೆಲ್ಲ ಕಂಡವರೇ. ಇಲ್ಲಿ ವಿಷಯಾಂತರ ಅಂತ ನೀವು ಅಂದುಕೊಳ್ಳದಿದ್ದರೆ, ಮತ್ತು ವಾಕರಿಕೆ (ವ್ಯಾಕ್-ಕರಿಕೆ) ವ್ಯಕ್ತಪಡಿಸುವುದಿಲ್ಲವಾದರೆ ಇದನ್ನೂ ಉಲ್ಲೇಖಿಸುತ್ತೇನೆ: ಮೂಗು ಅಗೆಯುವ ಚಟವುಳ್ಳವರು ತಮ್ಮ ಗಣಿಗಾರಿಕೆಯ ಉತ್ಪನ್ನವನ್ನು ಗೋಲಾಕಾರವಾಗಿ ಮಾಡಿ ಬಿಸಾಡುವುದು, ಅದನ್ನೂ ಕಸ್ತೂರಿಮಾತ್ರೆ ಎಂದೇ ಕರೆಯುವುದು ಪರಿಪಾಠ.

ಇರಲಿ ವಿಷಯಾಂತರವನ್ನು ಇಲ್ಲಿಗೇ ಬಿಟ್ಟುಬಿಡೋಣ. ಆಯುರ್ವೇದದ ಮಾತ್ರೆಗಳಿಗೆ ಸುಸಂಸ್ಕೃತ ಹೆಸರುಗಳಿ ದ್ದಂತೆ ಅಲೋಪತಿ ಮಾತ್ರೆಗಳ ಹೆಸರುಗಳದೂ ಒಂದು ವೈಶಿಷ್ಟ್ಯವಿದೆ. ನೀವು ಇದನ್ನು ಗಮನಿಸಿದ್ದೀರೋ ಇಲ್ಲವೋ, ನಮಗೆಲ್ಲ ಚಿರಪರಿಚಿತವಿರುವ ಕೆಲವು ಮಾತ್ರೆಗಳ ಹೆಸರುಗಳನ್ನು ನೋಡಿ: ಆಸ್ಪಿರಿನ್, ಅನಾಸಿನ್, ಕೋಲ್ಡರಿನ್, ನೊವಾಲ್ಜಿನ್, ಬ್ರುಫಿನ್, ಕ್ಲೊರೊಕ್ವಿನ್, ಸಾರಿಡಾನ್, ಒವಮಿನ್… ಎಲ್ಲವೂ ‘ನ್’ ಎಂದು ಕೊನೆ ಗೊಳ್ಳುತ್ತವೆ. ನನ್ನದೊಂದು ತರಲೆ ತರ್ಕದ ಪ್ರಕಾರ ಈ ಮಾತ್ರೆಗಳ ಪೂರ್ವಜರು ಬಹುಶಃ ತಮಿಳುನಾಡಿ ನಲ್ಲೋ ಕೇರಳದಲ್ಲೋ ಹುಟ್ಟಿದ್ದಿರಬೇಕು.

