ಬೆಂಗಳೂರು: ನಗರದ ವೈಯಾಲಿಕಾವಲ್‌ನಲ್ಲಿ ನಡೆದ ನೇಪಾಳದ ಮೂಲದ ಮಹಿಳೆಯ ಭೀಕರ ಹತ್ಯೆಗೆ (Bengaluru Murder) ಸಂಬಂಧಿಸಿ ಮಹಿಳೆಯ ತಾಯಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಮಹಿಳೆಯ ದೇಹವನ್ನು 50 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಹಂತಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅನೈತಿಕ ಸಂಬಂಧಕ್ಕೆ ಮಹಾಲಕ್ಷ್ಮಿ ಬಲಿಯಾದಳಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಹೌದು, ಐದು ವರ್ಷಗಳ ಹಿಂದೆ ಪತಿ ಹೇಮಂತ್ ದಾಸ್‌ನಿಂದ ದೂರವಾಗಿದ್ದ ಮಹಾಲಕ್ಷ್ಮಿ ವೈಯಾಲಿಕಾವಲ್‌ನಲ್ಲಿ ನೆಲೆಸಿದ್ದಳು. ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಉತ್ತರಾಖಂಡ್ ಮೂಲದ ಅಶ್ರಫ್ ಎಂಬಾತನ ಜತೆ ಸಲುಗೆಯಿಂದ ಇದ್ದಳು. ಆತ ಮೆನ್ಸ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಅಶ್ರಫ್ ಹಾಗೂ ಮಹಾಲಕ್ಷ್ಮಿ ಸಂಬಂಧದಲ್ಲಿ ಇತ್ತೀಚೆಗೆ ಬಿರುಕು ಮೂಡಿತ್ತು ಎನ್ನಲಾಗಿದೆ. ಈ ನಡುವೆ ಮಹಿಳೆ ಕೊಲೆ ಬಳಿಕ ಆತನ ನಾಪತ್ತೆಯಾಗಿರುವುದರಿಂದ ಅನುಮಾನ ಮೂಡಿದೆ.
ಈ ಬಗ್ಗೆ ಮಹಾಲಕ್ಷ್ಮಿ ಪತಿ ಹೇಮಂತ್ ದಾಸ್ ಪ್ರತಿಕ್ರಿಯಿಸಿ, ಮಹಾಲಕ್ಷ್ಮಿ ಸ್ನೇಹಿತ ಉತ್ತರಾಖಂಡ್ ಮೂಲದ ಅಶ್ರಫ್ ಮೇಲೆ ನನಗೆ ಅನುಮಾನವಿದೆ. ಒಂದು ದಿನ ಮಹಾಲಕ್ಷ್ಮಿ ಮೊಬೈಲ್ ಚೆಕ್ ಮಾಡಿದಾಗ ಅಶ್ರಫ್ ಜೊತೆ ಸಂಪರ್ಕದಲ್ಲಿರುವುದು ತಿಳಿದಿತ್ತು. ಹೀಗಾಗಿ ನಾನು ಅಶ್ರಫ್ ವಿರುದ್ಧ ನಾನು ದೂರು ಕೊಟ್ಟಿದ್ದೆ ಎಂದು ಹೇಳಿದ್ದಾರೆ.
ಇನ್ನು ಪ್ರಕರಣದ ಆರೋಪಿಯ ಪತ್ತೆಗಾಗಿ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ನೇತೃತ್ವದಲ್ಲಿ 6 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪ್ರಕರಣ ನಡೆದ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಮೃತ ಮಹಿಳೆ ಮಹಾಲಕ್ಷ್ಮಿ ಫೋನ್ ಸೆ. 2ರಂದು ಸ್ವಿಚ್ ಆಫ್ ಆಗಿದ್ದು, ಆಕೆಯೊಂದಿಗೆ ಕೊನೆಯ ಬಾರಿಗೆ ಸಂಪರ್ಕದಲ್ಲಿದ್ದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ದೇವನಹಳ್ಳಿ ಬಳಿ ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿ ದಂಪತಿ ದುರ್ಮರಣ
ಬೆಂಗಳೂರು: ಬೈಕ್ ಯೂಟರ್ನ್ ತೆಗೆದುಕೊಳ್ಳುವಾಗ ಟ್ರ್ಯಾಕ್ಟರ್ ಡಿಕ್ಕಿಯಾಗಿ ಸ್ಥಳದಲ್ಲೇ ದಂಪತಿ ದುರ್ಮರಣ ಹೊಂದಿರುವ ಘಟನೆ (Road Accident) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ನಡೆದಿದೆ. ಹೊಸಕೋಟೆ ತಾಲೂಕಿನ ದೇವನಗುಂದಿ ಕ್ರಾಸ್ ಬಳಿ ಯೂಟರ್ನ್ ತೆಗೆದುಕೊಳ್ಳುವಾಗ ದುರ್ಘಟನೆ ಸಂಭವಿಸಿದೆ.
ಈ ಸುದ್ದಿಯನ್ನೂ ಓದಿ | America Shootout: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ; ನಾಲ್ವರು ಸ್ಥಳದಲ್ಲೇ ಬಲಿ
ಲಕೊಂಡಹಳ್ಳಿ ಗ್ರಾಮದ ರಂಗಪ್ಪ ಹಾಗೂ ಸುಧಾ ಮೃತ ದಂಪತಿ. ಟ್ರ್ಯಾಕ್ಟರ್ ಡಿಕ್ಕಿಯಾದಾಗ ಚಕ್ರದಡಿ ಸಿಲುಕಿದ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಚಾಲಕ, ಸ್ಥಳದಲ್ಲೇ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.