Sunday, 22nd September 2024

Tungabhadra Dam: ಒಂದು ವರ್ಷದೊಳಗೆ ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ: ಡಿಕೆಶಿ

Tungabhadra Dam

ಹೊಸಪೇಟೆ/ ಮುನಿರಾಬಾದ್: ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರೆಸ್ಟ್ ಗೇಟ್‌ಗಳನ್ನು ಒಂದು ವರ್ಷದೊಳಗೆ ಅಳವಡಿಸಲಾಗುವುದು. ಆಂಧ್ರಪ್ರದೇಶ, ತೆಲಂಗಾಣ ಮತ್ತು ತುಂಗಭದ್ರಾ ಬೋರ್ಡ್ ಜತೆ ಚರ್ಚೆ ನಡೆಸಿ ನೂತನ ಗೇಟ್ ಅಳವಡಿಕೆ ಮಾಡಲಾಗುವುದು. ಇದರ ಮೂಲಕ ನಮ್ಮ ರೈತರ ರಕ್ಷಣೆ ಮಾಡಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ (Tungabhadra Dam) ಹೇಳಿದರು.

ತುಂಗಭದ್ರಾ ಜಲಾಶಯ ಬಾಗಿನ ಸಮರ್ಪಣೆ ನಂತರ ಮುನಿರಾಬಾದ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಗಸ್ಟ್ 10 ನೇ ತಾರೀಕಿನಂದು 19ನೇ ಗೇಟ್ ಕಿತ್ತು ಹೋದಾಗ ಜಿಲ್ಲಾ ಮಂತ್ರಿಗಳು, ಎಂಡಿಯವರು ಕರೆ ಮಾಡಿ ಡ್ಯಾಮ್ ಅಪಾಯದಲ್ಲಿದೆ ಎಂದು ಪರಿಸ್ಥಿತಿಯ ಬಗ್ಗೆ ತಿಳಿಸಿದರು. ನಾನು ಆತಂಕ ಪಡಬೇಡಿ ಎಂದು ಹೇಳಿ ಮಾರನೇ ದಿನವೇ ಸ್ಥಳಕ್ಕೆ ಭೇಟಿ ನೀಡಿದೆ. ಅಧಿಕಾರಿಗಳು ಹಾಗೂ ತಾಂತ್ರಿಕ ಪರಿಣಿತರ ಹತ್ತಿರ ಮಾತನಾಡಿ ಎಲ್ಲಾ ಗೇಟ್ ಗಳಿಂದ ನೀರನ್ನು ಹರಿಸಿ ಎಂದು ಹೇಳಿ ತಕ್ಷಣ ಗೇಟ್ ತಯಾರು ಮಾಡುವ ಸಂಸ್ಥೆಗಳ ಜೊತೆ ಚರ್ಚೆ ನಡೆಸಿ ಗೇಟ್ ತಯಾರಿಗೆ ಆದೇಶ ನೀಡಿದೆ ಎಂದರು.

ಡ್ಯಾಮಿನ ಗೇಟ್ ಕಿತ್ತು ಹೋದಂತಹ ಕಷ್ಟಕಾಲದಲ್ಲಿ ನಾವು ಎದೆಗುಂದದೆ ರೈತರ ಜಮೀನಿಗೆ ಮತ್ತೆ ನೀರನ್ನು ಕೊಡುವಂತಹ ಅವಕಾಶ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಹೇಳಿದರು.

ಕನ್ನಯ್ಯ ಅವರನ್ನು ಹೊಗಳಿದ ಡಿಸಿಎಂ

ಕಷ್ಟಕಾಲದಲ್ಲಿ ಕನ್ನಯ್ಯ ನಾಯ್ಡು ಅವರು ನಮ್ಮ ಜೊತೆ ನಿಂತು, 20 ಟಿಎಂಸಿಯಷ್ಟು ನೀರು ಉಳಿಸಿದರು. 9 ಲಕ್ಷ ಎಕರೆಗೆ ಬೆಳೆ ಹಾಗೂ ನಮ್ಮ ರೈತರನ್ನು ಉಳಿಸಿದ ಹಿರಿಯ ಜೀವ” ಎಂದು ಹೇಳಿದರು.