ಅದಕ್ಕೇ ಇಳಂಗೋವನ್, ವೇಲಾ ಯುಧನ್, ನೆಡುಮಾರನ್ ಇತ್ಯಾದಿ ಹೆಸರುಗಳನ್ನು ಹೋಲುತ್ತವೆ. ಇನ್ನೂ ಸ್ವಲ್ಪ ಸ್ಟ್ರಾಂಗ್ ಮಾತ್ರೆಗಳಾದರೆ ವೀರಪ್ಪನ್, ಪ್ರಭಾಕರನ್ ಎಂದು ಹೆಸರಿಡಬಹುದೇನೋ. 1990ರ ದಶಕದಲ್ಲಿ ನಾನು ಉದ್ಯೋಗಕ್ಕಾಗಿ ಸಿಕಂದರಾಬಾದ್‌ನಲ್ಲಿದ್ದಾಗ ಅಲ್ಲಿ ನನ್ನೊಬ್ಬ ಸ್ನೇಹಿತನಿದ್ದ ಭಾಸ್ಕರನ್ ಎಂಬ ಹೆಸರಿನವನು. ಆತ ತಿರುಚಿರಾಪಳ್ಳಿ ಮೂಲದ ತಮಿಳಿಗ. ಭಾರತೀಯ ಬಾಹ್ಯಾಕಾಶ ವಿಭಾಗದ ಅಂಗಸಂಸ್ಥೆಯಾದ ‘ಎಡ್ರಿನ್’ (ಅbqZಛಿb ಈZಠಿZ ಛಿoಛಿZe ಐoಠಿಜಿಠ್ಠಿಠಿಛಿ) ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಅವನಿಗೆ ನಾನು ‘ಏನಯ್ಯಾ ನಿನ್ನ ಹೆಸರೂ ನಿನ್ನ ಕಂಪನಿಯ ಹೆಸರೂ ಒಳ್ಳೇ ಮಾತ್ರೆಗಳ ಹೆಸರಿನಂತಿವೆಯಲ್ಲ!’ ಎಂದು ತಮಾಷೆ ಮಾಡುತ್ತಿದ್ದೆ.

ಮಾತ್ರೆಗಳ ಬಗ್ಗೆ, ನಿಖರವಾಗಿ ಹೇಳುವುದಾದರೆ ಮಾತ್ರೆ ಎಂಬ ಪದದ ಬಗ್ಗೆಯೇ ಇನ್ನೂ ಒಂದು ಸ್ವಾರಸ್ಯಕರ ಅಂಶ ವನ್ನು ನಾವಿಲ್ಲಿ ಗಮನಿಸಬೇಕು. ಅದೇನೆಂದರೆ, ಕನ್ನಡದಲ್ಲಿ ನಾವು ಮಾತ್ರೆ ಎಂಬ ಪದವನ್ನು ಔಷಧಿಯ ವಿಚಾರ ದಲ್ಲಿ ಇಷ್ಟೊಂದು ವ್ಯಾಪಕವಾಗಿ ಬಳಸುತ್ತೇವಷ್ಟೆ, ಮೂಲ ಸಂಸ್ಕೃತದಲ್ಲಿ ‘ಮಾತ್ರಾ’ ಎಂಬ ಪದಕ್ಕೂ ಔಷಧಕ್ಕೂ ಸಂಬಂಧವೇ ಇಲ್ಲ! ಸಂಸ್ಕೃತದಲ್ಲಿ ಮಾತ್ರಾ ಪದಕ್ಕಿರುವ ಹತ್ತಿಪ್ಪತ್ತಕ್ಕಿಂತಲೂ ಹೆಚ್ಚಿನ ಅರ್ಥಗಳನ್ನು
ಬೇಕಿದ್ದರೆ ಒಮ್ಮೆ ನೋಡಿ: ಉಪಕರಣ, ಸಾಧನ, ಐಶ್ವರ್ಯ, ಸಂಪತ್ತು, ಅಂಶ, ಭಾಗ, ಅಕ್ಷರದ ಅವಯವ, ಅಕ್ಷರ ವನ್ನು ಉಚ್ಚರಿಸುವ ಕಾಲ, ಹ್ರಸ್ವ ವರ್ಣವನ್ನು ಉಚ್ಚರಿಸಲು ಬೇಕಾಗುವ ಕಾಲ, ಎಣಿಕೆ, ಪರಿಗಣನೆ, ಕಾಲ, ಉದ್ದ-ಅಗಲ-ಎತ್ತರ ಇತ್ಯಾದಿ ಮಾನ ಅಥವಾ ಅಳತೆ, ಸಂಗೀತಶಾಸ್ತ್ರದಲ್ಲಿ ಕಾಲದ ಅಳತೆ, ಪ್ರಗತಿ, ಅಭಿವೃದ್ಧಿ, ಮುನ್ನಡೆ, ಒಡವೆ, ಆಭರಣ (ವಿಶೇಷವಾಗಿ ಕರ್ಣಾಭರಣ), ಶಬ್ದಾದಿ ಇಂದ್ರಿಯವಿಷಯಗಳು, ಇಂದ್ರಿಯ, ಅವಯವ, ಅಂಗ ಮತ್ತು ರೂಪ.

