Sunday, 27th October 2024

Vinayak B Amblihond Column: ಶಾಸ್ತ್ರ ಮತ್ತು ಶಿಷ್ಟಾಚಾರಗಳಲ್ಲಿ ಅಂತರವಿರುತ್ತದೆ

ವಿದ್ಯಮಾನ

ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ

ಶಾಸ್ತ್ರ ಬೇರೆ, ಶಿಷ್ಟಾಚಾರ ಬೇರೆ. ಶಾಸ್ತ್ರವೆಂದರೆ, ಕಾನೂನಿನಂತೆ ವಿಧಿ ನಿಷಿದ್ಧಗಳಿಂದ ಕೂಡಿದ್ದು ಸಾರ್ವ ಕಾಲಿಕ ವಾಗಿರುತ್ತದೆ, ಸರ್ವಜನರಿಗೂ ಒಂದೇ ತೆರನಾಗಿರುತ್ತದೆ. ಆದರೆ ಶಿಷ್ಟಾಚಾರ ಹಾಗಲ್ಲ, ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ವ್ಯಕ್ತಿಗಳಿಗೆ ಅದು ಬೇರೆಯೇ ಆಗಬಹುದಾಗಿದೆ. ಹಾಗಾಗಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದಾದರೆ, ಶಿಷ್ಟಾಚಾರದ ಉಲ್ಲಂಘನೆ ತಪ್ಪಲ್ಲ .

ಕಳೆದ ವಾರ ದೇಶದ ಬೌದ್ಧಿಕ ವಲಯದಲ್ಲಿ ಕಂಪನ ಉಂಟುಮಾಡಿದ ೨ ವಿಶಿಷ್ಟ ಘಟನೆಗಳು ಸದ್ದಿಲ್ಲದೆ ನಡೆದು ಹೋದವು. ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಚಂದ್ರಚೂಡ್ ಅವರ ಆಮಂತ್ರಣದ ಮೇರೆಗೆ ಅವರ ನಿವಾಸಕ್ಕೆ ತೆರಳಿದ ಪ್ರಧಾನಿ ಮೋದಿಯವರು ಗಣಪತಿ ಪೂಜೆಯಲ್ಲಿ ಪಾಲ್ಗೊಂಡು, ಅವರ ಕುಟುಂಬದ ಆತಿಥ್ಯ ಸ್ವೀಕರಿಸಿದ್ದು ಮೊದಲನೆಯದು; ಸೆಪ್ಟೆಂಬರ್ ೮ರಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಚಿಂತನ ಸಮಾವೇಶದಲ್ಲಿ ಸುಪ್ರೀಂ ಕೋರ್ಟಿನ ಇಬ್ಬರು ಮಾಜಿ ನ್ಯಾಯಾಧೀಶರಾದ ನ್ಯಾ.ಆದರ್ಶ್ ಕುಮಾರ್ ಗೋಯೆಲ್ ಮತ್ತು ಹೇಮಂತ್ ಗುಪ್ತಾ ಸೇರಿದಂತೆ ಪ್ರಮುಖ 30 ನಿವೃತ್ತ ನ್ಯಾಯಾಽಶರು ಭಾಗಿಯಾಗಿದ್ದು ಎರಡನೆಯದು.

‘ಸಿಜೆಐ ಡಿ.ವೈ.ಚಂದ್ರಚೂಡ್ ಅವರ ನಿವಾಸದಲ್ಲಿ ನಡೆದ ಗಣೇಶ ಪೂಜೆಯಲ್ಲಿ ಭಾಗವಹಿಸಿದೆ; ಭಗವಾನ್ ಶ್ರೀ ಗಣೇಶನು ನಮ್ಮೆಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಅದ್ಭುತ ಆರೋಗ್ಯವನ್ನಿತ್ತು ಆಶೀರ್ವದಿಸಲಿ’ ಎಂದು ಪ್ರಧಾನಿ ಮೋದಿಯವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ, ಚಂದ್ರಚೂಡ್ ದಂಪತಿಯ ಜತೆಗೆ ಗಣೇಶ ನನ್ನು ಪ್ರಾರ್ಥಿಸುತ್ತಿರುವ ಫೋಟೋವನ್ನು ಸಹ ಹಂಚಿಕೊಂಡು ಸುಮ್ಮನಾಗಿ ಬಿಟ್ಟಿದ್ದರು. ಆದರೆ ಈ ಸಚಿತ್ರ ಶುಭಾಶಯ ಸಮಾಜದ ವಿವಿಧ ವರ್ಗದ ಜನರ ಹುಬ್ಬೇರುವಂತೆ ಮಾಡಿಬಿಟ್ಟಿತು.