“ನಾರಾಯಣ ಎಂಜಿನಿಯರಿಂಗ್, ಜಿಂದಾಲ್ ಹಾಗೂ ಹಿಂದೂಸ್ತಾನ್ ಎಂಜಿನಿಯರಿಂಗ್ ಅವರು ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ ಬಹು ದೊಡ್ಡ ಕೆಲಸ ಮಾಡಿದ್ದಾರೆ. ಇಲಾಖೆಯ ಅಧಿಕಾರಿಗಳು ಸೇರಿ ಎಲ್ಲರ ಸಹಕಾರದಿಂದ ಇಡೀ ಭಾರತವೇ ತಿರುಗಿ ನೋಡುವಂತಹ ಕೆಲಸವನ್ನು ನಾವು ಮಾಡಿದ್ದೇವೆ. ಗೇಟ್ ಕಿತ್ತು ಹೋದಾಗ ಆಂಧ್ರ, ತೆಲಂಗಾಣದ ರೈತರು ಆತಂಕದಲ್ಲಿದ್ದರು. ಎಲ್ಲರ ಭಯವನ್ನು ನಾವು ಗೇಟ್ ಮರು ಜೋಡಿಸುವುದರ ಮೂಲಕ ದೂರ ಮಾಡಿದ್ದೇವೆ” ಎಂದರು.

ನವಲಿ ಆಣೆಕಟ್ಟು ನಿರ್ಮಾಣಕ್ಕೆ ಶೀಘ್ರ ಕ್ರಮ

ನಾವು ಉದ್ಘಾಟನೆ ವೇಳೆ ಗಿಡಕ್ಕೆ ನೀರು ಹಾಕಿದೆವು. ಇದು ರಾಜ್ಯದ ಜನರ ಹಾಗೂ ರೈತರ ಬದುಕನ್ನು ಹಸನು ಮಾಡಲು ಹಾಕಿದ ನೀರು. ನಮ್ಮ ಕರ್ನಾಟಕದ ಪಾಲಿನ ನೀರನ್ನು ಉಳಿಸಿಕೊಳ್ಳಲು ನಾವು ಹೋರಾಡುತ್ತೇವೆ. ನವಲಿಯಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ನಾವು ಮುಂದಾಗುತ್ತೇವೆ. ಈ ಅಣೆಕಟ್ಟು ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್ ತಯಾರಿಸಿದ್ದೇವೆ. ಸುಮಾರು ಹದಿನೈದು ಸಾವಿರ ಎಕರೆ ಭೂಮಿ ಇದಕ್ಕೆ ಬೇಕಾಗಿದೆ. ಈ ಕುರಿತು ನೆರೆಯ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡ ಕಾರಣಕ್ಕೆ ಸುಮಾರು 33 ಟಿಎಂಸಿಯಷ್ಟು ನಮ್ಮ ಪಾಲಿನ ನೀರು ಸಿಗುತ್ತಿಲ್ಲ. ಇದಕ್ಕೆಲ್ಲ ಪರಿಹಾರ ನವಲಿ ಅಣೆಕಟ್ಟು. ನಿರ್ಮಾಣಕ್ಕೆ ನೆರೆಯ ರಾಜ್ಯಗಳ ಸಹಕಾರವನ್ನು ಕೇಳಲಾಗುವುದು ಎಂದು ತಿಳಿಸಿದರು.

ಗಂಗಾ ಸ್ನಾನ, ತುಂಗಾ ಪಾನ ಎನ್ನುವ ಮಾತಿದೆ. ಅಂದರೆ ತುಂಗಾ ನೀರು ಕುಡಿಯಲು ಅಷ್ಟು ಪವಿತ್ರವಾದುದು. ಶೃಂಗೇರಿಯ ಶಾರದಾಂಬೆಯ ಪಾದ ಮುಟ್ಟಿ ಹರಿಯು ತುಂಗಾ ನದಿ ನಮ್ಮನ್ನು ಕಾಪಾಡಿದ್ದಾಳೆ. ಹಂಪಿಯ ವಿರೂಪಾಕ್ಷನ ಆಶೀರ್ವಾದದಿಂದ ಪ್ರಕೃತಿ ಮಾತೆಯ ಆಶೀರ್ವಾದದಿಂದ ಮತ್ತೆ ಅಣೆಕಟ್ಟು ತುಂಬಿದೆ” ಎಂದರು.

“ತುಂಗಭದ್ರಾ ಅಣೆಕಟ್ಟು ಕಾಂಗ್ರೆಸ್ ಪಕ್ಷದ ಕೊಡುಗೆ. ಈ ಇತಿಹಾಸವನ್ನು ಯಾರಿಂದಲೂ ತಿರುಚಲು ಸಾಧ್ಯವಿಲ್ಲ. ಆಧುನಿಕ ಭಾರತದ ದೇವಾಲಯಗಳು ಆಣೆಕಟ್ಟುಗಳು ಎಂದು ನೆಹರು ಅವರು ಹೇಳಿದ್ದರು. ರೈತರನ್ನು ಕಾಪಾಡುವುದೇ ಅಣೆಕಟ್ಟುಗಳು” ಎಂದು ಹೇಳಿದರು.