ನನಗೂ ಇಷ್ಟೆಲ್ಲ ಗೊತ್ತಿರಲಿಲ್ಲ, ಈ ಲೇಖನಕ್ಕಾಗಿ ಪ್ರೊ.ಜಿ.ಎನ್.ಚಕ್ರವರ್ತಿಯವರ ಸಂಸ್ಕೃತ- ಕನ್ನಡ ನಿಘಂಟು ತೆರೆದು ನೋಡಿ ಬರೆದಿದ್ದೇನೆ. ಅಂದಹಾಗೆ ಇದರಲ್ಲಿ ಸಾಹಿತ್ಯ ಮತ್ತು ಸಂಗೀತದಲ್ಲಿ ಬರುವ ‘ಮಾತ್ರೆ’ಗಳು ನಮಗೆ ಪರಿಚಿತವೇ. ಈಗಿನ ಕಾಲದ ಕವಿಗಳೇನೋ ಮುಕ್ತ ಛಂದಸ್ಸಿನ ಪದ್ಯಗಳನ್ನೇ ಬರೆಯುವುದರಿಂದ ಮಾತ್ರೆಗಳ ಉಪ
ಯೋಗವಿಲ್ಲ ನಿಜ. ಆದರೆ ಶಾಲೆಯಲ್ಲಿ ಹಳಗನ್ನಡದ ಪದ್ಯಗಳನ್ನೋದುವಾಗ, ಶರ-ಕುಸುಮ ಭೋಗ-ಭಾಮಿನೀ
ಪರಿವಽನೀ-ವಾರ್ಧಕ ಷಟ್ಪದಿಗಳನ್ನು, ಶಾರ್ದೂಲ ವಿಕ್ರೀಡಿತ ಮತ್ತೇಭವಿಕ್ರೀಡಿತ ಸ್ರಗ್ಧರಾ ಮಂದಾಕ್ರಾಂತಾ ಇತ್ಯಾದಿ ವೃತ್ತಗಳನ್ನು ಸವಿಯುವಾಗ ಗುರು-ಲಘು ಮಾತ್ರೆಗಳಿಗೆ ಮನ್ನಣೆ ಕೊಡಲೇಬೇಕಿತ್ತು.

ಗುರುಲಘು ಮೂರಿರೆ ಮನ ಗಣ, ಗುರುಲಘು ಮೊದಲಲ್ಲಿ ಬರೆ ಭಯಗಣ… ಎಂದು ಪರೀಕ್ಷೆಯಲ್ಲಿ ಪ್ರಶ್ನೆಯ
ಭಯ ದಿಂದಾದರೂ ಕಂಠಪಾಠ ಮಾಡಲೇಬೇಕಿತ್ತು. ಇನ್ನು, ಸಾಹಿತ್ಯದಂತೆಯೇ ಸಂಗೀತದಲ್ಲೂ- ತಕಿಟ ತಕಧಿಮಿ ಎಂದು ತಾಳ ಹಾಕುತ್ತೇವಲ್ವಾ, ತಾಳದ ಅತಿ ಸಣ್ಣ ಯೂನಿಟ್ ಎಂದರೆ ಒಂದು ಮಾತ್ರಾ ಕಾಲ. ತಾಳವಾದ್ಯಗಳಲ್ಲಿ ಹೊಸಹೊಸ ಪ್ರಯೋಗ ಮಾಡುವವರು ಅರ್ಧ, ಮುಕ್ಕಾಲು, ಮೂರನೇ ಒಂದು ಮಾತ್ರಾ ಕಾಲದಷ್ಟು ನಿಖರತೆಯ ತಾಳಗಳನ್ನು ಸೃಷ್ಟಿಸಿದ್ದಾರಂತೆ.

