Monday, 23rd September 2024

Bigg Boss Kannada 11: ಬಿಗ್‌ಬಾಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಶೋ ಆರಂಭಕ್ಕೂ ಮುನ್ನ ರಿವೀಲ್‌ ಆಗಲಿದೆ ಸ್ಪರ್ಧಿಗಳ ವಿವರ

Bigg Boss Kannada 11

ಬೆಂಗಳೂರು: ಹೊಸ ಅಧ್ಯಾಯ ಎನ್ನುವ ಧ್ಯೇಯ ಇಟ್ಟುಕೊಂಡು ಆರಂಭವಾಗಲಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಇತಿಹಾಸದಲ್ಲಿ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ಮೊದಲ ಬಾರಿಗೆ ಸ್ಪರ್ಧಿಗಳನ್ನು ಶೋ ಆರಂಭವಾಗುವುದಕ್ಕೆ ಮೊದಲೇ ಪ್ರಕಟಿಸಲಾಗುತ್ತದೆ. ಹೌದು, ಈ ಬಗ್ಗೆ ಬಿಗ್‌ಬಾಸ್‌ ತಂಡ ಇಂದು (ಸೆಪ್ಟೆಂಬರ್‌ 23) ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದೆ. (Bigg Boss Kannada 11).

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಸೆಪ್ಟೆಂಬರ್‌ 29ರಂದು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಕಿಚ್ಚ ಸುದೀಪ್‌ (Kiccha Sudeep), ಪ್ರಮುಖರಾದ ಪ್ರಶಾಂತ್‌, ಅಲೋಕ್‌ ಜೈನ್‌, ದೀಪಕ್‌ ದಾರ್‌ ಮತ್ತಿತರರು ಪ್ರಶ್ನೆಗಳಿಗೆ ಉತ್ತರಿಸಿದರು. ಈ ಮೂಲಕ ಬಿಗ್‌ಬಾಸ್‌ನ ವಿಶೇಷತೆಗಳು ರಿವೀಲ್‌ ಆಗಿದೆ.

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ʼರಾಜಾರಾಣಿ ಶೋʼದ ಫೈನಲ್‌ ಸೆಪ್ಟೆಂಬರ್‌ 28ರಂದು ನಡೆಯಲಿದೆ. ಈ ವೇಳೆ ಬಿಗ್‌ಬಾಸ್‌ನ ಕೆಲವು ಸ್ಪರ್ಧಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ. ವಿಶೇಷ ಎಂದರೆ ಈ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕೆ, ನರಕಕ್ಕೆ ಹೋಗಬೇಕೆ ಎನ್ನುವುದನ್ನು ಪ್ರೇಕ್ಷಕರು ವೋಟು ಮೂಲಕ ನಿರ್ಧರಿಸಬಹುದು ಎಂದು ತಿಳಿಸಲಾಯಿತು.

ಏನೆಲ್ಲ ಹೊಸತು?

ಮೊದಲೇ ಹೇಳಿದಂತೆ ಸ್ಪರ್ಧೆ ಆರಂಭಕ್ಕೂ ಮೊದಲೇ ಕೆಲವು ಸ್ಪರ್ಧಿಗಳ ಹೆಸರು ರಿವೀಲ್‌ ಆಗಲಿದೆ. ಜತೆಗೆ ಹಲವು ಕ್ಷೇತ್ರಗಳ ಸ್ಪರ್ಧಿಗಳಿರುತ್ತಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ನಿರೂಪಕರ ಬದಲಾವಣೆ ಬಗ್ಗೆ ಸುದೀಪ್‌ ಹೇಳಿದ್ದೇನು?

ಆರಂಭದಲ್ಲಿ ಈ ಬಾರಿಯ ಬಿಗ್‌ಬಾಸ್‌ ಅನ್ನು ಸುದೀಪ್‌ ನಿರೂಪಿಸುವುದಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಸುದೀಪ್‌ ಅವರು, ಸಿನಿಮಾಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ನಾನು ಆರಂಭದಲ್ಲಿ ನಿರೂಪಣೆಯಿಂದ ಹಿಂದಕ್ಕೆ ಸರಿದದ್ದು ಹೌದು. ಆದರೆ ಶೋದ ತಂಡದವರು ನಾನೇ ಬರಬೇಕು ಎಂದು ಕೇಳಿಕೊಂಡ ಕಾರಣ ಹೋಸ್ಟ್‌ ಮಾಡಲು ನಿರ್ಧರಿಸಿದೆ. ಅದು ಬಿಟ್ಟರೆ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂದರು.

