Sunday, 22nd September 2024

Journalists Society: ಕ್ಲಾಸ್‌‌ನಲ್ಲಿ ಗೋಲ್ಡ್ ಮೆಡಲ್ ಪಡೆದರೆ ಸಾಲದು, ಬದುಕಿನಲ್ಲೂ ಮೆಡಲ್ ಪಡೆಯಬೇಕು!

ಬೆಂಗಳೂರು: ಪರೀಕ್ಷೆಯಲ್ಲಿ ಉನ್ನತ ಶ್ರೇಣಿ (Journalists Society) ಪಡೆದರೆ ಸಾಲದು, ಬದುಕಿನ ಶಿಕ್ಷಣದಲ್ಲಿ ಉನ್ನತ ಪರಿಣತಿ ಸಾಧಿಸಬೇಕು ಎಂದು ಐಆರ್‌ಎಸ್ ಅಧಿಕಾರಿ ಶಾಂತಪ್ಪ ಕುರುಬರ ಹೇಳಿದರು. ಭಾನುವಾರ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2023-24 ನೇ (Karnataka Journalists’ Co-operative Society) ಸಾಲಿನ ಸರ್ವ ಸದಸ್ಯರ ಸಭೆಯ ವೇಳೆ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಅವರು ಮಾತನಾಡಿದರು.

ಒಮ್ಮೆ ಬಿ.ಇ. ಗೋಲ್ಡ್‌ ಮೆಡಲ್ ತೆಗೆದುಕೊಂಡ ಒಬ್ಬ ಮಗನ ತಾಯಿ ಬಂದು ನನ್ನ ಮಗ ತುಂಬಾ ಡಿಪ್ರೆಶನ್‌ಗೆ ಹೋಗಿದ್ದಾರೆ ಎಂದು ಹೇಳಿದರು. ಆಗ ವಿಚಾರಿಸಿದಾಗ ಆ ಮಗ ಗೋಲ್ಡ್‌ ಮೆಡಲ್ ಪಡೆದಿದ್ದು ಗೊತ್ತಾಯಿತು. ಕೆಲಸ ಸಿಗದ ಕಾರಣಕ್ಕೆ ಆತ ಡಿಪ್ರೆಶನ್‌ಗೆ ಹೋಗಿದ್ದ. ಆಗ ನನಗೆ ಅರ್ಥ ಆಗಿದ್ದು ಏನಂದ್ರೆ ನಾವು ಕ್ಲಾಸ್ ನಲ್ಲಿ ಗೋಲ್ಡ್ ಮೆಡಲ್ ಪಡೆದರೆ ಸಾಲದು, ಜೀವನದಲ್ಲಿ ಗೋಲ್ಡ್‌ ಮೆಡಲ್ ನಡೆಯಬೇಕು ಎಂಬುದು. ಹೀಗಾಗಿ ಬದುಕು ಏನೆಂದು ಅರ್ಥ ಮಾಡಿಕೊಳ್ಳಬೇಕು ಎಂದು ಶಾಂತಪ್ಪ ಹೇಳಿದರು.

ನಾನು ಇಲ್ಲಿವರೆಗೆ 7 ಬಾರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುತ್ತೀರ್ಣನಾದೆ. ಆದರೆ, ಸತತ ಪ್ರಯತ್ನದ ಫಲವಾಗಿ 8 ನೇ ಬಾರಿ ಪರೀಕ್ಷೆಯಲ್ಲಿ ಪಾಸ್ ಆಗಿ ಐ.ಆರ್.ಎಸ್ ಹುದ್ದೆ ಗಿಟ್ಟಿಸಿಕೊಂಡಿದ್ದೇನೆ. ನಾನು ಈ ಹಂತಕ್ಕೆ ಬರಲು ಪತ್ರಕರ್ತರ ಸಹಕಾರವೇ ಕಾರಣ. ವಿಧಾನ ಸೌಧದಲ್ಲಿ ಕರ್ತವ್ಯ ನಿರ್ವಹಿಸುವಾಗ ಪತ್ರಕರ್ತರ ಸಂಪರ್ಕ ಸಿಕ್ಕಿತು. ಜೊತೆಗೆ ಸಮಾಜಪರ ಕಾಳಜಿ ಮೊದಲಿನಿಂದಲೂ ಇತ್ತು. ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಿದ ನಂತರ ನೇರ ಸಂದರ್ಶನದಲ್ಲಿ ಪಾಸ್ ಆಗಲು ಮಾಧ್ಯಮಗಳ ಸಂಪರ್ಕವೇ ಕಾರಣ ಎಂದು ಶಾಂತಪ್ಪ ಹೇಳಿದರು.