ಇರಲಿ, ಸಾಹಿತ್ಯ-ಸಂಗೀತಗಳ ಗಂಧಗಾಳಿ ಇಲ್ಲದವರಿಗೆ ಮಾತ್ರೆ ಅಂದರೆ ಔಷಧದ ರೂಪವೇ. ಹಾಗಿದ್ದರೆ ಮಾತ್ರೆಗೆ ಅಚ್ಚಕನ್ನಡದ ಪದ ಯಾವುದು? ‘ಗುಳಿಗೆ’. ಇದು ಕೂಡ ಬಂದಿರುವುದು ಸಂಸ್ಕೃತದ ‘ಗುಟಿಕಾ’ ಅಥವಾ ‘ಗುಲಿಕಾ’ ದಿಂದಲೇ. ಗೋಲಾಕಾರದ್ದು, ಸಣ್ಣ ಗಾತ್ರದ್ದು ಆದ್ದರಿಂದ ಗುಲಿಕಾ. ಹಿಂದಿಯಲ್ಲಾದರೆ ಗೋಲಿ (ವಿಕ್ಸ್ ಕೀ ಗೋಲಿ ಲೋ… ಖಿಚ್‌ಖಿಚ್ ದೂರ್ ಕರೋ). ಆಯುರ್ವೇದ ಮಾತ್ರೆಗಳು ಗೋಲಾಕಾರ ಆಗಿರುವುದರಿಂದ ಆ ಹೆಸರು
ಸರಿಹೋಗುತ್ತದೆ.

ಹೋಮಿಯೊಪತಿಯಲ್ಲೂ ಅಷ್ಟೇ, ಯಾವುದೇ ಕಾಯಿಲೆಯಾದರೂ ಎಲ್ಲದಕ್ಕೂ ಒಂದೇ ರೀತಿ ಕಾಣುವ ಸಣ್ಣಸಣ್ಣ
ಬಿಳಿ ಮಣಿಗಳಂತೆ ಇರುವ ಮಾತ್ರೆಗಳು. ಅವುಗಳನ್ನೂ ಗೋಲಿ/ ಗುಳಿಗೆ ಎನ್ನಲಡ್ಡಿಯಿಲ್ಲ. ಆದರೆ ಅಲೋಪತಿ ಅಥವಾ ಇಂಗ್ಲಿಷ್ ಮೆಡಿಸಿನ್‌ನ ವಿಧವಿಧ ಆಕಾರಗಳ ವಿಧವಿಧ ಬಣ್ಣಗಳ ಮಾತ್ರೆಗಳನ್ನು ಗೋಲಿ ಎನ್ನುವುದು ಸರಿಯಲ್ಲವೇನೋ ಎಂದು ನನ್ನ ಅನಿಸಿಕೆ. ಚಪ್ಪಟೆಯಾಕಾರ, ಚೌಕಾಕಾರ ಇತ್ಯಾದಿ ಹೊಸಹೊಸ ನಮೂನೆಯ ಮಾತ್ರೆಗಳು ಬಂದ ಮೇಲೆ ಬಹುಶಃ ಇಂಗ್ಲಿಷ್ ನಲ್ಲೂ Pಜ್ಝ್ಝಿ ಬದಲು SZಚ್ಝಿಛಿಠಿ ಪದ ಬಂದಿದೆ. ಇನ್ನೂ ಮುಂದು ವರಿದು ಇZmoಛಿ ಬಂದಿದೆ. ಪದ ಯಾವುದೇ ಇದ್ದರೂ ಪದಾರ್ಥ ಮಾತ್ರ ಅದೇ- ಔಷಧದ ಸಾಂದ್ರ, ಘನೀಕೃತ, ಸಂಕ್ಷಿಪ್ತ ರೂಪ.

