Friday, 22nd November 2024

Rahul Gandhi: ದ್ವೇಷ, ಹಿಂಸಾಚಾರ ಸೃಷ್ಟಿಸುವುದೇ ಬಿಜೆಪಿ, RSSನ ಗುರಿ- ರಾಹುಲ್‌ ಕಿಡಿ

Rahul Gandhi

ನವದೆಹಲಿ: ಬಿಜೆಪಿ(BJP) ಮತ್ತು ಆರ್‌ಎಸ್‌ಎಸ್‌(RSS) ದೇಶಾದ್ಯಂತ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಕಿಡಿ ಕಾರಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದರು.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಎಲ್ಲಿಗೆ ಹೋದರೂ ಜಾತಿ, ಧರ್ಮ, ರಾಜ್ಯ ಮತ್ತು ಭಾಷೆಗಳ ನಡುವೆ ಒಡಕು ಮೂಡಿಸಿ, ಸಂಘರ್ಷಕ್ಕೆ ಎಡೆಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯು ಪಹಾರಿ ಮತ್ತು ಗುಜ್ಜರ್ ಸಮುದಾಯದ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಿದೆ ಎಂದ ಅವರು, ಪಕ್ಷದ ಈ ಯೋಜನೆ ವಿಫಲವಾಗಲಿದೆ ಎಂದು ಹೇಳಿದ್ದಾರೆ.

ದ್ವೇಷವನ್ನು ಪ್ರೀತಿಯಿಂದ ಮಾತ್ರ ಜಯಿಸಬಹುದು. ಒಂದು ಕಡೆ ದ್ವೇಷವನ್ನು ಹರಡುವವರು ಮತ್ತು ಇನ್ನೊಂದು ಕಡೆ ಪ್ರೀತಿಯನ್ನು ಪ್ರಚಾರ ಮಾಡುವವರು ಇದ್ದಾರೆ. ಕಾಂಗ್ರೆಸ್ ಎಲ್ಲರನ್ನು ಒಟ್ಟುಗೂಡಿಸುವ ಮೂಲಕ ಮತ್ತು ಎಲ್ಲರಿಗೂ ಅವರ ಹಕ್ಕುಗಳನ್ನು ನೀಡುವ ಮೂಲಕ ಮುಂದುವರಿಯುತ್ತದೆ. ಎಲ್ಲರೂ ಸಮಾನರು ಮತ್ತು ನಾವು ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.

ಜನರು ಏನು ಬಯಸುತ್ತಾರೋ ಅಥವಾ ಯಾವ ರೀತಿಯ ಕಾರ್ಯವನ್ನು ಬಯಸುತ್ತಾರೋ ಅದನ್ನೇ ಮಾಡಲು ನಅನು ಸಿದ್ಧನಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಜನರು ನನಗೆ ಸೂಚನೆ ನೀಡುವುದು ಮಾತ್ರ ಬಾಕಿ ಉಳಿದಿದೆ.
ಲೋಕಸಭೆಯ ಫಲಿತಾಂಶದ ನಂತರ ಪ್ರತಿಪಕ್ಷಗಳು ಬಲಗೊಂಡಿವೆ ಮತ್ತು ಸರ್ಕಾರದ ‘ಜನವಿರೋಧಿ’ ಕಾನೂನುಗಳು ಮತ್ತು ನೀತಿಗಳ ವಿರುದ್ಧ ಒಗ್ಗಟ್ಟಾಗಿ ನಿಂತಿವೆ ಎಂದು ಟಾಂಗ್‌ ಕೊಟ್ಟರು.

ನರೇಂದ್ರ ಮೋದಿ ಅವರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ ಮತ್ತು ಅದು ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ನಾವು ಅವರ ಮನೋವಿಜ್ಞಾನದ ಮೇಲೆ ಪ್ರಭಾವ ಬೀರಿದ್ದೇವೆ ಮತ್ತು ಅವರು ಮೊದಲಿನಂತೆಯೇ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ಇಂಡಿಯಾ ಒಕ್ಕೂಟ ದ್ವೇಷ ಅಥವಾ ಹಿಂಸಾಚಾರವನ್ನು ಆಶ್ರಯಿಸಿಲ್ಲ, ಅದು ಬಿಜೆಪಿಯ ಕಾರ್ಯಸೂಚಿಯನ್ನು ಪ್ರೀತಿ ಮತ್ತು ಸಹಾನುಭೂತಿಯಿಂದ ಎದುರಿಸಿದೆ ಎಂದು ಅವರು ಹೇಳಿದರು.

ಕೇಂದ್ರಾಡಳಿತ ಪ್ರದೇಶಗಳು ಆಗಾಗ ರಾಜ್ಯಗಳಾಗಿ ಅಥವಾ ಹೊಸ ರಾಜ್ಯಗಳಾಗಿ ವಿಭಜಿಸಲ್ಪಟ್ಟಿವೆ. ಆದರೆ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನೂ ಓದಿ: Arms found in JK: ಜಮ್ಮು-ಕಾಶ್ಮೀರದಲ್ಲಿ ಯುದ್ಧಕ್ಕೆ ಸಾಕಾಗುವಷ್ಟು ಅಕ್ರಮ ಶಸ್ತ್ರಾಸ್ತ್ರ ಪತ್ತೆ- ಮೋದಿ ಭೇಟಿ ವೇಳೆ ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚು?