Saturday, 23rd November 2024

ಇಂಥವರನ್ನಾ ನಾವು ಪ್ರಥಮ ಪ್ರಜೆ ಎಂದೆಲ್ಲಾ ಕರೆದದ್ದು ?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

2001 ಜೂನ್ 30. ‘ಎನ್ನ ಕಾಪತಿಂಗೇ..ಎನ್ನ ಕೊಲೆ ಪಂಡ್ರಾಂಗು..’ ಹೀಗೆ ತಮಿಳಿನಲ್ಲಿ ಕೂಗಾಡುತ್ತಾ ಬಾಯಿಬಡಿದುಕೊಳ್ಳುವಂತೆ ಮಾಡಿ ದೊಡ್ಡ ಬಂಗಲೆಯೊಂದರಿಂದ ನಮ್ಮ ವಾಟಾಳ್ ನಾಗರಾಜ್‌ರನ್ನು ಪೊಲೀಸಿನವರು ಎತ್ತಿಕೊಂಡು ಹೋದಂತೆ ಬಂಧಿಸಿ
ಎತ್ತಾಕಿಕೊಂಡು ಹೋಗಿದ್ದು ತಮಿಳುನಾಡಿನ ಪೊಲೀಸರು.

ಅಂಥ ಖಡಕ್ ಅಧಿಕಾರಿಯ ಹೆಸರು ಮುರಗೇಶ್. ಆದರೆ ಮೇಲಿನಂತೆ ಕಂಗಾಲಾಗಿ ಬಂಧಿತನಾಗಿದ್ದು ಯಾವುದೇ ಖಾಲಿಪೋಲಿ ಆರೋಪಿಯಲ್ಲ, ಆತ ತಮಿಳುನಾಡು ರಾಜ್ಯವನ್ನು ಬರೋಬ್ಬರಿ ಐದು ಅವಧಿಗೆ ಮುಖ್ಯಮಂತ್ರಿಯಾಗಿ ಇಪ್ಪತ್ತು ವರ್ಷಗಳ ಕಾಲ ಆಳಿದ ಕರುಣಾನಿಧಿ.

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಕೇವಲ ಹದಿನೈದು ದಿನಗಳಷ್ಟೇ ಆಗಿತ್ತು. ತಮಿಳುನಾಡಿನ ಹಣೆಬರಹ ವೇನೆಂದರೆ ಕರಣಾನಿಧಿ ಐದು ವರ್ಷಗಳ ಕಾಲ ಆಡಳಿತ ಮಾಡಿದರೆ ಮುಂದಿನ ಐದುವರ್ಷಗಳ ಕಾಲ ಜಯಲಲಿತ ದರ್ಬಾರು. ಅವರವರ ಆಡಳಿತದಲ್ಲಿ ಪರಸ್ಪರ ಸೇಡಿನ ರಾಜಕಾರಣ ಮಾಡಿಕೊಳ್ಳುತ್ತಾರೆ. ಹಾಗೆಯೇ ಹಿಂದೆ ಯಾರೋ ಒಬ್ಬ ವಿಧಾನಸಭೆಯಲ್ಲಿ ಜಯಲಲಿತ ಸೀರೆ ಎಳೆದರೆ, ಅದರ ಪ್ರತೀಕಾರವಾಗಿ ಕರುಣಾನಿಧಿಯನ್ನು ಆರೋಪವೊಂದರಲ್ಲಿ ರಾತ್ರೋ ರಾತ್ರಿ ಪೊಲೀಸರು ಮುಲಾಜಿಲ್ಲದೆ ಬಂಧಿಸಿ ಹೆಣಬಾರದ ಮೂಟೆಯಂತೆ ಹೊತ್ತು ಹೋಗುತ್ತಾರೆ. ಇಲ್ಲಿ ಈ ವಿಷಯ ಪ್ರಸ್ತಾಪಿಸಲು ಕಾರಣವೇನೆಂದರೆ ಆರೋಪಿ ಯಾವನೇ ಆಗಿರಲಿ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಬಂಧಿಸಿ ಕಾನೂನಿನ ಶಕ್ತಿಯನ್ನು ಅನುಷ್ಠಾನಗೊಳಿಸುವಂಥ
ದಿಟ್ಟ ಪೊಲೀಸರ ಹೆಚ್ಚುಗಾರಿಕೆ. ಯಾವುದೇ ರಾಜಕೀಯದ ಒತ್ತಡಗಳು ಮುಲಾಜುಗಳು ಇರದೇ ಹೋದರೆ ಪೊಲೀಸರು ತಮ್ಮ ನೈಜ ಕರ್ತವ್ಯವನ್ನು ನಿರ್ವಹಿಸಬಹುದು.

