Monday, 23rd September 2024

Sanju Movie: ಬದುಕಿನ ಆಳವನ್ನು ಶೋಧಿಸುವ ನವಿರಾದ ಪ್ರೇಮಕಥೆ ʼಸಂಜುʼ; ಸೆ. 27ರಂದು ಚಿತ್ರ ಬಿಡುಗಡೆ

Sanju movie

ಬೆಂಗಳೂರು: ಪ್ರೇಮ ಕಥೆಗಳಿಗೆ ಕೊನೆಯಿಲ್ಲ. ಭಾವನಾತ್ಮಕ ಸಂಬಂಧಗಳಿಗೆ ಸಾವಿಲ್ಲ. ಪ್ರಕೃತಿಗೆ ಸೋಲದ ಮನಸ್ಸಿಲ್ಲ ಎಂಬುದನ್ನ ಚೆನ್ನಾಗಿ ಅರ್ಥೈಸಿಕೊಂಡಿರುವ ನಟ- ನಿರ್ದೇಶಕ ಯತಿರಾಜ್, ಮೇಲಿನ ಮೂರೂ ಅಂಶಗಳನ್ನು ಒಂದೇ ಫ್ರೇಮಿನಲ್ಲಿ ಸೆರೆ ಹಿಡಿದಿದ್ದಾರೆ. ಅದು ಅವರ ನಿರ್ದೇಶನದ ‘ಸಂಜು’ ಚಿತ್ರದಲ್ಲಿ ಎನ್ನುವುದು ವಿಶೇಷ (Sanju Movie). ಸೆಪ್ಟೆಂಬರ್‌ 27ರಂದು ತೆರೆಗೆ ಬರಲಿದೆ.

ಪತ್ರಕರ್ತರೂ ಆಗಿರುವ ಯತಿರಾಜ್ ತಮ್ಮ ಒಟ್ಟಾರೆ ಅನುಭವವನ್ನು ಒಟ್ಟುಗೂಡಿಸಿ ಒಂದೊಳ್ಳೆ ಕಥೆ ಮಾಡಿ ಇದೀಗ ಸಿನಿಮಾ ರೂಪದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ. ಮೈಸೂರಿನ ಸಂತೋಷ್ ಡಿ.ಎಂ. ನಿರ್ಮಾಣದ ‘ಸಂಜು’ ಸಿನಿಮಾ ಬಗ್ಗೆ ಯತಿರಾಜ್ ಬಹಳ ಆತ್ಮ ವಿಶ್ವಾಸದಿಂದ ಮಾತನಾಡಿದ್ದಾರೆ.

ʼʼಹದಿಹರೆಯದಲ್ಲಿ ಬಹಳಷ್ಟು ಏರಿಳಿತಗಳು, ಸೋಲುಗಳು, ಹತಾಶೆಗಳು ಅವಮಾನಗಳು ಎದುರಾಗುತ್ತವೆ. ಕೆಲವರು ಅದನ್ನು ಸುಲಭವಾಗಿ ಮೆಟ್ಟಿ ಮುಂದೆ ಸಾಗುತ್ತಾರೆ. ಇನ್ನೂ ಕೆಲವರು ತಮಗೆ ಎದುರಾಗುವ ಘಟನೆಗಳಿಗೆ ಅಂಜಿ ಎದೆಗುಂದುತ್ತಾರೆ. ಅಂತಹ ಎರಡು ಪ್ರಸಂಗವನ್ನು ಪ್ರೀತಿಯ ಚೌಕಟ್ಟಿನಲ್ಲಿ ಹೇಳಿದ್ದೇನೆ. ನನ್ನ ಚಿತ್ರವನ್ನು ಎಲ್ಲರೂ ಮೆಚ್ಚುತ್ತಾರೆ ಎಂದು ನಾನು ಹೇಳಲಾರೆ. ಆದರೆ ಬದುಕನ್ನು ಮತ್ತು ಸಂಬಂಧಗಳನ್ನು ಆಳದ ದೃಷ್ಟಿಯಿಂದ ನೋಡುವ ಮಂದಿ ಅಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ ʼ’ ಎಂದು ಯತಿರಾಜ್ ವಿಶ್ವಾಸ ವ್ಯಕ್ತಪಡಿಸಿದಾರೆ.

