ಬೆಂಗಳೂರು: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲಿ ನಡೆದ ಮಹಾಲಕ್ಷ್ಮಿ ಕೊಲೆಯಿಂದ ರಾಜ್ಯ ರಾಜಧಾನಿ ಬೆಚ್ಚಿಬಿದ್ದಿದೆ. ಪ್ರಕರಣ (Bengaluru woman murder) ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಹಂತಕರ ಹುಡುಕಾಟಕ್ಕೆ 6 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಈ ನಡುವೆ ಮಹಿಳೆಯ ಪತಿ ಹೇಮಂತ್ ದಾಸ್, ಪತ್ನಿಯ ಸಾವಿಗೆ ಸಂಬಂಧಿಸಿ ಆಕೆ ಜತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, 50ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಹೇಮಂತ್ ದಾಸ್ ಪ್ರತಿಕ್ರಿಯಿಸಿದ್ದು, ಮುಕ್ತ, ಶಶಿಧರ್, ಸುನೀಲ್ ಮೃತ ಮಹಾಲಕ್ಷ್ಮಿಯ ಸಹೋದ್ಯೋಗಿಗಳಾಗಿದ್ದಾರೆ. ಇನ್ನು ಉತ್ತರಾಖಂಡ್ ಮೂಲದ ಅಶ್ರಫ್ ಮಹಾಲಕ್ಷ್ಮಿ ಜತೆ ಸಲುಗೆಯಿಂದ ಇದ್ದ. ಅಲ್ಲದೇ ಮಹಾಲಕ್ಷ್ಮಿ ತಾನು ಕೆಲಸ ಮಾಡುವ ಕಡೆ ಸಹೋದ್ಯೋಗಿಗಳ ಜತೆ ಜಗಳ ಮಾಡಿಕೊಂಡಿದ್ದಳು ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮಹಾಲಕ್ಷ್ಮಿ ಸ್ನೇಹಿತ ಅಶ್ರಫ್ ಮೇಲೆ ನನಗೆ ಅನುಮಾನ ಇದೆ. ಒಂದು ದಿನ ಮಹಾಲಕ್ಷ್ಮಿ ಮೊಬೈಲ್ ಚೆಕ್ ಮಾಡಿದಾಗ ಅಶ್ರಫ್ ಜೊತೆ ಸಂಪರ್ಕದಲ್ಲಿರುವುದು ತಿಳಿದುಬಂದಿತ್ತು. ಈ ಹಿಂದೆ ನಾನು ನೆಲಮಂಗಲದಲ್ಲಿ ಅಶ್ರಫ್ ವಿರುದ್ಧ ದೂರು ಕೊಟ್ಟಿದ್ದೆ ಎಂದು ಹೇಳಿದ್ದಾರೆ.
ನೆಲಮಂಗಲದಲ್ಲಿ ನಾನು ಮೊಬೈಲ್ ಶಾಪ್ ಇಟ್ಟುಕೊಂಡಿದ್ದೇನೆ. ಮೊಬೈಲ್ ಶಾಪ್‌ನಲ್ಲೇ ಮಗುವನ್ನು ನೋಡಿಕೊಂಡು ಮಹಾಲಕ್ಷ್ಮಿ ವಾಪಸ್ ಹೋಗುತ್ತಿದ್ದಳು. 25 ದಿನಗಳ ಹಿಂದೆ ಕೊನೆಯ ಬಾರಿ ಅಂಗಡಿಗೆ ಬಂದು ಮಗುವನ್ನು ನೋಡಿ ಹೋಗಿದ್ದಳು. ಮಗು ನೋಡಲು ಬಂದಾಗ ನನ್ನ ಜತೆ ಕೋಪದಲ್ಲೇ ಮಾತನಾಡುತ್ತಿದ್ದಳು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Road Accident: ದೇವನಹಳ್ಳಿ ಬಳಿ ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿ ದಂಪತಿ ದುರ್ಮರಣ
ಅನೈತಿಕ ಸಂಬಂಧಕ್ಕೆ ಬಲಿಯಾದಳಾ ಮಹಿಳೆ?
ಐದು ವರ್ಷಗಳ ಹಿಂದೆ ಪತಿ ಹೇಮಂತ್ ದಾಸ್‌ನಿಂದ ದೂರವಾಗಿದ್ದ ಮಹಾಲಕ್ಷ್ಮಿ ವೈಯಾಲಿಕಾವಲ್‌ನಲ್ಲಿ ನೆಲೆಸಿದ್ದಳು. ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಉತ್ತರಾಖಂಡ್ ಮೂಲದ ಅಶ್ರಫ್ ಎಂಬಾತನ ಜತೆ ಸಲುಗೆಯಿಂದ ಇದ್ದಳು. ಆತ ಮೆನ್ಸ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಅಶ್ರಫ್ ಹಾಗೂ ಮಹಾಲಕ್ಷ್ಮಿ ಸಂಬಂಧದಲ್ಲಿ ಇತ್ತೀಚೆಗೆ ಬಿರುಕು ಮೂಡಿತ್ತು ಎನ್ನಲಾಗಿದೆ. ಈ ನಡುವೆ ಮಹಿಳೆ ಕೊಲೆ ಬಳಿಕ ಆತನ ನಾಪತ್ತೆಯಾಗಿರುವುದರಿಂದ ಅನುಮಾನ ಮೂಡಿದೆ.
ಇನ್ನು ಪ್ರಕರಣದ ಆರೋಪಿ ಪತ್ತೆಗಾಗಿ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ನೇತೃತ್ವದಲ್ಲಿ 6 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪ್ರಕರಣ ನಡೆದ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಮೃತ ಮಹಿಳೆ ಮಹಾಲಕ್ಷ್ಮಿ ಫೋನ್ ಸೆ. 2ರಂದು ಸ್ವಿಚ್ ಆಫ್ ಆಗಿದ್ದು, ಆಕೆಯೊಂದಿಗೆ ಕೊನೆಯ ಬಾರಿಗೆ ಸಂಪರ್ಕದಲ್ಲಿದ್ದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.