Friday, 22nd November 2024

Oscars 2025: ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ಬಾಲಿವುಡ್‌ನ ʼಲಾಪತಾ ಲೇಡೀಸ್‌ʼ

Laapataa Ladies

ಮುಂಬೈ: ಇತ್ತೀಚೆಗೆ ತೆರೆಕಂಡ ಬಾಲಿವುಡ್‌ನ ʼಲಾಪತಾ ಲೇಡೀಸ್‌ʼ (Laapataa Ladies) ಸಿನಿಮಾ ದೇಶದ ಗಮನ ಸೆಳೆದಿತ್ತು. ಕಿರಣ್‌ ರಾವ್‌ (Kiran Rao) ನಿರ್ದೇಶನದ ಈ ಚಿತ್ರ ಕಡಿಮೆ ಬಜೆಟ್‌ನಲ್ಲಿ ತಯಾರಾಗಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಈ ಸಿನಿಮಾ ಆಸ್ಕರ್‌ ಸ್ಪರ್ಧೆಗೆ ಅಧಿಕೃತವಾಗಿ ಪ್ರವೇಶ ಪಡೆದಿದೆ (Oscars 2025).

ʼʼ97ನೇ ಆಸ್ಕರ್‌ ಪ್ರಶಸ್ತಿಗಾಗಿ ಭಾರತದಿಂದ ʼಲಾಪತಾ ಲೇಡೀಸ್‌ʼ ಸಿನಿಮಾ ಅಧಿಕೃತವಾಗಿ ಪ್ರವೇಶ ಪಡೆದಿದೆ” ಎಂದು ಫಿಲಂ ಫೆಡರೇಶನ್‌ ಆಫ್‌ ಇಂಡಿಯಾ ಚೆನ್ನೈಯಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ. 12 ಹಿಂದಿ, 6 ತಮಿಳು ಮತ್ತು 4 ಮಲಯಾಳಂ ಚಿತ್ರಗಳು ಸೇರಿ 29 ಸಿನಿಮಾಗಳು ರೇಸ್‌ನಲ್ಲಿದ್ದವು. ಈ ಪೈಕಿ ʼಲಾಪತಾ ಲೇಡೀಸ್‌ʼ ಆಯ್ಕೆಯಾಗಿದೆ. 13 ಸದಸ್ಯರನ್ನು ಒಳಗೊಂಡ ಸಮಿತಿ ಆಯ್ಕೆ ನಡೆಸಿದೆ.

ರೇಸ್‌ನಲ್ಲಿದ್ದ ಚಿತ್ರಗಳು

ʼಹನುಮಾನ್‌ʼ, ʼಅನಿಮಲ್‌ʼ, ʼಕಿಲ್‌ʼ, ʼಕಲ್ಕಿ 2898 ಎಡಿʼ, ʼಶ್ರೀಕಾಂತ್‌ʼ, ʼಚಂದು ಚಾಂಪಿಯನ್‌ʼ, ʼಜೋರಮ್‌ʼ, ʼಮೈದಾನ್‌ʼ, ʼಸ್ಯಾಮ್‌ ಬಹದ್ದೂರ್‌ʼ, ʼಆರ್ಟಿಕಲ್‌ 370ʼ, ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂನ ʼಆಟಂʼ ಮುಂತಾದ ಚಿತ್ರಗಳು ಸ್ಪರ್ಧಿಸಿದ್ದವು. ʼಲಾಪತಾ ಲೇಡೀಸ್‌ʼ ಸಿನಿಮಾವನ್ನು ಆಮೀರ್ ಖಾನ್, ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಹೊಸಬರಾದ ನಿತಾನ್ಶಿ ಗೋಯೆಲ್, ಪ್ರತಿಭಾ ರಾಂಟಾ, ಸ್ಪರ್ಶ್ ಶ್ರೀವಾಸ್ತವ್, ಛಾಯಾ ಕದಮ್, ರವಿ ಕಿಶನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ʼಲಪಾತಾ ಲೇಡೀಸ್ʼ ಚಿತ್ರವನ್ನು ಬಿಪ್ಲಬ್ ಗೋಸ್ವಾಮಿ ಅವರ ಕಥೆಯನ್ನು ಆಧರಿಸಿ ತಯಾರಿಸಲಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ ಬರೆದಿದ್ದಾರೆ. ಇದು ಕಳೆದ ವರ್ಷ ಪ್ರತಿಷ್ಠಿತ ಟೊರೊಂಟೊ ಇಂಟರ್‌ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್ (TIFF)ನಲ್ಲಿ ಪ್ರದರ್ಶನ ಕಂಡಿತ್ತು. ಈ ಚಿತ್ರವು ಮಾರ್ಚ್ 1ರಂದು ಭಾರತದಲ್ಲಿ ತೆರೆಕಂಡು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಂಡು ಇನ್ನಷ್ಟು ಜನಪ್ರಿಯಗೊಂಡಿದೆ. ಸರಳ ಕಥಾ ಹಂದರದ ಈ ಸಿನಿಮಾದ ಮುಕುಟಕ್ಕೆ ಇದೀಗ ಮತ್ತೊಂದು ಗರಿ ಲಭಿಸಿದಂತಾಗಿದೆ. ಮುಂದಿನ ತಿಂಗಳು ಈ ಚಿತ್ರ ಜಪಾನ್‌ನಲ್ಲಿ ತೆರೆ ಕಾಣಲಿದೆ.

ಕಳೆದ ವರ್ಷ ಮಲಯಾಳಂ ಚಿತ್ರ ʼ2018ʼ ಅಸ್ಕರ್‌ಗೆ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧಿಸಿತ್ತು. ಆದರೆ ಶಾರ್ಟ್‌ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲವಾಗಿತ್ತು.

ಈ ಸುದ್ದಿಯನ್ನೂ ಓದಿ: Rishab Shetty: ‘ಕಾಂತಾರ 2’ ಶೂಟಿಂಗ್‌ ನಡುವೆ ರಿಲ್ಯಾಕ್ಸ್‌ ಮೂಡಿಗೆ ಜಾರಿದ ರಿಷಬ್‌ ಶೆಟ್ಟಿ; ಪತ್ನಿಯೊಂದಿಗೆ ಕಯಾಕಿಂಗ್