ಆದರೆ ನಮ್ಮಲ್ಲಿನ ಅಣಕವೆಂದರೆ ಮೊನ್ನೆ ದೇವರ ಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿಯಲ್ಲಿ ನಡೆದ ಪಕ್ಕಾ ರಾಜಕೀಯ
ಪ್ರೇರಿತ ಗಲಭೆ ದಾಂಧಲೆಗಳ ತನಿಖೆಯನ್ನು ಮಾಡಿದ ಪೊಲೀಸರ ತಂಡಕ್ಕೆ ಹಲವಾರು ಸಾಕ್ಷಿ ದಾಖಲೆಗಳ ಪ್ರಕಾರ ಸ್ಪಷ್ಟ ವಾದದ್ದು ಏನೆಂದರೆ ಗಲಭೆಯ ಸೂತ್ರಧಾರರ ಪೈಕಿ ಮಾಜಿ ಮೇಯರ್ ಸಂಪತ್‌ರಾಜ್ ಒಬ್ಬರೂ ಎಂಬುದು.

ತನಿಖೆ ಆರಂಭವಾಗುತ್ತಿದಂತೆ ತನ್ನ ಭುಜ ಮುಟ್ಟಿ ನೋಡಿಕೊಂಡ ಸಂಪತ್‌ರಾಜ್‌ನನ್ನು ‘ಬದುಕಿಸಿದ್ದು’ ಮಾತ್ರ ಇಡೀ ಜಗತ್ತಿಗೇ ಪೀಡೆಯಾಗಿದ್ದ ಕರೋನಾ. ಕೂಡಲೇ ಕರೋನಾ ಪಾಸಿಟಿವ್ ನೆಪದಲ್ಲಿ ಆಸ್ಪತ್ರೆ ಸೇರಿದ ಸಂಪತ್ ರಾಜ್‌ಗೆ ಅನಿಸಿದ್ದು ಏನೇ ಸಂಪತ್ತಿದ್ದರೂ ಗ್ರಹಚಾರ ನೆಟ್ಟಗಿಲ್ಲದಿದ್ದರೆ ಕಾನೂನಿನಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬುದು. ಹೀಗಾಗಿ  ಕಳ್ಳನಿ ಗೊಂದು ಪಿಳ್ಳೆ ನೆಪ ಎಂಬಂತೆ ಆಸ್ಪತ್ರೆಯಲ್ಲಿ ಐಸೋಲೇಷನ್‌ಗೆ ಒಳಗಾದರೆ ಕಾನೂನು ಕ್ವಾರಂಟೈನ್ ಆಗಿಹೋಯಿತು. ಹೊರಗಡೆ ಜನ ಮಾತಾಡಿಕೊಂಡಿದ್ದೇನೆಂದರೆ ಇದು ಬಿಜೆಪಿ ಸರಕಾರ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಂಟರ್‌ಗಳ ಪ್ರಚೋದನೆಯಿಂದ ಆದ ಡಿಜೆಹಳ್ಳಿ – ಕೆಜಿಹಳ್ಳಿ ಪ್ರಕರಣದಲ್ಲಿ ಯಾವ ಮುಲಾಜಿಲ್ಲದೆ ಪೊಲೀಸರನ್ನು ಬಳಸಿಕೊಂಡು ವಿರೋಧ ಪಕ್ಷಗಳ ಆರೋಪಿತರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಾರೆಂದು. ಆದರೆ ಬಿಜೆಪಿಯವರು ಎಷ್ಟು ಒಳ್ಳೆಯವರೆಂದರೆ, ಗಲಭೆಯಾಗಿ ಮೂರು ತಿಂಗಳು ಕಳೆಯುತ್ತಾ ಬಂದರೂ 51ನೇ ಆರೋಪಿಯಾದ ಸಂಪತ್ ರಾಜ್‌ನ್ನು ಬಂಧಿಸುವ ಪ್ರಯತ್ನವೇ ಮಾಡಲಿಲ್ಲ. ರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡಕಟ್ಟಲು
ಹಣವಿಲ್ಲದಿದ್ದರೆ ವಾಹನವನ್ನೇ ಎತ್ತಾಕಿಕೊಂಡು ಹೋಗುವ, ಪಿಕ್‌ಪಾಕೆಟರ್, ಸರಗಳ್ಳರು, ರೌಡಿಗಳನ್ನು ಕೂಡಲೇ ಬಂಧಿಸುವ ಪೊಲೀಸರು, ಒಂದು ಊರಿಗೇ ಬೆಂಕಿ ಯಿಟ್ಟಿದ್ದಲ್ಲದೆ ಪೊಲೀಸ್ ಠಾಣೆಗೇ ಕೊಳ್ಳಿಯಿಟ್ಟು, ಜನಪ್ರತಿನಿಧಿಯಾದ ಶಾಸಕರ ಮನೆಯನ್ನೇ ಹೊತ್ತಿ ಉರಿಸಿದ ದುಷ್ಕೃತ್ಯಕ್ಕೆ ಚಿತ್ರಕಥೆ ನಿರ್ದೇಶಕ ಸಹನಿರ್ಮಾಪಕನಾಗಿ ನಿಂತ ಆರೋಪಿಯನ್ನು ಮುಲಾಜಿಲ್ಲದೇ ಬಂಧಿಸದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಪತ್ರಿಕೆಗಳಲ್ಲಿ ವರದಿಯಾದಂತೆ ಪೊಲೀಸರು ಸಂಪತ್ ರಾಜ್‌ಗೆ ಬೀಗರ ಊಟಕ್ಕೆ ಕರೆದಂತೆ ನೋಟಿಸ್ ನೀಡುವ ಪತ್ರವ್ಯವಹಾರ ಮಾಡಿ, ಹಲವಾರು ಬಾರಿ ಆತನನ್ನು ಬಂಧಿಸುವ ಪ್ರಯತ್ನ ಮಾಡಿದರೂ ಕರೋನಾ ಸೋಂಕಿನ ನೆಪದಿಂದ ಆತ ಕಾನೂನಿನಿಂದ ತಿಂಗಳುಗಳ ಕಾಲ ಮೈಲುಗಳ ಗಟ್ಟಲೆ ‘ಸೋಶಿಯಲ್ ಡಿಸ್ಟೆನ್ಸ್‌’ ಪಾಲಿಸಿಕೊಂಡು ಬಂದಿದ್ದು ವ್ಯವಸ್ಥೆಯ ಅಣಕ. ಆಯ್ತು, ಕರೋನಾ ಇಂದಲ್ಲ ಮುಂದಿನ ವರ್ಷವಾದರೂ ತೊಲಗುತ್ತದೆ. ಆದರೆ ಈ ಕಾನೂನಿನಿಂದ ತಪ್ಪಿಸಿಕೊಳ್ಳುವ ರೋಗ ಮಾತ್ರ ಆರೋಪಿಗಳಿಂದ ತೊಲಗುವುದಿಲ್ಲ. ಅದು ಸಂಪತ್‌ರಾಜ್ ಪ್ರಕರಣದಲ್ಲಿ ಸ್ಪಷ್ಟವಾಗಿ ಹೋಗಿದೆ.

