Friday, 22nd November 2024

PM Modi In US : 2036ರ ಒಲಿಂಪಿಕ್ಸ್ ಆಯೋಜಿಸುವುದೇ ನಮ್ಮ ಗುರಿ; ಪ್ರಧಾನಿ ಮೋದಿ ವಿಶ್ವಾಸ

Modi In US

ಬೆಂಗಳೂರು: ನ್ಯೂಯಾರ್ಕ್‌ನಲ್ಲಿ ಭಾರತೀಯ ವಲಸಿಗರ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Modi In US) 2036 ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಭಾರತ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ. ಲಾಂಗ್ ಐಲ್ಯಾಂಡ್‌ನ ನಸ್ಸೌ ಕೊಲಿಸಿಯಂನಲ್ಲಿ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ ಈಗ ಭಾರತದಲ್ಲಿ “ಜನರ ಆಂದೋಲನ” ಆಗುತ್ತಿದೆ ಎಂದು ಹೇಳಿದರು.

“ಭಾರತ ಇಂದು ಅವಕಾಶಗಳ ಆಗರವಾಗಿದೆ. ಆದಾಗ್ಯೂ ಭಾರತವು ಅವಕಾಶಗಳಿಗಾಗಿ ಸರದಿಗಾಗಿ ಕಾಯುತ್ತಾ ಕೂರುವುದಿಲ್ಲ. ತನ್ನದೇ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಒಂದೇ ಪೀಳಿಗೆಯಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಅಂತೆಯೇ ಒಲಿಂಪಿಕ್ಸ್ ಆತಿಥ್ಯ ವಹಿಸುವ ಆಕಾಂಕ್ಷೆಯು ಈ ದೂರದೃಷ್ಟಿಯ ಭಾಗವಾಗಿದೆ. ಅಲ್ಲಿಗೆ ದೇಶ ನಿಲ್ಲುವುದಿಲ್ಲ ಮುಂದುವರಿಯುತ್ತದೆ ಎಂದು ಹೇಳಿದರು.

ಕೆಲವು ದಿನಗಳ ಹಿಂದೆಯಷ್ಟೇ ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯಗೊಂಡಿತ್ತು. ಶೀಘ್ರದಲ್ಲೇ, ನೀವು ಭಾರತದಲ್ಲೂ ಒಲಿಂಪಿಕ್ಸ್‌ ನಡೆಯುವುದನ್ನು ನೋಡಲಿದ್ದೀರಿ. 2036ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ವಲಸಿಗ ಭಾರತೀಯರನ್ನುದ್ದೇಶಿಸಿ ಹೇಳಿದರು.

ಕಳೆದ ವಾರ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು 2036 ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಮತ್ತು ಪದಕಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆಯುವ ಭಾರತದ ಆಕಾಂಕ್ಷೆಯ ಬಗ್ಗೆ ಮಾತನಾಡಿದ್ದರು. ಪುಣೆಯ ಕಾಲೇಜೊಂದರಲ್ಲಿ ನಡೆದ ‘ವಿಕಸಿತ್‌ ಭಾರತ್ ಅಂಬಾಸಿಡರ್ ‘ ಉಪಕ್ರಮದಲ್ಲಿ ಮಾತನಾಡಿದ ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರು, 2047 ರ ವೇಳೆಗೆ ಭಾರತವನ್ನು ಅಗ್ರ ಐದು ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Chess Olympiad : ಚೆಸ್ ಒಲಿಂಪಿಯಾಡ್‌ನಲ್ಲಿ ಡಬಲ್ ಚಿನ್ನ ಗೆದ್ದ ಭಾರತದ ಸ್ಪರ್ಧಿಗಳಿಗೆ ಮೋದಿ ಅಭಿನಂದನೆ

ವಿಕಸಿತ್‌ ಭಾರತ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಉತ್ತೇಜನ ನೀಡಬೇಕಾಗಿದೆ. ಏಕೆಂದರೆ ನಾವು ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. 2047ರ ವೇಳೆಗೆ ಕ್ರೀಡೆಯಲ್ಲಿ ಅಗ್ರ ಐದು ದೇಶಗಳಲ್ಲಿ ಒಂದಾಗುವುದು ನಮ್ಮ ಗುರಿ. ಈ ಗುರಿಯನ್ನು ಸಾಧಿಸಲು ಯಾವುದೇ ಅವಕಾಶ ಕಳೆದುಕೊಳ್ಳುವುದಿಲ್ಲ. ಅದಕ್ಕಾಗಿ ನಾವು ವಿಶ್ವದರ್ಜೆಯ ಕ್ರೀಡಾಪಟುಗಳನ್ನು ರಚಿಸಬೇಕಾಗಿದೆ” ಎಂದು ಅವರು ಹೇಳಿದರು.

ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು ಐದು ಕಂಚು ಮತ್ತು ಒಂದು ಬೆಳ್ಳಿ ಸೇರಿದಂತೆ ಆರು ಪದಕಗಳೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿತ್ತು.