Sunday, 22nd September 2024

IND vs BAN: 92 ವರ್ಷಗಳ ಬಳಿಕ ಗೆಲುವಿನಲ್ಲಿ ದಾಖಲೆ ಬರೆದ ಭಾರತ

IND v BAN

ಚೆನ್ನೈ: ಪ್ರವಾಸಿ ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಭಾರತ 280 ರನ್‌ಗಳ ಗೆಲುವು ಸಾಧಿಸಿ ಮೆರೆದಾಡಿದೆ. ಭಾರತ ತಂಡ ಈ ಗೆಲುವಿನೊಂದಿಗೆ ವಿಶೇಷ ದಾಖಲೆಯನ್ನು ನಿರ್ಮಿಸಿದೆ. 92 ವರ್ಷಗಳ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ, ಸೋಲುಗಳಿಗಿಂತ ಹೆಚ್ಚಿನ ಗೆಲುವುಗಳನ್ನು ಹೊಂದಿದ ಸಾಧನೆ ಮಾಡಿತು.

1932ರಲ್ಲಿ ಟೆಸ್ಟ್‌ ಮಾನ್ಯತೆ ಪಡೆದಂದಿನಿಂದಲೂ ಭಾರತದ(India Test history) ಸೋಲಿನ ಸಂಖ್ಯೆ ಗೆಲುವಿಗಿಂತ ಜಾಸ್ತಿಯೇ ಇತ್ತು. ಒಮ್ಮೆಯೂ ಗೆಲುವು ಸೋಲಿನ ಗಡಿಯನ್ನು ದಾಟಿರಲಿಲ್ಲ. ಇದೀಗ ಮೊದಲ ಬಾರಿ ಸೋಲಿನ ಸಂಖ್ಯೆಯನ್ನು ಹಿಂದಿಕ್ಕಿ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಭಾರತ ಇದುವರೆಗೂ ಒಟ್ಟು 580 ಟೆಸ್ಟ್‌ ಪಂದ್ಯಗಳನ್ನು ಆಡಿ, 178* ಸೋಲು ಮತ್ತು 179* ಗೆಲುವು ಸಾಧಿಸಿದೆ. 222 ಪಂದ್ಯ ಡ್ರಾ ಗೊಂಡರೆ, ಒಂದು ಪಂದ್ಯ ಟೈ ಗೊಂಡಿದೆ.

ಭಾರತ ತಂಡ ಮೊತ್ತ ಮೊದಲ ಬಾರಿಗೆ ಟೆಸ್ಟ್‌ ಪಂದ್ಯ ಆಡಿದ್ದು 1932ರಲ್ಲಿ. ಇಂಗ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ವಿಶೇಷ ಎಂದರೆ ಭಾರತ ಮೊದಲ ಟೆಸ್ಟ್‌ ಪಂದ್ಯ ಗೆಲುವು ಸಾಧಿಸಿದ್ದೂ ಕೂಡ ಇಂಗ್ಲೆಂಡ್‌ ವಿರುದ್ಧವೇ. 1951/52 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1 ಗೆಲುವು ಸಾಧಿಸಿತ್ತು. ಸರಣಿ 1-1 ಅಂತರದಿಂದ ಡ್ರಾ ಗೊಂಡಿತ್ತು. ಭಾರತ ತಂಡ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದಿದ್ದು ಸಾಂಪ್ರದಾಯಿಕ ಬುದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ. 1952/53 ರಲ್ಲಿ ತವರಿನಲ್ಲಿ ನಡೆದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 2-1 ಅಂತರದಿಂದ ಗೆದ್ದು ಬೀಗಿತ್ತು.

ಚೆನ್ನೈಯ ಚೆಪಾಕ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಗೆಲುವಿಗೆ 515 ರನ್‌ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡವು ನಾಲ್ಕನೇ ದಿನ 234 ರನ್‌ ಗಳಿಗೆ ಆಲೌಟಾಗಿ ಸೋಲು ಕಂಡಿತು. ಭಾರತದ ಈ ಗೆಲುವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸುವಲ್ಲಿ ಮತ್ತಷ್ಟು ಸಹಕಾರಿಯಾಗಿದೆ. ಗುರುವಾರ ಆರಂಭಗೊಂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 376 ರನ್‌ ಬಾರಿಸಿತ್ತು. ಜವಾಬಿತ್ತ ಬಾಂಗ್ಲಾದೇಶ ಕೇವಲ 149 ರನ್‌ಗೆ ಸರ್ವಪತನ ಕಂಡಿತ್ತು. ಫಾಲೋಆನ್‌ ಹೇರದ ಭಾರತ ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ನಡೆಸಿ 4 ವಿಕೆಟ್‌ಗೆ  287 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿತು. ಬಾಂಗ್ಲಾ ದ್ವಿತೀಯ ಇನಿಂಗ್ಸ್‌ನಲ್ಲಿ 234 ರನ್‌ ಬಾರಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ IND vs BAN: ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಅಶ್ವಿನ್‌ ಶ್ರೇಷ್ಠ ಪ್ರದರ್ಶನ

ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಅಶ್ವಿನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್‌ ವಿಕೆಟ್‌ ಲೆಸ್‌ ಎನಿಸಿಕೊಂಡರೂ ದ್ವಿತೀಯ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಕಿತ್ತು ಮಿಂಚಿದರು. ಮೊದಲ ಇನಿಂಗ್ಸ್‌ನಲ್ಲಿ 113 ರನ್‌ ಬಾರಿಸಿ ಕುಸಿದ ಭಾರತ ತಂಡಕ್ಕೆ ನೆರವಾಗಿದ್ದರು.