ಏಕೆಂದರೆ ಕರೋನಾ ಈಗ ದೇಶವನ್ನೇ ಬಿಟ್ಟು ಹೋಗುತ್ತಿದೆ, ಇನ್ನು ಅದನ್ನೇ ನಂಬಿಕೊಂಡಿದ್ದರೆ ಪರಪ್ಪನ ಅಗ್ರಹಾರ ಸೇರುವುದರಲ್ಲಿ ಸಂಶಯವೇ ಇಲ್ಲ ಎಂದು ಮನಗಂಡ ಸಂಪತ್‌ರಾಜ್ ಈಗ ಆಸ್ಪತ್ರೆ, ಮನೆ, ಊರು ಎಲ್ಲವನ್ನೂ ಬಿಟ್ಟು ಕಣ್ಮರೆಯಾಗಿರುವುದು ಪೊಲೀಸರ ಪಾಡು ನಗೆಪಾಟಲಿಗೆ ದೂಡಿದೆ. ಆತ ಎಸ್ಕೆಪ್ ಎಂದು ಸ್ಪಷ್ಟವಾದರೂ ಆತನ ಬೀಗ ಜಡಿದ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ಬರುವುದಿದೆಯಲ್ಲಾ. ಇದು ಯಾವುದೋ ಜಮಾನದ ಭಾರ್ಗವ ನಿರ್ದೇಶನದ ಹಳೇ
ಚಲನಚಿತ್ರದ ದೃಶ್ಯದಂತೆ ಗೋಚರವಾಗುತ್ತಿದೆ. ಇದೇನು ಕಾನೂನಿನ ಅಣಕವಾ? ಅಥವಾ ಕಳ್ಳಪೊಲೀಸ್ ಆಟವಾ? ಎಂಬ ಅನುಮಾನ ಸಮಾಜದಲ್ಲಿ ಹುಟ್ಟಿಕೊಂಡಿದೆ.

