Sunday, 22nd September 2024

M.B. Patil: ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿ ಕೆಎಚ್ಐಆರ್ ಸಿಟಿ: ಸೆ. 26ರಂದು ಯೋಜನೆಗೆ ಚಾಲನೆ

M.B.Patil

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಕೆಎಚ್ಐಆರ್ (Knowledge, Health, Innovation and Research) ಸಿಟಿಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೆ. 26ರಂದು ಚಾಲನೆ ನೀಡಲಿದ್ದಾರೆ. ಇದರ ಅಂಗವಾಗಿ ಅಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು, ಇದರಲ್ಲಿ ದೇಶ-ವಿದೇಶಗಳ ಗಣ್ಯ ಉದ್ಯಮಿಗಳು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ವೈದ್ಯಕೀಯ ಕ್ಷೇತ್ರದ ಸಾಧಕರು ಭಾಗವಹಿಸಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ (M.B. Patil) ತಿಳಿಸಿದ್ದಾರೆ.

ಈ ಬಗ್ಗೆ ಭಾನುವಾರ ಮಾಹಿತಿ ನೀಡಿರುವ ಅವರು, ʼʼಒಟ್ಟು 2,000 ಎಕರೆ ವಿಸ್ತೀರ್ಣದಲ್ಲಿ ಈ ಯೋಜಿತ ನಗರ ಮೈದಾಳಲಿದೆ. ಈ ಪೈಕಿ ಮೊದಲ ಹಂತದಲ್ಲಿ 500 ಎಕರೆಯಲ್ಲಿ ಕೆಎಚ್ಐಆರ್ ಸಿಟಿ ಸಾಕಾರಗೊಳ್ಳಲಿದೆ. 40 ಸಾವಿರ ಕೋಟಿ ರೂ. ಹೂಡಿಕೆಯ ಈ ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆʼʼ ಎಂದು ಮಾಹಿತಿ ನೀಡಿದ್ದಾರೆ.

ʼʼಸಿಂಗಾಪುರದ ಬಯೊಪೋಲಿಸ್, ರೀಸರ್ಚ್ ಟ್ರ್ಯಾಂಗಲ್ ಪಾರ್ಕ್, ಸೈನ್ಸ್ ಪಾರ್ಕ್, ಕೆಬಿಐಸಿ, ಅಮೆರಿಕದ ಬೋಸ್ಟನ್ ಇನ್ನೋವೇಶನ್ ಕ್ಲಸ್ಟರ್ ಇದಕ್ಕೆ ಮಾದರಿ. ಜತೆಗೆ ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿಪಡಿಸಿರುವ ಹೈಟೆಕ್ ಸಿಟಿ, ಎಲೆಕ್ಟ್ರಾನಿಕ್ ಸಿಟಿಯ ಮಾನದಂಡಗಳನ್ನೂ ಇಟ್ಟುಕೊಳ್ಳಲಾಗಿದೆ. ದೊಡ್ಡಬಳ್ಳಾಪುರ- ದಾಬಸಪೇಟೆ ನಡುವೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 50 ಕಿ.ಮೀ. ದೂರದಲ್ಲಿ ಇದು ಅಸ್ತಿತ್ವಕ್ಕೆ ಬರಲಿದೆʼʼ ಎಂದು ಅವರು ತಿಳಿಸಿದ್ದಾರೆ.

ʼʼಶಿಕ್ಷಣ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಯೇ ಈ ಪರಿಕಲ್ಪನೆಯ ಆಧಾರಸ್ತಂಭಗಳಾಗಿವೆ. ಜೀವ ವಿಜ್ಞಾನಗಳು, ಭವಿಷ್ಯದ ಸಂಚಾರ ವ್ಯವಸ್ಥೆ, ಸೆಮಿಕಂಡಕ್ಟರ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಮತ್ತು ವೈಮಾಂತರಿಕ್ಷ, ರಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಿಗೆ ಇಲ್ಲಿ ಆದ್ಯತೆ ನೀಡಲಾಗುವುದು. ಈ ವಲಯಗಳಿಗೆ ಸಂಬಂಧಿಸಿದ ಜಾಗತಿಕ ಮಟ್ಟದ ಉತ್ಕೃಷ್ಟ ವಿ.ವಿ.ಗಳು, ಸಂಶೋಧನಾಲಯಗಳು, ಆಸ್ಪತ್ರೆಗಳು ಮತ್ತು ಕಂಪನಿಗಳು ಕೆಎಚ್ಐಆರ್ ಸಿಟಿಯಲ್ಲಿ ನೆಲೆಯೂರಿ, ತಮ್ಮ ಚಟುವಟಿಕೆ ಆರಂಭಿಸಲಿವೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ.

