Friday, 22nd November 2024

Mini Moon: ಭೂಮಿ ಸುತ್ತ ಸುತ್ತಲಿವೆ ಎರಡೆರಡು ಚಂದ್ರ; ಖಗೋಳ ವಿಸ್ಮಯದ ವಿವರ ಇಲ್ಲಿದೆ

Mini Moon

ನವದೆಹಲಿ: ಭೂಮಿಯ ಉಪಗ್ರಹ ಚಂದ್ರ- ಮಕ್ಕಳ ಪಾಲಿನ ಚಂದಮಾಮವಾದರೆ ಪ್ರೇಮಿಗಳ, ಕವಿಗಳ ಪಾಲಿಗೆ ತಂಪು ಬೆಳಂದಿಗಳು ಸುರಿಸುವವನು. ಹೀಗೆ ನೂರಾರು ವರ್ಷಗಳಿಂದ ಚಂದ್ರ ಮತ್ತು ಮಾನವರ ನಡುವೆ ಆತ್ಮೀಯ ಸಂಬಂಧವೊಂದು ಬೆಸೆದುಕೊಂಡಿದೆ. ಅಂತಹ ಎರಡು ಚಂದ್ರ ಕಾಣಿಸಿಕೊಂಡರೆ? ಹೌದು, ಹೊಸ ಸಂಶೋಧನೆಯ ಪ್ರಕಾರ ಭೂಮಿಗೆ ಇನ್ನೊಬ್ಬ ಚಂದ್ರನೂ ಇದ್ದಾನಂತೆ! ಆದರೆ ಈ ಮಿನಿ ಚಂದ್ರ (Mini Moon) ಗೋಚರವಾಗೋದು 2 ತಿಂಗಳೂ ಮಾತ್ರ! ಈ ಅಚ್ಚರಿಯ ವಿದ್ಯಾಮಾನದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಸೆಪ್ಟೆಂಬರ್ 29ರಿಂದ ನವೆಂಬರ್ 25ರವರೆಗೆ ಈ ಖಗೋಳ ವಿಸ್ಮಯ ಜರುಗಲಿದೆ. ಈ ಅವಧಿಯಲ್ಲಿ ಭೂಮಿಗೆ ಎರಡು ಚಂದ್ರ ಇರಲಿದೆ.

ಬರಿಗಣ್ಣಿನಲ್ಲಿ ನೋಡಲು ಅಸಾಧ್ಯ

2024 PT5 ಎಂದು ಕರೆಯಲ್ಟಡುವ ಕ್ಷುದ್ರಗ್ರಹವೊಂದು ಭೂಮಿಯ ಗುರುತ್ವಾಕರ್ಷಣೆಗೆ ಸಿಗಲಿದೆ. ಇದನ್ನೇ ಮಿನಿ ಮೂನ್‌ ಕರೆಯಲಾಗುತ್ತದೆ. ಇದು 2 ತಿಂಗಳ ಕಾಲ ಭೂಮಿಯ ಸುತ್ತ ಸುತ್ತಲಿದೆ. ಆದರೆ ಇದು ಗಾತ್ರದಲ್ಲಿ ತುಂಬ ಚಿಕ್ಕದಾಗಿರುವ ಕಾರಣ ಬರಿಗಣ್ಣಿಗೆ ಕಾಣಿಸುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆ. 7ರಂದು ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ (ATLAS) ಬಳಸಿಕೊಂಡು 2024 PT5 ಕ್ಷುದ್ರಗ್ರಹವನ್ನು ಗುರುತಿಸಲಾಗಿದೆ. ಇದು ಅರ್ಜುನ ಕ್ಷುದ್ರಗ್ರಹ ಪಟ್ಟಿಯಿಂದ ಹುಟ್ಟಿಕೊಂಡಿದೆ ಎನ್ನಲಾಗಿದೆ.

