ಕೊತ್ತಂಬರಿ ಸೊಪ್ಪನ್ನು ಸಾಮಾನ್ಯವಾಗಿ ಅಡುಗೆಗೆ ಬಳಸುತ್ತಾರೆ. ರಸಂ, ಸಾಂಬಾರು, ಪಲ್ಯಗಳಲ್ಲಿ ಇದನ್ನು ಹಾಕಿದರೆ ಅದರ ಪರಿಮಳ ಹೆಚ್ಚಾಗುತ್ತದೆ. ಹಾಗೇ ಕೆಲವೊಮ್ಮೆ ಹೋಟೆಲ್ ರೆಸ್ಟೋರೆಂಟ್ಗಳಲ್ಲಿ ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪನ್ನು ಬಳಸುತ್ತಾರೆ. ಆದರೆ ಕೊತ್ತಂಬರಿ ಸೊಪ್ಪು ಖಂಡಿತವಾಗಿಯೂ ಅಡುಗೆಯ ಪರಿಮಳವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯಾದರೂ, ಅವುಗಳಿಂದ ಅನೇಕ ಆರೋಗ್ಯ ಪ್ರಯೋಜನ ಕೂಡ ಇದೆ. ಈ ಸೊಪ್ಪು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತವೆ, ಹಾಗಾಗಿ ಇದು ದೇಹಕ್ಕೆ ತುಂಬಾ ಉತ್ತಮವಾಗಿದೆ. ಹಾಗಾದ್ರೆ ಕೊತ್ತಂಬರಿ ಸೊಪ್ಪಿನ ಜ್ಯೂಸ್ (Coriander Leaf Juice)ಅನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನು ಪ್ರಯೋಜನ, ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ರಸವನ್ನು ಕುಡಿಯಲು ಪ್ರಾರಂಭಿಸಿ. ಕೊತ್ತಂಬರಿ ಸೊಪ್ಪಿನಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಫೈಬರ್ ಅಧಿಕವಾಗಿರುವುದರಿಂದ, ಅವುಗಳಿಂದ ಹೊಟ್ಟೆ ತುಂಬಿದಂತಾಗುತ್ತದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.
ಜೀರ್ಣಕಾರಿ ಆರೋಗ್ಯಕ್ಕೆ ಒಳ್ಳೆಯದು
ಕೊತ್ತಂಬರಿ ರಸವು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಏಕೆಂದರೆ ಕೊತ್ತಂಬರಿ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಕೊತ್ತಂಬರಿ ಸೊಪ್ಪು ಅತಿಸಾರ, ಉಬ್ಬರ ಮತ್ತು ಮಲಬದ್ಧತೆಯಂತಹ ಜಠರಗರುಳಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಕೊತ್ತಂಬರಿ ರಸವನ್ನು ಸೇವಿಸಿ ಹೊಟ್ಟೆಯನ್ನು ಆರೋಗ್ಯವಾಗಿಡಿ.
ಚರ್ಮದ ಆರೋಗ್ಯಕ್ಕೆ ಉತ್ತಮ
ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಬಯಸುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ರಸವನ್ನು ಸೇವಿಸಿ. ಕೊತ್ತಂಬರಿ ಸೊಪ್ಪು ಆ್ಯಂಟಿ ಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಸಿ ಯನ್ನು ಒಳಗೊಂಡಿದೆ. ಚರ್ಮದ ಆರೋಗ್ಯಕ್ಕೆ ಇವೆರಡೂ ಅತ್ಯಗತ್ಯ, ಹಾಗಾಗಿ ಇದರ ರಸವು ಚರ್ಮವನ್ನು ಒಳಗಿನಿಂದ ಪೋಷಣೆ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ಕೊತ್ತಂಬರಿ ಸೊಪ್ಪಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿರುವುದರಿಂದ, ಇದರ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಇದನ್ನೂ ಓದಿ:ಮಕ್ಕಳ ಕೈಯಲ್ಲರಳಿದ ಹೂವಿನ ರಂಗೋಲಿಯನ್ನು ಕಾಲಲ್ಲಿ ಹೊಸಕಿ ಹಾಕಿದ ಮಹಿಳೆ; ವಿಡಿಯೊ ವೈರಲ್
ಮನೆಯಲ್ಲಿ ಕೊತ್ತಂಬರಿ ಜ್ಯೂಸ್ ತಯಾರಿಸುವ ವಿಧಾನ:
ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ನಂತರ ಅವುಗಳನ್ನು ಬ್ಲೆಂಡರ್ಗೆ ಹಾಕಿ ಅದಕ್ಕೆ ಒಂದು ಹಿಡಿ ಪುದೀನಾ ಎಲೆಗಳು ಮತ್ತು ಕತ್ತರಿಸಿದ ಶುಂಠಿಯನ್ನು ಸೇರಿಸಿ. ಪರಿಮಳಕ್ಕಾಗಿ ತುರಿದ ಕ್ಯಾರೆಟ್ ಅನ್ನು ಸಹ ಸೇರಿಸಬಹುದು.ಈಗ, ನೀರನ್ನು ಸೇರಿಸಿ ಮತ್ತು ನಯವಾದ ರುಬ್ಬಿಕೊಳ್ಳಿ. ನಂತರ ಇದಕ್ಕೆ , ಉಪ್ಪು ಮತ್ತು ಕಾಳುಮೆಣಸಿನ ಪುಡಿ ಜೊತೆಗೆ ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಕಲಕಿ ಮತ್ತು ಐಸ್ ಕ್ಯೂಬ್ ಗಳಿಂದ ತುಂಬಿದ ಲೋಟಕ್ಕೆ ಸುರಿಯಿರಿ. ನಂತರ ಕೊತ್ತಂಬರಿ ರಸವನ್ನು ಕುಡಿಯಿರಿ, ಸಿಹಿಗಾಗಿ ಜೇನುತುಪ್ಪ ಸೇರಿಸಿಕೊಳ್ಳಬಹುದು.