ಪಾಕಿಸ್ತಾನದ ಪ್ರಧಾನಿಯಾಗಿದ್ದವರ ಖಾಸಗಿ ಆಮಂತ್ರಣವನ್ನೇ ತಿರಸ್ಕರಿಸದ ಮೋದಿಯವರು, ಅಲ್ಲೇ 3 ಮಾರು ದೂರದ ಪಕ್ಕದ ರಸ್ತೆಯಲ್ಲಿರುವ ಸಿಜೆಐ ಕರೆದರೆ ಹೋಗದೇ ಇರಲುಂಟೇ? (ಅಫ್ಘಾನಿಸ್ತಾನದ ಪ್ರವಾಸದಲ್ಲಿದ್ದ ಮೋದಿಯವರು ತಿರುಗಿ ಬರುವಾಗ, ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫರ ಆತ್ಮೀಯ ಆಮಂತ್ರಣಕ್ಕೆ ಸ್ಪಂದಿಸಿ, ಭದ್ರತೆಯ ಶಿಷ್ಟಾಚಾರವನ್ನೂ ಬದಿಗೊತ್ತಿ, ತಮ್ಮ ನೆಂಟರ ಮನೆಗೆ ಹೋಗಿಬಂದ ಹಾಗೆ ಷರೀಫರ ಮನೆಗೆ ಹೋಗಿ ಬಂದಿದ್ದರು).

ಯಾರೂ ಮಾಡದಿರುವ ಕೆಲಸವನ್ನು ಮಾಡುವುದರಿಂದಲೇ ಅವರು ‘ನರೇಂದ್ರ ಮೋದಿ’ ಎಂದು ಕರೆಸಿಕೊಳ್ಳುವುದು ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಯಿತು. ನ್ಯಾಯಾಂಗ ಮತ್ತು ಶಾಸಕಾಂಗದ ಮುಖ್ಯಸ್ಥರಿಬ್ಬರ ಈ ಖಾಸಗಿ ಭೇಟಿಯು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಮತ್ತು ಅನೇಕ ಸಂಶಯಗಳಿಗೆ ಆಸ್ಪದ ನೀಡಿ ಸಮಾಜಕ್ಕೆ
ತಪ್ಪು ಸಂದೇಶವನ್ನು ಕೊಡುತ್ತದೆ ಎಂಬ ಅಭಿಪ್ರಾಯ ಕೆಲವು ವಲಯಗಳಿಂದ ವ್ಯಕ್ತವಾಯಿತು. ಇನ್ನು,
‘ಚಂದ್ರ ಚೂಡ್ ಅವರು ತಮ್ಮ ಮನೆಯ ಗಣೇಶ ಪೂಜೆಗೆ ಮೋದಿಯವರನ್ನಷ್ಟೇ ಆಮಂತ್ರಿಸಿದ್ದೇಕೆ? ರಾಹುಲ್
ಗಾಂಧಿ ಸೇರಿದಂತೆ ಇತರ ನಾಯಕರನ್ನೂ ಆಮಂತ್ರಿಸಬಹುದಿತ್ತಲ್ಲಾ!’ ಎನ್ನುವುದು ಕಾಂಗ್ರೆಸ್ಸಿನವರ ಬೇಗುದಿ.

