Saturday, 23rd November 2024

Ravichandran Ashwin: ಸ್ಫೂರ್ತಿಪಥ ಅಂಕಣ: ಹುಟ್ಟು ಹೋರಾಟಗಾರ ಕ್ರಿಕೆಟರ್ – ರವಿಚಂದ್ರನ್ ಅಶ್ವಿನ್

ravichandran ashwin

ಒಬ್ಬನೇ ನಿಂತು ಪಂದ್ಯವನ್ನು ಗೆಲ್ಲಿಸುವ ಶಕ್ತಿ ಆತನಿಗೆ ಇದೆ!

Rajendra Bhat K
  • ರಾಜೇಂದ್ರ ಭಟ್ ಕೆ.

Ravichandran Ashwin: ಬಾಂಗ್ಲಾ ವಿರುದ್ಧದ ಟೆಸ್ಟ್ (test Cricket) ಪಂದ್ಯವನ್ನು ಭಾರತ ಅನಾಯಾಸವಾಗಿ ಗೆದ್ದಿತು. ಬ್ಯಾಟ್ ಮತ್ತು ಬಾಲ್ ಮೂಲಕ ನಿರ್ಣಾಯಕ ಕೊಡುಗೆ ಕೊಟ್ಟ ರವಿಚಂದ್ರನ್ ಅಶ್ವಿನ್ ಅವರಿಗೆ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಒಲಿದಿದೆ. ಅದು ಅತ್ಯಂತ ಅರ್ಹವಾದ ಆಯ್ಕೆ ಆಗಿತ್ತು.

ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸನಲ್ಲಿ 144 ರನ್ನಿಗೆ 6 ವಿಕೆಟ್ ಕಳೆದುಕೊಂಡು ಭಾರತವು ಪರದಾಡುತ್ತಿದ್ದ ಸಂದರ್ಭ ಅಶ್ವಿನ್ ಶತಕ ಹೊಡೆದು ಜಡೇಜಾ ಜೊತೆಗೆ ನಿಂತು ಮಹೋನ್ನತ ಇನ್ನಿಂಗ್ಸ್ ಕಟ್ಟದೆ ಹೋಗಿದ್ದರೆ ಭಾರತ ಈ ಪಂದ್ಯವನ್ನು ಗೆಲ್ಲುವುದು ಸುಲಭ ಆಗಿರಲಿಲ್ಲ! ಸೆಕೆಂಡ್ ಇನ್ನಿಂಗ್ಸನಲ್ಲಿ ಅಶ್ವಿನ್ 6 ವಿಕೆಟ್ ಕೂಡ ಉಡಾಯಿಸಿದರು. ಒಂದು ಅರ್ಥದಲ್ಲಿ ಈ ಟೆಸ್ಟ್ ಪಂದ್ಯವನ್ನು ಅಶ್ವಿನ್ ಅವರದ್ದೇ ಹೋರಾಟದ ಪಂದ್ಯವಾಗಿ ಘೋಷಣೆ ಮಾಡಬಹುದು!

2011ರಿಂದ ನಿರಂತರ ಟೆಸ್ಟ್ ಪಂದ್ಯ ಆಡುತ್ತಿರುವ ಅಶ್ವಿನ್

ಅಶ್ವಿನ್ ಈಗಾಗಲೇ 101 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರವಾಗಿ ಆಡಿದ್ದಾರೆ. 522 ಟೆಸ್ಟ್ ವಿಕೆಟ್ ಪಡೆಯುವ ಮೂಲಕ ಭಾರತದಲ್ಲಿ ಎರಡನೇ ಸ್ಥಾನ ತಲುಪಿದ್ದಾರೆ. ಮೊದಲ ಸ್ಥಾನದಲ್ಲಿ ಇರುವ ಅನಿಲ್ ಕುಂಬ್ಳೆ ಅವರಿಗಿಂತ ಕೇವಲ 97 ವಿಕೆಟ್ ಹಿಂದೆ ಇದ್ದಾರೆ. 37 ಬಾರಿ ಒಂದು ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಬೇಟೆ , 8 ಬಾರಿ ಹತ್ತು ವಿಕೆಟ್ ಬೇಟೆ ಆಡಿರುವ ಅಶ್ವಿನ್ ತನ್ನ ಹೆಸರಿಗೆ ಹಲವು ದಾಖಲೆಗಳನ್ನು ಬರೆದುಕೊಂಡಿದ್ದಾರೆ.

