ಕೋಲಾರದಿಂದ ಪೆನುಗೊಂಡಕ್ಕೆ ತೆರಳುವ ವೇಳೆ ಚಿಕ್ಕಬಳ್ಳಾಪುರ ಬಳಿ ನಡೆದ ಈ ದುರ್ಘಟನೆ
ಚಿಕ್ಕಬಳ್ಳಾಪುರ: ತಾಲೂಕಿನ ಶೆಟ್ ದಿನ್ನೆ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾನುವಾರ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತ ಪಟ್ಟಿದ್ದು ನಾಲ್ಕು ಜನ ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ರಜಿಯಾ ಶಾಹಿನ್(50) ಮೇಹಿಮುದುಲ್ (43) ಸ್ಥಳದಲ್ಲೇ ಮೃತ ಪಟ್ಟರೆ., ಮೊಹ್ಲಾನಾ ಶಾಹನ್ (50) ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಏನಿದು ಘಟನೆ: 9 ಜನ ಮುಸ್ಲಿಂ ಕುಟುಂಬ ಕೋಲಾರದಿಂದ ಟಾಟಾ ಸುಮೋ ಕಾರನ್ನು ಬಾಡಿಗೆ ಪಡೆದುಕೊಂಡು ಅಂಧ್ರದ ಪೆನುಗೊಂಡ ದರ್ಗಾಗೆ ಪ್ರಯಾಣಿಸುತ್ತಿದ್ದರು.ಈ ವೇಳೆ ಟಾಟಾ ಸುಮೋ ಚಾಲಕ ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಪ್ರಯತ್ನಿಸಲು ಹೋಗಿದ್ದಾನೆ.
ಈ ವೇಳೆ ಕಾರಿಗೆ ಲಾರಿ ಟಚ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ನಡೆದಿದೆ ಎನ್ನಲಾಗಿದೆ. ಟಾಟಾ ಸುಮೋ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.
ಡಿಕ್ಕಿಯ ರಭಸಕ್ಕೆ ಟಾಟಾ ಸುಮೋದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಒಬ್ಬನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ಸಾಗಿರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಇನ್ನುಳಿದ ನಾಲ್ಕು ಜನರು ಕೂಡ ಗಾಯಗೊಂಡಿದ್ದಾರೆ ಮತ್ತು ಅವರನ್ನು ಕೂಡ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಹಾರ ಮೂಲದ ಕುಟುಂಬ
ಅಪಘಾತಕ್ಕೀಡಾದವರು ಬಿಹಾರ ಮೂಲದವರಾಗಿದ್ದು, ಕೋಲಾರದ ದರ್ಗಾದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಇಂದು ಭಾನುವಾರವಾದ್ದರಿಂದ ಕುಟುಂಬ ಸಮೇತರಾಗಿ ಕೋಲಾರದಿಂದ ಪೆನುಗೊಂಡ ಕಡೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ದೇವರ ಕಾರ್ಯದಲ್ಲಿ ಸದಾ ನಿರತರಾಗಿದ್ದ ಈ ಕುಟುಂಬದ
ಸಂತಸಯಾತ್ರೆ ದುರಂತದ ಯಾತ್ರೆಯಾಗುವ ಬಗ್ಗೆ ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ.
ಅಪಘಾತ ಸ್ಥಳದ ಭೀಕರ ದೃಶ್ಯಗಳು ನೋಡುಗರ ಮನಕಲಕುವಂತಿತ್ತು. ಅಪಘಾತ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೋಲಿಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಕಾರನ್ನು ಕ್ರೇನ್ ಮೂಲಕ ತೆರವು ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: POCSO Case: ಬಾಲಕಿಯರ ನಗ್ನ ಫೋಟೋ ತಂದುಕೊಡುವಂತೆ ಒತ್ತಾಯಿಸುತ್ತಿದ್ದ ಕಾಮುಕ ಶಿಕ್ಷಕ!