ಸ್ಪರ್ಧಿಗಳ ಬಗ್ಗೆ ಗೊತ್ತಿಲ್ಲ

ಈ ಬಾರಿ ದೊಡ್ಡ ಮನೆಯೊಳಗೆ ಸೆಲೆಬ್ರಿಟಿಗಳ ಜತೆಗೆ ಜನ ಸಾಮಾನ್ಯರೂ ಹೋಗುತ್ತಾರ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುದೀಪ್‌ ಅವರು, ಶೋ ಆರಂಭವಾಗುವ ದಿನದವರೆಗೆ ನನಗೆ ಸ್ಪರ್ಧಿಗಳು ಯಾರೆಲ್ಲ ಇರುತ್ತಾರೆ ಎನ್ನುವುದು ತಿಳಿದಿರುವುದಿಲ್ಲ. ನಾನೇ ಹೆಸರು ರಿಲೀಲ್‌ ಮಾಡಬೇಡಿ ಎನ್ನುತ್ತೇನೆ. ಒಂದುವೇಳೆ ಯಾವುದೋ ಕಾರಣಕ್ಕೆ ಗುಟ್ಟು ರಟ್ಟಾದರೆ ಕಷ್ಟ ಎನ್ನುವ ಕಾರಣಕ್ಕೆ ನಾನು ಹೆಸರು ರಿವೀಲ್‌ ಮಾಡಬೇಡಿ ಎಂದು ತಂಡದವರಲ್ಲಿ ಹೇಳುತ್ತೇನೆ ಎಂದು ತಿಳಿಸಿದರು.

ಸ್ವರ್ಗ-ನರಕ ಕಾನ್ಸೆಪ್ಟ್‌

ಈ ಬಾರಿ ಸ್ವರ್ಗ-ನರಕ ಕಾನ್ಸೆಪ್ಟ್‌ನಲ್ಲಿ ಸ್ಪರ್ಧೆ ನಡೆಯಲಿದೆ. ಈ ಬಗ್ಗೆ ಮಾಹಿತಿ ಹೆಚ್ಚಿನ ಮಾಹಿತಿ ನೀಡಿದ ಶೋ ತಂಡ, ಸ್ವರ್ಗದಲ್ಲಿ ಎಲ್ಲ ಅನುಕೂಲವಿರುತ್ತದೆ. ಆದರೆ ನರಕ ಜೈಲಿನಂತೆ ಇರುತ್ತದೆ ಎಂದು ತಿಳಿಸಿ, ಹೆಚ್ಚಿನ ಮಾಹಿತಿಯನ್ನು ಸೆಪ್ಟೆಂಬರ್‌ 29ರಂದು ನೋಡಿ ಎಂದು ಕುತೂಹಲ ಕಾಯ್ದಿರಿಸಿದೆ. ಜಿಯೋ ಸಿನಿಮಾ ಅಪ್ಲಿಕೇಷನ್‌ ಮೂಲಕ ಪ್ರೇಕ್ಷಕರು ಯಾರು ಸ್ವರ್ಗ, ನರಕಕ್ಕೆ ಹೋಗಬೇಕು ಎನ್ನುವುದನ್ನು ವೋಟು ಮಾಡಬಹುದು.

ಈ ಮಧ್ಯೆ ಶೋದ ಪಾರ್ಟನರ್‌ ಆಗಿ A23 ರಮ್ಮಿ ಬೇಕಿತ್ತ ಎನ್ನುವ ಪ್ರಶ್ನೆಯೂ ಕೇಳಿ ಬಂತು. ಅದಕ್ಕೆ ಉತ್ತರಿಸಿದ ಬಿಗ್‌ಬಾಸ್‌ ತಂಡ, ಸರ್ಕಾರದ ನಿಯಮ ಮೀರಿ ನಾವು ಏನನ್ನೂ ಮಾಡುತ್ತಿಲ್ಲ. ಇದು ದೇಶದಲ್ಲಿ ಬ್ಯಾನ್‌ ಆಗಿಲ್ಲ ಎನ್ನುವ ಸ್ಪಷ್ಟನೆ ನೀಡಿತು. ಇದರ ಜತೆಗೆ ಶೋ ಆರಂಭವಾದಾಗ ಹೊಸ ಸರ್‌ಪ್ರೈಸ್‌ ಇರಲಿದೆ ಎನ್ನುವುದನ್ನೂ ತಂಡ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Bigg Boss Telugu 8: ತೆಲುಗು ಬಿಗ್‌ಬಾಸ್‌ನಲ್ಲಿ ಕನ್ನಡಿಗರದ್ದೇ ಹವಾ