ಈಗಾಗಲೇ 38 ವರ್ಷ ಪ್ರಾಯ ಆಗಿರುವ ಅಶ್ವಿನ್ ಇನ್ನೂ ಐದಾರು ವರ್ಷ ದೇಶಕ್ಕಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಅಂದರೆ ಭಾರತದ ನಂಬರ್ ಒನ್ ವಿಕೆಟ್ ಟೇಕಿಂಗ್ ಬೌಲರ್ ಎಂದು ಕರೆಸಿಕೊಳ್ಳದೆ ಅಶ್ವಿನ್ ನಿವೃತ್ತಿ ಹೊಂದುವುದಿಲ್ಲ!

ಅಶ್ವಿನ್ ಅವರ ಇನ್ನೊಂದು ಸಾಮರ್ಥ್ಯ ಅಂದರೆ ಬ್ಯಾಟಿಂಗ್ ಆಳ. ಬಾಲಂಗೋಚಿ ಬ್ಯಾಟರ್ ಆಗಿ ಬರುವ ಆತ ಭಾರತಕ್ಕೆ ಹಲವಾರು ಪಂದ್ಯಗಳಲ್ಲಿ ಆಪದ್ಭಾಂಧವನ ಪಾತ್ರವನ್ನು ನಿಭಾಯಿಸಿದ್ದಾರೆ. 6 ಅತ್ಯಮೂಲ್ಯ ಶತಕಗಳ ಜೊತೆಗೆ 3000+ ರನ್ ಗುಡ್ಡೆ ಹಾಕಿದ್ದಾರೆ! ಅದರಲ್ಲಿ 14 ಅರ್ಧ ಶತಕಗಳ ಇನ್ನಿಂಗ್ಸ್ ಇವೆ.

ಬೌಲಿಂಗ್ ವೈವಿಧ್ಯದಲ್ಲಿ ಅಶ್ವಿನ್ ಸ್ಪೆಶಲ್

ಅನಿಲ್ ಕುಂಬ್ಳೆಯ ಹಾಗೆ ಅಶ್ವಿನ್ ಓವರನ ಆರು ಎಸೆತಗಳನ್ನು ಆರು ರೀತಿ ಎಸೆಯುವ ಶಕ್ತಿಯನ್ನು ಹೊಂದಿದ್ದಾರೆ. ಮೂಲತಃ ಆಫ್ ಸ್ಪಿನ್ನರ್ ಆಗಿರುವ ಅಶ್ವಿನ್ ಲೆಗ್ ಬ್ರೇಕ್, ಗೂಗ್ಲಿ, ಇನ್ ಸ್ವಿಂಗರ್, ಔಟ್ ಸ್ವಿಂಗರ್ ಎಲ್ಲವನ್ನೂ ಎಸೆಯುತ್ತಾರೆ. ಅದರ ಜೊತೆಗೆ ಅವರದ್ದೇ ಆದ ಕ್ಯಾರಂ ಬಾಲ್ ಕೂಡ ಅನ್ವೇಷಣೆ ಮಾಡಿದ್ದಾರೆ. ಸಣ್ಣ ರನ್ ಅಪ್ ಮೂಲಕ ವೇಗವನ್ನು ಪಡೆಯುವ ಅಶ್ವಿನ್ ಎದುರಾಳಿ ದಾಂಡಿಗನ ಮೈಂಡ್ ರೀಡಿಂಗ್ ತುಂಬ ಚೆನ್ನಾಗಿ ಮಾಡುವ ಕಾರಣ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಭಾರತದ ಮಟ್ಟಿಗೆ ಅವರು ಸದ್ಯದ ಅನಿವಾರ್ಯ ಆಟಗಾರ ಆಗಿದ್ದಾರೆ. ಹಾಗೆಯೇ ಏಕದಿನ, T20 ಹಾಗೂ ಐಪಿಎಲ್ ಪಂದ್ಯಗಳಲ್ಲಿ ಕೂಡ ಆತನ ಕ್ರಿಕೆಟ್ ದಾಖಲೆಗಳು ಅದ್ಭುತವಾಗಿಯೇ ಇವೆ.

2011ರ ಕ್ರಿಕೆಟ್ ವಿಶ್ವಕಪ್, 2013ರ ಚಾಂಪಿಯನ್ ಟ್ರೋಫಿ, 2010 ಮತ್ತು 2016ರ ಏಷಿಯಾ ಕಪ್ ಗೆದ್ದ ಭಾರತ ತಂಡದ ಸದಸ್ಯನಾಗಿ ಭಾರತವನ್ನು ಗೆಲ್ಲಿಸಿದ ಆಟಗಾರರಲ್ಲಿ ಅಶ್ವಿನ್ ಎತ್ತರದ ಸ್ಥಾನದಲ್ಲಿ ಇದ್ದಾರೆ.