ಒಬ್ಬ ಪ್ರಭಾವಿ ವ್ಯಕ್ತಿಯನ್ನು ಬಂಧಿಸುವುದಕ್ಕೆ ನೀತಿ ನಿಯಮಗಳು ಕಾನೂನು ತೊಡಕುಗಳು ಇರಬಹುದು. ಆದರೆ ಆತ ಇಷ್ಟು
ತಿಂಗಳು ಸತಾಯಿಸಿ ಕೊನೆಗೆ ಎಸ್ಕೆಪ್ ಆಗುವಷ್ಟು ಇರಬಾರದಲ್ಲವೇ? ಇತ್ತೀಚಿನ ದಿನಗಳಲ್ಲಿ ಅಪರಾಧಿ ಅಥವಾ ಆರೋಪಿ
ಯಾದವರಿಗೆ ಕೂಡಲೇ ಬರಬಾರದ ದೊಡ್ಡ ರೋಗಗಳೆಲ್ಲಾ ವಕ್ಕರಿಸಿಕೊಂಡುಬಿಡುತ್ತದೆ. ಕೂಡಲೇ ಅದೇ ನೆಪದಲ್ಲಿ ಆಸ್ಪತ್ರೆ
ಸೇರಿ ಪೊಲೀಸರು ಬಂಧಿಸದಂತೆ ತಪ್ಪಿಸಿಕೊಳ್ಳುವ ಎಲ್ಲಾ ರೀತಿಯ ಬಿಲ್ಡಪ್‌ಗಳನ್ನು ಮಾಡಿಕೊಂಡುಬಿಡುತ್ತಾರೆ.
ಒಂದು ಬಾರಿಗೆ ಆಸ್ಪತ್ರೆ ಸೇರಿಬಿಟ್ಟರೆ ಮುಗಿಯಿತು. ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ದೊಡ್ಡ ತಲೆನೋವಾಗು
ತ್ತದೆ. ವೈದ್ಯರ ವರದಿ, ಕಾನೂನು ವಿಚಾರಗಳು, ನ್ಯಾಯಾಲಯದ ಅನುಮತಿ, ಇಂಥ ‘ಆದರ್ಶ ಪುರುಷರ’ ಹಿಂಬಾಲಕರು, ಪ್ರೀಪೇಡ್ ಅಭಿಮಾನಿ ಗಳು, ಪೋಸ್ಟ್ ಪೇಡ್ ಜಾತಿವಾದಿಗಳು ಎಲ್ಲವೂ ಅಡಕಾಯಿಸಿಕೊಂಡು ಪೊಲೀಸರಿಗೆ ಸಂದಿಗ್ಧ ಪರಿಸ್ಥಿತಿಗೆ ದೂಡುತ್ತದೆ. ಹೀಗಾಗಿ ಈಗ ಯಾವುದೇ ಪ್ರಭಾವಿ ವ್ಯಕ್ತಿಯನ್ನು ಬಂಧಿಸಲು ಹೊರಟರೆ ಆತ ಮೊದಲು ಸಂಪರ್ಕಿಸುವುದು ತನ್ನ ವಕೀಲರಿಗಿಂತ ಮೊದಲು ತನಗೆ ಪೂರಕವಾದ ಆಸ್ಪತ್ರೆಯನ್ನು ಅದರ ವೈದ್ಯರುಗಳನ್ನ.

ಕೂಡಲೇ ಆಸ್ಪತ್ರೆಯಲ್ಲಿ ಮಲಗಿಬಿಟ್ಟರೆ ಒಂದು ಕಡೆ ತನ್ನ ವಕೀಲರು ಜಾಮೀನಿಗೆ ತಯಾರಿ ನಡೆಸಲು ಕಾಲಾವಕಾಶ ದೊರಕಿ ಬಿಡುತ್ತದೆ. ಬಂಧಿತನಾಗಿ ವಿಚಾರಣಾಧೀನ ಆರೋಪಿಯಾಗುವುದನ್ನು ತಪ್ಪಿಸಿಕೊಂಡು ಇರುವ ಅಷ್ಟು ಮಾನ ಮರ್ಯಾದೆ ಯನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಾರೆ. ಇಂಥ ಕಳ್ಳ ನಾಟಕಗಳನ್ನು ತಪ್ಪಿಸಬೇಕಾದರೆ ಸಾರ್ವಜನಿಕ ರಿಗಿಂತ ಮೊದಲಾಗಿ ಇಂಥ ಖದೀಮರಿಗೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕಾರಾಗೃಹದೊಳಗೇ ಸ್ಥಾಪಿಸಬೇಕಾದ ಅನಿವಾರ್ಯತೆ ಇದೆ.
ಆರೋಪ ಸ್ಪಷ್ಟವಾಗಿ ಕೂಡಲೇ ಬಂಧಿಸುವ ಸನ್ನಿವೇಶ ಎದುರಾದ ತಕ್ಷಣ ಹೃದಯ ಬೇನೆ, ಮಧುಮೇಹ, ರಕ್ತದೊತ್ತಡ, ಬೆನ್ನು ನೋವು, ಮೂಲವ್ಯಾದಿ, ಬಹುಅಂಗಾಗ ಬಾಧೆಯಿಂದ ನರಳುವ ಇಂಥ ಅನಿಷ್ಟರನ್ನು ಮೊದಲು ಕಾರಾಗೃಹ ದೊಳಗಿರುವ ಆಸ್ಪತ್ರೆಯೊಳಗೆ ಮಲಗಿಸಿ ವಿಚಾರಣೆ ಆರಂಭಿಸುವಂಥ ವ್ಯವಸ್ಥೆಯನ್ನು ಸರಕಾರ ಮಾಡಲೇ ಬೇಕಿದೆ. ಆ ಮೂಲಕ ಕಾನೂನೆಂಬುದು ಒಬ್ಬ ಪಿಕ್‌ಪ್ಯಾಕೆಟರ್‌ಗೂ ಒಬ್ಬ ಮಾಜಿ ಮೇಯರ್‌ಗೂ ಏನೂ ವ್ಯಾತ್ಯಾಸವಿಲ್ಲವೆಂಬುದನ್ನು ಸಮಾಜಕ್ಕೆ ತೋರಿಸಬೇಕಿದೆ.

