Monday, 23rd September 2024

Vishweshwar Bhat Column: ಪುತ್ತೂರಾಯರ ʼಪದ ಪಂಚಾಮೃತʼ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಸಾಹಿತಿ, ವಾಗ್ಮಿ, ವೈದ್ಯ ಪ್ರಾಧ್ಯಾಪಕ ಮತ್ತು ಆಡಳಿತಗಾರರಾದ ಪ್ರೊ.ಕೆ.ಪಿ.ಪುತ್ತೂರಾಯ ಅವರು ಕೆಲ ದಿನಗಳ ಹಿಂದೆ ‘ಪದ ಪಂಚಾಮೃತ: ಮುತ್ತಿನಂಥ ಮಾತುಗಳ ಮಳಿಗೆ’ ಎಂಬ ಕೃತಿಯನ್ನು ಬಿಡುಗಡೆ ಮಾಡಿದರು. ಈ ಕೃತಿ ಭಾಷಣಗಳಿಗೆ ಭೂಷಣ, ಪ್ರವಚನಗಳಿಗೆ ಪೂರಕ ಮತ್ತು ಉಪನ್ಯಾಸಗಳಿಗೆ ಉಪಯುಕ್ತವಾಗಬಲ್ಲದು ಎಂದು ಲೇಖಕರು ಮುಖಪುಟದಲ್ಲಿಯೇ ಬರೆದುಕೊಂಡಿದ್ದಾರೆ. ಈ ಕೃತಿಯನ್ನು ಕೈಗೆತ್ತಿಕೊಳ್ಳಲು ಇದೊಂದೇ ಅಂಶ ಸಾಕು. ‘ಪವಿತ್ರಕ್ಕೆ ಪವಿತ್ರ ಪಂಚಾಮೃತ.

ಪದವೆಂದರೆ ಸಾರಸ್ವತ ಸಾನ್ನಿಧ್ಯ. ಈ ಎರಡರ ಸಂಗಮದ ರಂಗಸ್ಥಳವೇ ಪ್ರೊ.ಪುತ್ತೂರಾಯರ ಈ ಮೌಲಿಕ ಕೃತಿ’ ಎಂದು ಮುನ್ನುಡಿ ಬರೆದ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದ್ದಾರೆ. ಲೇಖಕರ ಆಶಯ ನುಡಿಯಲ್ಲಿ
ಪ್ರೊ.ಪುತ್ತೂರಾಯರು, ‘ಭಾಷಣ, ಪ್ರವಚನ, ಉಪನ್ಯಾಸಗಳನ್ನು ನೀಡುವ ವೇಳೆ, ಮಾತುಗಳ ಮಧ್ಯೆ ಒಳ್ಳೊಳ್ಳೆಯ ಸೂಕ್ತಿಗಳನ್ನು ಸೇರಿಸಿಕೊಂಡರೆ ಅದು ಪರಿಣಾಮಕಾರಿಯಾಗಿರುತ್ತದೆ. ಈ ಅಂಶವನ್ನೇ ಗಮನದಲ್ಲಿಟ್ಟುಕೊಂಡು ಈ
ಕೃತಿಯನ್ನು ರಚಿಸಿದ್ದೇನೆ’ ಎಂದು ಹೇಳಿದ್ದಾರೆ. ಭಾಷಣ ಮಾಡುವಾಗ ಕೇಳುಗರ ಗಮನವನ್ನು ಸೆಳೆಯಲು ಉತ್ತಮವಾದ ಸಾಲು, ಕೋಲ್ಮಿಂಚಿನಂಥ ಒಂದು ಸಾಲು, ಉಕ್ತಿ ಸಾಕು. ಅವು ಊಟಕ್ಕೆ ಉಪ್ಪಿನಕಾಯಿ ಇದ್ದಂತೆ.