ಅಶ್ವಿನ್ ಹೆಸರಿನಲ್ಲಿವೆ ಹತ್ತಾರು ದಾಖಲೆಗಳು

1) ಈವರೆಗೆ ಹತ್ತು ಬಾರಿ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿ ಗೆದ್ದಿರುವ ಅಶ್ವಿನ್ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಮತ್ತು ಭಾರತದ ಮೊದಲ ಆಟಗಾರ!

2) 3000 ರನ್ ಮತ್ತು 500 ವಿಕೆಟ್ ಸಂಪಾದನೆ ಮಾಡಿರುವ ವಿಶ್ವದ ಮೂರನೇ ಹಾಗೂ ಭಾರತದ ಮೊದಲ ಆಲ್ರೌಂಡರ್ ಅಶ್ವಿನ್!

3) ಅಶ್ವಿನ್ 50 ವಿಕೆಟ್/ 100 ವಿಕೆಟ್/150 ವಿಕೆಟ್/ 200 ವಿಕೆಟ್ /250/300/350/400/ 450/500 ವಿಕೆಟುಗಳನ್ನು ಅತ್ಯಂತ ವೇಗವಾಗಿ ಪಡೆದ ಭಾರತದ ಮೊದಲ ಬೌಲರ್ ಎಂಬ ಶ್ರೇಯ ಪಡೆದಿದ್ದಾರೆ.

4) ಶತಕ ಮತ್ತು 5 ವಿಕೆಟ್ ಗೊಂಚಲು ಜೊತೆಯಾಗಿ ಐದು ಬಾರಿ ಪಡೆದ ಭಾರತದ ಏಕೈಕ ಆಟಗಾರ ಅಶ್ವಿನ್.

ಈ ದಾಖಲೆಗಳ ಹೊರತಾಗಿಯೂ..

ಅಶ್ವಿನ್ ಅವರ ತಂದೆ ರವಿಚಂದ್ರನ್ ಕ್ಲಬ್ ಮಟ್ಟದ ಕ್ರಿಕೆಟ್ ಆಡಿದವರು. ಅವರು ವೇಗದ ಬೌಲರ್ ಆಗಿದ್ದರು. 9ನೇ ವರ್ಷ ಪ್ರಾಯದಲ್ಲಿ ಕ್ರಿಕೆಟ್ ಆಡಲು ಆರಂಭ ಮಾಡಿದ ಅಶ್ವಿನ್ ಆರಂಭದಲ್ಲಿ ಮೀಡಿಯಂ ಫೇಸರ್ ಬೌಲರ್ ಆಗಿದ್ದವರು. ಆಗ ಅವರ ಬಾಲ್ಯದ ಕೋಚ್ ಆಗಿದ್ದ ವಿಜಯಕುಮಾರ್ ಅವರ ಸಲಹೆಯ ಮೇರೆಗೆ ಅಶ್ವಿನ್ ಆಫ್ ಬ್ರೇಕ್ ಬೌಲರ್ ಆದರು! ಅಶ್ವಿನ್ ಮೊದಲು ಭಾರತವನ್ನು ಪ್ರತಿನಿಧಿಸಿದ್ದು ಅಂಡರ್ 17 ತಂಡದಲ್ಲಿ. ಆಗ ಅವರು ಆರಂಭಿಕ ಬ್ಯಾಟರ್ ಆಗಿದ್ದರು ಅನ್ನೋದು ಒಂದು ಅಚ್ಚರಿಯ ಸಂಗತಿ ಆಗಿತ್ತು! ಹೋರಾಟವು ರಕ್ತದಲ್ಲಿಯೇ ಬಂದಿರುವ ರವಿಚಂದ್ರನ್ ಅಶ್ವಿನ್ ಮೈದಾನದಲ್ಲಿ ಇರುವಷ್ಟು ಹೊತ್ತು ಭಾರತವನ್ನು ಸುಲಭದಲ್ಲಿ ಸೋಲಲು ಬಿಡುವುದಿಲ್ಲ ಎಂಬ ನಂಬಿಕೆಯು ಹಲವು ಬಾರಿ ಸಾಬೀತಾಗಿದೆ. ಅಂದ ಹಾಗೆ ಆತ ಚೆನ್ನೈಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ ಟೆಕ್ ಪದವಿಯನ್ನೂ ಹೊಂದಿದ್ದಾರೆ.

ಇದನ್ನೂ ಓದಿ: C Ashwath: ಸ್ಫೂರ್ತಿಪಥ ಅಂಕಣ: ಕನ್ನಡದ ಸುಗಮ ಸಂಗೀತ ಲೋಕದ ಮಹಾತಾರೆ ಸಿ.ಅಶ್ವತ್ಥ