ʼʼಉದ್ದೇಶಿತ ಕೆಎಚ್ಐಆರ್ ಸಿಟಿಯಲ್ಲಿ ವಿಖ್ಯಾತ ಕಂಪನಿಗಳ ಆರ್ & ಡಿ ಕೇಂದ್ರಗಳು, ಗ್ಲೋಬಲ್ ಕೆಪಾಸಿಟಿ ಸೆಂಟರ್‌ಗಳು ಬರಲಿವೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಡಾ.ದೇವಿಶೆಟ್ಟಿ, ಕಿರಣ್ ಮಜುಂದಾರ್ ಷಾ, ಪ್ರಶಾಂತ ಪ್ರಕಾಶ, ಥಾಮಸ್ ಓಶಾ, ರಾಂಚ್ ಕಿಂಬಾಲ್, ಮೋಹನದಾಸ್ ಪೈ, ನಿಖಿಲ್ ಕಾಮತ್ ಮುಂತಾದವರನ್ನು ಒಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ. ಇಲ್ಲಿ ಪ್ರತಿ ಎಕರೆಗೆ 100 ಜನರ ವಸತಿ ಇರುವಂತೆ ನೋಡಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆʼʼ ಎಂದು ಸಚಿವರು ವಿವರಿಸಿದ್ದಾರೆ.

ʼʼಬೆಂಗಳೂರಿನಲ್ಲಿ ಐಐಎಸ್ಸಿ, ನಾಸ್ಕಾಂ ಎಕ್ಸಲೆನ್ಸ್ ಸೆಂಟರ್, ರಾಷ್ಟ್ರೀಯ ವಿನ್ಯಾಸ ಸಂಸ್ಥೆ, ಐಐಟಿ, ಐಐಎಂ, ಸೆಂಟರ್ ಫಾರ್ ಎಐ & ರೋಬೋಟಿಕ್ಸ್, ಸೆಂಟರ್ ಫಾರ್ ನ್ಯಾನೋ & ಸಾಫ್ಟ್ ಮ್ಯಾಟರ್ ಸೈನ್ಸಸ್ ಮುಂತಾದ ಉತ್ಕೃಷ್ಟ ಸಂಸ್ಥೆಗಳಿವೆ. ಜತೆಗೆ ಐಟಿ, ಬಿಟಿ, ಔಷಧ ವಿಜ್ಞಾನ, ವೈದ್ಯಕೀಯ ಸಾಧನಗಳ ಉತ್ಪಾದನೆ ಇವುಗಳಲ್ಲಿ ಬೆಂಗಳೂರಿನ ಸಾಧನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಕೆಎಚ್ಐಆರ್ ಸಿಟಿಯಲ್ಲಿ ಜಗತ್ತಿನ ಅಗ್ರಮಾನ್ಯ 500 ಶಿಕ್ಷಣ ಸಂಸ್ಥೆಗಳ ಸ್ಥಳೀಯ ಕ್ಯಾಂಪಸ್ ಬರಲು ಇನ್ನು ಹಾದಿ ಸುಗಮವಾಗಲಿದೆ. ಅಲ್ಲದೆ ವೈದ್ಯಕೀಯ ಪ್ರವಾಸೋದ್ಯಮ ಇತ್ಯಾದಿಗಳಿಗೂ ಹೇರಳ ಅವಕಾಶ ಸೃಷ್ಟಿಯಾಗಲಿದೆʼʼ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಸಚಿವ ಎಂ.ಬಿ.ಪಾಟೀಲ್ ವಿರುದ್ಧ ರಾಜ್ಯಪಾಲರಿಗೆ ದೂರು