ಅದೇ ಒಬ್ಬ ಸರಗಳ್ಳ ತನ್ನನ್ನು ಬಂಧಿಸುತ್ತಿದ್ದಂತೆ ‘ಅಯ್ಯೋ ನನಗೆ ಎದೆ ನೋಯ್ಯುತ್ತಿದೆ’ ಎಂದು ಹೇಳಲಿ ನೋಡೋಣ,
ಖಡಕ್ ಪೊಲೀಸರು ಆತನ ಬೆನ್ನಿನ ಕೆಳಗೆ ಒದ್ದು ಒಳಗಾಕುತ್ತಾರಲ್ಲವೇ? ಹೀಗಿರುವಾಗ ಈ ಸಂಪತ್ತಿಗೆ ಸವಾಲ್ ಏಕೆ?. ಈಗ ಆಗಬೇಕಿರುವುದೇನೆಂದರೆ ಸಮಾಜದಲ್ಲಿ ಬಂಧಿತನಾಗುವ ಸಮಯ ಬಂದಾಗ ಯಾವ ನೋವು ಬಾಧೆ ಎಂದರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ನಂಬಿಕೆಯನ್ನು ಸೃಷ್ಟಿಸಬೇಕಿದೆ. ಆಗಾದಾಗಲೇ ಕಾನೂನುಗಳಿಗೆ ಸಮಾನತೆಯ ನ್ಯಾಯ, ಸ್ಥಾನ ಸಿಗುವುದು ಮತ್ತು ನಂಬಿಕೆ ಬರುವುದು. ಗಮನಿಸಿ ಮೊನ್ನೆ ನಡೆದ ಮರುಚುನಾವಣಾ ಕ್ಷೇತ್ರಗಳಲ್ಲಿ ಕರೋನಾ ಸೋಂಕಿತರು ಅಗತ್ಯ ಕ್ರಮ ಗಳಾದ ಪಿಪಿಇ ಕಿಟ್ ಧರಿಸಿ, ಸುರಕ್ಷಿತವಾಗಿ ಬಂದು ಮತಚಲಾವಣೆ ಮಾಡಲಿಲ್ಲವೇ? ಮತಚಲಾಯಿಸಲು ಮತದಾರನಿಗೆ ಇಷ್ಟೊಂದು ವ್ಯವಸ್ಥೆ ಇರಬೇಕಾದರೆ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದು ವಿಚಾರಣೆಗೆ ಹಾಜರಾಗಲು ಕರೋನಾ ಅಡ್ಡಿಯಾದಾಗ
ಇಂಥದೇ ವ್ಯವಸ್ಥೆ ಏಕಿಲ್ಲ. ಕರೋನಾ ಆದರೇನು ಏಡ್ಸ್ ಆದರೇನು?, ಆರೋಪಿಗೂ ಪಿಪಿಇ ಕಿಟ್ ತೊಡಿಸಿ ಅಗತ್ಯ ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡು ವಿಚಾರಣೆ ನಡೆಸಬಹುದಲ್ಲವೇ?.

ಒಂದು ವಾರ್ಡ್‌ನ ಪ್ರತಿನಿಧಿಯಾಗಿ ಪ್ರಪಂಚದ ಗಮನ ಸೆಳೆದಿರುವ ಸಿಲಿಕಾನ್ ಸಿಟಿ, ಗ್ರೀನ್‌ಸಿಟಿ ಬೆಂಗಳೂರು ಎಂಬ ಕೀರ್ತಿಗಳಿಸಿರುವ ನಗರಕ್ಕೆ ಮೇಯರ್ ಆಗಿ, ನಗರದ ಪ್ರಥಮ ಪ್ರಜೆಯೆನಿಸಿ, ಪೂಜ್ಯ, ಮಹಾಪೌರ ಎಂದೆಲ್ಲಾ ಕರೆಸಿಕೊಂಡ ಮಹಾಪುರುಷನೊಬ್ಬ ಇಂದು ನಗರದ ಮಾನ ಮರ್ಯಾದೆಯನ್ನು ಹಾಳು ಮಾಡಿದ ಡಿಜೆಹಳ್ಳಿ ಕೆಜೆಹಳ್ಳಿ ಗಲಭೆಯ ಆರೋಪಿಯಾಗಿ ಎರಡು ತಿಂಗಳಿಂದ ಬಂಧಿತನಾಗದಂತೆ ಈಗ ಕಾನೂನಿನ ಮುಖಕ್ಕೆ ಖಾರದಪುಡಿ ಎರಚಿ ಸರಗಳ್ಳರಿಗೂ ವೇಗವಾಗಿ ಓಡಿಹೋಗಿ ಕಣ್ಮರೆಯಾಗಿರುವುದು ಎಂಥ ನಾಚಿಗೇಡಿನ ವಿಚಾರವಲ್ಲವೇ?.