ಸಂಶೋಧನಾ ವರದಿಯ ಪ್ರಕಾರ, ಈ ಕ್ಷುದ್ರಗ್ರಹವು ಕೇವಲ 10 ಮೀಟರ್ (33 ಅಡಿ) ಅಗಲವನ್ನು ಹೊಂದಿರಲಿದೆ. ಭೂಮಿಯ ಗುರುತ್ವಾಕರ್ಷಣೆಯಿಂದ ದೂರ ಸರಿಯುವ ಮೊದಲು ಭೂಮಿಯ ಸುತ್ತ 53 ದಿನಗಳ ಕಾಲ ಸುತ್ತಲಿರುವ ಇದರ ಗಾತ್ರ ಚಿಕ್ಕದಾಗಿರುವುದರಿಂದ ಬರಿಗಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ. ಅಲ್ಲದೆ ದೂರದರ್ಶಕದಿಂದ ಕೂಡ ನೋಡಲು ತುಂಬ ಮಂದವಾಗಿರುತ್ತದೆ ಎನ್ನಲಾಗಿದೆ.

ಇದು ಮೊದಲ ಬಾರಿಯೇನಲ್ಲ

ಈ ರೀತಿಯ ವಿದ್ಯಾಮಾನ ನಡೆಯುತ್ತಿರುವುದು ಇದು ಮೊದಲ ಬಾರಿ ಏನಲ್ಲ. ಹಿಂದೆಯೂ ಅನೇಕ ಬಾರಿ ಕೆಲವು ಕ್ಷುದ್ರ ಗ್ರಹಗಳು ಭೂಮಿಯ ಸುತ್ತ ಸುತ್ತಿವೆ. 2006ರಿಂದ 2007ರವರೆಗೆ ಒಂದು ವರ್ಷಗಳ ಕಾಲ ಕ್ಷುದ್ರಗ್ರಹ 2006 RH120 ಭೂಮಿಯನ್ನು ಸುತ್ತು ತಿರುಗಿತ್ತು.

ಮತ್ತೆ ಗೋಚರವಾಗಲಿದೆ

ʼʼ2013ರಲ್ಲಿ ರಷ್ಯಾದ ಚೆಲ್ಯಾಬಿನ್ಸ್ಕ್‌ಗೆ ಅಪ್ಪಳಿಸಿದ ಕ್ಷುದ್ರಗ್ರಹಕ್ಕಿಂತ ಗಾತ್ರದಲ್ಲಿ 2024 PT5 ಸ್ವಲ್ಪ ದೊಡ್ಡದಾಗಿದೆ. ಆದರೆ ಅದರಂತೆ ಅಪಾಯಕಾರಿಯಲ್ಲ. ಇದು ಭೂಮಿಗೆ ಡಿಕ್ಕಿ ಹೊಡೆಯುವ ಅಪಾಯವಿಲ್ಲ. ಯಾಕೆಂದರೆ ಇದು 2.6 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಸುತ್ತುತ್ತದೆ. ಅಂದರೆ ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 10 ಪಟ್ಟು ಹೆಚ್ಚು ದೂರದಲ್ಲಿದೆʼʼ ಎಂದು ತಜ್ಞರು ತಿಳಿಸಿದ್ದಾರೆ. ಇದು 2055ರಲ್ಲಿ ಮತ್ತು 2084ರಲ್ಲಿ ಮಿನಿ ಚಂದ್ರನಾಗಿ ಮತ್ತೆ ಗೋಚರಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಊಹಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಗೋಚರಿಸುವ ಇಂತಹ ಮಿನಿ ಚಂದ್ರಗಳು ಆಗಾಗ ಕಂಡು ಬರುತ್ತವೆ. ದೀರ್ಘ ಕಾಲ ಸುತ್ತುವ ಮಿನಿ ಚಂದ್ರರು ಕಾಣಿಸುವುದು ಅಪರೂಪ.

ಈ ಸುದ್ದಿಯನ್ನೂ ಓದಿ: PM Modi Visit US: ಮೋದಿ-ಬೈಡನ್‌ ದ್ವಿಪಕ್ಷೀಯ ಮಾತುಕತೆ; ಯಾವೆಲ್ಲಾ ವಿಚಾರ ಚರ್ಚೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್