ಅವಿಲ್ಲದಿದ್ದರೆ ಊಟ ಸಪ್ಪೆ. ಈ ಸಂಗತಿಯನ್ನು ಆಧರಿಸಿ, ಪ್ರೊ.ಪುತ್ತೂರಾಯರು ಚಮಕ್ ಎನ್ನುವ ಸಾಲುಗಳನ್ನು ವಿಷಯ ಅನುಕ್ರಮವಾಗಿ ಸಂಗ್ರಹಿಸಿಕೊಟ್ಟಿದ್ದಾರೆ. ‘ಅಧಿಕಾರ’ ಎಂಬ ವಿಷಯದ ಬಗ್ಗೆ ಅವರು ಬರೆದ ಕೆಲವು ಸಾಲುಗಳನ್ನು ಗಮನಿಸಬೇಕು: ಅಧಿಕಾರವೆಂದರೆ ಕಾನೂನಿನ ಚೌಕಟ್ಟಿನೊಳಗೆ, ಜನಸೇವೆ ಮಾಡಲು ಕೈಗೆ ಒದಗಿಬಂದಿರುವ ಒಂದು ತಾತ್ಕಾಲಿಕ ಸದವಕಾಶ.

ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೇ ಹೊರತು ದುರುಪಯೋಗ ಪಡಿಸಿಕೊಳ್ಳಬಾರದು. ಅಧಿಕಾರಕ್ಕೆ ಎರಡು ಸಾಮರ್ಥ್ಯಗಳಿವೆ. ಒಂದು ಇತರರಲ್ಲಿ ಭಯ ಹುಟ್ಟಿಸುವಂಥದ್ದು. ಇನ್ನೊಂದು ಗೌರವ ಹೆಚ್ಚಿಸುವಂಥದ್ದು. ಮೊದಲನೆಯದು ತಾತ್ಕಾಲಿಕ, ಎರಡನೆಯದು ಶಾಶ್ವತ. ಮನುಷ್ಯನ ನಿಜರೂಪವನ್ನು ಕಾಣಬೇಕಾದರೆ, ಅವನಿಗೆ ಅಧಿಕಾರವನ್ನು ಕೊಟ್ಟು ನೋಡಬೇಕು. ಕಾರಣ ಕೆಲವರಿಗೆ ಅಧಿಕಾರದ ಪಿತ್ತ ಬೇಗ ನೆತ್ತಿಗೆ ಏರಿರುತ್ತದೆ.
ಅಧಿಕಾರದಲ್ಲಿದ್ದವರು ಅಧಿಕಾರವನ್ನು ಕಳೆದುಕೊಂಡಾಗ, ಹಲ್ಲಿಲ್ಲದ ಹುಲಿಗಳಂತಾಗುತ್ತಾರೆ. ನೀರಿಲ್ಲದ ಮೀನಿನಂತೆ ಚಡಪಡಿಸುತ್ತಾರೆ.

ಕಾರಣ ಅಧಿಕಾರ ಮತ್ತು ಬಸುರಿತನ ಆಗಮಿಸುವಾಗ ಆನಂದವನ್ನೂ, ನಿರ್ಗಮಿಸುವಾಗ ಪ್ರಾಣಸಂಕಟವನ್ನೂ ನೀಡುತ್ತವೆ. ಬೆಲ್ಲ ಇದ್ದಲ್ಲಿ ಮಾತ್ರ ಇರುವೆಗಳ ದಂಡು. ಬೆಲ್ಲ ಖಾಲಿಯಾದಾಗ ಇರುವೆಗಳೂ ಜಾಗ ಖಾಲಿ ಮಾಡುತ್ತವೆ. ಅಂತೆಯೇ ಅಧಿಕಾರ, ಸೊತ್ತು, ಸಂಪತ್ತು ಇರುವಾಗ ಮಾತ್ರ ಜನ ನಮ್ಮ ಸುತ್ತಮುತ್ತ; ಏನೂ ಇಲ್ಲವಾದಾಗ ನೋಡುವವರೇ ಇಲ್ಲ ನಮ್ಮತ್ತ. ಇನ್ನು ‘ಅನುಭವ’ ಎಂಬ ವಿಷಯದ ಬಗ್ಗೆ ಪ್ರೊ.ಪುತ್ತೂರಾಯರು ತಮ್ಮ ಅನುಭವಾಮೃತವನ್ನು ಹೀಗೆ ಹರಿಸುತ್ತಾರೆ: ‘ಅನುಭವ’ವೆಂದರೆ ಗೈದ ತಪ್ಪುಗಳಿಂದ ನಾವು ಕಲಿತುಕೊಂಡ ಪಾಠಕ್ಕೆ ಕೊಟ್ಟ ಹೆಸರು. ಇದು ತಡವಾಗಿ ಅರಿತುಕೊಂಡ ತಿಳಿವಳಿಕೆ. ತಲೆ ಬೋಳಾದ ಮೇಲೆ ಸಿಗುವ ಬಾಚಣಿಗೆ ಯಂತೆ!