ಅದಕ್ಕೆ, ‘ಭಾರತದ ಪ್ರಧಾನಿಯಾಗಿದ್ದವರೊಬ್ಬರು ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯ
ಮೂರ್ತಿಗಳ ನಿವಾಸಕ್ಕೆ ತೆರಳಿದ ಘಟನೆ ಇದೇ ಮೊದಲು ಇರಬಹುದು; ಆದರೆ ಪ್ರಧಾನಿಯಾದವರು ಮುಖ್ಯ
ನ್ಯಾಯಮೂರ್ತಿಗಳ ಆಮಂತ್ರಣವನ್ನು ಗೌರವಿಸಿ ಅಲ್ಲಿಗೆ ಹೋಗಬಾರದು ಎಂದು ಯಾವುದೇ ಕಾನೂನಿಲ್ಲವಲ್ಲಾ’
ಎನ್ನುವುದು ಬಿಜೆಪಿಗರ ಸಮರ್ಥನೆ. ‘ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು, ಕೇಂದ್ರ ಸರಕಾರವನ್ನು ಒಳಗೊಂಡಿರುವ ವಿವಿಧ ಪ್ರಕರಣಗಳ ವಿಚಾರಣೆ ನಡೆಸುತ್ತಿರುವಾಗ, ಮುಖ್ಯ ನ್ಯಾಯಮೂರ್ತಿ ಅಥವಾ ಇತರ ನ್ಯಾಯಾಧೀಶರ ಖಾಸಗಿ ಸಮಾರಂಭಗಳಿಗೆ ದೇಶದ ಪ್ರಧಾನಿ ಹಾಜರಾಗುವುದು ನೈತಿಕವಾಗಿ ಸೂಕ್ತವಲ್ಲ.

ಇದು ಖಂಡಿತವಾಗಿಯೂ ಸಾರ್ವಜನಿಕರಿಗೆ ಮತ್ತು ನ್ಯಾಯಾಂಗ ವಲಯಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಪ್ರಮುಖ ಸಾಂವಿಧಾನಿಕ ಹುದ್ದೆಯಲ್ಲಿರುವ ಈ ಇಬ್ಬರ ಗಣೇಶ ಪೂಜೆ ಪ್ರಸಂಗವು, ನ್ಯಾಯಾಂಗದಲ್ಲಿ ಧರ್ಮವನ್ನು ತುಂಬಲಾಗುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಲು ಅವಕಾಶ ಮಾಡಿಕೊಡುತ್ತದೆ’ ಎಂಬುದು ಹಿರಿಯ ನ್ಯಾಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತೆ ಇಂದಿರಾ ಜೈಸಿಂಗ್ ಅವರ ಖಡಕ್ ಅಭಿಪ್ರಾಯ. ಚಂದ್ರಚೂಡ್ ಅವರು ಈ ವರ್ಷಾರಂಭದಲ್ಲಿ ದ್ವಾರಕಾಧೀಶ ದೇವಾಲಯಕ್ಕೆ ಭೇಟಿ ನೀಡಿದ್ದನ್ನೂ ಅವರು ಉಲ್ಲೇಖಿಸಿ, ‘ಸಿಜೆಐ ಹೀಗೆ ಸಾರ್ವಜನಿಕವಾಗಿ ಧಾರ್ಮಿಕ ನಿಲುವನ್ನು ಪ್ರದರ್ಶಿಸುತ್ತಿರುವುದುದೇ ಮೊದಲಲ್ಲ; ಅವರು ಪದೇಪದೆ ಹಿಂದೂ ಆಚರಣೆಗಳು ಮತ್ತು ಚಿಹ್ನೆಗಳನ್ನು ಪ್ರದರ್ಶಿಸುತ್ತಿರುವಾಗ, ಹಿಂದೂಯೇತರ ಕಕ್ಷಿದಾರರು ಅವರಿಂದ ನಿಷ್ಪಕ್ಷಪಾತ ನ್ಯಾಯವನ್ನು ನಿರೀಕ್ಷಿಸಬಹುದೇ!’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿಯವರು ಸಿಜೆಐ ನಿವಾಸಕ್ಕೆ ಭೇಟಿಯಿತ್ತ ಘಟನೆಯ ಜತೆಗೆ, ವಿಎಚ್‌ಪಿ ಆಯೋಜಿಸಿದ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಕೇಂದ್ರ ಕಾನೂನು ಸಚಿವರು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟಿನ ಸುಮಾರು ೩೦ ನಿವೃತ್ತ ನ್ಯಾಯಾಽಶರುಗಳು ದೇಶಾದ್ಯಂತದ ರಾಜಕಾರಣಿಗಳು, ಬುದ್ಧಿಜೀವಿಗಳು ಮತ್ತು ಹಿರಿಯ ವಕೀಲರುಗಳ ಟೀಕೆಗೆ ಗುರಿಯಾದರು. ಸಿಜೆಐ ನಿವಾಸದಲ್ಲಿನ ಪ್ರಧಾನಿ ಮೋದಿಯವರ ಉಪಸ್ಥಿತಿ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾದರೆ, ವಿಎಚ್‌ಪಿಯ ಸಭೆಯಲ್ಲಿನ ನಿವೃತ್ತ ನ್ಯಾಯಾಧೀಶರುಗಳ ಹಾಜರಾತಿಯು ಹೆಚ್ಚಿನ ಗಮನವನ್ನು ಸೆಳೆಯಲಿಲ್ಲವಷ್ಟೇ.