ಅಲಂಕಾರಿಕವಾಗಿ ಬಳಸುವಾಗ ‘ಗುಳಿಗೆ’ ಶಾರೀರಿಕ ಕಾಯಿಲೆಗಷ್ಟೇ ಔಷಧವಾಗಿರಬೇಕಿಲ್ಲ, ಸಮಾಜದ ಓರೆಕೋರೆ
ತಿದ್ದುವುದನ್ನು ಹೊಸ ಚಿಂತನೆಗಳ ಗುಳಿಗೆಗಳು ಮಾಡಬಹುದು. ಪತ್ರಿಕೆಗಳಲ್ಲಿ ಚಾಟಿಯೇಟಿನಂಥ ಚುರುಕಿನ ಬರಹಗಳಿಗೆ, ಬಿಸಿ ತಾಗಬೇಕಾದಲ್ಲಿಗೆ ಬಿಸಿ ಮುಟ್ಟಿಸುವ ಓದುಗರ ಓಲೆಗಳಿಗೆ ಹೆಸರು ವಾಸಿಯಾದ ಸನ್ಮಿತ್ರ ಎಚ್.ಆನಂದರಾಮ ಶಾಸ್ತ್ರಿಯವರು ಹಿಂದೊಮ್ಮೆ ಬ್ಲಾಗ್ ಬರೆಯುತ್ತಿದ್ದರು. ಅವರ ಬ್ಲಾಗ್‌ಗೆ ‘ಗುಳಿಗೆ’ ಎಂದೇ ಹೆಸರಿಟ್ಟಿದ್ದರು.

ಮದ್ದು, ಜೀವಸತ್ತ್ವ ಎಂದು ಅದ ಕ್ಕೊಂದು ಉಪಶೀರ್ಷಿಕೆ ಕೂಡ ಇತ್ತು. ಸಮಕಾಲೀನ ರಾಜಕೀಯ ಸಾಮಾಜಿಕ ವಿದ್ಯಮಾನಗಳಿಗೆ ತಕ್ಕುದಾಗಿ ಗುಳಿಗೆಗಳ ಸರಬರಾಜು ಮಾಡುತ್ತಿದ್ದರು. ಚುನಾವಣೆಗಳ ವೇಳೆ ಸ್ಪೆಷಲ್ ಆಗಿ ಚುನಾ
ವಣಾ-ಗುಳಿಗೆಗಳನ್ನು ಒದಗಿಸುತ್ತಿದ್ದರು. ‘ನಿಮ್ಮ ಗುಳಿಗೆಗಳು ಪೇನ್‌ಕಿಲ್ಲರ್ ಇದ್ದಂತೆ ಎಲ್ಲ ಮರೆಸಿ ನಗಿಸುತ್ತವೆ ಎಂದು
ಕೊಂಡಾಡುವ ಅಕ್ಷರರೋಗಿಗಳು ಆ ಬ್ಲಾಗ್‌ಗೆ ಬರುತ್ತಿದ್ದರು. ಕೊನೆಗೊಂದು ದಿನ ‘ಪತ್ರಿಕೆಯೊಂದು ಹಾಸ್ಯ, ವಿಡಂಬನೆ ಮತ್ತು ಶ್ಲೇಷೆ ಕೃಷಿಯ ಬಗ್ಗೆ ನನ್ನನ್ನು ಮರುಚಿಂತನೆಗೆ ಹಚ್ಚಿದೆ; ಆದ್ದರಿಂದ ನಾನಿಂದು ಗುಳಿಗೆಯಂಗಡಿ ಯನ್ನು ಮುಚ್ಚಿದೆ!’ ಎನ್ನುತ್ತ ಶಾಸ್ತ್ರಿಗಳು ಬ್ಲಾಗ್‌ನ ಬಾಗಿಲು ಹಾಕಿಬಿಟ್ಟರು.