‘ಅನುಭವ’ ಅತ್ಯುತ್ತಮ ಶಿಕ್ಷಕ; ಗುರುವಿಗೂ ಗುರು. ಆದರೆ ಈ ಗುರುವಿನ ಶುಲ್ಕ ಮಾತ್ರ ಅತಿ ದುಬಾರಿ! ‘ಅನುಭವ’ ವೆನ್ನುವುದು ಎಷ್ಟು ಕಲಿತರೂ ಮುಗಿಯದ ಪಾಠ ಹಾಗೂ ಜೀವನವಿಡೀ ದೊರೆಯುವ ಒಂದು ಶಿಕ್ಷಣ. ನೀವು ಕಲಿತುಕೊಳ್ಳದಿರಬಹುದು, ಆದರೆ ಜೀವನವಂತೂ ಕಲಿಸುತ್ತಲೇ ಇರುತ್ತದೆ! ಪ್ರಮಾದಗಳು ನಮ್ಮ ಅನುಭವವನ್ನು ಹೆಚ್ಚಿಸುತ್ತವೆ. ಅನುಭವಗಳು ಮುಂದೆ ನಡೆಯಬಹುದಾದ ಪ್ರಮಾದಗಳನ್ನು ಕಡಿಮೆ ಮಾಡುತ್ತವೆ. ಶಿಕ್ಷಕ ಮೊದಲು ಪಾಠಗಳನ್ನು ಹೇಳಿ ನಂತರ ಪರೀಕ್ಷೆಗಳನ್ನು ನಡೆಸುತ್ತಾನೆ. ಆದರೆ ಅನುಭವ ಮೊದಲು ಪರೀಕ್ಷೆಗಳನ್ನೊಡ್ಡಿ ನಂತರ ಮರೆಯಲಾರದ ಪಾಠಗಳನ್ನು ಕಲಿಸುತ್ತದೆ.

ಶಾಲಾ ಕಾಲೇಜುಗಳಲ್ಲಿ ಓದಿದ ಪಾಠಗಳು ಮರೆತುಹೋಗಬಹುದು. ಆದರೆ ಅನುಭವದಿಂದ ಕಲಿತ ಪಾಠಗಳು ಎಂದೂ ಮರೆತುಹೋಗದು. ಅನುಭವ ದಲ್ಲಿ ಒಳ್ಳೆಯ ಅನುಭವ, ಕೆಟ್ಟ ಅನುಭ ವಗಳೆಂದಿಲ್ಲ! ಎರಡರಿಂದಲೂ ಕಲಿಯುವುದಿದೆ. ಕೆಟ್ಟ ಅನುಭವಗಳು ಜೀವನದ ದೊಡ್ಡ ಪಾಠಗಳನ್ನು ಕಲಿಸುತ್ತವೆ. ‘ಅನುಭವ’ವಿಲ್ಲದೆ ಪಡೆದ ವಿದ್ಯೆಗಿಂತಲೂ, ವಿದ್ಯೆ ಇಲ್ಲದೆ ಪಡೆದ ಅನುಭವವೇ ಶ್ರೇಷ್ಠ. ಇದುವೇ ಸಾಮಾನ್ಯ ಜ್ಞಾನ. ವ್ಯವಹಾರ ಜ್ಞಾನ.

ಇದನ್ನೂ ಓದಿ: Vishweshwar Bhat Column: ಇಂದಿರಾ ನಿವೃತ್ತಿ ಚಿಂತನೆ