ಧಾರ್ಮಿಕ ಮತಾಂತರ ಗಳ ಕುರಿತು ಮತ್ತು ಮೂಲತಃ ದೇವಾಲಯಗಳಾಗಿದ್ದವು ಎಂದು ಹಿಂದೂ ಸಮಾಜ ಹೇಳಿಕೊಳ್ಳುವ ವಾರಾಣಸಿಯ ಜ್ಞಾನವಾಪಿ ಮತ್ತು ಮಥುರಾದ ಮಸೀದಿಗಳ ಬಗ್ಗೆ ಕಾನೂನು ಹೋರಾಟದ ರೂಪುರೇಷೆಯನ್ನು ಅಖೈರು ಗೊಳಿಸಲು, ವಕ್ಫ್ ಕಾನೂನಿಗೆ ಬದಲಾವಣೆ ತರುವ ವಿಷಯವನ್ನು ಚರ್ಚಿಸಲು ವಿಎಚ್‌ಪಿ ಈ ಸಮಾರಂಭವನ್ನು ಆಯೋಜಿಸಿತ್ತು. ಹಾಗಾಗಿ ಈ ಕಾರ್ಯ ಕ್ರಮದಲ್ಲಿನ ನಿವೃತ್ತ ನ್ಯಾಯಾಧೀಶರುಗಳ ಹಾಜರಾತಿ ಹಲವರ ಕಣ್ಣುಗಳನ್ನು ಕೆಂಪಾಗಿಸಿತು.

ಪ್ರಸ್ತುತ ಈ ಎರಡೂ ಮಸೀದಿಗಳು ಹಿಂದೂ ಸಮಾಜದಿಂದ ಮೊಕದ್ದಮೆಯನ್ನು ಎದುರಿಸುತ್ತಿರುವುದು ನಮಗೆ ಗೊತ್ತಿರುವಂಥದ್ದೇ. ‘ಕಾನೂನುಬದ್ಧ ಸಮಾರಂಭಗಳಿಗೆ ಹಾಜರಾಗುವುದು ನಮ್ಮ ನಾಗರಿಕ ಹಕ್ಕಾಗಿದೆ’ ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲ ನಿವೃತ್ತ ನ್ಯಾಯಾಧೀಶರು ಬಹಿರಂಗವಾಗಿಯೇ ಪ್ರತಿಕ್ರಿಯಿಸಿದರು.