ಈಗ ಕೊನೆಯಲ್ಲಿ ನಿಮಗೊಂದು ಜಾಣ್ಮೆಲೆಕ್ಕ. ಇದನ್ನು ಗುಳಿಗೆಗಳ ಲೆಕ್ಕ ಅನ್ನಿ ಅಥವಾ ಮಾತ್ರೆಗಳ ಲೆಕ್ಕ ಅನ್ನಿ. ಯಾವುದೂ ಆಗುತ್ತದೆ. ಇಂಗ್ಲಿಷ್ ಮತ್ತು ಹಿಂದಿ ಬಳಸಿ ಪನ್ ಮಾಡಬಹುದಾದರೆ- ಇದು ಪಿಲ್ಸ್‌ಬರಿ ಆಟ್ಟಾ ಅಲ್ಲ; ಬರೀ ಪಿಲ್ಸ್ ಆಟ ಅನ್ನಿ. ಪ್ರಶ್ನೆ ಹೀಗಿದೆ: ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಅತ್ಯಂತ ಆರೋಗ್ಯವಂತರಾದ ನಿಮಗೆ ಇನ್ನ್ಯಾವುದೋ ಹೊಸ ಕಾಯಿಲೆ ಬಾರದಂತೆ ಮುಂಜಾಗ್ರತೆಗೆಂದು ಮಾತ್ರೆ ನುಂಗಬೇಕಾದ ಪರಿಸ್ಥಿತಿ ಬಂತು ಅಂತಿರಲಿ (ಈ ಲೆಕ್ಕಕ್ಕೋಸ್ಕರ ಮಾತ್ರ).

ರಾತ್ರಿ ಊಟದ ನಂತರ ಮಲಗುವ ಮುನ್ನ ಎ-ವಿಟಮಿನ್ ಎಂಬ ಒಂದು ಮಾತ್ರೆ ಮತ್ತು ಬಿ-ವಿಟಮಿನ್ ಎಂಬ ಇನ್ನೊಂದು ಮಾತ್ರೆ ಇವೆರಡನ್ನೂ ಒಟ್ಟೊಟ್ಟಿಗೇ ತೆಗೆದುಕೊಳ್ಳಬೇಕೆಂದು ನಿಮಗೆ ವೈದ್ಯರು ಶಿ-ರಸು ಮಾಡಿದ್ದಾರೆ. ಎರಡನ್ನೂ ಒಟ್ಟಿಗೇ ಸೇವಿಸಬೇಕು. ಎ-ವಿಟಮಿನ್ ಆಗಲಿ ಬಿ-ವಿಟಮಿನ್ ಆಗಲಿ ಒಂದು ದಿನಕ್ಕೆ ಒಂದಕ್ಕಿಂತ ಹೆಚ್ಚು ಸೇವಿಸಿದರೂ ತೊಂದರೆಯೇ. ಒಂದು ಇಲ್ಲದೆ ಇನ್ನೊಂದನ್ನು ಮಾತ್ರ ಸೇವಿಸಿದರೂ ತೊಂದರೆಯೇ. ಹೀಗಿರಲು ಒಮ್ಮೆ ರಾತ್ರಿ ಊಟವಾದ ಮೇಲೆ ನೀವು ಎ- ವಿಟಮಿನ್ ಬಾಟ್ಲಿಯಿಂದ ಒಂದು ಮಾತ್ರೆಯನ್ನೂ ಬಿ-ವಿಟಮಿನ್ ಬಾಟ್ಲಿಯಿಂದ ಇನ್ನೊಂದು ಮಾತ್ರೆಯನ್ನೂ ಅಂಗೈಗೆ ಹಾಕಿಕೊಳ್ಳಲು ಹೊರಟಿದ್ದೀರಿ.