ಪರಪ್ಪನ ಜೈಲಿನಲ್ಲಿರುವ ಖೈದಿಗೆ ಈ ಪ್ರಸಂಗವನ್ನು ವಿವರಿಸಿ ಹೇಳಿದರೆ ಆತನಿಗೆ ಎಲ್ಲಿಂದ ನಗಬೇಕೋ ಎಂಬುವುದೇ ತಿಳಿಯದೆ ತಾನೇ ಹೆಮ್ಮೆಪಟ್ಟುಕೊಳ್ಳುತ್ತಾನೆ. ನೋಡಿ, ಇಂಥದೇ ಕೆಲಸವನ್ನು ಬಿಜೆಪಿಯವನು ಮಾಡಿದ್ದರೆ ವಿರೋಧ ಪಕ್ಷಗಳ ಮುಖಂಡರ ಹೇಳಿಕೆಗಳು ಹೇಗೆಲ್ಲಾಾ ಇರುತ್ತಿದ್ದವು ಊಹಿಸಿ. ಆತನನ್ನು ಬಂಧಿಸಿ ಕರೆತರುವವರೆಗೂ ಬಿಡದೆ ಧರಣಿ ಕೂರುತ್ತಿದ್ದರು. ಅವಕಾಶವಾದಿಗಳು ಬಕೆಟ್‌ಗಳು ಗಂಜಿಗಿರಾಕಿಗಳು ಕೆಲ ಮಾಧ್ಯಮಗಳು ಈ ಸುದ್ದಿಯನ್ನು ಬೆಂಗಳೂರು ನಗರದ ಮಾಜಿ ಮೇಯರ್ ಒಬ್ಬ ಇಂಥ ಘನಂಧಾರಿ ಕೆಲಸ ಮಾಡಿದ್ದಾನೆಂದು ಡೊನಾಲ್ಡ್ ಟ್ರಂಪ್ ವರೆಗೂ ಪಂಪ್ ಮಾಡುತ್ತಿದ್ದರು. ಬಿಜೆಪಿ ಸಂಘ ಪರಿವಾರದ ಮಾನ ಮರ್ಯಾದೆಯನ್ನೆಲ್ಲಾ ಹರಾಜಾಕುತ್ತಿದ್ದರು.

ಸಿದ್ದರಾಮಯ್ಯನವರಂತೂ ನೂರಾ ಒಂದು ಏಣಿ ಹಾಕಿಕೊಂಡು ಅದರ ಮೇಲತ್ತಿ ನಿಂತು ಪ್ರಧಾನಿ ಮೋದಿಯವರನ್ನೇ ನಿಂದಿಸುತ್ತಿದ್ದರು. ಒಂದು ಕಡೆ ಡಿ.ಕೆ.ಶಿವಕುಮಾರ್, ಸಂಪತ್‌ರಾಜ್ ಎಲ್ಲೂ ಓಡಿ ಹೋಗಿಲ್ಲ ಎಂದು ಮಮಕಾರ ತೋರಿಸುತ್ತಾರೆ. ಹಾಗಿದ್ದ ಮೇಲೆ ಆತ ಎಲ್ಲಿದ್ದಾನೆ ಎಂದಾದರೂ ಹುಡುಕಬೇಕಲ್ಲವೇ?. ಇತ್ತ ಸಂಪತ್‌ರಾಜ್ ಕೊಂಚ ಯೋಚಿಸಬೇಕಿತ್ತು. ಪಕ್ಷದೊಳಗೆ ಒಳ್ಳೆಯ ಸಂಸ್ಕಾರವಿದೆ, ಸಪೋರ್ಟ್ ಇದೆ. ಧೈರ್ಯವಾಗಿ ತನ್ನ ಮೇಲಿನ ಆರೋಪವನ್ನು ಎದುರಿಸಿ ಪೊಲೀಸರಿಗೆ
ಸಹಕರಿಸಿದ್ದರೆ, ನಾಳೆ ಬಿಡುಗಡೆಯಾಗಿ ಬಂದಮೇಲೆ ಜೈಲಿನಿಂದ ಪಕ್ಷದ ಕಚೇರಿವರೆಗೂ ಮೆರವಣೆಗೆ ಮಾಡಿ ಪುಷ್ಪವೃಷ್ಠಿ ಆಪಲ್ ಹಾರಹಾಕಿ ಆರತಿ ಎತ್ತುತ್ತಿದ್ದರು.

