ನವದೆಹಲಿ: ಹಾಕಿ ಇಂಡಿಯಾ (ಎಚ್‌ಐ) ನೂತನ ಅಧ್ಯಕ್ಷರಾಗಿ ಮಣಿಪುರದ ಜ್ಞಾನೇಂದ್ರೊ ನಿಂಗೊಮ್ಬಾಮ್ ಆಯ್ಕೆಯಾಗಿದ್ದು, ಮೊಹಮ್ಮದ್ ಮುಷ್ತಾಕ್ ಅಹ್ಮದ್ ಅವರಿಂದ ಅಧಿಕಾರ ವಹಿಸಿಕೊಂಡರು.
ಹಾಕಿ ಇಂಡಿಯಾದ ಕಾಂಗ್ರೆಸ್ ಮತ್ತು ಚುನಾವಣೆಗಳಲ್ಲಿ ಹಿರಿಯ ಉಪಾಧ್ಯಕ್ಷ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದ ನಂತರ ಅಹ್ಮದ್ ಫೆಡರೇಶನ್‌ನಲ್ಲಿ ಉಳಿದಿದ್ದಾರೆ. ಅಹ್ಮದ್ ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಜುಲೈನಲ್ಲಿ ರಾಜೀನಾಮೆ ಸಲ್ಲಿಸಿದ್ದರು.
ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರ್ಕಾರಗಳು ವಿಧಿಸಿರುವ ನಿರ್ಬಂಧಗಳಿಂದಾಗಿ ಸದಸ್ಯ ಘಟಕಗಳಿಗೆ ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯದ ಮೂಲಕ ಸಭೆಗೆ ಪ್ರವೇಶ ಕಲ್ಪಿಸಲಾಗಿತ್ತು. ಈ ಸಮಯ ಅವಿರೋಧವಾಗಿ ಆಯ್ಕೆಯಾದ ಜ್ಞಾನೇಂದ್ರೊ ಈಶಾನ್ಯ ರಾಜ್ಯದಿಂದ ಈ ಹುದ್ದೆಗೆ ಆಯ್ಕೆಯಾದ ಮೊದಲಿಗ ರೆನಿಸಿದ್ದಾರೆ.
ಎರಡು ವರ್ಷಗಳ ಅವಧಿಗೆ ಆಯ್ಕೆಯಾದ ಜ್ಞಾನೇಂದ್ರೊ 2009-2014ರ ನಡುವೆ ಮಣಿಪುರ ಹಾಕಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಹಾಕಿ ಜತೆಗೆ ಸಂಬಂಧ ಹೊಂದಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ತಳಮಟ್ಟದಲ್ಲಿ ಹಾಕಿ ಅಭಿವೃದ್ಧಿಪಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.