Monday, 23rd September 2024

Bengaluru vs North Indians: ಉತ್ತರದವರು ಹೋದರೆ ಬೆಂಗಳೂರು ನಗರ ಖಾಲಿ ಎಂದಾಕೆಗೆ ಕನ್ನಡಿಗರ ತರಾಟೆ

Bengaluru vs north indians

ಬೆಂಗಳೂರು: ಉತ್ತರ ಭಾರತೀಯರೆಲ್ಲ ಬೆಂಗಳೂರು (Bengaluru vs north indians) ಬಿಟ್ಟರೆ ನಗರ ಖಾಲಿ ಖಾಲಿಯಾಗುತ್ತದೆ ಎಂದು ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ (Instagram influencer) ಮಹಿಳೆಯೊಬ್ಬರು ವಿಡಿಯೋ ಮಾಡಿದ್ದು, ಅದೀಗ ವೈರಲ್‌ (viral video) ಆಗಿದೆ. ಇದರಿಂದ ರೊಚ್ಚಿಗೆದ್ದಿರುವ ಕನ್ನಡಿಗರು ʼನೀವು ಹೋದರೆ ಏನೂ ಸಮಸ್ಯೆಯಿಲ್ಲ. ತೊಲಗಿʼ ಎಂದು ಟ್ರೋಲ್‌ ಮಾಡಿದ್ದಾರೆ. ಕರವೇ ಅಧ್ಯಕ್ಷ ನಾರಾಯಣ ಗೌಡ (Narayana Gowda) , ರ್ಯಾಪರ್‌ ಚಂದನ್‌ ಶೆಟ್ಟಿ (Chandan Shetty) ಸೇರಿದಂತೆ ಕನ್ನಡಿಗ ಸೆಲೆಬ್ರಿಟಿಗಳು ಕೂಡ ʼಗಂಟು ಮೂಟೆ ಕಟ್ಟಿಕೊಂಡು ಹೊರಡಿʼ ಎಂದಿದ್ದಾರೆ.

ಬೆಂಗಳೂರಿನ ಕೋರಮಂಗಲ ಪ್ರದೇಶದಲ್ಲಿ ಚಿತ್ರೀಕರಿಸಲಾದ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ, ಇನ್‌ಸ್ಟಗ್ರಾಂ ಇನ್‌ಪ್ಲುಯೆನ್ಸರ್‌ ಸುಗಂಧ್ ಶರ್ಮಾ ಎಂಬಾಕೆ, ಉತ್ತರ ಭಾರತೀಯರು ಬೆಂಗಳೂರು ತೊರೆದರೆ, ನಗರ ಖಾಲಿಯಾಗುತ್ತದೆ. ಎಲ್ಲ ಪಿಜಿಗಳು ಖಾಲಿಯಾಗುತ್ತವೆ. ಕೋರಮಂಗಲದ ಎಲ್ಲ ಪಬ್‌ಗಳು, ಅಲ್ಲಿ ಕುಣಿಯುವ ಹುಡುಗಿಯರು ಎಲ್ಲರೂ ಹೋಗುತ್ತಾರೆ ಎಂದು ಹೇಳಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಸೆಲೆಬ್ರಿಟಿಗಳಿಂದ ಸಾಮಾನ್ಯ ನಾಗರಿಕರವರೆಗೂ ಅನೇಕ ಕನ್ನಡಿಗರು ಈ ಹೇಳಿಕೆಯನ್ನು ʼವಿಭಜನಕಾರಿʼ ಮತ್ತು ʼಬೆಂಗಳೂರಿಗೆ ಅಗೌರವಕಾರಿʼ ಎಂದು ಖಂಡಿಸಿದ್ದಾರೆ. ನಟ ಮತ್ತು ರ್ಯಾಪರ್ ಚಂದನ್ ಶೆಟ್ಟಿ, ನಟಿಯರಾದ ಚೈತ್ರಾ ಆಚಾರ್ ಮತ್ತು ಅನುಪಮಾ ಗೌಡ ಮತ್ತು ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ ಮತ್ತು ಧನರಾಜ್ ಸೇರಿದಂತೆ ಗಣ್ಯರು ಶರ್ಮಾ ಅವರ ಟೀಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಂದನ್‌ ಶೆಟ್ಟಿ, ಈ ವೀಡಿಯೊವನ್ನು ಪ್ರಚಾರದ ಸ್ಟಂಟ್ ಎಂದು ಟೀಕಿಸಿದ್ದಾರೆ. “ನಿಜವಾಗಿಯೂ ನೀವು ಹೊರಟು ನೋಡಿ. ಬೆಂಗಳೂರು ಹೇಗೆ ಖಾಲಿಯಾಗುತ್ತದೆ ನೋಡೋಣ. ನಾವು ಆ ಖಾಲಿತನದಲ್ಲಿ ಮತ್ತು ಡ್ಯಾನ್ಸರ್‌ಗಳನ್ನು ಬಿಟ್ಟು ಬದುಕಲು ಸಿದ್ಧರಿದ್ದೇವೆ. ನಾವು ಅದರೊಂದಿಗೇ ಬದುಕಬಹುದು. ಉಳಿದೆಲ್ಲ ಉತ್ತರ ಭಾರತೀಯರನ್ನು ಮರೆತುಬಿಡಿ. ಸದ್ಯಕ್ಕೆ ನೀವು ಈ ಊರು ಬಿಡಿ” ಎಂದು ನಟಿ ಚೈತ್ರಾ ಆಚಾರ್ ಪ್ರತಿಕ್ರಿಯಿಸಿದ್ದಾರೆ.

“ಇದು ಕೂಲ್ ವಿಚಾರ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಮಗೇ ಬೆಂಗಳೂರು ಬೇಕಿದೆ. ನೀವು ಬೆಂಗಳೂರು ತೊರೆಯುವುದರಿಂದ ನಮ್ಮ ಊರಿಗೆ ಯಾವುದೇ ವ್ಯತ್ಯಾಸವಿಲ್ಲ. ನಾವೆಲ್ಲ ಬೆಂಗಳೂರನ್ನು ತೊರೆಯಲು ಸಾಧ್ಯವಿಲ್ಲ” ಎಂದು ಅನುಪಮಾ ಗೌಡ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಭಾರತೀಯರು ಬೆಂಗಳೂರು ತೊರೆದರೆ ನಗರ ಖಾಲಿಯಾಗಲಿದೆ ಎಂದ ಮಹಿಳೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ. “ನೀವು ಹೋದರೆ ಕರ್ನಾಟಕ ಖಾಲಿ ಖಾಲಿ ಆಗೋದಿಲ್ಲ, ಬದಲಾಗಿ ಕ್ಲೀನ್ ಆಗುತ್ತದೆ. ಇರುವುದಾದರೆ ಸುಮ್ಮನಿರಿ, ಇಲ್ಲವಾದರೆ ಗಂಟು ಮೂಟೆ ಕಟ್ಟಿಕೊಂಡು ಹೊರಡಿ” ಎಂದು ನಾರಾಯಣ ಗೌಡ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: Viral Video: ʼಬೆಂಗಳೂರು ನಡೆಯುತ್ತಿರುವುದೇ ಉತ್ತರದವರಿಂದʼ ಎಂದು ಪೊಗರು ತೋರಿಸಿದ ಮಹಿಳೆಗೆ ʼನಡಿಯಾಚೆʼ ಎಂದ ಕನ್ನಡಿಗರು!