“ನಾನು ಈ ಹಿಂದೆ ತುಂಗಾ ಆರತಿ ಆರಂಭ ಮಾಡಿದ್ದೆ. ಈಗ ಕಾವೇರಿ ಆರತಿಗೆ ತೀರ್ಮಾನ ಮಾಡಿದ್ದೇವೆ. ಅದಕ್ಕೆ ಒಂದು ತಂಡವನ್ನು ರಚನೆ ಮಾಡಲಾಗಿದೆ. ಈಗಾಗಲೇ ಹರಿದ್ವಾರಾ, ಕಾಶಿ ಸೇರಿದಂತೆ ಇತರೇ ಕಡೆ ಅಧ್ಯಯನ ಮಾಡುತ್ತಿದೆ” ಎಂದು ಹೇಳಿದರು.

ಟೀಕೆಗಳು ಸತ್ತಿವೆ, ಕೆಲಸಗಳು ಉಳಿದಿವೆ

“ಗೇಟ್ ಕಿತ್ತು ಹೋದಾಗ ವಿರೋಧ ಪಕ್ಷಗಳು ಟೀಕೆ ಮಾಡಿದವು. ನಾನು ಹಾಗೂ ಸಿದ್ದರಾಮಯ್ಯ ಅವರು ವಿರೋಧಿಗಳ ಟೀಕೆಗಳಿಗೆ ಎದೆಗುಂದಲಿಲ್ಲ. ಸರ್ಕಾರದ ಸಚಿವರ ಹಾಗೂ ಶಾಸಕರ ಬೆಂಬಲದಿಂದ, ನಾವು ಮಾಡಿದ ಕೆಲಸದಿಂದ ಟೀಕೆಗಳು ಸತ್ತಿವೆ, ಕೆಲಸಗಳು ಉಳಿದಿವೆ” ಎಂದರು.

“ಜನ ಬದಲಾವಣೆ ಆಗಬಹುದು, ಜಗತ್ತು ಬದಲಾವಣೆ ಆಗಬಹುದು ಆದರೆ ನಾವು ಮಾಡಿರುವ ಸಾಧನೆಗಳು ಎಂದಿಗೂ ಶಾಶ್ವತ. ಆಣೆಕಟ್ಟು ಉಳಿಸಲು ಹಗಲು, ರಾತ್ರಿ ಕಷ್ಟಪಟ್ಟ ಕಾರ್ಮಿಕರ ಶ್ರಮದಲ್ಲಿ ನಾವು ಯಶಸ್ಸನ್ನು ಕಾಣುತ್ತಿದ್ದೇವೆ” ಎಂದು ಹೇಳಿದರು.

“ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂಬುದಕ್ಕೆ ನಿಮ್ಮ ಕಣ್ಣುಗಳೇ ಸಾಕ್ಷಿ. ಗ್ಯಾರಂಟಿ ಯೋಜನೆಗ ಮೂಲಕ ನಾಡಿನ ಪ್ರತಿಯೊಂದು ಕುಟುಂಬವು ಸಮೃದ್ಧಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಕಾಂಗ್ರೆಸ್ ಸರ್ಕಾರ ಚಿರಋಣಿಯಾಗಿರುತ್ತದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಮ್ಮ ಕೈ ಹಿಡಿದಿದ್ದೀರಿ. ಇದಕ್ಕಾಗಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ” ಎಂದರು.

ಈ ಸುದ್ದಿಯನ್ನೂ ಓದಿ | CM Siddaramaiah: ತಜ್ಞರ ವರದಿಯ ಆಧಾರದ ಮೇಲೆ ಡ್ಯಾಂ ಗೇಟ್‌ಗಳ ನಿರ್ವಹಣೆ: ಸಿಎಂ

“ಯಾವುದೇ ಕಾರಣಕ್ಕೂ ನಮ್ಮ ಕಾಂಗ್ರೆಸ್ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಮುಂದೆ 10 ವರ್ಷಗಳ ಕಾಲ ನಾವೇ ಬಾಗಿನ ಅರ್ಪಿಸುತ್ತೇವೆ. ಈ ವರ್ಷ ಉತ್ತಮ ಮಳೆ ಬಂದು ನಾನು ಮತ್ತು ಸಿದ್ದರಾಮಯ್ಯ ಅವರು ಪ್ರಮುಖ ನಾಲ್ಕು ಅಣೆಕಟ್ಟುಗಳಿಗೆ ಬಾಗಿನ ಅರ್ಪಿಸಿದ್ದೇವೆ. ನಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ” ಎಂದು ಹೇಳಿದರು.