ನ್ಯಾಯಾಂಗ ಸುಧಾರಣೆಗಳ ಕುರಿತಾಗಿ ವಿಎಚ್‌ಪಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ನ್ಯಾಯಾಧೀಶರು ಭಾಗವಹಿಸುವುದು ಸರಿ; ಆದರೆ, ದೇವಾಲಯಗಳು ಎಂದು ಹೇಳಿಕೊಳ್ಳುವ ಎರಡು ಮಸೀದಿಗಳ ಬಗೆಗಿನ ಕಾನೂನು ಹೋರಾಟದ ಬಗ್ಗೆ ಅಲ್ಲಿ ಚರ್ಚಿಸುವುದು ಆಕ್ಷೇಪಾರ್ಹವಾಗಿದೆ. ಕಾನೂನು ಸಚಿವರು ಮತ್ತು ಮಾಜಿ ನ್ಯಾಯಾಧೀಶ ರುಗಳು ಅಲ್ಲಿ ಉಪಸ್ಥಿತರಿರುವುದು ಸೂಕ್ತವಲ್ಲ’ ಎಂಬುದಾಗಿ ದೇಶದ ಕೆಲವು ಹಿರಿಯ ನ್ಯಾಯವಾದಿಗಳು ಅಭಿಪ್ರಾಯಪಟ್ಟರು.

ಈ ಎರಡೂ ಪ್ರಕರಣಗಳ ಸಾರಸಂಗ್ರಹ ಇಷ್ಟೇ- ಅದೆಂದರೆ, ರೂಢಿಯಲ್ಲಿರುವ ಶಿಷ್ಟಾಚಾರದ ಉಲ್ಲಂಘನೆ
ಯಾಗಿದೆ ಮತ್ತು ಈ ಎರಡೂ ಘಟನೆಗಳು ನ್ಯಾಯದಾನದ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಿ ತಪ್ಪುಸಂದೇಶ
ರವಾನೆಯಾಗಬಹುದು ಎಂಬುದು. ಹಾಗಂತ, ಸಾಂವಿಧಾನಿಕ ಹುದ್ದೆಯಲ್ಲಿದ್ದ ಅನೇಕ ಮಹಾನುಭಾವರುಗಳು ಸದ್ಭಾವನೆಯಿಂದ ಶಿಷ್ಟಾಚಾರದ ಮೇರೆ ಮೀರಿದ್ದು ಇದೇ ಮೊದಲೇನಲ್ಲ. ಸವೆಯದ ಹೊಸ ದಾರಿ ಯೊಂದನ್ನು ಸದಾ ಹುಡುಕುವ ಮೋದಿ, ಅಬ್ದುಲ್ ಕಲಾಂ ಮತ್ತು ವಾಜಪೇಯಿ ಅವರಂಥ ವಿಭಿನ್ನ ಚಿಂತನೆಯ ಅನೇಕ ನಾಯಕರನ್ನು ನಾವು ನೋಡಿದ್ದೇವೆ. ಹಾಗೆ ಶಿಷ್ಟಾಚಾರದಿಂದ ದೂರ ಸರಿದು ವರ್ತಿಸಿದ ನಾಯಕರ ಕೆಲವು ಉದಾಹರಣೆಗಳನ್ನು ನೋಡೋಣ. ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರು ಒಮ್ಮೆ
ಪ್ರವಾಸದಲ್ಲಿದ್ದಾಗ ಹಿರಿಯ ಪೀಠಾಧೀಪತಿಗಳೊಬ್ಬರ ಆಶ್ರಮಕ್ಕೆ ಹೋಗುವ ಸಂದರ್ಭ ಬಂದಿತ್ತು. ಆಗ ಶುದ್ಧ
ಭಾರತೀಯ ಪ್ರಜ್ಞೆಯನ್ನು ಮೆರೆದ ರಾಜೇಂದ್ರ ಪ್ರಸಾದರು, ಪೀಠಾಧಿಪತಿಗಳ ಚರಣಸ್ಪರ್ಶ ಮಾಡಿ
ಸಾಷ್ಟಾಂಗ ಪ್ರಣಾಮ ಮಾಡಿದ್ದರು.

