Saturday, 23rd November 2024

Chess Olympiad : ಚೆಸ್ ಒಲಿಂಪಿಯಾಡ್‌ನಲ್ಲಿ ಡಬಲ್ ಚಿನ್ನ ಗೆದ್ದ ಭಾರತದ ಸ್ಪರ್ಧಿಗಳಿಗೆ ಮೋದಿ ಅಭಿನಂದನೆ

Chess Olympiad

ನವದೆಹಲಿ: ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ (ಫಿಡೆ) ಆಯೋಜಿಸುವ ಚೆಸ್ ಒಲಿಂಪಿಯಾಡ್‌ನಲ್ಲಿ (Chess Olympiad) ಭಾರತದ ಚೆಸ್ ಆಟಗಾರರು ಡಬಲ್ ಚಿನ್ನದ ಪದಕ ಗೆದ್ದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದ್ದಾರೆ “ಭಾರತವು ಶಕ್ತಿ ಮತ್ತು ಕನಸುಗಳಿಂದ ತುಂಬಿದೆ” ಎಂದು ಅವರು ಹೊಗಳಿದ್ದಾರೆ.

ಹಂಗರಿಯ ಬುಡಾಪೆಸ್ಟ್‌ನಲ್ಲಿ ಭಾನುವಾರ ನಡೆದ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಪುರುಷರ ಮತ್ತು ಮಹಿಳೆಯರ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದೆ. ಅಂತೆಯೇ ನ್ಯೂಯಾರ್ಕ್‌ ಪ್ರವಾಸದಲ್ಲಿರುವ ಮೋದಿ ನಸ್ಸಾವು ಕೊಲಿಸಿಯಂನಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಎರಡೂ ತಂಡಗಳ ಸಾಧನೆಗಳನ್ನು ಶ್ಲಾಘಿಸಿದ್ದಾರೆ. ಭಾರತವು ಶಕ್ತಿ ಮತ್ತು ಕನಸುಗಳಿಂದ ತುಂಬಿದೆ. ಪ್ರತಿದಿನ ನಾವು ಹೊಸ ಸಾಧನೆಗಳನ್ನು ನೋಡುತ್ತೇವೆ. ಇಂದು, ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿವೆ” ಎಂದು ಅವರು ಹೇಳಿದರು.

ಏನಿದು ಸಾಧನೆ?

ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆದ 45 ನೇ ಚೆಸ್ ಒಲಿಂಪಿಯಾಡ್‌ನಲ್ಲಿ (Chess Olympiad) ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಭಾನುವಾರ ಚಿನ್ನದ ಪದಕಗಳನ್ನು ಗೆದ್ದು ಚರಿತ್ರೆ ಬರೆದಿವೆ. ಪುರುಷರ ತಂಡದ ಸದಸ್ಯರಾದ ಡಿ ಗುಕೇಶ್, ಅರ್ಜುನ್ ಎರಿಗೈಸಿ ಮತ್ತು ಆರ್ ಪ್ರಗ್ನಾನಂದ 11ನೇ ಮತ್ತು ಅಂತಿಮ ಸುತ್ತಿನ ಪಂದ್ಯದಲ್ಲಿ ಸ್ಲೊವೇನಿಯಾ ವಿರುದ್ಧ ತಮ್ಮ ತಮ್ಮ ಸ್ಪರ್ಧೆಗಳನ್ನು ಗೆಲ್ಲುವ ಮೂಲಕ ಚಿನ್ನದ ಪದಕ ಜಯಿಸಿದರು. ಮಹಿಳಾ ತಂಡವು ಅಜೆರ್‌ಬೈಜಾನ್ ತಂಡವನ್ನು 3.5-0.5 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಈ ಹಿಂದೆ 2014 ಮತ್ತು 2022ರಲ್ಲಿ ಭಾರತ ಪುರುಷರ ತಂಡ ಕಂಚಿನ ಪದಕ ಜಯಿಸಿತ್ತು. ಆದರೆ, ಈ ಬಾರಿ ಡಬಲ್ ಚಿನ್ನ ಗೆದ್ದು ವಿನೂತನ ದಾಖಲೆ ಬರೆದಿದೆ.

ಚೆನ್ನೈನಲ್ಲಿ ನಡೆದ 2022 ರ ಆವೃತ್ತಿಯಲ್ಲಿ ಭಾರತೀಯ ಮಹಿಳೆಯರು ಕಂಚಿನ ಪದಕ ಗೆದ್ದಿದ್ದರು. ವಿಶ್ವ ಚಾಂಪಿಯನ್‌ಶಿಪ್‌ ಚಾಲೆಂಜರ್ ಗುಕೇಶ್ ಮತ್ತು ಅರ್ಜುನ್ ಎರಿಗೈಸಿ ಮತ್ತೊಮ್ಮೆ ಪ್ರಮುಖ ಗೇಮ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಮೊದಲ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದರು.

ಇದನ್ನೂ ಓದಿ: Anura Dissanayake : ಶ್ರೀಲಂಕಾ ನೂತನ ಅಧ್ಯಕ್ಷ ಅನುರಾ ದಿಸ್ಸಾನಾಯಕೆಗೆ ಪ್ರಧಾನಿ ಮೋದಿ ಅಭಿನಂದನೆ

ಸ್ಲೊವೇನಿಯಾ ವಿರುದ್ಧ, ಗುಕೇಶ್ ಪಂದ್ಯದ ತಾಂತ್ರಿಕ ಹಂತದಲ್ಲಿ ವ್ಲಾದಿಮಿರ್ ಫೆಡೋಸೆವ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. ಇದು ಶ್ರಮದಾಯಕ ವಿಜಯವಾಗಿದ್ದರೂ, 18 ವರ್ಷದ ಗ್ರ್ಯಾಂಡ್ ಮಾಸ್ಟರ್ ತಮ್ಮ ಅದ್ಭುತ ಕಾರ್ಯತಂತ್ರದ ಪ್ರದರ್ಶನದಿಂದ ಗಮನ ಸೆಳೆದರು. ಜಾನ್ ಸುಬೆಲಿ ವಿರುದ್ಧ ಎರಿಗೈಸಿ ಗೆದ್ದರೆ ಪ್ರಗ್ನಾನಂದ ಆಂಟನ್ ಡೆಮ್ಚೆಂಕೊ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು. ಈ ಮೂಲಕ ಭಾರತ ಸ್ಲೊವೇನಿಯಾ ವಿರುದ್ಧ 3-0 ಗೆಲುವು ಸಾಧಿಸಿತು.

ಅಜೆರ್‌ಬೈಜಾನ್‌ ವಿರುದ್ಧ 3.5-0.5 ಅಂತರದಲ್ಲಿ ಜಯ ಸಾಧಿಸಿದ ಭಾರತೀಯ ವನಿತೆಯರು ದೇಶಕ್ಕೆ ಅಪರೂಪದ ಡಬಲ್ ಚಿನ್ನ ತಂದುಕೊಡಲು ನೆರವಾದರು. ಡಿ ಹರಿಕಾ ತಂಡದ ತಾಂತ್ರಿಕವಾಗಿ ಅತ್ಯುತ್ತಮ ಪ್ರದರ್ಶನ ನೀಡಿದರು. ದಿವ್ಯಾ ದೇಶ್‌ಮುಖ್‌ ಮತ್ತೊಮ್ಮೆ ಎದುರಾಳಿಯನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಖಚಿತಪಡಿಸಿದರು.