Thursday, 21st November 2024

K. S. Eshwarappa: ಪಂಚಮಸಾಲಿ, ಕುರುಬರ ಬೆಂಬಲ ಪಡೆಯಲು ‘RCB’ ಸಂಘಟನೆ; ಬಿಜೆಪಿಗೆ ಮತ್ತೊಮ್ಮೆ ಕೆ.ಎಸ್‌. ಈಶ್ವರಪ್ಪ ಸೆಡ್ಡು!

K. S. Eshwarappa

ವಿಜಯಪುರ: ಲೋಕಾಸಭಾ ಚುನಾವಣೆಯಲ್ಲಿ ಪುತ್ರನಿಗೆ ಹಾವೇರಿ ಬಿಜೆಪಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಸೋತಿದ್ದ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಅವರು (K. S. Eshwarappa) ಪಂಚಮಸಾಲಿ ಹಾಗೂ ಕುರುಬ ಸಮುದಾಯದ ಸಂಘಟನೆಗಾಗಿ ಮುಂದಾಗಿದ್ದು, ಈ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.

ವಿಜಯಪುರದಲ್ಲಿ ಆಪ್ತರು ಹಾಗೂ ಮುಖಂಡರ ಸಭೆ ನಡೆಸಿರುವ ಕೆ.ಎಸ್‌. ಈಶ್ವರಪ್ಪ ಅವರು, ಪ್ರಮುಖವಾಗಿ ಪಂಚಮಸಾಲಿ ಹಾಗೂ ಕುರುಬ ಸಮುದಾಯದ ಬೆಂಬಲ ಪಡೆದು ರಾಯಣ್ಣ, ಚೆನ್ನಮ್ಮ ಬ್ರಿಗೇಡ್ (RCB) ಸ್ಥಾಪನೆಗೆ ನಿರ್ಧಾರ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಸಾಲಿ ಹಾಗೂ ಕುರುಬ ಸಮುದಾಯ ಪ್ರಬಲವಾಗಿರುವ ಹಿನ್ನೆಲೆಯಲ್ಲಿ ತಮ್ಮ ಸಂಘಟನೆಗೆ ರಾಯಣ್ಣ ಚೆನ್ನಮ್ಮ ಹೆಸರು ಇಡಲು ಈಶ್ವರಪ್ಪ ಮುಂದಾಗಿದ್ದು, ಅಕ್ಟೋಬರ್ 20 ರಂದು ಬಾಗಲಕೋಟೆಯಲ್ಲಿ ನಡೆಯುವ ಸಮಾವೇಶದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ವಿಜಯಪುರ ಮಹಲ್ ಐನಾಪುರ ಗ್ರಾಮದ ಮಠದಲ್ಲಿ ಸಭೆ ನಡೆಸಿದ ಈಶ್ವರಪ್ಪ ಸಭೆ ನಡೆಸಿದ್ದು, ಅ.20ಕ್ಕೆ ಬಾಗಲಕೋಟೆಯಲ್ಲಿ ಸಮಾವೇಶ ಮಾಡಲು ನಿರ್ಧಾರ ಮಾಡಲಾಗಿದೆ. ರಾಜ್ಯದ ‌ಎಲ್ಲ ಜಿಲ್ಲೆಗಳಿಂದ ಕಾರ್ಯಕರ್ತರು ಹಾಗೂ ಬೆಂಬಲಿಗರು, ಸ್ವಾಮೀಜಿಗಳು ಆಗಮಿಸುವಂತೆ ಕರೆ ನೀಡಿದ್ದಾರೆ.

ಬಂಜಾರಾ, ಲಿಂಗಾಯತ, ಕುರುಬ,‌ ಇತರೆ ಸಮುದಾಯದ ಮುಖಂಡರ ಸಭೆಯನ್ನು ಈಶ್ವರಪ್ಪ ನಡೆಸಿದ್ದು, ಸಭೆಯಲ್ಲಿ ಕುರುಬ ಸಮುದಾಯದ ‌ಸ್ವಾಮೀಜಿಗಳು ಉಪಸ್ಥಿತರಿದ್ದರು. ಬಿಜೆಪಿ ಹಲವು ಪದಾಧಿಕಾರಿಗಳು ಸಹ ಈಶ್ವರಪ್ಪ ಸಭೆಗೆ ಆಗಮಿಸಿದ್ದರು.