ಈ ವಿಷಯ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರನ್ನು ತಲುಪಿತು. ಮುಂದೊಂದು ದಿನ ನೆಹರು ಅವರು ರಾಷ್ಟ್ರಪತಿಗಳನ್ನು ಭೇಟಿಯಾದಾಗ, ‘ನೀವು ಈ ಜಾತ್ಯತೀತ ದೇಶದ ಸರ್ವೋಚ್ಚ ಸ್ಥಾನದಲ್ಲಿದ್ದೀರಿ; ಹಿಂದೂ ಸಮಾಜದ ಯತಿಗಳೊಬ್ಬರ ಕಾಲಿಗೆ ನಮಸ್ಕರಿಸಿದ್ದು ಅನ್ಯಧರ್ಮೀಯರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಮತ್ತು ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗುತ್ತದೆ’ ಎಂದಾಗ ರಾಷ್ಟ್ರಪತಿಯವರು, ‘ನಾನು ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದು ನನಗೆ ತಿಳಿದಿದೆ; ನಾಳೆ ನಾನು ನನ್ನ ತಾಯಿಗೆ ನಮಸ್ಕಾರ ಮಾಡುವು ದನ್ನೂ ನೀವು ಶಿಷ್ಟಾಚಾರದ ಹೆಸರಿನಲ್ಲಿ ಪ್ರಶ್ನಿಸಬಹುದು’ ಎಂದು ಹೇಳಿ ನೆಹರುರನ್ನು ಸುಮ್ಮನಿರಿಸಿದ್ದರಂತೆ!

ನಮ್ಮ ಹೆಮ್ಮೆಯ ಅಬ್ದುಲ್ ಕಲಾಂ ಅವರು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಶಿಷ್ಟಾಚಾರದಿಂದ
ದೂರಸರಿದು ವರ್ತಿಸಿದ್ದಿದೆ. ರಾಷ್ಟ್ರಪತಿಗಳಾದ ಹೊಸತರಲ್ಲಿ ಅವರ ಉದ್ದನೆಯ ಮತ್ತು ಅವ್ಯವಸ್ಥಿತ ಕೂದಲು ಹಾಗೂ ಸರಳತನದ ಬಗ್ಗೆಯೂ ಶಿಷ್ಟಾಚಾರದ ಉಲ್ಲಂಘನೆಯ ಮಾತುಗಳು ಹೊಮ್ಮಿದ್ದಿದೆ. ಆಗಸ್ಟ್ ೧೫ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯಾವುದೇ ‘ಡ್ರೆಸ್ ಕೋಡ್’ ಅನ್ನು ಪಾಲಿಸಬೇಕಾದ ಅಗತ್ಯವಿಲ್ಲ ಎಂದು ನಿರ್ದೇಶಿಸಿದ್ದ ಅವರು, ತಮ್ಮ ಬೂಟುಗಳನ್ನು ಕಾರಿನಲ್ಲೇ ಕಳಚಿಟ್ಟು ಬರಿಗಾಲಿನಲ್ಲಿ ನಡೆದು ಸುದ್ದಿಯಾಗಿದ್ದರು. ಕಲಾಂ ಅವರು ಭದ್ರತಾ ವಲಯದಿಂದ ಮುಕ್ತರಾಗಿ ಮಕ್ಕಳೊಂದಿಗೆ ಕುಳಿತುಕೊಂಡ, ರಾಷ್ಟ್ರಪತಿ
ಭವನದ ಕಾವಲುಗಾರರೊಂದಿಗೆ ಸಾಮಾನ್ಯರಂತೆ ಹರಟೆ ಹೊಡೆದ ಸಂದರ್ಭಗಳೂ ಇವೆ.