ಎ-ವಿಟಮಿನ್ ಮಾತ್ರೆಯನ್ನು ಕೈಗೆ ಉದುರಿಸಿ ಬಾಟ್ಲಿಯನ್ನು ಯಥಾಸ್ಥಾನದಲ್ಲಿ ಇಟ್ಟಿದ್ದೀರಿ. ಹಾಗೆಯೇ ಬಿ-ವಿಟಮಿನ್ ಕೂಡ. ಆದರೆ ಅಚಾತುರ್ಯದಿಂದ ಏನಾಯ್ತೆಂದರೆ ಬಿ-ವಿಟಮಿನ್‌ನ ಎರಡು ಮಾತ್ರೆಗಳು ಅಂಗೈಗೆ ಬಂದಿವೆ. ಅಂದರೆ ಒಂದು ಎ-ವಿಟಮಿನ್ ಮಾತ್ರೆ, ಮತ್ತೆರಡು ಬಿ-ವಿಟಮಿನ್ ಮಾತ್ರೆಗಳು ಒಟ್ಟುಸೇರಿವೆ. ಬಣ್ಣ, ಆಕಾರ, ಗಾತ್ರ, ತೂಕ ಯಾವುದೇ ವಿಧದಲ್ಲೂ ಆ ಮಾತ್ರೆಗಳಲ್ಲಿ ಒಂಚೂರೂ ವ್ಯತ್ಯಾಸವಿಲ್ಲ. ಈಗ ನೀವೇನು ಮಾಡಬಲ್ಲಿರಿ? ಆ ಮಾತ್ರೆಗಳೋ ಅತ್ಯಂತ ದುಬಾರಿ. ವೇಸ್ಟ್ ಮಾಡುವಂತಿಲ್ಲ.

ಯಾವ ಮಾತ್ರೆ ಯಾವುದು ಅಂತ ಗೊತ್ತಿಲ್ಲವಾದ್ದರಿಂದ ಬಾಟ್ಲಿಗಳಿಗೆ ವಾಪಸ್ ಹಾಕುವಂತೆಯೂ ಇಲ್ಲ. ವೈದ್ಯರ
ಶಿ-ರಸಿನಂತೆ ಸರಿಯಾದ ಡೋಸ್ ನಿಮ್ಮ ಹೊಟ್ಟೆ ಸೇರಲೇಬೇಕು. ಅಂಥ ಪರಿಸ್ಥಿತಿಯಲ್ಲಿ ಕರಾರುವಾಕ್ಕಾಗಿ ಒಂದು ಎ-ವಿಟಮಿನ್ ಮತ್ತೊಂದು ಬಿ-ವಿಟಮಿನ್ ಮಾತ್ರೆ ನಿಮ್ಮ ಹೊಟ್ಟೆ ಸೇರುವಂತೆ, ಅಂಗೈಗೆ ಬಿದ್ದ ಮೂರು ಮಾತ್ರೆಗಳು ವೇಸ್ಟ್ ಆಗದಂತೆ ಹೇಗೆ ನಿಭಾಯಿಸುವಿರಿ? ನಿಮ್ಮ ಆರೋಗ್ಯದ ಪ್ರಶ್ನೆ, ನಿಮ್ಮ ಹಣಕಾಸಿನ ಪ್ರಶ್ನೆ, ನಿಮ್ಮ ಬುದ್ಧಿಶಕ್ತಿಯ ಪ್ರಶ್ನೆಯೂ ಹೌದು.

ನಿಮ್ಮ ಉತ್ತರವೇನು, ಎಷ್ಟು ಮಾತ್ರೆಗಳ ಕಾಲದಲ್ಲಿ ಕಂಡುಕೊಂಡು ಬರೆದು ತಿಳಿಸುತ್ತೀರಿ, ನೋಡೋಣ! ಸುಳಿವು ಬೇಕಿದ್ದರೆ: ಅರ್ಧ ಮಾಡಲಿಕ್ಕಾಗುವಂತೆ ಸಾಮಾನ್ಯವಾಗಿ ಮಾತ್ರೆಗಳ ಮೇಲ್ಮೈಗೆ ಅಚ್ಚು ಹಾಕಿದ್ದಿರುತ್ತದಲ್ಲ ಈ ಮಾತ್ರೆಗಳಿಗೂ ಅಂಥ ಅಚ್ಚು ಇದೆಯೆಂದು ನಿಮಗೆ ಗೊತ್ತಿರಲಿ. ಈಗ ಆಲೋಚಿಸಿ ಉತ್ತರಿಸಿ.

ಇದನ್ನೂ ಓದಿ: Srivathsajoshi Column: ಸೆಲೆಬ್ರಿಟಿಗಳ ಸರಳತನ, ಸಜ್ಜನಿಕೆ ಅರಿವಾದಾಗಿನ ಆನಂದ