ನಾನು ಪಿಯುಸಿಯಲ್ಲಿ ಥರ್ಡ್ ಕ್ಲಾಸ್ ಪಾಸ್. ಆದರೆ ಇಲ್ಲಿನ ಮಕ್ಕಳು ಶೇ.90, ಶೇ.80 ಅಂಕ ಪಡೆದಿದ್ದಾರೆ. ನಾನೇ ಐ.ಆರ್.ಎಸ್ ಪಾಸ್ ಮಾಡಿದ್ದೇನೆ ಎಂದರೆ ನೀವು ನನಗಿಂತ ಬುದ್ಧಿವಂತರು. ನೀವು ಇನ್ನೂ ಸಲೀಸಾಗಿ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಬಹುದು ಎಂದು ಪ್ರತಿಭಾವಂತ ಮಕ್ಕಳನ್ನು ಉತ್ತೇಜಿಸಿದರು.

ಮಕ್ಕಳು ಚೆನ್ನಾಗಿ ಓದಬೇಕು. ಮೊಬೈಲ್ ತುಂಬಾ ಅಪಾಯಕಾರಿ. ಆದ್ದರಿಂದ ಮಕ್ಕಳಿಂದ ಮೊಬೈಲ್ ದೂರ ಇಡಿ. ಪುಸ್ತಕದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ. 3-4 ವರ್ಷ ನಿರಂತರವಾಗಿ ಪರಿಶ್ರಮ ಪಟ್ಟರೆ ಖಂಡಿತ ಸರ್ಕಾರಿ ಉದ್ಯೋಗ ಪಡೆಯಬಹುದು ಎಂದು ಶಾಂತಪ್ಪ ಕುರುಬರ ಹೇಳಿದರು.

ಸಮಾಜದಲ್ಲಿ ಶೇ.3 ರಷ್ಟು ಜನ ಮಾತ್ರ ಅಪರಾಧಿಗಳು, 97 ಜನ ಸಾಮಾನ್ಯರು.‌ ಆದರೆ ಪೊಲೀಸ್ ಠಾಣೆಗಳಲ್ಲಿ ಶೇ.3 ಜನರಿಗೆ ಬಳಸುವ ಭಾಷೆಯನ್ನು ಉಳಿದವರಿಗೂ ಬಳಸುತ್ತೇವೆ. ಆದರೆ ಪತ್ರಕರ್ತರು ಮನಸಾಕ್ಷಿಯಿಂದ ಸಮಾಜಕ್ಕೆ ಉತ್ತಮ ಎನಿಸುವ ವಿಚಾರಗಳನ್ನು ಪ್ರಸಾರ ಮಾಡಬೇಕು. ಆಗ ಮಾತ್ರ ಕಾನೂನು ಮೀರಿ ಮಾನವೀಯತೆಯಿಂದ ಬದಕಲು ಸಾಧ್ಯ ಎಂದ ಶಾಂತಪ್ಪ, ಪತ್ರಕರ್ತರ ಸಹಕಾರ ಸಂಘ 75 ರ ಅಮೃತ ಸಂಭ್ರಮದಲ್ಲಿದೆ. ಆದರೆ ಪತ್ರಕರ್ತರ ಪಾಲಿಗೆ ಅಮೃತ ಬಂದಿದೆಯಾ? ಎಂದು ಪ್ರಶ್ನಿಸಿದರು. ಮಧ್ಯಮ ವರ್ಗದ ಸಂಕಷ್ಟು ಬಹಳಷ್ಟಿದೆ. ಪತ್ರಕರ್ತರು ಆ ದಿಕ್ಕಿನಲ್ಲಿ ನೋಡಬೇಕು ಎಂದರು.

ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಶಾಸಕರಾದ ರಿಜ್ವಾನ್ ಅರ್ಷದ್, ಪ್ರಜಾಪ್ರಭುತ್ವ ಇವತ್ತು ಉಳಿದಿರೋದೆ ಮಾಧ್ಯಮಗಳಿಂದ. ಇಂದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿರುವುದೇ ಮಾಧ್ಯಮಗಳು. ಆದರೆ ಕೆಲವು ಕಡೆಗಳಲ್ಲಿ ಕೋಮುವಾದ, ಜಾತೀಯತೆ ಬಿತ್ತಲಾಗುತ್ತಿದೆ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಅಂತಹ ಪತ್ರಕರ್ತರನ್ನು ಜೀವಂತವಾಗಿಟ್ಟಿರುವುದೇ ಪತ್ರಕರ್ತರ ಸಹಕಾರ ಸಂಘ ಎಂದು ಹೇಳಿದರು.

ಪತ್ರಕರ್ತರ ಸಹಕಾರ ಸಂಘ 75 ವರ್ಷ ಉಳಿದಿರುವುದೇ ಆಶ್ಚರ್ಯ. ಭಾರತದಲ್ಲಿಯೇ ಏಕೈಕ ಪತ್ರಕರ್ತರ ಆರ್ಥಿಕ ಸಂಸ್ಥೆ ಎಂಬುದು ತಿಳಿದು ಬಹಳ ಆಶ್ಚರ್ಯ ಆಯಿತು. ಇಂತಹ ಸಂಸ್ಥೆಗಳೇ ಇಂದಿಗೂ ನಿಜವಾದ ಪತ್ರಕರ್ತರನ್ನು ಉಳಿಸಿದೆ ಎಂದು ರಿಜ್ವಾನ್ ಅರ್ಷದ್ ಹೇಳಿದರು.

ಕಾರ್ಯಕ್ರಮದಲ್ಲಿ ಸುಮಾರು 24 ಎಸ್.ಎಸ್.ಎಲ್.ಸಿ ಪ್ರತಿಭಾನ್ವಿತ ಮಕ್ಕಳು, 31 ಪಿಯುಸಿ ಮಕ್ಕಳಿಗೆ, ನಾಲ್ವರು ಪದವಿ ವಿದ್ಯಾರ್ಥಿಗಳು, ಇಬ್ಬರು ಸ್ನಾತಕೋತ್ತರ ಪದವೀಧರರು, ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಒಬ್ಬರು ವೈದ್ಯಕೀಯ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಾಲ್ವರು ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಈ ಸುದ್ದಿಯನ್ನೂ ಓದಿ | Chess Olympiad : ಚೆಸ್ ಒಲಿಂಪಿಯಾಡ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದು ಚರಿತ್ರೆ ಬರೆದ ಭಾರತ

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಪಾಳ್ಯ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ದೊಡ್ಡ ಬೊಮ್ಮಯ್ಯ, ಖಜಾಂಚಿ ಬಿ.ಎನ್. ಮೋಹನ್ ಕುಮಾರ್, ನಿರ್ದೇಶಕರಾದ ರಾಜೇಂದ್ರ ಕುಮಾರ್, ವಿನೋದ್ ಕುಮಾರ್ ಬಿ. ನಾಯ್ಕ್, ರಮೇಶ್ ಹಿರೇಜಂಬೂರು, ಧ್ಯಾನ್ ಪೂಣಚ್ಚ, ಆನಂದ್ ಪರಮೇಶ್ ಬೈದನಮನಿ, ಸೋಮಶೇಖರ್ ಕೆ.ಎಸ್., ಪರಮೇಶ್ ಕೆ.ವಿ., ವನಿತಾ, ನಯನಾ, ಕೃಷ್ಣಕುಮಾರ್ ಉಪಸ್ಥಿತರಿದ್ದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ರಮೇಶ್ ಹಿರೇಜಂಬೂರು ನಿರೂಪಿಸಿದರು. ನಯನಾ ವಂದನಾರ್ಪಣೆ ನೆರವೇರಿಸಿದರು