ಬೇರೆಲ್ಲಾ ಯಾಕೆ, ತನ್ನ ಪಕ್ಷದ ಅಧ್ಯಕ್ಷರಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರನ್ನೇ ನೋಡಿ, ಆರೋಪದಡಿಯಲ್ಲಿ ಬಂಧಿತನಾಗಿ ತಿಂಗಳುಗಳ ಕಾಲ ತಿಹಾರ್ ಜೈಲಿನಲ್ಲಿ ಇದ್ದು ಬಂದು ಮೊದಲಿಗಿಂತ ಇನ್ನೂ ಶಕ್ತಿಶಾಲಿಯಾಗಿಲ್ಲವೇ?. ಅವರಿಗಿಂತ ಆದರ್ಶಪುರುಷ ಬೇಕೇ?. ಅದೂ ತಿಂಗಳುಗಳ ಆಸ್ಪತ್ರೆಯಲ್ಲಿ ಮಲಗಿಯೂ ಇದನ್ನೆಲ್ಲಾ ಯೋಚಿಸಲಿಲ್ಲವೇಕೆ?. ಚಲನಚಿತ್ರಗಳಲ್ಲೇ ಒಂದು ನಿಯಮವಿದೆ. ಹೀರೋ ವಿಲನ್ ಯಾರೇ ಆದರೂ ಆತನಿಗೆ ಶಿಕ್ಷೆಯಾಗಲೇ ಬೇಕು.

ಹೀರೋ ಪಾತ್ರ ದುಷ್ಟರನ್ನು ಕೊಂದರೂ ಕೊನೇ ಸನ್ನಿವೇಶದಲ್ಲಿ ಆತ ಜೈಲಿಗೆ ಹೋಗುವ ಸ್ಥಿತಿಯನ್ನು ತೋರಿಸಲೇಬೇಕು. ಇಲ್ಲದಿದ್ದರೆ ಚಲನಚಿತ್ರದಿಂದ ಕೆಟ್ಟ ಸಂದೇಶ ಹೊರಬೀಳುತ್ತದೆ. ಆದರೆ ನಿಜಜೀವನದ ಈ ಸಮಾಜದಲ್ಲೇ ಕಳ್ಳರು ಸುಳ್ಳರು ರೌಡಿಗಳು ಅವರ ಶಿಷ್ಯರು ದರೋಡೆಕೋರರು ಅನೈತಿಕತೆಯ ಸರದಾರರೆಲ್ಲ ರಾಜ್ಯವನ್ನು ಆಳುವಂತಾಗಿರುವುದು ದುರದೃಷ್ಟ ಕರ. ಇನ್ನು ಮುಂದಾದರೂ ಗ್ರಾಮ ಪಂಚಾಯಿತಿಯಿಂದ ಹಿಡಿದು ಕಾಪೋರೇಟರ್ ಶಾಸಕ ಮೇಯರ್ ಮಂತ್ರಿಗಳವರೆಗೂ
ಶುದ್ಧಹಸ್ತವಿರುವ, ಸಜ್ಜನ, ಆದರ್ಶಪುರುಷರನ್ನು ಶೋಧಿಸಿ ಅವರಿಗೆ ಪದವಿಗಳನ್ನು ನೀಡುವ ನೈತಿಕತೆಯನ್ನು ಎಲ್ಲಾ
ಪಕ್ಷಗಳು ತೋರಬೇಕಿದೆ.

ಇನ್ನು ಪದವಿಯಿಂದ ಕೆಳಗಿಳಿದ ಮೇಲೂ ಕೊನೆಯತನಕ ಶುದ್ಧ ಜೀವನ ನಡೆಸುವಂಥ ವ್ಯಕ್ತಿತ್ವವನ್ನು ಹೊಣೆಗಾರಿಕೆಯನ್ನು ನಾಯಕನಾದವನು ಬೆಳೆಸಿಕೊಳ್ಳಬೇಕಿದೆ. ನೋಡಿ, ಪ್ರಧಾನಿಗಳು ವಿಮಾನದಿಂದ ಕೆಳಗಿಳಿದು ಆ ನಗರದ ಮೇಯರ್‌ಗೆ ನಮಸ್ಕರಿಸಿ ಗೌರವ ತೋರುತ್ತಾರೆಂದರೆ ಮೇಯರ್ ಪದವಿಯ ಘನತೆ ಎಂಥದ್ದು ಅಲ್ಲವೇ. ಒಬ್ಬ ಸಂಸದ ಶಾಸಕ ಮಂತ್ರಿಗೂ ಇಂಥ ಶಿಷ್ಟಾಚಾರವಿಲ್ಲ. ಅಂಥ ಮೇಯರ್ ಒಬ್ಬ ಇಂದು ಊರಿಗೆ ಬೆಂಕಿಯಿಟ್ಟ ದುಷ್ಕೃತ್ಯದಲ್ಲಿ ಆರೋಪಿಯಾಗಿ ಪೊಲೀಸರನ್ನು ಎರಡು ತಿಂಗಳು ಸತಾಯಿಸಿ ಕೊನೆಗೆ ಓಡಿಹೋಗಿ ಕೈ ಕೊಟ್ಟಿರುವ ವಿಷಯ ಎಂಥ ನಾಚಿಕೆಗೇಡಲ್ಲವೇ?. ನಮ್ಮ ದೇಶದಲ್ಲಿ ಆರೋಪಿಗಳು ಬಂಧಿತವಾಗುವುದಕ್ಕೆ ಮೊದಲೇ ಆಸ್ಪತ್ರೆಯ ನಾಟಕ ಶುರುವಾಗಿ ಸಾಕ್ಷಿಗಳು ನಾಶವಾಗಿ, ಪ್ರಭಾವಿಗಳ
ಶಿಫಾರಸ್ಸುಗಳಾಗಿ ಕೇಸುಗಳೇ ಮುಂಡಾಮೋಚಿಕೊಂಡಿವೆ.