ಯಾವುದೇ ಸರಕಾರವು ಮಾಜಿ ರಾಷ್ಟ್ರಪತಿಗಳ ಸೇವೆಯನ್ನು ಬಳಸಿಕೊಂಡಿರುವುದನ್ನು ನಾವು ಇಲ್ಲಿಯವರೆಗೆ ಕೇಳಿರಲಿಲ್ಲ ತಾನೆ? ಆದರೆ, ‘ಒಂದು ದೇಶ, ಒಂದು ಚುನಾವಣೆ’ಯ ಸಾಧ್ಯಾಸಾಧ್ಯತೆಗಳ ಕುರಿತು ಅಧ್ಯಯನ
ಮಾಡಿ ವರದಿ ಸಲ್ಲಿಸುವ ಕಾರ್ಯವನ್ನು ಇದೇ ಮೋದಿ ಸರಕಾರವು ರಾಮನಾಥ ಕೋವಿಂದರಿಗೆ ವಹಿಸಿ ಶಿಷ್ಟಾಚಾರ
ಮೀರಿರುವುದನ್ನು ನೆನಪಿಸಿಕೊಳ್ಳಬಹುದು. ಹಾಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಧೀಶರಾದ
ನ್ಯಾ.ಶ್ರೀಶಾನಂದ ಅವರು ತಮ್ಮ ಪೀಠದಲ್ಲಿ ಕುಳಿತು ಸುದೀರ್ಘವಾಗಿ ಪ್ರವಚನದ ಧಾಟಿಯಲ್ಲಿ ಧಾರ್ಮಿಕವಾಗಿ ಮಾತನಾಡಿರುವುದನ್ನೂ ನಾವು ನೋಡಿದ್ದೇವೆ.

ಶಾಸ್ತ್ರ ಬೇರೆ, ಶಿಷ್ಟಾಚಾರ ಬೇರೆ. ಶಾಸ್ತ್ರವೆಂದರೆ, ಕಾನೂನಿನಂತೆ ವಿಧಿ ನಿಷಿದ್ಧಗಳಿಂದ ಕೂಡಿರುತ್ತದೆ ಮತ್ತು ಅದು ಸಾರ್ವಕಾಲಿಕವಾಗಿದ್ದು ಸರ್ವಜನರಿಗೂ ಒಂದೇ ತೆರನಾಗಿರುತ್ತದೆ. ಆದರೆ ಶಿಷ್ಟಾಚಾರ ಹಾಗಲ್ಲ, ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ವ್ಯಕ್ತಿಗಳಿಗೆ ಅದು ಬೇರೆಯೇ ಆಗಬಹುದಾಗಿದೆ. ಹಾಗಾಗಿ, ‘ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವು ದಾದರೆ, ಶಿಷ್ಟಾಚಾರದ ಉಲ್ಲಂಘನೆ ತಪ್ಪಲ್ಲ’ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ.

ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಹಿರಿಯ ಸೇನಾಧಿಕಾರಿಗಳು ನಿವೃತ್ತರಾದ ಮೇಲೆ ತಮ್ಮಾಯ್ಕೆಯ ರಾಜಕೀಯ ಪಕ್ಷವನ್ನು ಸೇರಬಹುದು, ವೈದ್ಯರು ತಮಗೆ ಬೇಕಾದ ರಾಜಕೀಯ ನಿಲುವು ತಳೆಯಬಹುದು.