ಕಳೆದ ಹಲವು ದಿನಗಳಲ್ಲಿ ವಿಜಯಪುರ, ಬಾಗಲಕೋಟೆಯಲ್ಲಿ ಪುತ್ರ ಕಾಂತೇಶ ಜೊತೆಗೆ ಈಶ್ವರಪ್ಪ ಸಂಚಾರ ಮಾಡುತ್ತಿದ್ದು, ಕುರುಬ ಸಮುದಾಯದ ಜಾತ್ರೆ ಹಾಗೂ ಎಲ್ಲ‌ ಸಮುದಾಯದ ಮಠಗಳಿಗೆ ಭೇಟಿ ನೀಡಿ, ಸಮುದಾಯದ ಸ್ವಾಮಿಜಿಗಳು, ಮುಖಂಡರ ಬೆಂಬಲ ಪಡೆಯುತ್ತಿದ್ದಾರೆ.

ಹಿಂದುಳಿದ ವರ್ಗಗಳಲ್ಲಿ ಮುಖ್ಯವಾಗಿ ಕುರುಬ ಸಮುದಾಯದದಲ್ಲಿ ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕರಾಗಿ ರೂಪುಗೊಳ್ಳಲು ಕೆ.ಎಸ್‌. ಈಶ್ವರಪ್ಪ ಅವರು 2016ರ ಡಿಸೆಂಬರ್​ನಲ್ಲಿ ರಾಯಣ್ಣ ಬ್ರಿಗೇಡ್ ಆರಂಭಿಸಿದ್ದರು. 2018ರ ವಿಧಾನಸಭೆ ಚುನಾವಣೆಗೂ ಮುಂಚೆ ರಾಯಣ್ಣ ಬ್ರಿಗೇಡ್​ ಆರಂಭವಾಗಿದ್ದು, ಬಿಜೆಪಿಗೆ ಮಗ್ಗುಲ ಮುಳ್ಳಾಗಿತ್ತು. ನಂತರ ಹಲವು ಕಾರಣಗಳಿಂದ ಸಂಘಟನೆಯ ಕಾರ್ಯ ಚಟುವಟಿಕೆ ನಿಂತಿತ್ತು. ಆದರೆ, ಈಗ ಈಶ್ವರಪ್ಪನವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿರುವ ಹಿನ್ನೆಲೆಯಲ್ಲಿ ರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಸಂಘಟನೆ ಆರಂಭಿಸಲು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಎಸ್‌.ಈಶ್ವರಪ್ಪ ಅವರು, ರಾಜ್ಯದಲ್ಲಿ ಹಿಂದುಳಿದವರು, ದಲಿತರು, ಲಿಂಗಾಯತರು, ಬ್ರಾಹ್ಮಣರಿಗೆ ಅನ್ಯಾಯವಾಗುವುದನ್ನು ತಡೆಯುವ ನಿಟ್ಟಿನಲ್ಲಿ ರಾಯಣ್ಣ, ಚೆನ್ನಮ್ಮ ಬ್ರಿಗೇಡ್‌ (ಆರ್‌ಸಿಬಿ) ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

ರಾಯಣ್ಣ ಬ್ರಿಗೇಡ್‌ ಚಟುವಟಿಕೆ ನಿಲ್ಲಿಸುವಂತೆ ಈ ಹಿಂದೆ ಯಡಿಯೂರಪ್ಪ ದೂರಿನ ಮೇರೆಗೆ ಅಮಿತ್‌ ಶಾ ಸೂಚಿಸಿದ್ದರಿಂದ ಸಂಘಟನೆ ಕೈಬಿಟ್ಟಿದ್ದೆ. ಅಂದು ಆ ನಿರ್ಧಾರ ಮಾಡಿ ತಪ್ಪು ಮಾಡಿಬಿಟ್ಟೆ ಎಂದು ಈಗ ಅನಿಸುತ್ತಿದೆ ಎಂದು ಹೇಳಿದ್ದಾರೆ.