ಲಾಕ್‌ಡೌನ್ ಕಾಲದಲ್ಲಿ ಅಪಘಾತ ಮಾಡಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ದಾಖಲಾದ ನಟಿಯೊಬ್ಬಳ ಕೇಸು ಏನಾಯಿತೆಂದು ಜನ ಸಸ್ಪೆನ್ಸ್‌ ಸಿನಿಮಾದಂತೆ ನೋಡುತ್ತಿದ್ದಾರೆ. ಆದ್ದರಿಂದ ಶ್ರೀಮಂತರು ಸೆಲೆಬ್ರೆಟಿಗಳು ಪ್ರಭಾವಿಗಳು ಬಂಧಿರಾಗುವ ಕಾಲಕ್ಕೆೆ ಸರಿಯಾಗಿ ಅನಾರೋಗ್ಯದ ನೆಪ ಹೇಳುವುದನ್ನು ಮಟ್ಟಹಾಕಬೇಕಾದರೆ ಸರಕಾರವೇ ಕಾರಾಗೃಹದ ವ್ಯಾಪ್ತಿಯೊಳಗೆ ಆಸ್ಪತ್ರೆ ಯನ್ನು ತೆರೆದು ಮೊದಲು ಬಂಧಿಸಿ ಆ ನಂತರ ಎಷ್ಟು ದಿನವಾದರೂ ಮಲಗಿಸಲಿ. ಆಸ್ಪತ್ರೆಯ ಚಿಕಿತ್ಸೆಯೂ ಬಂಧನದ ಒಂದು
ಕ್ರಮವಾಗಲಿ.

ಸಂವಿಧಾನ ಕಾನೂನು ಕಾಯ್ದೆಗಳು ಇರುವುದು ಸ್ವಸ್ಥ ಸಮಾಜದ ಆರೋಗ್ಯಕರ ನಾಗರಿಕತೆಯನ್ನು ಕಾಯುವುದಕ್ಕೆ. ಇದು ಸಾರ್ಥಕಗೊಳ್ಳಬೇಕಾದರೆ ಸರಕಾರಿ ನೇಮಕಾತಿಗೆ ಇರುವ ಸೇವಾ ನಿಯಮಗಳಂತೆ ಎರಡು ಸಂಬಳ, ಎರಡೆರಡು ಹೆಂಡತಿಯರು, ಎರಡು ಹುದ್ದೆಗಳು, ಹಲವಾರು ವ್ಯಾಪಾರ ವ್ಯವಹಾರಗಳು ಇರಕೂಡದೆಂಬ ಕಠಿಣ ನಿಯಮ ಹಾಗೂ ಒಂದು ಬಾರಿ ಪೊಲೀಸ್
ಠಾಣೆಯಲ್ಲಿ ಆರೋಪಿಯ ಹೆಸರು ದಾಖಲಾದರೆ ಆತ ಇನ್ನಾವ ಚುನಾವಣೆಗೂ ಸ್ಪರ್ಧಿಸಬಾರದಂಥ ನಿಯಮವನ್ನು ಚುನಾ ವಣಾ ನೀತಿಯೊಳಗೆ ತರಬೇಕಿದೆ. ಜತೆಗೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಪ್ರಚಾರಕ್ಕೆ ಇಂತಿಷ್ಟು ರುಪಾಯಿಗಳ ವೆಚ್ಚವನ್ನು ನಿಗಧಿಪಡಿಸುವಂತೆ, ಸ್ಪರ್ಧಿಸುವ ಅಭ್ಯರ್ಥಿಯ ಒಟ್ಟು ಕುಟುಂಬದ ಆಸ್ತಿ ನಾಲ್ಕೆದು ಕೋಟಿಗಳಿಗೆ ಮೀರಿರಬಾರದು, ಒಂದು ಕುಟುಂಬದಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಎಂಬ ಬಲವಾದ ನಿಯಮ ಜಾರಿಗೆ ತರಲೇಬೇಕು.

ಇಷ್ಟು ಮಾಡಿದರೆ ಸಾಕು ರಾಜಕಾರಣದಲ್ಲಿರುವ ಕ್ರಿಮಿಕೀಟಗಳೆಲ್ಲಾ ನಾಶವಾಗುತ್ತದೆ. ದೇಶದ ಆರೋಗ್ಯಕರ ನಾಗರಿಕತೆ
ಮತ್ತು ಪ್ರಜಾಪ್ರಭುತ್ವದ ಪ್ರಾವಿತ್ರ್ಯತೆಯ ಬಾವುಟ ಪಟಪಟಿಸುತ್ತದೆ.