ಇನ್ನು ನ್ಯಾಯವಾದಿಗಳಂತೂ ನ್ಯಾಯಾಲಯದಲ್ಲಿ ಒಂದೇ ರಾಜಕೀಯ ಸಿದ್ಧಾಂತದ ಪರವಾಗಿ ನಿಲ್ಲಬಹುದು. ಮಂತ್ರಿ ಮಹೋದಯರುಗಳು ವಿವಿಧ ಧರ್ಮೀಯರನ್ನು ಓಲೈಸಲೆಂದು ಅವರ ವೇಷಭೂಷಣಗಳನ್ನು ಧರಿಸಿ
ಪೋಸ್ ಕೊಡಬಹುದು, ಆದರೆ ಪ್ರಧಾನಮಂತ್ರಿ ಮತ್ತು ಸಿಜೆಐ ಮಾತ್ರ ಜೀವನಪೂರ್ತಿ ಅನಗತ್ಯ ಹಾಗೂ ‘ಔಟ್
ಡೇಟೆಡ್’ ಶಿಷ್ಟಾಚಾರಗಳನ್ನು ಪಾಲಿಸುತ್ತಿರಬೇಕು ಎನ್ನುವುದು ಎಷ್ಟರಮಟ್ಟಿಗೆ ಸರಿ? ಮಾತ್ರವಲ್ಲ, ಪ್ರಧಾನಿ ಹಾಗೂ ಸಿಜೆಐ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡರೆ ಅದುಸಮಾಜಕ್ಕೆ ಜಾತ್ಯತೀತ ಸಂದೇಶವನ್ನು ರವಾನಿಸುತ್ತದೆ; ಅದೇ, ಗಣೇಶೋತ್ಸವದಲ್ಲಿ ಒಟ್ಟಿಗೆ ಸೇರಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದರೆ ಹೇಗೆ? ನ್ಯಾಯಮೂರ್ತಿ ಗಳು ದೇವಸ್ಥಾನಗಳಿಗೆ ಹೋದರೆ ಜಾತಿವಾದಿಗಳಾಗಿಬಿಡುತ್ತಾರೆ, ಅವರ ತೀರ್ಪು ಪ್ರಶ್ನಾರ್ಹವಾಗಿಬಿಡುತ್ತದೆ ಎಂದರೆ ಎಷ್ಟು ಸರಿ? ಆಡಳಿತ ಪಕ್ಷದ ಮಂತ್ರಿಗಳ ಮಗಳನ್ನು ವಿಪಕ್ಷದ ಹಿರಿಯ ನಾಯಕರ ಮಗನಿಗೆ ಕೊಟ್ಟು ಮದುವೆ ಮಾಡುವು ದನ್ನು ನಾವು ಸಾಕಷ್ಟು ಕಂಡಿದ್ದೇವೆ; ಹೀಗೆ, ಸೈದ್ಧಾಂತಿಕವಾಗಿ ವಿರುದ್ಧ ಮನಸ್ಥಿತಿಯವರು ನೆಂಟಸ್ತಿಕೆ ಮಾಡಿದಾಗ, ಅವರ ಕಾರ್ಯಕರ್ತರಿಗೆ ಏನು ಸಂದೇಶ ರವಾನೆಯಾಗುತ್ತದೆ ಹೇಳಿ? ಹಾಗಾಗಿ, ಪ್ರಮುಖ ಸಾಂವಿಧಾನಿಕ ಹುದ್ದೆಯಲ್ಲಿರುವವರ ವೈಯಕ್ತಿಕ ಹಕ್ಕುಗಳನ್ನು ಸಮಾಜ ಗೌರವಿಸಬೇಕಾಗುತ್ತದೆ.

ವಿಎಚ್‌ಪಿ ಆಯೋಜಿಸಿದ್ದ ಚಿಂತನ ಸಭೆಯಲ್ಲಿ ನಿವೃತ್ತ ನ್ಯಾಯಾಧೀಶರು ಪಾಲ್ಗೊಂಡ ಮಾತ್ರಕ್ಕೆ, ‘ಅದು ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಸಿಜೆಐ ನಿವಾಸಕ್ಕೆ
ಪ್ರಧಾನಿ ನೀಡಿದ ಭೇಟಿಯು ಸಿಜೆಐ ಮುಂದೆ ನೀಡಲಿರುವ ತೀರ್ಪುಗಳ ಮೇಲೆ ಪರಿಣಾಮ ಬೀರಬಹುದು’
ಎಂದು ಸಂಶಯಿಸುವ ಸ್ವಯಂಪ್ರಮಾಣಿತ ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳು ಆತ್ಮವಿಮರ್ಶೆ
ಮಾಡಿಕೊಳ್ಳುವುದು ಒಳಿತು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)