ʼʼನಿರ್ಮಾಪಕ ಸಂತೋಷ್ ಅವರಿಗಿದು ಮೊದಲ ಚಿತ್ರವಾದರೂ ಯಾವುದಕ್ಕೂ ಕೊರತೆ ಮಾಡಿಲ್ಲ. ಎಲ್ಲರನ್ನೂ ಇಂದಿಗೂ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಚಿತ್ರದ ಹೈಲೈಟ್ ಲೊಕೇಷನ್. ಮಡಿಕೇರಿಯ ಮೂರ್ನಾಡುವಿನಲ್ಲಿ ಹಾಕಲಾಗಿದ್ದ ಬಸ್ ಸ್ಟಾಪ್ ಸೆಟ್, ನಾಯಕಿಯ ಮನೆ, ನಾಯಕನ ಮನೆ ಮತ್ತು ಅಲ್ಲಿನ ಪರಿಸರ  ಚಿತ್ರಕ್ಕೆ ಮೆರುಗು ತಂದುಕೊಟ್ಟಿದೆ. ಅದರ ತೂಕ ಹೆಚ್ಚುವಂತೆ ಮಾಡಿದ್ದು ಚಿತ್ರದಲ್ಲಿ ನಟಿಸಿದ ಕಲಾವಿದರು. ಸುಂದರಶ್ರೀ, ಸಂಗೀತ, ಬಲರಾಜುವಾಡಿ, ಅಪೂರ್ವ, ಬೌ ಬೌ ಜಯರಾಮ್, ಮಹಂತೇಶ್, ಪ್ರಕಾಶ್ ಶೆಣೈ ಮತ್ತು ಕಾತ್ಯಾಯಿನಿ ಅವರುಗಳ ಅಭಿನಯವಂತೂ ತೆರೆಯ ಮೇಲೇ ಸವಿಯಬೇಕುʼʼ ಎಂದು ತಿಳಿಸಿದ್ದಾರೆ.

ನಾಯಕಿ ಸಾತ್ವಿಕಾ ಅವರ ಅಭಿನಯವನ್ನು ವಿಶೇಷವಾಗಿ ಉಲ್ಲೇಖಿಸಿದ ಅವರು ರಾಜ್ಯ ಪ್ರಶಸ್ತಿ ಪಡೆಯಬಲ್ಲ ಅವರ  ಸೂಕ್ಷ್ಮ ಅಭಿನಯವನ್ನು ಜನ ಖಂಡಿತ ಮೆಚ್ಚಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಜತೆಗೆ ನಾಯಕ ಮನ್ವಿತ್ ಅವರ ಅಭಿನಯವನ್ನೂ ಮೆಚ್ಚಿದ್ದಾರೆ.

ಛಾಯಾಗ್ರಾಹಕ ವಿದ್ಯಾ ನಾಗೇಶ್ ಸೆರೆ ಹಿಡಿದಿರುವ ಸುಂದರ ದೃಶ್ಯಗಳಿಗೆ, ಚಿತ್ರದ ಹಿನ್ನಲೆ ಸಂಗೀತ ಸಾಕಷ್ಟು ಪುಷ್ಠಿ ನೀಡಿದೆ. ವಿಜಯ್ ಹರಿತ್ಸ ನನ್ನೆಲ್ಲ ಟಾರ್ಚರಗಳನ್ನು ಸಹಿಸಿ ಸಹಕರಿಸಿ ಚಿತ್ರಕ್ಕೆ ಬೇರೆಯದೇ ಆಯಾಮ ತಂದುಕೊಟ್ಟಿರುವುದಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಥ್ರಿಲ್ಲರ್ ಮಂಜು ಅವರ ಎರಡು ಸಾಹಸ ದೃಶ್ಯಗಳು, ಮದನ್- ಹರಿಣಿ ನೃತ್ಯ ಸಂಯೋಜನೆಯ ಎರಡು ಹಾಡುಗಳು ಚಿತ್ರಕ್ಕೆ ಕಮರ್ಷಿಯಲ್ ಅಂಶ ತಂದು ಕೊಟ್ಟಿದೆ. ಸಂಜೀವ ರೆಡ್ಡಿ ಅವರ ಸಂಕಲನ ಮತ್ತು ಸೋನುಸಾಗರ ಹಾಗೂ ಅರುಣ್ ಕುಮಾರ್ ಅವರ ಸಹ ನಿರ್ದೇಶನ ಚಿತ್ರಕ್ಕಿದೆ.
ಮಸಾಲ ಸಿನಿಮಾಗಳ ನಡುವೆ ಮನಸೂರೆಗೊಳ್ಳಬಲ್ಲ ಚಿತ್ರವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಕಾದು ನೋಡಬೇಕು.

ಈ ಸುದ್ದಿಯನ್ನೂ ಓದಿ: Bhairadevi Movie: ಅಘೋರಿ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ; ʼಭೈರಾದೇವಿʼ ಚಿತ್ರದ ಟ್ರೈಲರ್‌ ಔಟ್‌